ADVERTISEMENT

ಕೈತುತ್ತು ನೀಡಿದ ನಗರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಕೈತುತ್ತು ನೀಡಿದ ನಗರಿ
ಕೈತುತ್ತು ನೀಡಿದ ನಗರಿ   

ನಾನು ಹುಟ್ಟಿದ್ದು ಮುಳಬಾಗಲು ತಾಲ್ಲೂಕಿನ ಮುಡಿಯನೂರು. ನನ್ನ ಪ್ರಾಥಮಿಕ ಶಿಕ್ಷಣದ ಪ್ರಾರಂಭದಲ್ಲೇ ಅಪ್ಪ ಬೆಂಗಳೂರಿಗೆ ಬಂದರು. ಮಲ್ಲೇಶ್ವರ 16ನೇ ಅಡ್ಡರಸ್ತೆಯ ಒಂದು ಕೊಠಡಿಯಲ್ಲಿ ಎಂಟು ಜನರಿದ್ದೆವು. ರಾತ್ರಿ ಮಲಗಲು ದೇವಸ್ಥಾನಕ್ಕೆ ಹೋಗುತ್ತಿದ್ದೆವು. ನನ್ನ ತಂದೆ 1959ರ ಸುಮಾರಿಗೆ ರಾಜಾಜಿನಗರ 2ನೇ ಹಂತದಲ್ಲಿ 60X60 ಅಡಿ ವಿಸ್ತೀರ್ಣದ ನಿವೇಶನವನ್ನು ಕೇವಲ ₹600ಕ್ಕೆ ಖರೀದಿಸಿದರು.

ನನ್ನ ಬಾಲ್ಯ, ವಿದ್ಯಾಭ್ಯಾಸ, 41 ವರ್ಷಗಳ ವಿಮಾನ ಕಾರ್ಖಾನೆಯ ನೌಕರಿ ಈ ನಗರದಲ್ಲೇ ನಡೆದಿದೆ. ಮಲ್ಲೇಶ್ವರ ಶ್ರೀ ಸಾಯಿ ಮಂಡಲಿಯ ಪ್ರಧಾನ ಅರ್ಚಕರ ಸಹವಾಸದಿಂದ ನನಗೂ ಸಹ ಸಂಜೆಯ ವೇಳೆ ಗುರುಸೇವೆಯ ಅವಕಾಶ ಸಿಕ್ಕಿತ್ತು. ನಾಲ್ಕುವರೆ ದಶಕದ ಶ್ರೀ ಗುರು ಬಂಧುಗಳ ಸಖ್ಯ ನಮ್ಮ ಬದುಕಿಗೆ ಚೈತನ್ಯ ತುಂಬಿದೆ.

1950ರ ದಶಕದಲ್ಲಿ ಒಮ್ಮೆ ಸೆಂಟ್ರಲ್‌ ಕಾಲೇಜ್‌ ಮೈದಾನದಲ್ಲಿ ಆಗಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ಅವರ ಭಾಷಣ ಇತ್ತು. ನಾನು ನನ್ನ ತಾತನೊಂದಿಗೆ ಅಲ್ಲಿಗೆ ಹೋಗಿದ್ದೆ. 'ಅವರು ಯಾರು' ಎಂದು ಕೇಳಿದೆ. ಆಗ ನನ್ನ ತಾತ, 'ನಮ್ಮ ದೇಶದ ಜೀವರಸ- ಮಾನ' ಎಂದು ಹೆಮ್ಮೆಯಿಂದ ಹೇಳಿದ್ದರು. ಈಗ ಈ ಭಾವನೆ ಜನತೆಯಲ್ಲಿ ಕಮ್ಮಿಯಾಗಿದೆ.

ADVERTISEMENT

1950ರ ದಶಕ ಕನ್ನಡ ಚಳುವಳಿಯ ಒಂದು ಮುಖ್ಯ ಘಟ್ಟ. ಕಾದಂಬರಿ ಸಾರ್ವಭೌಮ ಅನಕೃ, ರಾಮಮೂರ್ತಿ, ನಾಡಿಗೇರ ಕೃಷ್ಣರಾವ್‌, ತರಾಸು, ಮೈಸೂರು ಶೇಷಗಿರಿರಾವ್‌ ಇವರ ಭಾಷಣ ಆಲಿಸಲು ಹೋಗುತ್ತಿದ್ದೆ. ಅನಕೃರವರ ಭಾಷಣ ಗಂಗಾಸಲಿಲದಂತೆ ಹರಿದುಬರುತ್ತಿತ್ತು. ಆಗಿನ ಬೆಂಗಳೂರಿಗೂ ಈಗಿನ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸವಿದೆ. ಮಿತ ಆದಾಯದ ಆ ಬದುಕು ಆನಂದಮಯವಾಗಿತ್ತು. ಈಗ ಇಂದ್ರಲೋಕದ ಸೌಖ್ಯವಿದ್ದರೂ ಮನಃಶಾಂತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.