ADVERTISEMENT

ಎರಡು ಭಾಷೆ ಬೆರೆತ ಒಂದು ಚಿತ್ರ ಮತ್ತು ರೂಪೇಶ್‌ ಕನಸು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಎರಡು ಭಾಷೆ ಬೆರೆತ ಒಂದು ಚಿತ್ರ ಮತ್ತು ರೂಪೇಶ್‌ ಕನಸು
ಎರಡು ಭಾಷೆ ಬೆರೆತ ಒಂದು ಚಿತ್ರ ಮತ್ತು ರೂಪೇಶ್‌ ಕನಸು   
ಸಂದರ್ಶನ: ಮಹೇಶ್‌ ಕನ್ನೇಶ್ವರ
lಚಿತ್ರರಂಗದೊಂದಿಗೆ ನಂಟು ಹೇಗೆ ಬೆಳೆಯಿತು?
ಖಂಡಿತವಾಗಿಯೂ ನಾನೊಬ್ಬ ನಟ ಆಗುತ್ತೇನೆ ಅಂದುಕೊಂಡಿರಲಿಲ್ಲ. ಶಾಲಾ ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ವಿಜೆ ಮತ್ತು ಆರ್‌ಜೆ ಆಗಿಯೂ ಕೆಲಸ ಮಾಡಿದ್ದೇನೆ.
 
ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದನ್ನು ಸಮರ್ಥವಾಗಿ ಬಳಸಿಕೊಂಡೆ. ಸ್ಯಾಂಡಲ್‌ವುಡ್‌ ಅನುಭವ ನನಗೆ ತುಳು ಚಿತ್ರಗಳಲ್ಲಿ ನಟಿಸುವ ಅವಕಾಶ ಕಲ್ಪಿಸಿಕೊಟ್ಟಿತು. 
 
l‘ಹೊಸ ಚಿತ್ರದ ಬಗ್ಗೆ ನಿರೀಕ್ಷೆಗಳು ಏನು?
ಕೊಂಕಣಿ– ತುಳು ಭಾಷೆಯಲ್ಲಿ ಮೂಡಿಬಂದಿರುವ ಚಿತ್ರ ಇದು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಇಷ್ಟವಾಗುವಂತಿದೆ.
 
lನಿಮ್ಮ ಪಾತ್ರ ಏನು? ಚಿತ್ರಕಥೆ ಏಕೆ ಇಷ್ಟವಾಯಿತು?
ಈ ಚಿತ್ರದಲ್ಲಿ ನಾಯಕ ನಾನೇ. ನಿರ್ದೇಶಕರು ಕಥೆಯನ್ನು ವಿಶಿಷ್ಟವಾದ ರೀತಿಯಲ್ಲಿ ಹೆಣೆದಿದ್ದಾರೆ.  ಕಥೆ ಕೇಳಿದ ಕೂಡಲೇ ಒಪ್ಪಿಕೊಂಡೆ. ಪತ್ತೇದಾರಿ ಕಥೆ.
 
lಚಿತ್ರದ ಬಗ್ಗೆ ಹೇಳಿ?
ಸುಮಾರು ₹70 ಲಕ್ಷಕ್ಕೂ ಹೆಚ್ಚು ಬಜೆಟ್‌ನೊಂದಿಗೆ ಚಿತ್ರ ನಿರ್ಮಾಣ ಮಾಡಲಾಗಿದೆ. ಗ್ಲೋರಿಯಸ್‌ ಆಂಜೆಲೊರ್‌ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಕೊಂಕಣಿ – ತುಳು ಸಿನಿಮಾ ‘ಆಶೆಂ ಜಾಲೆಂ ಕಶೆಂ? ಪತ್ತೇದಾರಿ ಹಾಗೂ ಸಾಹಸಮಯ ದೃಶ್ಯಗಳಿವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅದ್ಭುತವಾಗಿ ಮೂಡಿ ಬಂದಿವೆ.
 
lಕಥೆಯ ವೈಶಿಷ್ಟ್ಯವೇನು?
ಅದನ್ನು ಹೇಳುವುದು ಕಷ್ಟ. ಒಂದು ಕೊಲೆ ನಡೆಯುತ್ತದೆ. ಅಲ್ಲಿಂದ ಕಥೆಯ ಆರಂಭ. ಮೂವರು ಹಿರೋಯಿನ್‌ಗಳು ಇದ್ದಾರೆ. ಸಾಹಸ ದೃಶ್ಯಗಳೂ ಸಾಕಷ್ಟಿವೆ.
 
lಕೊಂಕಣಿ ಭಾಷೆ ನಿಮಗೆ ಕಷ್ಟ ಆಗಲಿಲ್ಲವೇ? 
ತುಳು ನನ್ನ ಮಾತೃಭಾಷೆ. ಕೊಂಕಣಿ ಕಲಿಯೋದು ತುಂಬಾ ಚಾಲೆಂಜಿಂಗ್‌ ಆಗಿತ್ತು. ಭಾಷೆ ಕಲಿತು ನಟಿಸಿದೆ. ಎರಡೂ ಭಾಷೆಗಳ ಮಿಕ್ಸಿಂಗ್‌, ಹರಟೆ ತುಂಬಾ ವಿಭಿನ್ನವಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ಈ ಚಿತ್ರ ಎಲ್ಲ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿದೆ.
 
lಸಾಹಸಮಯ ಚಿತ್ರ ಅಂತೀರಿ, ಹಾಸ್ಯ ಇಲ್ಲವೇ?
ಟೈಟಲ್‌ ಕೊಂಕಣಿ ಭಾಷೆಯಲ್ಲಿದ್ದರೆ,  ಟ್ಯಾಗ್‌ಲೈನ್‌ ತುಳುವಿನಲ್ಲಿದೆ. ಪತ್ತೇದಾರಿಕೆ, ಹೊಡೆದಾಟದ ಜತೆಗೆ ಹಾಸ್ಯವೂ ಇದೆ. ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಉಮೇಶ ಮಿಜಾರು, ಗೋಪಿನಾಥ ಭಟ್‌ ಅವರಂತಹ ಹಾಸ್ಯ ಕಲಾವಿದರು ಪ್ರೇಕ್ಷಕರಿಗೆ ಹಾಸ್ಯದೌತಣ ನೀಡಿದ್ದಾರೆ. ಕತೆಯ ಜತೆಗೆ ಹಾಸ್ಯವನ್ನು ಹದವಾಗಿ ಹೆಣೆಯಲಾಗಿದೆ.
 
lಚಿತ್ರ ಸಂಗೀತದ ಬಗ್ಗೆ ಏನು ಹೇಳುತ್ತೀರಿ?
ಬಿಟ್ಟು ಸಿಂಗ್‌ ಹಿನ್ನೆಲೆ ಸಂಗೀತ, ಹಾಡುಗಳಿಗೆ ಪ್ಯಾಟ್ಸನ್‌ ಪಿರೇರಾ ಸಂಗೀತ ನೀಡಿದ್ದಾರೆ. ಮಾಕ್ಸಿಂ ಪಿರೇರಾ ಅಂಜೆಲೋರ್‌, ವಿಲ್ಸನ್‌ ಕಟೀಲು, ಜ್ಯೋರೇಗೊ ಕುಲಶೇಖರ, ಜೋನ್‌ ಎಂ.ಪೆರ್ಮನ್ನೂರು ಸಾಹಿತ್ಯ ರಚನೆ ಮಾಡಿದ್ದಾರೆ. ಚಿತ್ರ ಚೆನ್ನಾಗಿದೆ. ಚಿತ್ರ ಗೆಲ್ಲುವ ನಿರೀಕ್ಷೆ ನಮ್ಮ ತಂಡದ್ದು. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ.
 
lನಿಮ್ಮ ಕನ್ನಡ ಚಿತ್ರಗಳು?
ಈಗ ‘ಗೋಲ್‌ಮಾಲ್‌ ಬ್ರದರ್ಸ್‌’, ‘ನಿಶ್ಯಬ್ದ–2’ ಚಿತ್ರಗಳಲ್ಲೂ ನಾಯಕ ನಟನಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರಗಳು ಈಗ ಚಿತ್ರೀಕರಣ ಹಂತದಲ್ಲಿವೆ. ‘ಐಸ್‌ಕ್ರೀಂ’, ‘ದಿಬ್ಬಣ’ ತುಳು ಚಿತ್ರಗಳಿಗೆ ಸಹಿ ಹಾಕಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.