ADVERTISEMENT

ಗಾಳಿ ಸುದ್ದಿಗಳಿಗೆ ಕಿವಿಗೊಡದಿರಿ

ಅನಿತಾ ಈ.
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ಹೊಸ ರೋಗ ಬಂದರೆ ಸಾಕು. ಅದರ ಹಿಂದೆಯೇ ನೂರಾರು ಗಾಳಿ ಸುದ್ದಿಗಳು ಹರಡುತ್ತವೆ. ವೈರಸ್‌ನಿಂದ ರೋಗ ಹರಡುವ ವೇಗಕ್ಕಿಂತ ಬೇಗ ಬಾಯಿಂದ ಬಾಯಿಗೆ ಗಾಳಿ ಸುದ್ದಿಗಳು ಹರಡುತ್ತವೆ. ಕೆಲವರ ಆತಂಕದಿಂದ ಅಥವಾ ಕಿಡಿಗೇಡಿಗಳ ಕುಹಕದಿಂದ ಹುಟ್ಟುವ ಊಹಾಪೋಹಾಗಳಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ ವಿನಃ ಯಾವುದೇ ಪ್ರಯೋಜನವಾಗುವುದಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಹುಟ್ಟಿರುವ ಹೊಸ ಹೊಸ ರೋಗಗಳ ಹರಡುವಿಕೆ ಬಗ್ಗೆ ಜನರಲ್ಲಿ ಆತಂಕ ಉಂಟು ಮಾಡುವ ರೀತಿಯಲ್ಲಿ ಊಹಾಪೋಹಗಳನ್ನು ಕೆಲ ಕಿಡಿಗೇಡಿಗಳು ಹುಟ್ಟುಹಾಕುತ್ತಲೇ ಬಂದಿದ್ದಾರೆ. ಅಂಥ್ರಾಕ್ಸ್‌, ಚಿಕೂನ್‌ಗುನ್ಯ, ಎಚ್‌1ಎನ್‌1, ಡೆಂಗೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ಹಬ್ಬಿದ ಗಾಳಿ ಸುದ್ದಿಗಳಿಗೆ ಕೊನೆಯೇ ಇಲ್ಲ.

ಈಗಷ್ಟೆ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ‘ಎಬೋಲಾ’ ರೋಗವನ್ನೂ ಈ ಗಾಳಿಸುದ್ದಿಗಳು ಬಿಟ್ಟಿಲ್ಲ. ಎಲ್ಲೋ ದೂರದ ದೇಶದಲ್ಲಿ ಹುಟ್ಟಿರುವ ಎಬೋಲಾ ರೋಗ ‘ವೈರಸ್‌ನಿಂದ ಹರಡುತ್ತದೆ. ಸಾಕು ಪ್ರಾಣಿಗಳು ಹಾಗೂ ಕೆಲ ಕೀಟಗಳಿಂದ ಹರಡುವ ಸಾಧ್ಯತೆ ಹೆಚ್ಚು’ ಎಂದು ಕಿಡಿಗೇಡಿಗಳು ಅಲ್ಲಲ್ಲೇ ಸುದ್ದಿ ಹಬ್ಬಿಸುತ್ತಿದ್ದಾರೆ.

ಚರ್ಮಕ್ಕೆ ತಗಲುವ ಸಣ್ಣ ಸಣ್ಣ ಸೋಂಕು ಹಾಗೂ ಅಲರ್ಜಿ ಕಂಡಾಗ ಜನರು ಮೊದಲು ಬೆಟ್ಟು ಮಾಡುವುದು ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕಿನ ಕಡೆಗೆ. ಅವುಗಳಿಂದ ಅಲರ್ಜಿ ಆಗಿದೆ ಎಂದು ಯೋಚನೆ ಮಾಡದೆಯೇ ಹೇಳಿ ಬಿಡುತ್ತಾರೆ. ಮನುಷ್ಯರು ಬಳಸುವ ನಾನಾ ವಸ್ತುಗಳು ಹಾಗೂ ಕೆಲ ಆಹಾರ ಪದಾರ್ಥಗಳಿಂದಲೂ ಅಲರ್ಜಿ ಬರುವ ಸಾಧ್ಯತೆಗಳೂ ಇವೆ. ಆದರೆ  ಅಲರ್ಜಿಗೆ ಕಾರಣ ಹುಡುವ ಬದಲು ಅದನ್ನು ಸುಲಭವಾಗಿ ಸಾಕು ಪ್ರಾಣಿಗಳ ಮೇಲೆ ಹಾಕುತ್ತಾರೆ ಎನ್ನುತ್ತಾರೆ ಪಶು ವೈದ್ಯ ಶಿವಪ್ರಕಾಶ್‌.

ಹುಚ್ಚು ನಾಯಿ ಕಡಿತದಿಂದ ಬರುವ ರೇಬಿಸ್‌ ರೋಗದ ಬಗ್ಗೆಯೂ ನಾನಾ ರೀತಿಯ ಊಹಾಪೋಹಗಳನ್ನು ಇಂದಿಗೂ ಹಬ್ಬಿಸಲಾಗುತ್ತದೆ. ವಾಸ್ತವವಾಗಿ ರೇಬಿಸ್‌ ವೈರಸ್‌ ಮೂಲತಃ ನಾಯಿಯಲ್ಲಿ ಇರುವುದಿಲ್ಲ. ರ್‍ಯಾಕೂನ್ಸ್‌, ಕಲ್ಲುಬಂಡೆಗಳ ಬಳಿ ಹಾಗೂ ಗುಹೆಗಳಲ್ಲಿ ವಾಸಿಸುವ ಬಾವಲಿಗಳಲ್ಲಿ ರೇಬಿಸ್‌ ತರುವ ವೈರಸ್‌ ಇರುತ್ತದೆ. ಇಲಿಗಳಲ್ಲಿ ರೇಬಿಸ್‌ ವೈರಸ್‌ ಇರುವುದನ್ನು ಖಚಿತ ಪಡಿಸಿಕೊಳ್ಳಲು ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಹಸು, ಬೆಕ್ಕು, ನಾಯಿ ಸೇರಿದಂತೆ ಯಾವುದೇ ಪ್ರಾಣಿಗೆ ರೇಬಿಸ್‌ ವೈರಸ್‌ ಇರುವ ಪ್ರಾಣಿಗಳು ಕಚ್ಚಿ, ಅದು ಅವುಗಳ ದೇಹವನ್ನು ಪ್ರವೇಶಿಸಿದಾಗ ಮಾತ್ರ ರೇಬಿಸ್‌ ಬರುತ್ತದೆ. ಹೀಗೆ ರೇಬಿಸ್ ಬಂದ ಯಾವುದೇ ಪ್ರಾಣಿಗಳು ಮನುಷ್ಯರ ಸಂಪರ್ಕಕ್ಕೆ ಬಂದಾಗ ಮಾತ್ರ ರೇಬಿಸ್‌ ಬರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು.

ರೋಗಿಯಲ್ಲಿ ಆತ್ಮವಿಶ್ವಾಸ ಚೆನ್ನಾಗಿದ್ದಲ್ಲಿ ರೋಗ ಅರ್ಧದಷ್ಟು ಕಡಿಮೆಯಾಗುತ್ತದೆ. ಆದರೆ ಕಿಡಿಗೇಡಿಗಳ ಈ ಕೃತ್ಯದಿಂದ ಸಾಮಾನ್ಯ ಜನರು ಹಾಗೂ ರೋಗಿಗಳು ಆತಂಕಕ್ಕೀಡಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಇದರಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ ಎನ್ನುವುದು ಆರೋಗ್ಯ ತಜ್ಞರು ನೀಡುವ ಎಚ್ಚರಿಕೆ.     

ಸಾಕು ಪ್ರಾಣಿಗಳಿಂದ ಎಬೋಲಾ ಬರುವುದಿಲ್ಲ
 

ADVERTISEMENT

ಸಾಕು ಪ್ರಾಣಿಗಳಿಂದ ‘ಎಬೋಲಾ’ ರೋಗ ಬರುವುದಿಲ್ಲ. ಎಬೋಲಾ ಜ್ವರ ಬರುವ ವೈರಸ್‌ ಸಾಕು ಪ್ರಾಣಿಗಳಲ್ಲಿ ಇದ್ದಿದ್ದರೆ ಅದು ಬೆಂಗಳೂರಿನಲ್ಲೇ ಮೊದಲು ಕಾಣಿಸಿಕೊಳ್ಳಬೇಕಿತ್ತು. ವೈರಸ್‌ನಿಂದ ಹರಡುವ ಸೋಂಕಿಗೆ ಒಂದು ಮಾಧ್ಯಮ ಬೇಕು. ಸೋಂಕಿತ ವ್ಯಕ್ತಿಯಿಂದ ವೈರಸ್‌ ಯಾವುದಾದರೊಂದು ಮಾಧ್ಯಮದ ಮೂಲಕ ಮಾತ್ರ ಹರಡುತ್ತದೆ. ಅದರಲ್ಲೂ ಎಬೋಲಾ ಇನ್ನೂ ಭಾರತಕ್ಕೆ ಬಂದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದು ಬೆಂಗಳೂರಿನಲ್ಲಿ ಹರಡಲು ಹೇಗೆ ಸಾಧ್ಯ. ಹೊಸ ರೋಗದ ಬಗ್ಗೆ ಕೇಳಿದ ಕೂಡಲೆ ಜನರು ಸ್ನೇಹಿತರೊಂದಿಗೆ ಚರ್ಚಿಸಲು ಪ್ರಾರಂಭಿಸುತ್ತಾರೆ. ಅದರ ಪರಿಣಾಮವಾಗಿ ಮಾನವನಿಗೆ ತೀರಾ ಹತ್ತಿರದಲ್ಲಿರುವ ಸಾಕು ಪ್ರಾಣಿಗಳನ್ನು ಹೊಣೆ ಮಾಡಲು ಪ್ರಾರಂಭಿಸುತ್ತಾರೆ. ಇದು ತಪ್ಪು. ಯಾವುದೇ ಪುರಾವೆ ಇಲ್ಲದೆ ಕೇವಲ ಬಾಯಿಯಿಂದ ಬಾಯಿಗೆ ಹರಡುವ ಸುದ್ದಿಗಳನ್ನು ಜನರು ನಂಬಬಾರದು.
– ಶಿವಪ್ರಕಾಶ್‌, ಪಶುವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.