ADVERTISEMENT

ಎಳನೀರು ವ್ಯಾಪಾರಿಯ ಪರಿಸರ ಪ್ರೀತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಎಳನೀರು ವ್ಯಾಪಾರಿಯ ಪರಿಸರ ಪ್ರೀತಿ
ಎಳನೀರು ವ್ಯಾಪಾರಿಯ ಪರಿಸರ ಪ್ರೀತಿ   

ನನ್ನ ಹೆಸರು ಆನಂದಪ್ಪ. ಕಳೆದ 10 ವರ್ಷಗಳಿಂದ ಎಳನೀರು ಮಾರುತ್ತಾ ಬದುಕನ್ನು ಕಟ್ಟಿಕೊಂಡಿದ್ದೇನೆ. ನನ್ನ ಊರು ಮಳವಳ್ಳಿ ಹತ್ತಿರದ ಒಂದು ಪುಟ್ಟ ಹಳ್ಳಿ. ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಹತ್ತು ವರ್ಷಗಳಿಂದ ಶಂಕರಪುರಂನ ಶಂಕರ ಮಠದ ಶ್ರೀರಂಗದೊರೆ ಮೆಮೊರಿಯಲ್‌ ಆಸ್ಪತ್ರೆಯ ಮುಂಭಾಗದ ಮರದ ಕೆಳಗಿನ ಸ್ವಲ್ಪ ಜಾಗದಲ್ಲೇ ಎಳನೀರು ಮಾರುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ.

ನಾನು ಮಾತನಾಡುವುದು ಕಡಿಮೆ. ಆದರೆ ಗಿರಾಕಿಗಳ ಜೊತೆಯೇ ನಗುನಗುತ್ತಾ ಅವರ ಬೇಡಿಕೆಗೆ ತಕ್ಕಂತೆ ಎಳನೀರು ನೀಡುತ್ತೇನೆ. ನಾವು ನೀಡುವ ಎಳನೀರು ಅವರ ದಣಿವಾರಿಸುತ್ತದೆ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂಬುದು ನನ್ನ ನಂಬಿಕೆ.

ವಾರಕ್ಕೆ ಎರಡರಿಂದ ಮೂರು ಬಾರಿ ಬೇರೆಬೇರೆ ಎಳನೀರಿನ ಲಾರಿ ಬರುತ್ತದೆ. ಪ್ರತಿದಿನ ಐವತ್ತರಿಂದ ಅರವತ್ತು ಎಳನೀರು ವ್ಯಾಪಾರವಾಗುತ್ತದೆ. ಆದರೆ ಲಾಭ ಅಷ್ಟಕಷ್ಟೇ. ತುಂಬಾ ವ್ಯಾಪಾರದ ದಿನ ಮಾತ್ರ ಮೂನ್ನೂರು ರೂಪಾಯಿ ಸಂಪಾದಿಸುತ್ತೇನೆ. ಅಷ್ಟು ಲಾಭ ಬರುವುದೇ ಹೆಚ್ಚು.

ADVERTISEMENT

ಗವೀಪುರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇನೆ. ಹೆಂಡತಿ , ಇಬ್ಬರು ಹೆಣ್ಣುಮಕ್ಕಳ ಪುಟ್ಟ ಸಂಸಾರ ನಮ್ಮದು. ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 6.30ರವರೆಗೆ ವ್ಯಾಪಾರ ಮಾಡುತ್ತೇನೆ. ನನ್ನ ಸಂಪಾದನೆ ಸಣ್ಣದು. ಬೆಂಗಳೂರಿನಲ್ಲಿ ಜೀವನ ದುಬಾರಿ. ಬಾಡಿಗೆ, ತರಕಾರಿ, ದಿನಸಿ ಇದೆಲ್ಲಾ ಇಲ್ಲಿ ದುಬಾರಿ. ಆದರೆ ಜೀವನ ನಡೆಸಲೇಬೇಕಲ್ವಾ?

ನನಗೆ ಸಂಪಾದನೆ ಚೆನ್ನಾಗಿಲ್ಲ ಅಂತಾ ನಾನು ಕೈಕಟ್ಟಿ ಕೂರಲ್ಲ. ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಲೇಬೇಕು ಎಂದು ಅಂದುಕೊಂಡಿದ್ದೇನೆ. ದೊಡ್ಡಮಗಳು ಸದ್ಯದಲ್ಲಿ ಎಂ.ಕಾಂ ಮುಗಿಸಿ ಪದವೀಧರೆ ಆಗಲಿದ್ದಾಳೆ. ಅದು ಖುಷಿ ನನಗೆ. ಆಮೇಲೆ ಆಕೆಗೆ ಉದ್ಯೋಗ ದೊರಕಿದರೆ ಆಯಿತು. ಸಣ್ಣಮಗಳು ಪಿಯುಸಿ ಓದುತ್ತಿದ್ದಾಳೆ. ಆಕೆ ಓದುವಷ್ಟು ವರ್ಷ ಓದಿಸುತ್ತೇನೆ.

ನನಗೆ ಪ್ರಾಣಿ–ಪಕ್ಷಿಗಳು ಎಂದರೆ ಚಿಕ್ಕವಯಸ್ಸಿನಿಂದಲೇ ಇಷ್ಟ. ಈ ಮರದ ಕಾಯಿಗಳನ್ನು ತಿನ್ನಲು ತುಂಬಾ ಅಳಿಲುಗಳು ಬರುತ್ತವೆ. ಹಾಗಾಗಿ ಅದಕ್ಕೆ ನೀರು–ದವಸ ಧಾನ್ಯಗಳನ್ನು ಮರದ ಬುಡದಲ್ಲಿ ಇಟ್ಟು ಬಿಡುತ್ತೇನೆ. ಇದನ್ನು ಒಂದು ದಿನವೂ ತಪ್ಪಿಸುವುದಿಲ್ಲ. ಎಳನೀರಿನ ಖಾಲಿ ಬೊಡ್ಡೆಗಳನ್ನು ಅರ್ಧಕ್ಕೆ ಸೀಳಿ ಬಟ್ಟಲುಗಳಂತೆ ಮಾಡಿ ಅದರಲ್ಲಿ ನೀರು ಮತ್ತು ಧಾನ್ಯ ಇಡುತ್ತೇನೆ. ಹತ್ತಾರು ಅಳಿಲುಗಳು ಇದನ್ನು ತಿನ್ನಲು ಇಲ್ಲಿಗೆ ಬರುವುದನ್ನು ನೋಡಿ ತುಂಬಾ ಖುಷಿಯಾಗುತ್ತದೆ.

ನಾನು ಅಪರೂಪಕ್ಕೆ ಒಂದು ಅಥವಾ ಎರಡು ದಿನ ಮಳವಳ್ಳಿಗೆ ಹೋಗುತ್ತೇನೆ. ಆಗ ಈ ಅಳಿಲುಗಳ ಊಟದ ಜವಾಬ್ದಾರಿಯನ್ನು ಸ್ನೇಹಿತರಿಗೆ ಒಪ್ಪಿಸಿಬಿಡುತ್ತೇನೆ.

ಚಂದ್ರಿಕಾ ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.