ADVERTISEMENT

ಕಣ್ಣು ಕಟ್ಟಿ ‘ಬಿಗ್‌ಬಾಸ್‌’ ಗಾರ್ಡನ್‌ ಏರಿಯಾಗೆ...

ರೋಹಿಣಿ ಮುಂಡಾಜೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಕೀರ್ತಿಕುಮಾರ್‌, ಮೋಹನ್‌, ಪ್ರಥಮ್‌
ಕೀರ್ತಿಕುಮಾರ್‌, ಮೋಹನ್‌, ಪ್ರಥಮ್‌   

ಶನಿವಾರ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿಯ ಬಿಗ್‌ಬಾಸ್ ಸೆಟ್‌ ತಲುಪಿದಾಗ ಇಳಿಸಂಜೆಯು ಕತ್ತಲ ಮುಸುಕು ಎಳೆದುಕೊಳ್ಳುತ್ತಿತ್ತು. ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಸೆಟ್‌ನ ಒಳಗೊಂದು ಸುದ್ದಿಗೋಷ್ಠಿ ಎಂಬ ಪರಿಕಲ್ಪನೆಯನ್ನು ಹಿಂದಿಯ ‘ಬಿಗ್‌ಬಾಸ್‌’ನಂತೆ ಕನ್ನಡದಲ್ಲಿಯೂ ಪರಿಚಯಿಸುವ ಪ್ರಯತ್ನವನ್ನು ಕಲರ್ಸ್‌ ಕನ್ನಡ ವಾಹಿನಿ ಮಾಡಿತ್ತು. ಒಟ್ಟು ನಾಲ್ಕು  ಮಂದಿ ಮಾಧ್ಯಮ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಬಿಗ್‌ಬಾಸ್‌ ಸೆಟ್‌ನ ಒಳಪ್ರಪಂಚದ ಗೌಪ್ಯ ಕಾಪಾಡುವ ನಿಟ್ಟಿನಲ್ಲಿ ಅಲ್ಲಿ ಪ್ರವೇಶ ನಿಷಿದ್ಧ. ಆದರೆ ಅವರೇ ಏರ್ಪಡಿಸಿದ ಸುದ್ದಿಗೋಷ್ಠಿ. ಹಾಗಾಗಿ ನಾಲ್ಕೂ ಮಂದಿಯನ್ನು ಕಣ್ಣಿಗೆ ಪಟ್ಟಿ ಕಟ್ಟಿಯೇ ಕರೆದೊಯ್ಯಬೇಕಾಗುತ್ತದೆ ಎಂದು, ಕಲರ್ಸ್‌ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್‌ ಹಾಗೂ ಶೋದ ನಿರ್ದೇಶಕ ಪರಮೇಶ್ವರ ಗುಂಡ್ಕಲ್‌ ಮೊದಲೇ ಮನವರಿಕೆ ಮಾಡಿಕೊಟ್ಟರು.

ಸೆಟ್‌ನ ಮಗ್ಗುಲಲ್ಲೇ ಅಷ್ಟು ಹೊತ್ತು ನಿಂತಿದ್ದ ಮಹೀಂದ್ರಾ ಕ್ಸೈಲೊದೊಳಗೆ ಕೂರಿಸಿದ ತಕ್ಷಣ ನಾಲ್ಕೂ ಜನರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದರು. ತಕ್ಷಣ ನನ್ನ ಕೈಯನ್ನು ಯಾರೋ ಹಿಡಿದುಕೊಂಡರು. ಹೆಜ್ಜೆ ಎತ್ತಿಯಿಡಲೂ ಭಯ. ಎಲ್ಲಾ ಕಡೆ ಬರಿ ಹಳ್ಳ, ಏರು ತಗ್ಗು ಇದೆಯೇನೋ ಎಡವಿ ಬೀಳುತ್ತೇನೇನೋ ಎಂಬ ಭಾವ ಆವರಿಸಿಕೊಂಡು ಬಿಟ್ಟಿತು. ಇಡೀ ಪ್ರಪಂಚ ಕಾರ್ಗತ್ತಲಲ್ಲಿ ಕರಗಿಹೋಯ್ತು.

‘ಮೇಡಂ ಆಗ ನಡೀತಿದ್ರಲ್ಲಾ ಹಾಗೇ ಫಾಸ್ಟಾಗಿ ಬನ್ನಿ... ಇಲ್ಲಿ ಏನೂ ಇಲ್ಲ’ ಎಂದು ಕೈಹಿಡಿದಾಕೆ ಹೇಳಿದರೂ ವಿಶ್ವಾಸವಿಲ್ಲ! ಕೆಲವೇ ನಿಮಿಷಗಳ ಮಟ್ಟಿಗೆ ಕಣ್ಣು ಕಟ್ಟಿಸಿಕೊಂಡು  ಹೀಗೆ ಒದ್ದಾಡಬೇಕಾದರೆ ನಿಜವಾದ ಅಂಧರ ಪಾಡು ಹೇಗಿರಬಹುದು ಎಂಬ ಪ್ರಶ್ನೆ ಹೃದಯವನ್ನು ಕಲಕಿತು.

ನನಗೆ ಕಣ್ಣಾಗಿದ್ದವಳ ವಾಕಿಟಾಕಿಯಲ್ಲಿ   ಒನ್‌ ಟೂ ತ್ರೀ ಅನ್ನೋದಷ್ಟೇ ಕೇಳಿಸುತ್ತಿತ್ತು. ಅಸಲಿಗೆ, ಸೆಟ್‌ನ ಸುತ್ತ ನಮ್ಮನ್ನು ವಾಹನದಲ್ಲಿ ಸುತ್ತಿಸಿ ಮುಖ್ಯದ್ವಾರದ ಬಳಿ ಕರೆತರಲಾಗುತ್ತಿದೆ ಎಂಬ ಸುಳಿವು ಸಿಕ್ಕಿತು.

ಕಣ್ಣು ಪಟ್ಟಿ ಬಿಚ್ಚಿದಾಗ ಬಿಗ್‌ಬಾಸ್‌ ಮನೆಯ ಮುಖ್ಯದ್ವಾರದ ಒಳಗಿದ್ದೆವು. ಎಲ್ಲಾ ಕಡೆ ಪ್ರಖರವಾದ ಬೆಳಕು. ಗಾರ್ಡನ್‌ ಏರಿಯಾದಲ್ಲಿ ನಮಗೆ ನಾಲ್ಕು ಆಸನ. ಸಣ್ಣ ಟೇಬಲ್‌. ಆರಾರು ನೀರಿನ ಬಾಟಲಿ. ವೇದಿಕೆಯಲ್ಲಿ ಸ್ಪರ್ಧಿಗಳಿಗಾಗಿ ಆರು ಆಸನ.

ಮನೆಯೊಳಗೆ ಹೋಗಿ ಬರುವ ಗಾಜಿನ ಬಾಗಿಲಿಗೆ ಇಳಿಸಿದ್ದ ‘ಬ್ಲೈಂಡ್‌ ಸ್ಕ್ರೀನ್‌’ ಮೆಲ್ಲನೆ ಮೇಲೇರುತ್ತಾ ಬಂತು. ಆರೂ ಮಂದಿ ಗಾರ್ಡನ್‌ ಏರಿಯಾದತ್ತ ಬರುವುದು ಕಾಣಿಸಿತು. ಅವರ ಕಣ್ಣಿನ ಮಟ್ಟಕ್ಕೆ ಬಂದಾಗಲೇ ಅವರಿಗೆ ಗೊತ್ತಾಗಿದ್ದು ಯಾರೋ ‘ವಿಶೇಷ ಅತಿಥಿಗಳು’ ಬಂದಿದ್ದಾರೆ ಎಂದು.
ಅಲ್ಲಿಂದ ಸುದ್ದಿಗೋಷ್ಠಿ ಶುರುವಾಯ್ತು.

*‘ನಮ್ಮೊಳಗಿನ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಈ ಶೋಗೆ ಬಂದಿದ್ದೇವೆ ಅಂತ ಹೇಳ್ತೀರಿ. ಆದರೆ ನಿಮ್ಮ ವರ್ತನೆ,  ನಿಮ್ಮನ್ನು ನೀವು ಬಿಂಬಿಸಿಕೊಂಡ ರೀತಿಯಿಂದ ವೀಕ್ಷಕರಿಗೆ ಹಾಗೆ ಅನಿಸುತ್ತಿಲ್ಲ. ಇಲ್ಲಿ ಕಾಣ್ತಿರೋ ಮುಖಗಳೇ ನಿಜವಾದ ನೀವುಗಳು ಅಂತನ್ನಿಸುತ್ತದೆ. ಏನಂತೀರಾ ಮಾಳವಿಕಾ?
ಹೊರಗೆ ಇರೋ ರೀತಿಗೂ ಇಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರೋ ರೀತಿಗೂ ಅಜಗಜಾಂತರ ಇರುತ್ತದೆ. ಇಲ್ಲಿ ಇದ್ದವರಿಗೇ ಗೊತ್ತು ಈ ಕಷ್ಟ ಏನು ಅಂತ.  ನಾವು ಟಾಸ್ಕ್‌ಗಳ ಸಂದರ್ಭದಲ್ಲಿ ಮಾತ್ರ ಹಾಗೆ ನಡ್ಕೋತೀವೇ ವಿನಾ

*ನೀವು ಗೆಲ್ಲಬೇಕಾಗಿರುವುದು ಟ್ರೋಫಿಯನ್ನೇ? ನಿಮ್ಮೊಳಗಿನ ನಿಮ್ಮನ್ನೇ? ಅಥವಾ ಬರಿಯ ಹಣವನ್ನೇ ಮಾಳವಿಕಾ?
ಗೆಲುವು ಅಂತಂದ್ರೆ ಗೆಲುವು ಅಷ್ಟೇ. ಏನನ್ನು ಅಂತ ಹೇಗೆ ಹೇಳಲಿ? ಹಾಗೆ ಕೇಳಿದ್ರೆ ಉತ್ತರ ಕೋಡೋದು ಕಷ್ಟ.

*ಮೋಹನ್‌ ಅವರೇ, ತಪ್ಪು ಮಾಡಿದವರನ್ನೆಲ್ಲ ತರಾಟೆಗೆ ತಗೋತೀರಿ. ಆದರೆ, ಆಚೆ ಹೋದ ಮೇಲೆ ಸಂಜನಾ ಜತೆ ಮಲ್ಕೋತೀನಾಪ್ಪಾ ನಿಂಗೇನು ಅಂತ ಭುವನ್‌ , ಪ್ರಥಮ್‌ನ ಕೇಳಿದಾಗ ಯಾಕೆ ಸುಮ್ಮನಿದ್ರಿ? ಅವರು ಹೇಳಿದ್ದು ಸರಿ ಎಂದೇ?
ಮೇಡಂ, ಆಗಿನ ಪರಿಸ್ಥಿತಿಯೇ ಹಾಗಿತ್ತು. ಯಾರ ಬಳಿ ಮಾತಾಡಿದ್ರೂ ಎಲ್ಲಿ ಹೊಡೆದುಬಿಡ್ತಾರೋ ಅನ್ನುವಂಗಿತ್ತು ಸಿಚುವೇಷನ್ನು. ಏನಾದ್ರೂ ಮಾಡ್ಕೊಳ್ರಪ್ಪಾ ಅಂತ ಸುಮ್ಮನಾಗಿಬಿಟ್ಟೆ.
ಮಾಳವಿಕಾ: ನಾನು ಭುವನನ್ನ ತರಾಟೆಗೆ ತೆಗೆದುಕೊಂಡಿದ್ದೆ. ಗಮನಿಸಿದ್ದೀರಾ?

*‘ಪ್ರಥಮ್, ನೀವು ಪ್ರತಿಸಲ ಇಮ್ಯೂನಿಟಿ ಪಡೆದಾಗಲೂ, ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು ಅಂತ ಕುಣಿದಾಡ್ತೀರಲ್ಲ? ಕನ್ನಡಿಗರಿಗೋಸ್ಕರ ಮುಂದೆ ಏನು ಮಾಡ್ಬೇಕೂಂತ ಇದ್ದೀರಿ?

ಕನ್ನಡಿಗರಿಗೋಸ್ಕರ ಏನು ಬೇಕಾದ್ರೂ ಮಾಡೋಕ್ಕೆ ನಾನು ಸಿದ್ಧ. ನಾನು ಒಂದು ಮಾತು ಸ್ಪಷ್ಟಪಡಿಸ್ತೀನಿ. ನಾನು ಟ್ರೋಫಿ ಅಥವಾ ಹಣ ಗೆಲ್ಲೋದಿಕ್ಕೆ ಬಂದವನೇ ಅಲ್ಲ. ನನ್ನನ್ನು ನಾನು ತಿದ್ದಿಕೊಂಡು ಹೊಸ  ಮನುಷ್ಯನಾಗಬೇಕೆಂದು ಬಂದಿದ್ದೇನೆ. ನಮ್ಮೂರು ಒಂದು ಕುಗ್ರಾಮ. ಇವತ್ತಿಗೂ ನಮ್ಮೂರಿನಲ್ಲಿ ಏಳೆಂಟು ಮನೆಗಳಲ್ಲಿ ಟಿವಿ ಇದ್ದರೆ ಹೆಚ್ಚು. ಆದರೆ ಅವಕಾಶ ಸಿಕ್ಕಿದಾಗಲೆಲ್ಲ ನಾನು ಕನ್ನಡಿಗರ ಸೇವೆ ಮಾಡಿದ್ದೀನಿ, ಮುಂದೆಯೂ ಮಾಡ್ತೀನಿ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.