ADVERTISEMENT

ಕುದುರೆ ಅಬ್ಬಿ: ನದಿ ಕೊರೆದ ಚಿತ್ರಗಳು!

ಸುತ್ತಾಣ

ಜಕ್ಕಣಕ್ಕಿ ಎಂ ದಯಾನಂದ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಕುದುರೆ ಅಬ್ಬಿ: ನದಿ ಕೊರೆದ ಚಿತ್ರಗಳು!
ಕುದುರೆ ಅಬ್ಬಿ: ನದಿ ಕೊರೆದ ಚಿತ್ರಗಳು!   

ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಸಮೀಪದ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಹತ್ತಿರ ಕುದುರೆ ಅಬ್ಬಿ ಜಲಪಾತವಿದೆ. ಸ್ಥಳೀಯರು ಇದನ್ನು ‘ಕುದುರೆ ಅಬ್ಬಿ ಫಾಲ್ಸ್‌’ ಎಂದು ಕರೆಯುತ್ತಾರೆ.

ಫಾಲ್ಸ್‌ ಎಂದಮಾತ್ರಕ್ಕೆ ಇಲ್ಲಿ ಮೇಲಿನಿಂದ ಧುಮ್ಮಿಕ್ಕುವ ನೀರಿನ ಝರಿ ಇಲ್ಲ. ಆದರೆ ಕಲ್ಲುಗಳ ವಿಶಿಷ್ಟ ರೂಪದಲ್ಲಿ  ಮಾರ್ಪಾಡಾಗಿರುವುದು ಇಲ್ಲಿನ ವಿಶೇಷ. 

ಈ ಪ್ರದೇಶದ ಸುತ್ತಮುತ್ತ  ರಾಮ, ಸೀತೆ ಹಾಗೂ ಲಕ್ಷ್ಮಣ  ತಿರುಗಾಡಿಕೊಂಡಿದ್ದರಂತೆ. ಸೀತೆಯನ್ನು ಹುಡುಕುತ್ತಾ ರಾಮ ಕುದುರೆ ಮೇಲೆ ಈ ಜಾಗಕ್ಕೆ ಬಂದಿದ್ದನಂತೆ. ಆಗ ಕುದುರೆ ಎಲ್ಲೆಲ್ಲಿ ಕಾಲಿಟ್ಟಿತ್ತೋ ಅವುಗಳೇ ಕಲ್ಲುಗಳ  ವಿಶಿಷ್ಟ ರಚನೆಗಳಾಗಿ ಮೂಡಿಬಂದವು ಎಂಬುದು ಸ್ಥಳೀಯರ ನಂಬಿಕೆ.

ಹೋಗುವುದು ಹೀಗೆ...
ಕುದುರೆ ಅಬ್ಬಿ ಜಲಪಾತ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 48 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಹೊರಟರೆ  ಆಲ್ದೂರು ನಂತರ ಸಂಗಮೇಶ್ವರ ಪೇಟೆ ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಕಡಬಗೆರೆ.  ಅಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ. ಸಾಗಿ ಮತ್ತೆ ಬಲಕ್ಕೆ ಹೋದರೆ ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಕುದುರೆ ಅಬ್ಬಿ ಸಿಗುತ್ತದೆ.

‘ಕುದುರೆ ಅಬ್ಬಿಯಲ್ಲಿ   ಕಲ್ಲುಗಳು ನೂರಾರು ವರ್ಷಗಳಿಂದ ನೀರು ಬಿದ್ದು, ವಿಶಿಷ್ಟ ರೂಪಕ್ಕೆ ತಿರುಗಿವೆ. ತುಂಬಾ ಮೊನಚಾದ ಆಕೃತಿಗಳು, ಪಾತ್ರೆಯಂತಹ ರಚನೆಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಕಲ್ಲುಗಳು ಇಲ್ಲಿ ಕಾಣಸಿಗುತ್ತವೆ.  ಎಷ್ಟೋ ವರ್ಷಗಳಿಂದ ಈ ಕಲ್ಲುಗಳ ಮಧ್ಯೆ ನೀರು ನುಗ್ಗಿ ಈ ವಿಶಿಷ್ಟ ಆಕಾರ ಮೂಡಿದೆ’ ಎನ್ನುತ್ತಾರೆ ಸ್ಥಳೀಯರಾದ ಕೇಶವ ಭಟ್ಟ.

ಕುದುರೆ ಅಬ್ಬಿಯ ಕಲ್ಲುಗಳ ರಚನೆಯನ್ನು ಬೇಸಿಗೆಯಲ್ಲಿ ಮಾತ್ರ ಕಾಣಲು ಸಾಧ್ಯ. ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್‌ವರೆಗೆ ಭದ್ರಾ ನದಿಯ ನೀರು ಕಡಿಮೆಯಾದಾಗ ಕಲ್ಲುಗಳು ಕಾಣಿಸಲಾರಂಭಿಸುತ್ತವೆ. ಮತ್ತೆ ಮಳೆಗಾಲ ಆರಂಭವಾಗುತ್ತಿದ್ದಂತೆ ಕಲ್ಲುಗಳೆಲ್ಲ ಮುಚ್ಚಿಹೋಗುತ್ತವೆ. 

ಅಪಾಯಕಾರಿ ಸ್ಥಳ
ಕುದುರೆ ಅಬ್ಬಿಯು ಭದ್ರಾ ನದಿಯ ಒಡಲಲ್ಲಿದೆ. ಆದ್ದರಿಂದ ಮಳೆಬಿದ್ದ ವೇಳೆ ಇಲ್ಲಿಗೆ ಬರುವಾಗ ಎಚ್ಚರ ವಹಿಸುವುದು ಅಗತ್ಯ. ಮರಳು ಮಿಶ್ರಿತ ಮಣ್ಣಿಗೆ ನೀರು ಸೇರಿದಾಗ ಜಾರುವ ಸಾಧ್ಯತೆ ಇರುತ್ತದೆ. ಅಲ್ಲದೆ ಕಲ್ಲುಗಳ ಮೇಲೆ ಹೆಜ್ಜೆಯೂರುವಾಗ ಪಾದಗಳ ನಿಯಂತ್ರಣ ಸವಾಲಿನದ್ದು. ಕುದುರೆ ಅಬ್ಬಿ ಸಮೀಪದಲ್ಲಿ ವಸತಿ ಸೌಲಭ್ಯಗಳಿಲ್ಲ. ಒಂದೋ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಉಳಿಯಬೇಕು. ಬಾಳೆಹೊನ್ನೂರಿನಲ್ಲಿ ಕೂಡ ನಿಗದಿತ ಸಂಖ್ಯೆಯ ವಸತಿ ಗೃಹಗಳಿವೆ. ಇಲ್ಲದೆ ಇದ್ದರೆ ಇಲ್ಲಿಂದ 42 ಕಿ.ಮೀ. ದೂರದ ಶೃಂಗೇರಿಗೆ ತೆರಳಬೇಕು.

ಕುದುರೆ ಅಬ್ಬಿ ಪ್ರವಾಸದ ತಾಣವಾಗಿರುವಂತೆ ಹಲವು ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣ ಸ್ಥಳವಾಗಿಯೂ ಪ್ರಸಿದ್ಧಿಯಾಗಿದೆ. ಕುದುರೆ ಅಬ್ಬಿ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 48 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ‘ಎನ್‌ಎಚ್‌್ 48’ರಲ್ಲಿ ಹಾಸನ ಮಾರ್ಗವಾಗಿ ಮತ್ತು ‘ಎನ್‌ಎಚ್‌ 4’ರಲ್ಲಿ ಕಡೂರು ಮಾರ್ಗವಾಗಿ ಕುದುರೆ ಅಬ್ಬಿಗೆ ತೆರಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.