ADVERTISEMENT

‘ಐಸ್‌ಕ್ರೀಂ ತಂಪಾಗಿದೆ, ಆದ್ರೆ ಜೀವನ ಹಾಗಿಲ್ಲ’

ಬದುಕು ಬನಿ

ಮಾಳಿಂಗರಾಯ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ರಮೇಶ್‌
ರಮೇಶ್‌   

ನನ್ನ ಹೆಸರು ರಮೇಶ್‌. ತುಮಕೂರು ಜಿಲ್ಲೆ ತಿಪಟೂರು ತಾಲೂಕು ನಮ್ಮೂರು. ನಾನು ಓದಿದ್ದು ನಾಲ್ಕನೆ ತರಗತಿ ಮಾತ್ರ. ಊರಲ್ಲಿರೊ ಪರಿಚಿತರ ಸಹಾಯದಿಂದ ಮಾಗಡಿಗೆ ಬಂದು ಕೆಲವು ವರ್ಷ ಅಲ್ಲೆ ತಳ್ಳೊ ಗಾಡಿಲಿ ಐಸ್‌ಕ್ರೀಂ ಮಾರುತ್ತ ಜೀವನ ಸಾಗಿಸುತ್ತಿದ್ದೆ.

ನಂತರ ಮಾಗಡಿಯಿಂದ ಬೆಂಗಳೂರಿಗೆ ಬಂದು ಹೆಂಡತಿ ಮಂಜುಳಾ, ಇಬ್ಬರು ಮಕ್ಕಳೊಂದಿಗೆ ಕುಮಾರಸ್ವಾಮಿ ಬಡಾವಣೆಯಲ್ಲಿ  ಬಾಡಿಗೆಗೆ ವಾಸವಿದ್ದೇವೆ. ಐಸ್‌ಕ್ರೀಂ ವ್ಯಾಪಾರ ಕಳೆದ ಇಪ್ಪತ್ತು ವರ್ಷದಿಂದ ಮಾಡುತ್ತಿದ್ದೇನೆ. ಈಗ ಪತ್ನಿ ಮಂಜುಳಾ ಜತೆಗೆ  ಕಬ್ಬನ್‌ ಪಾರ್ಕ್‌ನಲ್ಲಿ ಐಸ್‌ಕ್ರೀಂ  ವ್ಯಾಪಾರ ಮಾಡುತ್ತಾ, ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿದ್ದೇವೆ.

ನಮ್ಮದು ಬಡ ಕುಟುಂಬವಾದ್ದರಿಂದ  ಅಲ್ಪಸ್ವಲ್ಪ ಎನ್ನುವ ಹಾಗೆ ನಮ್ಮೂರಲ್ಲಿ, ಸ್ವಂತ ಎರಡು ಎಕರೆ ಜಮೀನು ಇದೆ. ಆದರೆ ನೀರಿನ ಅಭಾವದಿಂದ  ಕೃಷಿ ಚಟುವಟಿಕೆ ಮಾಡಲು ಕಷ್ಟ. ಆ ಜಮೀನನ್ನು ಹಾಗೇ ಬಿಟ್ಟಿದ್ದೇವೆ. ಐಸ್‌ಕ್ರೀಂ ವ್ಯಾಪಾರದಲ್ಲಿ  ಪ್ರತಿನಿತ್ಯ ₹300 ರಿಂದ ₹400 ವರೆಗೆ ಸಂಪಾದನೆ ಆಗುತ್ತದೆ. ಕುಟುಂಬ ಸಾಗಿಸಲು ಈ ಕೆಲಸ ನೆರವಾಗಿದ್ದು, ನಾವು ಮಾಡುವ ಕೆಲಸದ ಮೇಲೆ ನಮಗೆ ಹೆಮ್ಮೆ ಇದೆ.

ಆದರೆ ಏನ್‌ ಮಾಡೋದು ಸ್ವಾಮಿ?  ತಳ್ಳೊಬಂಡಿ ಇಟ್ಟುಕೊಂಡು, ಕಬ್ಬನ್‌ ಪಾರ್ಕ್‌ನಲ್ಲಿ ವ್ಯಾಪಾರ ಮಾಡಲು ಅಲ್ಲಿನ ಸಿಬ್ಬಂದಿ ಅಡ್ಡಿಪಡಿಸುತ್ತಾರೆ. ನಮ್ಮ ವ್ಯಾಪಾರದಿಂದ ಐಸ್‌ಕ್ರೀಂ ತಿಂದ ಜನ ಅದರ ಪ್ಯಾಕೆಟ್‌, ಕಡ್ಡಿ ಅಲ್ಲಲ್ಲಿ  ಎಸೆಯುತ್ತಾರೆ ಎಂದು ನಮ್ಮನ್ನು ದೂರುತ್ತಾರೆ. 

ಇಲ್ಲಿ ವ್ಯಾಪಾರ ಮಾಡಲು ಅನುಮತಿಗೆ ಸಚಿವರಿಂದ ಶಿಫಾರಸು ಪತ್ರ ತರಬೇಕು ಎಂದು ಹೇಳುತ್ತಾರೆ. ನಾವು ಬಡವರು, ಶಾಲೆಗೆ ಹೋದೋರಲ್ಲ. ನಮ್ಮಿಂದ ಅದು ಆಗುತ್ತಾ? ಐಸ್‌ಕ್ರೀಂ ಏನೋ ತಂಪಾಗಿರುತ್ತದೆ. ಆದರೆ ನಮ್ಮ ವ್ಯಾಪಾರ ಹಾಗಲ್ಲ.  ಪ್ರತಿದಿನ ಕಷ್ಟ ಎದುರಿಸಬೇಕಾಗುತ್ತದೆ. ಮಳೆ ಬಂದರೆ ವ್ಯಾಪಾರ ತುಂಬಾ ಡಲ್‌.  ಮನೆಗೆ ತೆರಳಲು ಬಸ್‌ ಚಾರ್ಜ್‌ಗೆ ಸಹ  ಹಣ ಇರುವುದಿಲ್ಲ.

ಮೋದಿಯವರು ನೋಟು ಬ್ಯಾನ್‌ ಮಾಡಿದ್ರು ನೋಡಿ. ಒಂದು ತಿಂಗಳು ನಮ್ಮ ವ್ಯಾಪಾರಕ್ಕೆ ದೊಡ್ಡ ಕಲ್ಲು ಬಿದ್ದಂತಾಗಿತ್ತು. ಈಗ ಪರವಾಗಿಲ್ಲ. ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ನಮಗೆ ಪ್ರೀತಿ, ಒಂದೊತ್ತು ಊಟ ನೀಡಿದರೆ ಸಾಕು. ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಪಡುವುದರಲ್ಲಿ ನಮಗೆ ಖುಷಿ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.