ADVERTISEMENT

ಒಂದೇ ವೇದಿಕೆಯಲ್ಲಿ ಭಾರತ-–ಸ್ಪೇನ್ ಕಲಾವಿದರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 19:30 IST
Last Updated 21 ಏಪ್ರಿಲ್ 2014, 19:30 IST

ಎರಡು ಪಂಗಡಗಳ ನಡುವೆ ನಡೆಯುವ ಯುದ್ಧಕ್ಕೆ ಅನೇಕ ಆಯಾಮಗಳಿವೆ. ಯುದ್ಧದ ಹಿಂದೆ, ಮುಂದೆ ಅದೆಷ್ಟೋ ಕಥೆಗಳಿವೆ. ಹಾಗಾಗಿಯೇ ಯುದ್ಧಭೂಮಿ ಹಲವು ಭಾವಗಳ ಮಿಲನ–ರೋಷ, ದುಃಖ, ಆಸೆ, ಅನುಕಂಪ, ಅವಮಾನ, ಸಂತೋಷ ಇತ್ಯಾದಿ. ರಣರಂಗಕ್ಕೆ ಸಂಬಂಧಿಸಿದ ಎಂಟು ಭಾವಗಳನ್ನು ವೇದಿಕೆಯಲ್ಲಿ ಹಿಡಿದಿಡುವ ಪ್ರಯತ್ನವನ್ನು ಇಗ್ನೈಟ್ ಕಾರ್ಯಕ್ರಮದ ಮೂಲಕ ಹೋಮ್‌ಟೌನ್‌ ಪ್ರೊಡಕ್ಷನ್ ಮಾಡಿತು.

ಹೋಮ್‌ಟೌನ್ ಪ್ರೊಡಕ್ಷನ್ಸ್ ಇತ್ತೀಚೆಗೆ ಆಯೋಜಿಸಿದ ಈ ಕಾರ್ಯಕ್ರಮ ನಡೆದಿದ್ದು ಚೌಡಯ್ಯ ಸ್ಮಾರಕ ಭವನದಲ್ಲಿ. ಅಂದು ರಣರಂಗದ ಕಿಡಿ ಹೊತ್ತಿಸಿದವರು ಸ್ಪೇನ್ ಮತ್ತು ಭಾರತದ ಕಲಾವಿದರು.

ಇಗ್ನೈಟ್ ಆರಂಭವಾಗಿದ್ದು ಶಂಖನಾದದಿಂದ. ಶಂಖನಾದದ ಮೂಲಕ ಪಂಥಾಹ್ವಾನ ಪಡೆದುಕೊಂಡ ಸ್ಪೇನ್‌ನ ಕಾರ್ಲೊಸ್ ಕಮ್ಯಾರೊ ವೇದಿಕೆಯಲ್ಲಿ ಹೆಜ್ಜೆಯಿಟ್ಟರು. ಕೋಹಿನೂರ್ ಹೆಸರಿನ ಈ ಕಾರ್ಯಕ್ರಮ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು. ಕಾರ್ಲೊಸ್ ಅವರ ನಂತರ ಜಯಂತಿ ಈಶ್ವರಿಪುಟಿ ಮತ್ತು ಅವರೊಂದಿಗೆ ವಿಶಾಲ್ ಕೃಷ್ಣ ಕಥಕ್ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಕಥಕ್ ಹೆಜ್ಜೆಗಳಿಗೆ ದೆಹಲಿಯ ಸರ್ವಾಣಿ ಮುದ್ಗಲ್ ಧ್ವನಿ ನೀಡಿದರೆ, ಫ್ಲೆಮಿಂಕೋ ಹೆಜ್ಜೆಗಳಿಗೆ ಹಿನ್ನೆಲೆಯ ಸಾಥ್ ನೀಡಿದವರು ನೈಕಿ ಫೋನ್ಸೆ. ಡ್ರಮ್ಸ್‌ನಲ್ಲಿ ಇಸ್ರೇಲ್ ವರೇಲಾ ಮತ್ತು ಗಿಟಾರ್‌ನಲ್ಲಿ ಬೆಟ್ಟಿನಾ ಫ್ಲಾಟರ್ ತಮ್ಮ ಸಂಸ್ಕೃತಿ ಪರಿಚಯಿಸಿದರು. ಯುದ್ಧದ ತೀಕ್ಷ್ಣತೆಯನ್ನು ವೇದಿಕೆಗೆ ತಂದವರು ಕಾರೆನ್ ಲುಗೊ. ಮೈಬಾಗಿಸುತ್ತಾ ಇಡೀ ವೇದಿಕೆಯನ್ನು ಆಕ್ರಮಿಸಿಕೊಂಡ ಕಾರೆನ್ ಲುಗೊ ಅವರ ನೃತ್ಯಕ್ಕೆ ಚಪ್ಪಾಳೆಯ ಪ್ರಶಂಸೆ ದೊರಕಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.