ADVERTISEMENT

ಕಾರಿಡಾರ್‌ ‘ಪರಿಮಳ’

ಕ್ಯಾಂಪಸ್‌ ಕಲರವ

ದಯಾನಂದ ಎಚ್‌.ಎಚ್‌.
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST
ಕಾರಿಡಾರ್‌ ‘ಪರಿಮಳ’
ಕಾರಿಡಾರ್‌ ‘ಪರಿಮಳ’   

ಕಾಲೇಜು ದಿನಗಳೆಂದರೆ ಹೆಚ್ಚು ತರಲೆ, ಕೀಟಲೆ, ಜಗಳ, ಗುದ್ದಾಟದ ಜತೆಗೆ ಸ್ವಲ್ಪ ಓದು! ವಿದ್ಯಾರ್ಥಿ ದಿನಗಳೆಂದರೆ ತಕ್ಷಣ ನೆನಪಾಗುವುದು ಆರ್ಟ್ಸ್‌ ಕಾಲೇಜಿನ ಕಾರಿಡಾರ್‌ನಲ್ಲಿ ಹರಿದಾಡುತ್ತಿದ್ದ ಪರಿಮಳ. ಆ ಪರಿಮಳ ಎಂದರೆ ಕಾಲೇಜಿನ ಇತರೆಲ್ಲ ಹುಡುಗಿಯರಿಗೂ ಹೊಟ್ಟೆ ಕಿಚ್ಚು, ಸಂಕಟ.

ಕನ್ನಡ ವಿಭಾಗದ ಲವಲವಿಕೆಯ ಉಪನ್ಯಾಸಕಿ (ಹೆಸರು ಹೇಳಿದರೆ ಪರಿಮಳ ಮತ್ತೂ ಹೆಚ್ಚಾಗಬಹುದು) ತಮ್ಮ ಪರಿಮಳದಿಂದಲೇ ಕಾಲೇಜಿನಲ್ಲಿ ‘ಜಗದ್ವಿಖ್ಯಾತ’ರಾಗಿದ್ದರು. ಅವರು ನಡೆದು ಹೋದ ದಾರಿಯಲ್ಲೆಲ್ಲಾ ಪರಿಮಳ ಹರಡುತ್ತಿತ್ತು. ಕಾಲೇಜಿನ ಕಾರಿಡಾರ್‌ನಲ್ಲಿ ಅವರು ಸಾಗಿದರೆ, ತರಗತಿಯೊಳಗಿನ ಮೂಗುಗಳ ಹೊಳ್ಳೆಗಳು ತಂತಾವೇ ಅಗಲವಾಗುತ್ತಿದ್ದವು. ಅವರು ತರಗತಿಗೆ ಬಂದರಂತೂ ಮೂಗಿಗೆ ಹಬ್ಬ. ಹೀಗಾಗಿಯೇ ಅವರು ನಮ್ಮ ಪಾಲಿಗೆ ‘ಸೆಂಟ್‌ ಮೇಡಂ’ ಆಗಿದ್ದರು.

ಅವರ ಪರಿಮಳಕ್ಕೆ ಕಾಲೇಜಿನ ಹುಡುಗರೆಲ್ಲ ಮರುಳಾಗುವುದನ್ನು ಕಂಡು ಕರುಬುತ್ತಿದ್ದ ಹುಡುಗಿಯರು ಸಂಕೋಚ ಬಿಟ್ಟು, ‘ನೀವು ಯಾವ ಸೆಂಟ್‌ ಹಾಕೋತೀರಿ ಹೇಳಿ ಮೇಡಂ, ಪ್ಲೀಸ್. ನಾವೂನು ಹಾಕ್ಕೊಂಡು ಹುಡುಗರನ್ನ ಅಟ್ರಾಕ್ಟ್‌ ಮಾಡ್ತೀವಿ’ ಎಂದು ಗೋಗರೆಯುತ್ತಿದ್ದರು. ಆದರೆ, ಅವರು ಮಾತ್ರ ತಮ್ಮ ಪರಿಮಳದ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ.

ಅದೊಂದು ದಿನ ತರಗತಿಯಲ್ಲಿ ರನ್ನನ ಗದಾಯುದ್ಧ ಪಾಠ ಮಾಡುತ್ತಿದ್ದ ಸೆಂಟ್‌ ಮೇಡಂ ತಮ್ಮ ಚೇರಿನಿಂದ ಎದ್ದು ರನ್ನಭಾರತವನ್ನು ಅಭಿನಯಿಸಿ ತೋರಿಸಲು ಶುರು ಮಾಡಿದರು. ದುಶ್ಶಾಸನನು ದ್ರೌಪದಿಯ ಸೆರಗನ್ನು ‘ಹೀಗೆ ಎಳೆದ’ ಎನ್ನುತ್ತಾ ಒಬ್ಬ ಹುಡುಗಿಯ ಹತ್ತಿರ ಬಂದು ಅವಳ ವೇಲ್‌ಗೆ ಕೈ ಹಾಕಿಬಿಟ್ಟರು. ಅವರ ಪರಿಮಳದ ಸಾಮೀಪ್ಯದಿಂದ ಕಂಗೆಟ್ಟ ಆ ಹುಡುಗಿ ತಲೆ ಸುತ್ತಿ ಕುಸಿದು ಬಿದ್ದಳು. ಮೂರು ದಿನವಾದರೂ ಅವಳು, ‘ಏನು ಮೂಸಿದರೂ ಅದೇ ವಾಸನೆ ಕಣ್ರೇ’ ಅನ್ನುತ್ತಿದ್ದದ್ದನ್ನು ಕೇಳಿದರೆ ಮೇಡಂ ಪರಿಮಳ ಪ್ರತಾಪ ಎಷ್ಟರಮಟ್ಟಿನದ್ದು ಎಂದು ಗೊತ್ತಾಗಬಹುದು.

ಮತ್ತೊಂದು ದಿನ ತರಗತಿಯಲ್ಲಿ ಅರ್ಥಶಾಸ್ತ್ರದ ಪಾಠ ನಡೆದಿತ್ತು. ಸೆಂಟ್‌ ಮೇಡಂ ಕಾರಿಡಾರ್‌ನಲ್ಲಿ ಹಾದು ಹೋದರು. ಅವರ ಪರಮೋಚ್ಛ ಪರಿಮಳ ಹುಡುಗರ ಮೂಗು ಅರಳಿಸಿತು. ಕೊನೆ ಡೆಸ್ಕಿನ ಮೂಲೆಗೆ ಕುಳಿತಿದ್ದ ದೊಡ್ಡಬಳ್ಳಾಪುರದ ಕಡೆಯ ಒಬ್ಬ ‘ಅಬ್ಬೋ ಏಮ್ರಾ ಇದಿ ಸೆಂಟು, ಪಿಚ್ಚಿಡುಸ್ತುಂದ್ರಾ’ ಎಂದು ಕೂಗಿದ. ಅದು ಸೆಂಟ್‌ ಮೇಡಂ ಕಿವಿಗೂ ಬಿತ್ತು. ಮೇಡಂ ಕ್ಲಾಸ್‌ಗೆ ನುಗ್ಗಿಯೇ ಬಿಟ್ಟರು.
ಒಳಗೆ ಬಂದವರೇ ‘ಯಾರದು?, ಯಾರದು?’ ಎಂದರು. ಇನ್ನೇನು ರಂಪವಾಗುತ್ತದೋ ಎಂದು ತರಗತಿಯೆಲ್ಲ ಗಪ್‌ಚುಪ್ಪಾಗಿ ಕಾಯುತ್ತಿತ್ತು. ಅರ್ಥಶಾಸ್ತ್ರದ ಮೇಷ್ಟ್ರು, ‘ಯಾರೋ ಅದು, ನಿಮಗೆ ಕಾಲೇಜು ಅಂದ್ರೆ ಸಿನಿಮಾ ಟೆಂಟ್‌ ಆಗಿದೆ’ ಎಂದು ರೇಗಿದರು.

‘ಯಾಕೆ ಬೈತೀರಿ ಸಾರ್‌. ಹೂ ಎವರ್‌ ಹಿ ಮೇ, ಥ್ಯಾಂಕ್ಯೂ ಡಿಯರ್‌’ ಎನ್ನುತ್ತಾ ಮೇಡಂ ಕೆಂಪಾದ ಕೆನ್ನೆಯೊಂದಿಗೆ ಅಲ್ಲಿಂದ ನಡೆದರು. ಇದಾದ ಮೇಲೆ ಮೇಡಂ ‘ಸೆಂಟೋತ್ಕಟತೆ’ ಇನ್ನೂ ಹೆಚ್ಚಾಯಿತು. ಅದು ಎಷ್ಟರಮಟ್ಟಿಗೆ ಎಂದರೆ ನಮ್ಮ ಕಾಲೇಜಿನ ಹಿಂದಿನ ಸೈನ್ಸ್‌ ಕಾಲೇಜ್‌ ಹುಡುಗರ ಗುಂಪುಗಳಲ್ಲೂ ಸೆಂಟ್‌ ಮೇಡಂ ಪರಿಮಳ ಚರ್ಚೆಯಾಗುತ್ತಿತ್ತು.

ಈಗಲೂ ಹಳೆಯ ಗೆಳೆಯರೆಲ್ಲ ಸೇರಿದಾಗ, ಕಾಲೇಜು ದಿನಗಳ ಮಾತು ಬಂದಾಗ ಸೆಂಟ್‌ ಮೇಡಂ ಪರಿಮಳ ಅಲ್ಲಿ ತುಂಬಿಕೊಳ್ಳುತ್ತದೆ. ಅವರ ಬಗ್ಗೆ ಮಾತಾಡಿದಷ್ಟೂ ಘಮಲು ಹೆಚ್ಚಾಗುತ್ತದೆ. ಅವರು ಅದ್ಯಾವ ಬ್ರಾಂಡ್‌ ಸೆಂಟ್‌ ಹಾಕುತ್ತಿದ್ದರೋ ಏನೋ, ಇದುವರೆಗೂ ಅಂಥ ಪರಿಮಳವನ್ನು ಮತ್ತೆ ಆಘ್ರಾಣಿಸುವ ಭಾಗ್ಯ ನನ್ನ ಮೂಗಿಗೆ ಸಿಕ್ಕಿಲ್ಲ. ಕಾಲೇಜಿನ ತುಂಬಾ ಪರಿಮಳ ಹಬ್ಬುತ್ತಿದ್ದ ಸೆಂಟ್‌ ಮೇಡಂ, ಪಂಪ, ರನ್ನ, ಕುಮಾರವ್ಯಾಸರನ್ನು ಅಭಿನಯಪೂರ್ಣವಾಗಿ ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು ಎನ್ನುವುದನ್ನೂ ನೆನೆಯಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.