ADVERTISEMENT

ಕುದಿಯುತಿದೆ ಹೆತ್ತವರ ಮನ

ಪ್ರಜಾವಾಣಿ ವಿಶೇಷ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST
ಕುದಿಯುತಿದೆ ಹೆತ್ತವರ ಮನ
ಕುದಿಯುತಿದೆ ಹೆತ್ತವರ ಮನ   

ಮೆಟ್ರೊ ನಗರಗಳಲ್ಲಿ ದಿನೇದಿನೇ ಜಟಿಲವಾಗುತ್ತಿದೆ ‘ಪೇರೆಂಟಿಂಗ್’. ಪಾಲಕರ ಪಾತ್ರ ಸವಾಲಾಗುತ್ತಿದೆ. ಬೆಂಗಳೂರಿನ ವಿಬ್‍ಗಯಾರ್ ಶಾಲಾ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪಾಲಕ ಸಮುದಾಯವನ್ನು ಇನ್ನಿಲ್ಲದ ಆತಂಕಕ್ಕೆ ದೂಡಿದೆ. ಎಷ್ಟು ಎಚ್ಚರಿಕೆ ವಹಿಸಿದರೂ, ಎಂಥದ್ದೇ ಸುರಕ್ಷೆಗಳಿದ್ದರೂ ಮನಸ್ಸಿನ ಕಸಿವಿಸಿ ತಪ್ಪಿದ್ದಲ್ಲ. ಶಾಲೆಗೆ ಹೋದ ಮಗು ನಗುತ್ತ ಮನೆಗೆ ಬರುವವರೆಗೂ ಎದೆಯಲ್ಲಿ ಬೇಗುದಿ. ತೀರದ ತಲ್ಲಣ....

ಶಾಲೆಯಿಂದ ಬಂದ ಮಗುವನ್ನು ಎದೆಗವುಚಿಕೊಂಡು ಅಮ್ಮ ಕೇಳುತ್ತಾಳೆ– ‘ಶಾಲೆಯಲ್ಲಿ ಏನೇನಾಯ್ತು ಕಂದ? ಎಲ್ಲಾ ಕ್ಲಾಸುಗಳು ನಡೆದವಾ? ‘ಸೂಸು’ ಮಾಡೋಕೆ ಆಯಾ ಜತೆಗೆ ಬಂದಳಾ? ವಾಚ್‌ಮನ್ ಅಂಕಲ್ ಏನಂದ? ಕ್ಲೀನರ್ ಅಂಕಲ್ ಏನಂದ?’ ಎಲ್ಲದಕ್ಕೂ ಮಗುವಿನಿಂದ ಸಾಮಾನ್ಯ ಉತ್ತರ ಬಂತೆಂದರೆ ಆವತ್ತಿನ ನೆಮ್ಮದಿಯ ನಿಟ್ಟುಸಿರೊಂದು ಎದೆಯಾಳದಿಂದ ಹೊರಡುತ್ತದೆ.
ಉದ್ಯೋಗಸ್ಥ ಅಮ್ಮಂದು ಮತ್ತೊಂದು ರೀತಿಯ ಗೋಳು. ಕಚೇರಿಯಲ್ಲಿ ಇರುವಷ್ಟೂ ಹೊತ್ತು ಕಂದನದೇ ಧ್ಯಾನ. ‘ಶಾಲೆಗೆ ಹೋಗಿ ಬಂದ್ಯಾ? ಯಾರೊಂದಿಗೆ ಆಡಿದೆ? ಯಾರ ಜತೆ ಕೂತು ಉಂಡೆ?’ ಫೋನಿನಲ್ಲಿಯೇ ಮಗುವಿನ ಎದೆಬಡಿತ, ಉಸಿರಾಟದ ಸದ್ದು ಕೇಳಿ ‘ಸದ್ಯ ಈ ದಿನ ಸುರಕ್ಷಿತವಾಗಿ ದಾಟಿದೆ’ ಎಂಬ ಸಮಾಧಾನ.

ಬೆಂಗಳೂರಿನ ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನೇ ಮುಂದಿಟ್ಟುಕೊಂಡು ಅನ್ನ–ನೀರನ್ನೂ ತೊರೆದು ಬೀದಿಗಿಳಿದು ಹೋರಾಟಕ್ಕೆ ನಿಂತಿರುವ ಪಾಲಕರ ಮನಸ್ಸಿನಲ್ಲಿ ತೀರದ ನೋವು, ಎದೆಯಲ್ಲಿ ಇದೀಗ ತಾನೆ ಹೊತ್ತಿಕೊಂಡ ಬೆಂಕಿಯ ನಿಗಿನಿಗಿ ಕೆಂಡ...
ಅದೇ ತಾನೇ ಬಾಯಿಯಿಂದ ನಿಪ್ಪಲ್ ತೆಗೆದಿಟ್ಟು ಬೆರಗುಗಂಗಳಿಂದ ಹೊರ ಪ್ರಪಂಚಕ್ಕೆ ಕಾಲಿಟ್ಟ ಕೂಸುಗಳಗೆ ಎಂಥೆಂಥ ಭಯಾನಕ ಅನುಭವಗಳು! 

ಇದು ಪೀಡೊಫೀಲಿಯಾ ಅಂದರೆ ಶಿಶುಕಾಮದ ರೌದ್ರರೂಪ ಎನ್ನುತ್ತದೆ ಮನೋವೈದ್ಯಲೋಕ. ಇದು ಕೇವಲ ಅಪರಾಧದ ಮಾತಲ್ಲ, ಶಿಕ್ಷೆಯಷ್ಟೇ ಪರಿಹಾರವೂ ಅಲ್ಲ, ಇದು ಇಡೀ ಮನುಕುಲಕ್ಕೆ ಅಂಟಿರುವ ಜಾಡ್ಯ. ಮನಸ್ಸುಗಳಲ್ಲಿ ಬದಲಾವಣೆ ಆಗಬೇಕು. ಮೌಲ್ಯಗಳ ಮರುಸ್ಥಾಪನೆಯಾಗಬೇಕು ಎನ್ನವುದು ಸಮಾಜ ವಿಜ್ಞಾನದ ವಾದ.

ಸಂವೇದನೆ, ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆ ಕಳೆದುಕೊಂಡ ವ್ಯವಸ್ಥೆಯ ವೈಫಲ್ಯವಿದು. ಇಡೀ ವ್ಯವಸ್ಥೆ ಬದಲಾಗಬೇಕು ಎನ್ನುವುದು ಕಾನೂನು ತಜ್ಞರ ಅಭಿಮತ.

ಮನಸ್ಸಿನ ದೌರ್ಬಲ್ಯವೇ ಇರಲಿ, ಸಾಮಾಜಿಕ ವ್ಯವಸ್ಥೆಯ ದೋಷವೇ ಇರಲಿ, ವ್ಯವಸ್ಥೆ–ಕಾನೂನಿನ ವೈಫಲ್ಯವಾಗಲಿ ಬಲಿಯಾಗುತ್ತಿರುವುದು ಹಾಲುಗೆನ್ನೆಯ ಕೂಸುಗಳು, ಎಳೆ ವಯಸ್ಸಿನ ಬಾಲೆಯರು...

ಅಷ್ಟಕ್ಕೂ ಇಡೀ ದೇಶವನ್ನೇ ಕಂಗಾಲಾಗಿಸಿರುವ ಈ ಕ್ರೌರ್ಯದ ಬೇರೆಲ್ಲಿದೆ? ಇದಕ್ಕೇನು ಪರಿಹಾರ, ನಿಗ್ರಹ ಹೇಗೆ? ಇದು ಎಲ್ಲರ ಎದೆಯನ್ನು ಸುಡುತ್ತಿರುವ ಪ್ರಶ್ನೆ. ಉತ್ತರ ಸುಲಭಕ್ಕೆ ಸಿಗುತ್ತಿಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.