ADVERTISEMENT

‘ಕಲರ್‌ಫುಲ್ ಕ್ಯಾಸ್ಕೇಡ್ಸ್’ ಜಲವರ್ಣ ಚಿತ್ರಗಳ ಪ್ರದರ್ಶನ

ಕಲಾಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಪಂಕಜ್ ಬವ್ಡೇಕರ್‌ ಅವರ ಕಲಾಕೃತಿ
ಪಂಕಜ್ ಬವ್ಡೇಕರ್‌ ಅವರ ಕಲಾಕೃತಿ   

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಹೊರರಾಜ್ಯದ ಆರು ಮಂದಿ ಕಲಾವಿದರು ಹಮ್ಮಿಕೊಂಡಿದ್ದ ಜಲವರ್ಣ ಕಲಾಕೃತಿಗಳ ಪ್ರದರ್ಶನ ಮಾ.23ರ ಗುರುವಾರ ಮುಕ್ತಾಯವಾಗಲಿದೆ.

ಜಲವರ್ಣದ ಬಗ್ಗೆ ಕಲಾವಿದರಲ್ಲಿ, ಕಲಾಸಕ್ತರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಮುಂಬೈ ಮೂಲದ ಆರು ಚಿತ್ರಕಲಾವಿದರ ತಂಡ ಆಯೋಜಿಸಿರುವ ಪ್ರದರ್ಶನ  ಇದಾಗಿದೆ.

(ವಿಜಯ್‌ ಅಚ್ರೇಕರ್‌ ಅವರ ಕಲಾಕೃತಿ)

ADVERTISEMENT

ಜಲವರ್ಣ ಮಾಧ್ಯಮದಲ್ಲಿ ಅತಿ ಸೂಕ್ಷ್ಮ ವಿವರಗಳನ್ನು ಕಟ್ಟಿಕೊಡಬಹುದು ಅಥವಾ ಸ್ಥೂಲವಾಗಿಯೂ ಚಿತ್ರಿಸಬಹುದು. ಈ ಮಾಧ್ಯಮದ ಸಾಧ್ಯತೆಗಳನ್ನು ಪ್ರಸ್ತುತಪಡಿಸುವುದಷ್ಟೇ ನಮ್ಮ ಗುರಿಯಲ್ಲ. ಚಿತ್ರಕಲೆಯಲ್ಲಿ ಜಲವರ್ಣ ಮಾಧ್ಯಮವನ್ನು ಮತ್ತಷ್ಟು ಪ್ರಚಾರ ಮಾಡಬೇಕು ಎನ್ನುವುದು ನಮ್ಮ ಮುಖ್ಯ ಧ್ಯೇಯ ಎನ್ನುತ್ತಾರೆ ಈ ‘ಕಲರ್‌ಫುಲ್ ಕ್ಯಾಸ್ಕೇಡ್ಸ್’ ಚಿತ್ರತಂಡದ ಸದಸ್ಯರು.

ಈ ನಿಟ್ಟಿನಲ್ಲಿ ಪ್ರದರ್ಶನದ ಭಾಗವಾಗಿ ಕಲಾವಿದರು ಸ್ಥಳದಲ್ಲಿಯೇ ಜಲವರ್ಣ ಚಿತ್ರ ರಚಿಸಿ ತೋರಿಸುವುದು ಕಲಾಸಕ್ತರ ಮೆಚ್ಚುಗೆ ಗಳಿಸಿದೆ.

‘ಬಿಳಿಹಾಳೆಗಳನ್ನು ಜೀವಂತ ದೃಶ್ಯಗಳಂತೆ ರೂಪಾಂತರಿಸುವ ಚಿತ್ರಕಲೆಯನ್ನು ಏಕಾಂತದಲ್ಲಿ ರಚಿಸುವುದಕ್ಕೂ ಜನರ ಮಧ್ಯದಲ್ಲಿ ರಚಿಸುವುದಕ್ಕೂ ಅನುಭವದಲ್ಲಿ ವ್ಯತ್ಯಾಸ ಅನಿಸುವುದಿಲ್ಲ. ಜನರ ಮಧ್ಯದಲ್ಲಿ ಇದ್ದರೂ ಚಿತ್ರ ರಚಿಸಲು ಆರಂಭಿಸುತ್ತಿದ್ದಂತೆ ಸುತ್ತಲಿನ ವಾತಾವರಣ ಮರೆಯಾಗಿಬಿಡುತ್ತದೆ’ ಎನ್ನುತ್ತಾರೆ ಕಲಾವಿದ ಸುರೇಂದ್ರ ಜಾಧವ್.

(ಸುರೇಂದ್ರ ಜಾಧವ್ ಅವರ ಕಲಾಕೃತಿ)

‘ಖಾಲಿ ಮೈದಾನದಲ್ಲಿ ನಮ್ಮಷ್ಟಕ್ಕೆ ನಾವು ಕ್ರಿಕೆಟ್ ಆಡುವುದಕ್ಕೂ ಪಂದ್ಯದಲ್ಲಿ ಆಡುವುದಕ್ಕೂ ವ್ಯತ್ಯಾಸವಿದೆ. ಕಲಾವಿದರು ತಮ್ಮಷ್ಟಕ್ಕೆ ತಾವು ಚಿತ್ರಕಲೆಯಲ್ಲಿ ತೊಡಗಿದ್ದಾಗ ಸಮಯದ ಮಿತಿ ಇರುವುದಿಲ್ಲ. ಪ್ರದರ್ಶನದ ಭಾಗವಾಗಿ ಜನರ ನಡುವೆ ಚಿತ್ರ ರಚಿಸುವಾಗ ಸಮಯದ ಮಿತಿ ಹಾಕಿಕೊಳ್ಳುವುದು ಅವಶ್ಯವಾಗುತ್ತದೆ. ಎಲ್ಲರಿಗೂ ತಾಸುಗಟ್ಟಲೆ ಚಿತ್ರರಚನೆಯ ಹಂತಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜನರಿಗೆ ಚಿತ್ರರಚಿಸಿ ತೋರಿಸುವಾಗ ಒಂದು ಒಂದೂವರೆ ತಾಸಿನಲ್ಲಿ ಪೂರ್ಣಗೊಳಿಸಬೇಕಾಗುತ್ತದೆ’ ಎನ್ನುವುದು ಮತ್ತೊಬ್ಬ ಕಲಾವಿದ ಪಂಕಜ್ ಬವ್ಡೇಕರ್ ಅವರ ವಿವರಣೆ.

ಸುರೇಂದ್ರ ಜಾಧವ್, ವಿಜಯ್ ಆಚ್ರೆಕರ್, ಮನೋಜ್ ಕುಮಾರ್ ಸಕಾಲೆ, ಪಂಕಜ್ ಬವ್ಡೇಕರ್, ರಾಕೇಶ್ ಸೂರ್ಯವಂಶಿ ಹಾಗೂ ಅಭಿಜಿತ್ ಸಾಮಂತ್ (ಬೆಂಗಳೂರು ಮೂಲ) ಅವರ ಜಲವರ್ಣಚಿತ್ರಗಳು ಪ್ರದರ್ಶನದಲ್ಲಿವೆ.

ಆರು ಜನ ಕಲಾವಿದರೂ ಸಹ ಮುಂಬೈನ ಬಾಂದ್ರಾದ ಎಲ್.ಎಸ್. ರಹೇಜಾ ಸ್ಕೂಲ್ ಆಫ್ ಆರ್ಟ್‌ನಲ್ಲಿ ಚಿತ್ರಕಲೆ ಅಭ್ಯಾಸ ಮಾಡಿದವರು.

**

‘ಕಲರ್‌ಫುಲ್ ಕ್ಯಾಸ್ಕೇಡ್ಸ್’
ಸ್ಥಳ :
ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಸಮಯ: ಬೆಳಗ್ಗೆ 10ರಿಂದ ಸಂಜೆ 7, ಗುರುವಾರ (ಮಾರ್ಚ್ 23) ಕೊನೆಯ ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.