ADVERTISEMENT

ಒಳಮನೆಯಲ್ಲಿ ನೀರು ಕಟ್ಟಿ...

ರಮೇಶ ಕೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಒಳಮನೆಯಲ್ಲಿ ನೀರು ಕಟ್ಟಿ...
ಒಳಮನೆಯಲ್ಲಿ ನೀರು ಕಟ್ಟಿ...   

ಅಡುಗೆಮನೆಯಲ್ಲಿ ಪಾತ್ರೆ ತೊಳೆಯುವಾಗ ಸಿಂಕ್‌ನಲ್ಲಿ ಜೋರಾಗಿ ಬರುವ ನೀರು, ಶವರ್‌ನಿಂದ ರಭಸವಾಗಿ ಬೀಳುವ ಮಳೆಯಂತಹ ನೀರು, ಗುಂಡಿ ಒತ್ತಿ ಕಮೋಡ್‌ ಫ್ಲಶ್‌ ಮಾಡುವ ನೀರು... ಒಳಮನೆಯಲ್ಲಿ ಎಷ್ಟೊಂದು ನೀರು ಪೋಲು!

ಶವರ್‌ ನೀರು ಬೆನ್ನಿಗೆ ಬೀಳುವಾಗ ಅದೆಂಥಾ ಆಹ್ಲಾದ... ಅದೇ ಖುಷಿಯಲ್ಲಿ ಶವರ್‌ನಡಿ ಎಷ್ಟು ಹೊತ್ತು ನಿಂತಿದ್ದೇವೆ ಎಂಬುದನ್ನೇ ಮರೆತುಹೋಗುತ್ತದೆ.  

ಗೃಹ ಬಳಕೆ ಹಾಗೂ ಸ್ನಾನದ ಮನೆಯಲ್ಲಿ ಪೋಲಾಗುವ ನೀರಿನಲ್ಲೂ ಉಳಿತಾಯ ಮಾಡಬಹುದು. ಹನಿ ಹನಿ ನೀರು ಅತ್ಯಮೂಲ್ಯ. ನೀರು ಪೋಲಾಗದಂತೆ ತಡೆಯಲು ಏನೆಲ್ಲಾ ಮಾಡಬಹುದು ಗೊತ್ತಾ....

ADVERTISEMENT

ನಲ್ಲಿಯಲ್ಲಿ ಬರುವ ನೀರಿನ ಹರಿವಿನ ಒತ್ತಡವನ್ನು ಕಡಿಮೆ ಮಾಡುವ ತಂತ್ರಜ್ಞಾನದ ಉತ್ಪನ್ನಗಳು ಈಗ ಹೆಚ್ಚು ಬಳಕೆಯಾಗುತ್ತಿವೆ.
ನಗರದಲ್ಲಿ ತಲೆಎತ್ತುತ್ತಿರುವ ಮಾಲ್‌ಗಳು, ವಸತಿ ಸಂಕೀರ್ಣಗಳು ಹಾಗೂ ಐಟಿ, ಬಿಟಿ ಕಂಪೆನಿಗಳ ಕಟ್ಟಡಗಳಲ್ಲಿ ನೀರು ಉಳಿತಾಯಕ್ಕೆ ‘ಗ್ರೀನ್ ಪ್ರಾಡಕ್ಟ್’ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. 

ಕೊಳಾಯಿಯ ನೀರು ಬೀಳುವ ಜಾಗದಲ್ಲಿ ‘ಎರೇಟರ್’ ಮತ್ತು ‘ಫ್ಲೋ ರಿಸ್ಟ್ರಿಕ್ಟರ್’ ಎಂಬ ಸಾಧನಗಳನ್ನು ಅಳವಡಿಸುವುದರಿಂದ  ಹರಿವಿನ ಒತ್ತಡ ಕಡಿಮೆಯಾಗಿ ನೀರು ಉಳಿತಾಯವಾಗುತ್ತದೆ.

ನೀರಿನ ರಭಸ ಹೆಚ್ಚಿದ್ದರೆ, ಸಾಮಾನ್ಯ ಕೊಳಾಯಿಯಲ್ಲಿ ಒಂದು ನಿಮಿಷಕ್ಕೆ 10ರಿಂದ 12 ಲೀಟರ್ ನೀರು ಬರುತ್ತದೆ. ಗ್ರಿನ್ ಪ್ರೊಡಕ್ಟ್‌ಗಳನ್ನು ಅಳವಡಿಸಿದರೆ 4ರಿಂದ 6 ಲೀಟರ್ ಬರುತ್ತದೆ. ಇದರಿಂದ ಆರು ಲೀಟರ್ ನೀರು ಉಳಿತಾಯವಾಗುತ್ತದೆ. ಒಂದು ಗಂಟೆಗೆ ಸುಮಾರು 360 ಲೀಟರ್ ನೀರು ಮಿತವ್ಯಯ ಮಾಡಬಹುದು.

ಜಾಗ್ವಾರ್ ಕಂಪೆನಿಯವರು ಅಭಿವೃದ್ಧಿಪಡಿಸಿದ್ದಾರೆ.  ಇವು ನೀರು ಹರಿವಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ನೀರಿನೊಂದಿಗೆ ಗಾಳಿಯ ಒತ್ತಡ ಸೇರುವಂತೆ ಮಾಡುವುದರಿಂದ ನೀರು ಕಡಿಮೆ ಬರುತ್ತದೆ. ಫ್ಲೋ ರಿಸ್ಟ್ರಿಕ್ಟರ್‌ ಬಿರಟೆ ಆಕಾರದಲ್ಲಿದ್ದು, ಸಣ್ಣ ಸಣ್ಣ ತೂತುಗಳಿರುತ್ತವೆ.

ಕಿಚನ್‌ ಸಿಂಕ್‌, ಶವರ್‌, ಫ್ಲೆಶ್‌ವಾಲ್‌. ಸ್ಪೌಟ್‌,  ಸಿಂಕ್‌ ಮಿಕ್ಸರ್‌ (ಬಿಸಿನೀರು ಮತ್ತು ತಣ್ಣೀರು ಬರುವ ನಲ್ಲಿ), ವಾಶ್‌ ಬೆಸಿನ್‌ ಟ್ಯಾಪ್‌, ಟಾಯ್ಲೆಟ್‌ ಹೆಲ್ತ್‌ ಫಾಸೆಟ್‌ಗಳ ನಲ್ಲಿಗಳಲ್ಲಿ ಈ ಪರಿಸರಸ್ನೇಹಿ ‘ಗ್ರೀನ್‌ ಪ್ರೊಡಕ್ಟ್‌’ಗಳನ್ನು ಬಳಕೆ ಮಾಡಬಹುದು.

ಸೆನ್ಸಾರ್‌ ಉತ್ಪನ್ನಗಳ ಬಳಕೆ
‘ಗ್ರೀನ್‌ ಪ್ರಾಡಕ್ಟ್‌’ಗಳಲ್ಲದೇ ಸೆನ್ಸಾರ್‌ ಒಳಗೊಂಡ ಉತ್ಪನ್ನ ಬಳಸುವುದರಿಂದಲೂ ನೀರು ಉಳಿತಾಯ ಮಾಡಬಹುದು. ಹೋಟೆಲ್‌, ಕಲ್ಯಾಣ ಮಂಟಪ, ಸಾರ್ವಜನಿಕ ಶೌಚಾಲಯ, ಬಸ್‌, ರೈಲು ನಿಲ್ದಾಣಗಳಲ್ಲಿ ಕೊಳಾಯಿಗಳನ್ನು ಬೇಕಾಬಿಟ್ಟಿ ಬಳಸುತ್ತಾರೆ. ಉಪಯೋಗಿಸಿದ ನಂತರ ಹಾಗೇ ಬಿಟ್ಟು ಹೋಗುತ್ತಾರೆ. ಇದರಿಂದ ಅನಗತ್ಯವಾಗಿ ನೀರು ವ್ಯರ್ಥವಾಗುತ್ತದೆ. ಇಂಥ ಸ್ಥಳಗಳಲ್ಲಿ ಸೆನ್ಸಾರ್‌ ಉತ್ಪನ್ನಗಳನ್ನು ಬಳಸಬಹುದು.

‘ಇತ್ತೀಚಿನ ವರ್ಷಗಳಲ್ಲಿ ನೀರಿನ ಮಹತ್ವ ಗೊತ್ತಾಗುತ್ತಿದೆ. ಮನೆಗಳಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ನೀರು ಉಳಿಸಲು ಜನ ಮುಂದಾಗುತ್ತಿದ್ದಾರೆ. ಐಟಿ, ಬಿಟಿ ಕಚೇರಿಗಳಲ್ಲಿ ಗ್ರೀನ್‌ ಪ್ರಾಡಕ್ಟ್‌ಗಳ ಬಳಕೆ ಹೆಚ್ಚಿದೆ. ಮುಂದಿನ ಪೀಳಿಗೆಗೆ ನಾವು ಜಲಸಂಪತ್ತನ್ನು ಉಳಿಸಬೇಕಿದೆ. ನಮ್ಮ ಕಂಪೆನಿ ನೀರಿನ ಹರಿವು ಕಡಿಮೆ ಮಾಡುವ ಸಾಧನಗಳನ್ನು ಅಭಿವೃದ್ಧಿಪಡಿಸಿ ಐದಾರು ವರ್ಷಗಳೇ ಆಗಿವೆ. ಎಷ್ಟೇ ರಭಸವಾಗಿ ನೀರು ಬರುತ್ತಿದ್ದರೂ ಹರಿವಿನ ಒತ್ತಡ ಕಡಿಮೆ ಮಾಡುವ ತಂತ್ರಜ್ಞಾನವಿದು. ಶೇ50ರಿಂದ ಶೇ 80ರಷ್ಟು ನೀರು ಉಳಿತಾಯವಾಗುತ್ತದೆ’ ಎನ್ನುತ್ತಾರೆ ಜಾಗ್ವಾರ್‌ ಅಂಡ್‌ ಕಂಪೆನಿ ಪ್ರಾಜೆಕ್ಟ್ಸ್‌ಮುಖ್ಯಸ್ಥ  ಗುರುಪ್ರಸಾದ್‌.

750 ಎಂ.ಎಲ್‌ನ ಪ್ರೆಸ್ಮೆಟಿಕ್‌ ಟ್ಯಾಪ್‌, ಶೇ 30ರಷ್ಟು ನೀರು ಉಳಿತಾಯ ಮಾಡುವ ಏರ್‌ ಶವರ್ಸ್‌, ಒಂದು ಸೆಕೆಂಡಿಗೆ 0.11 ಲೀಟರ್‌ ನೀರು ಬರುವ ಸೆನ್ಸಾರ್‌ ಟ್ಯಾಪ್, ಶೇ50 ರಷ್ಟು ನೀರು ಉಳಿತಾಯ ಮಾಡುವ 3/6 ಲೀಟರ್‌ನ ಫ್ಲಶಿಂಗ್‌ ಸಿಸ್ಟಮ್ಸ್‌, 2/4 ಲೀಟರ್‌ನ ಫ್ಲಶಿಂಗ್‌ ಸಿಸ್ಟಮ್‌ (ಶೇ65ರಷ್ಟು ಉಳಿತಾಯ). ಒಮ್ಮೆ ಫ್ಲಶ್‌ ಮಾಡಿದರೆ 1.5 ಲೀಟರ್‌ ನೀರು  ನುಗ್ಗುವ ಸೆನ್ಸಾರ್‌ ಯೂರಿನಲ್‌ಗಳು (ಮೂತ್ರ ಮಾಡುವ ಕಮೋಡ್‌/ಸ್ಥಳ) ಉತ್ಪನ್ನಗಳಿವೆ.

**

ನೀರು ಉಳಿತಾಯದ ಕನ್ಸೀಲ್‌ ಟ್ಯಾಂಕ್‌ಗಳು
‘ಕಮೋಡ್‌ ಕನ್ಸೀಲ್‌ ಟ್ಯಾಂಕ್‌ಗಳಲ್ಲೂ ನೀರು ಉಳಿತಾಯ ಮಾಡಬಹುದು. ಜರ್ಮನ್‌ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ಟೊಟೊ ಕಂಪೆನಿಯ  3/6 ಲೀಟರ್‌ ಕನ್ಸೀಲ್‌ ಟ್ಯಾಂಕ್‌ಗಳಲ್ಲಿ 2 ಲೀಟರ್‌ ನೀರು ಉಳಿಸಬಹುದು. ಈ ಕಂಪೆನಿ ಕಮೋಡ್‌ಗಳ ಅಂಚಿನಲ್ಲೂ ನೂತನ ವಿನ್ಯಾಸ ಮಾಡಲಾಗಿದೆ. ಇದರಿಂದ ಸ್ವಚ್ಛಮಾಡಲು ಹೆಚ್ಚು ನೀರು ಬೇಕಾಗುವುದಿಲ್ಲ’ ಎನ್ನುತ್ತಾರೆ ರಾಜಾಜಿನಗರ ‘ಬಾತ್‌ ಅಂಡ್‌ ಬಿಯಾಂಡ್‌’ ಮಳಿಗೆಯ ಗಿರೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.