ADVERTISEMENT

ಕನ್ಯಾಕುಮಾರಿಯಿಂದ ಕರ್ದುಂಗ್‌ ಲಾ ವರೆಗೆ...

ಗಣೇಶ ವೈದ್ಯ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಕನ್ಯಾಕುಮಾರಿಯಿಂದ ಕರ್ದುಂಗ್‌ ಲಾ ವರೆಗೆ...
ಕನ್ಯಾಕುಮಾರಿಯಿಂದ ಕರ್ದುಂಗ್‌ ಲಾ ವರೆಗೆ...   

ದೂರ ದೂರದ ಸೈಕ್ಲಿಂಗ್‌ನಲ್ಲಿ ಭಾಗವಹಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಮುಂಬೈನ ಪನ್ವೇಲ್ ಮೂಲದ ಸುಮೀತ್ ಪರಿಂಗೆ ಹಾಗೂ ಪ್ರಿಸಿಲಿಯಾ ಮದನ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಕನ್ಯಾಕುಮಾರಿಯಿಂದ ಕರ್ದುಂಗ್ ಲಾ ವರೆಗೆ ಸೈಕಲ್ ಸವಾರಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ‘ಸೈಕ್ಲಿಸ್ಟ್ ಫಾರ್ ಚೇಂಜ್’ ಎಂದು ಈ ಯೋಜನೆಯನ್ನು ಕರೆದಿದ್ದು, ದಾರಿಯುದ್ದಕ್ಕೂ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಅದರ ಹಿಂದಿದೆ. ಜೊತೆಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಗುರಿಯೂ ಇದೆ.

ಜುಲೈ 14ರಂದು ತಮ್ಮ ಸವಾರಿ ಶುರು ಮಾಡಿರುವ ಇವರಿಬ್ಬರು ಈಚೆಗೆ ಮಾರ್ಗ ಮಧ್ಯೆ ಬೆಂಗಳೂರು ತಲುಪಿದ್ದರು. ಆ ಸಂದರ್ಭದಲ್ಲಿ ಸುಮೀತ್ ಪರಿಂಗೆ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ‘ಕನ್ಯಾಕುಮಾರಿ ಟು ಕರ್ದುಂಗ್ ಲಾ’ ಆಲೋಚನೆ ಹುಟ್ಟಿದ್ದು ಹೇಗೆ?
ಕಳೆದ ಬಾರಿ ಪ್ರಿಸಿಲಿಯಾ ಪನ್ವೇಲ್‌ದಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ್ದಾಗ ಗೋದ್ರೆಜ್‌ನ ಲಾಕಿಂ ಮೋಟರ್ಸ್ ವಿಭಾಗದವರು ನಮ್ಮನ್ನು ಭೇಟಿಯಾಗಿದ್ದರು. ಆಗ ಗೋದ್ರೆಜ್‌ನವರದೇ ಆದ ಬಿದಿರಿನ ಚೌಕಟ್ಟಿನ ಸೈಕಲ್ಲನ್ನು ನಮಗೆ ತೋರಿಸಿದ್ದರು.
‘ಕನ್ಯಾಕುಮಾರಿಯಿಂದ ಕರ್ದುಂಗ್ ಲಾ ವರೆಗೆ ಈ ಸೈಕಲ್ಲಿನಲ್ಲಿಯೇ ಸವಾರಿ ಮಾಡಿದರೆ ಹೇಗಿರುತ್ತೆ’ ಎಂದು ನಾವೇ ಕೇಳಿದ್ದೆವು. ಹಾಗೆ ಈ ಪ್ರೊಜೆಕ್ಟ್ ಆರಂಭವಾಗಿದ್ದು. ಗೋದ್ರೆಜ್‌ನ ಈ ಹೊಸ ಮಾದರಿಯ ಸೈಕಲ್ಲಿನ ಸಾಮರ್ಥ್ಯ ಪರೀಕ್ಷೆಯೂ ಈ ಸವಾರಿಯಲ್ಲಿ ಆಗಲಿದೆ.

* ಹೆಣ್ಣುಮಕ್ಕಳ ಶಿಕ್ಷಣಕ್ಕೆ ಈ ಯೋಜನೆ ಹೇಗೆ ಸಹಾಯ ಆಗಲಿದೆ?
ಸೈಕ್ಲಿಂಗ್ ಜನರ ಗಮನ ಸೆಳೆಯುತ್ತದೆ. ಮಾರ್ಗದಲ್ಲಿ ಅನೇಕ ಸ್ಥಳೀಯ ಜನರನ್ನು ಭೇಟಿಯಾಗುತ್ತೇವೆ. ಅವರೊಂದಿಗೆ ಮಾತಿಗಿಳಿಯುತ್ತೇವೆ. ನಮ್ಮ ಉದ್ದೇಶವನ್ನು ಹಂಚಿಕೊಳ್ಳುತ್ತೇವೆ. ಆ ಮೂಲಕ ಅವರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಬಿದಿರನ ಚೌಕಟ್ಟಿನ ಮಾದರಿಯ ಸೈಕಲ್ಲಿನಿಂದ ಬರುವ ಆದಾಯದ ಕೆಲ ಭಾಗವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಿಡಲು ಗೋದ್ರೆಜ್ ಈ ಮೊದಲೇ ನಿರ್ಧರಿಸಿತ್ತು. ಈ ಸೈಕ್ಲಿಂಗ್‌ನಿಂದ ಗೋದ್ರೆಜ್‌ನ ಸದುದ್ದೇಶಕ್ಕೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ ಎಂಬ ಚಿಂತನೆಯು ನಮಗೆ ಪ್ರೋತ್ಸಾಹ ನೀಡಿತ್ತು.

‘ಪ್ಯೂಯಲ್ ಎ ಡ್ರೀಮ್’ ಸಂಸ್ಥೆಯೂ ನಮ್ಮೊಂದಿಗೆ ಕೈ ಜೋಡಿಸಿದೆ. ಈ ಪ್ರಯತ್ನದಲ್ಲಿ ಕನಿಷ್ಠ ₹50 ಲಕ್ಷ ನಿಧಿ ಸಂಗ್ರಹದ ಗುರಿ ಹೊಂದಿದ್ದೇವೆ. ಇದರಿಂದ ಅಂದಾಜು ಒಂದೂವರೆ ಸಾವಿರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯ. ಈಗಾಗಲೇ ₹10 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಈ ನಿಧಿಯು ಅಹಮದಾಬಾದ್‌ನಲ್ಲಿರುವ ಐಐಎಂಪಿಎಸಿಟಿ ಸ್ವಯಂ ಸೇವಾ ಸಂಸ್ಥೆಗೆ ಹೋಗುತ್ತದೆ. ಈ ಪ್ರಯತ್ನವನ್ನು ಬೆಂಬಲಿಸುವವರು fue* adream.com ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವ ಲಿಂಕ್ ಬಳಸಿ ಕೊಡುಗೆ ನೀಡಬಹುದು.

* ಈ ಸೈಕ್ಲಿಂಗ್‌ನ ಸಂಕ್ಷಿಪ್ತ ಮಾಹಿತಿ ನೀಡಿ.
ಜುಲೈ 14ರಂದು ಕನ್ಯಾಕುಮಾರಿಯಿಂದ ಹೊರಟಿದ್ದೇವೆ. 63 ದಿನಗಳ ಈ ಪ್ರಯಾಣದಲ್ಲಿ ಸುಮಾರು 4200 ಕಿ.ಮೀ ದೂರ ಕ್ರಮಿಸಲಿದ್ದೇವೆ. ಕನ್ಯಾಕುಮಾರಿಯಿಂದ ಬೆಂಗಳೂರುವರೆಗೆ 700 ಕಿ.ಮೀ ಸೈಕ್ಲಿಂಗ್ ಮಾಡಿದ್ದೇವೆ. ಅನಂತಪುರ, ತೆಲಂಗಾಣ, ನಾಗಪುರ, ಗ್ವಾಲಿಯರ್, ಆಗ್ರಾ, ನವದೆಹಲಿ ಮೂಲಕ ಶ್ರೀನಗರ ತಲುಪಿ, ಅಲ್ಲಿಂದ ಕಾರ್ಗಿಲ್ ಮಾರ್ಗವಾಗಿ ಕರ್ದುಂಗ್ ಲಾ ಸೇರುತ್ತೇವೆ. ಇದು ಸರಿಯಾಗಿ ಭಾರತದ ಮಧ್ಯ ಭಾಗದಿಂದಲೇ ಸಾಗುವುದರಿಂದ ನಾವು ಈ ಮಾರ್ಗವನ್ನೇ ಆಯ್ದುಕೊಂಡಿದ್ದು. ನಮ್ಮ ಮಾರ್ಗದಲ್ಲಿ ಎಲ್ಲ ರೀತಿಯ ರಸ್ತೆಗಳಲ್ಲೂ ಸೈಕಲ್ ತುಳಿಯಬೇಕಿದೆ.

ADVERTISEMENT

* ಈವರೆಗೆ ಎದುರಾದ ಸವಾಲುಗಳೇನು?
ಕೆಲವೊಮ್ಮೆ ಸಂಜೆಯ ಸಮಯದಲ್ಲಿ ಸ್ಥಳೀಯರು ಸೈಕ್ಲಿಂಗ್ ಮಾಡುತ್ತಿರುತ್ತಾರೆ. ನಾವು ಅವರ ಗುಂಪಿನವರೇ ಎಂದು ಜನರು ಭಾವಿಸುತ್ತಿದ್ದರು. ನಾವು ನಮ್ಮ ಉದ್ದೇಶ ಸಾಧನೆಗಾಗಿ ಅವರಿಗಿಂತ ಭಿನ್ನ ಎಂದು ತೋರಿಸಿಕೊಳ್ಳಬೇಕಿತ್ತು. ತಮಿಳುನಾಡಿನಲ್ಲಿ ಮುಖ್ಯವಾಗಿ ಭಾಷೆಯ ಸಮಸ್ಯೆ ಎದುರಿಸಿದ್ದೇವೆ. ಅಲ್ಲಿ ಹಿಂದಿ, ಇಂಗ್ಲಿಷ್ ಮಾತನಾಡಿದರೆ ಎಲ್ಲರಿಗೂ ಅರ್ಥವಾಗುವುದಿಲ್ಲ. ಆದರೆ ಬೆಂಗಳೂರಲ್ಲಿ ಜನರೊಂದಿಗೆ ಮಾತನಾಡಲು ಕಷ್ಟವಾಗಲಿಲ್ಲ.
ಕೆಲವು ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿರುವುದೂ ಸಮಸ್ಯೆಯಾಗಿದೆ. ಆದರೆ ಜನರಿಂದ ಈವರೆಗೆ ಒಳ್ಳೆಯ ಸಹಕಾರವೇ ಸಿಕ್ಕಿದೆ. ಬಿದಿರಿನ ಸೈಕಲ್ ನೋಡಿ ನಮ್ಮನ್ನು ಗುರುತಿಸುತ್ತಿದ್ದಾರೆ. ಅವರೇ ಆಹಾರ ಕೊಡುತ್ತಿದ್ದಾರೆ, ದಾರಿ ತೋರುತ್ತಿದ್ದಾರೆ.

* ಸೈಕಲ್ಲಿನ ಸಾಮರ್ಥ್ಯದ ಜೊತೆಗೆ ನಿಮ್ಮ ದೈಹಿಕ ಸಾಮರ್ಥ್ಯಕ್ಕೂ ಇದೊಂದು ಪರೀಕ್ಷೆಯೇ ಅಲ್ಲವೇ?
ಖಂಡಿತವಾಗಿಯೂ ಹೌದು. ನಾವು ಈ ಸೈಕ್ಲಿಂಗ್‌ನಲ್ಲಿ ಬೇರೆ ಬೇರೆ ಹವಾಮಾನ, ಪರಿಸರವನ್ನು ಎದುರಿಸಬೇಕಾಗುತ್ತದೆ. ಆದರೆ ಈ ಹಿಂದೆ ದೂರ ದೂರದ ಸೈಕ್ಲಿಂಗ್ ಮಾಡಿರುವ ಮತ್ತು ಪರ್ವತಾರೋಹಣದ ಅನುಭವ ನಮ್ಮ ಕೆಲಸವನ್ನು ಸುಲಭ ಮಾಡುತ್ತದೆ. ದೈಹಿಕವಾಗಿಯೂ ನಾವು ಸಮರ್ಥರಾಗಿದ್ದೇವೆ. ಹಾಗಾಗಿ ಇಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ.

*

ಸೈಕ್ಲಿಂಗ್‌ನಲ್ಲೇ ಖುಷಿ

ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರ್ ಆಗಿದ್ದ 26 ವರ್ಷದ ಸುಮೀತ್ ಪರಿಂಗೆ ಸದ್ಯ ಸೈಕ್ಲಿಂಗ್‌ನಲ್ಲೇ ಖುಷಿ ಕಾಣುತ್ತಿದ್ದಾರೆ. ಅವರು ಈ ಹಿಂದೆಯೂ 4000 ಕಿ.ಮೀ ಸೈಕ್ಲಿಂಗ್ ಮಾಡಿದ್ದಾರೆ. 2014ರಲ್ಲಿ ಪನ್ವೇಲ್‌ನಿಂದ ಕರ್ದುಂಗ್ ಲಾ ವರೆಗೆ ಸೈಕ್ಲಿಂಗ್ ಮಾಡಿದ್ದಾರೆ. ಪ್ರಿಸಿಲಿಯಾ ಮದನ್ ಈಗಷ್ಟೇ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪೂರೈಸಿದ್ದಾರೆ. ಕಳೆದ ಜನವರಿಯಲ್ಲಿ ಪನ್ವೇಲ್‌ನಿಂದ ಕನ್ಯಾಕುಮಾರಿಗೆ ಏಕಾಂಗಿಯಾಗಿ 1800 ಕಿ.ಮೀ ಸೈಕ್ಲಿಂಗ್ ಮಾಡಿದ ಇಪ್ಪತ್ತೆರಡರ ಗಟ್ಟಿಗಿತ್ತಿ ಈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.