ADVERTISEMENT

ಗೊಂಬೆ ಪ್ರದರ್ಶನಕ್ಕೆ ನಾಲ್ಕು ದಶಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಗೊಂಬೆ ಪ್ರದರ್ಶನಕ್ಕೆ ನಾಲ್ಕು ದಶಕ
ಗೊಂಬೆ ಪ್ರದರ್ಶನಕ್ಕೆ ನಾಲ್ಕು ದಶಕ   

* ಸುರೇಶ ಬಿ.ವಿ.

ಬಸವೇಶ್ವರ ನಗರದ ಕೆಎಚ್‌ಬಿ ಕಾಲೊನಿಯ ಕುಟುಂಬವೊಂದು ಕಳೆದ 40 ವರ್ಷಗಳಿಂದ ಪ್ರತಿ ಕೃಷ್ಣಾಷ್ಟಮಿಯಂದು ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದೆ.

‘ಮೊದಲು ಮೆಜೆಸ್ಟಿಕ್ ಬಳಿ ಇದ್ದ ನಾವು ಅಲ್ಲಿ ಗೊಂಬೆ ಜೋಡಣೆ–ಪ್ರದರ್ಶನ ಆರಂಭಿಸಿದೆವು. ಆಗ ಒಂದು ಮಂಟಪದಲ್ಲಿ ಗೊಂಬೆ ಜೋಡಿಸಲಾಗುತ್ತಿತ್ತು. ಬಳಿಕ ಮಲ್ಲೇಶ್ವರಕ್ಕೆ ಮನೆ ಬದಲಿಸಿದೆವು. ಅಲ್ಲಿಯೂ ಗೊಂಬೆ ಜೋಡಿಸಿ ಪ್ರದರ್ಶನ ಮುಂದುವರಿಸಿದೆವು. ಈಗ ಅದು ಮೂರು ಮಂಟಪಕ್ಕೆ ಏರಿದೆ ಎನ್ನುತ್ತಾರೆ’ ಈ ಕುಟುಂಬದ ಹಿರಿಯರಾದ ಎಸ್.ಆರ್.ಶ್ರೀನಿವಾಸ್.

ADVERTISEMENT

ನಿವೃತ್ತ ಶಿಕ್ಷಕಿ ಸಿ.ಜಯಮ್ಮ, ಎಸ್.ಆರ್.ಶ್ರೀನಿವಾಸ್, ಕೆ.ಸಿ.ಮಾಲತಿ ಅವರು ಕುಟುಂಬದ ಹಿರಿಯರು. ಇವರ ಸಹಕಾರ– ಮಾರ್ಗದರ್ಶನದೊಂದಿಗೆ ಮಕ್ಕಳಾದ ಕಿರಣ್ ಕುಮಾರ್, ಗುರುನಾಥ್ ಗೊಂಬೆ ಜೋಡಿಸಿ ಅಲಂಕಾರ ಮಾಡಿ ಪ್ರದರ್ಶನಕ್ಕಿಡುತ್ತಾರೆ. ಸೊಸೆಯಂದಿರಾದ ಕವಿತಾ ಕಿರಣ್ ಕುಮಾರ್, ಅಶ್ವಿನಿ ಅವರು ಕೀರ್ತನೆ, ಸ್ತೋತ್ರ ಹಾಡುವುದಲ್ಲದೆ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಪ್ರಸಾದ ನೀಡುತ್ತಾರೆ. ಪುಟಾಣಿ ಕೀರ್ತನ್ ಕೃಷ್ಣನ ಗೊಂಬೆ ನೋಡಲು ಬರುವವರ ಗಮನ ಸೆಳೆಯುತ್ತಾನೆ.

ಕೃಷ್ಣನ ಅಂದ ನೋಡಲು ಬರುವ ನೂರಾರು ಜನರಿಗೆ ಆತಿಥ್ಯ ನೀಡುವ ಕಾರ್ಯದಲ್ಲಿ ಈ ಕುಟುಂಬದವರೆಲ್ಲರೂ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಾರೆ. ಕೆಲವು ವರ್ಷ ಮೂರು ದಿನ, ಹಲವೊಮ್ಮೆ ಏಳು ದಿನಗಳ ಕಾಲ ಪ್ರದರ್ಶನ ನಡೆಸಲಾಗಿದೆ. ಅದು ಆರಂಭದಿಂದಲೂ ರೂಢಿಯಲ್ಲಿದೆ ಎಂದು ವಿವರಿಸುತ್ತಾರೆ ಕಿರಣ್‌ಕುಮಾರ್. ಪ್ರಸಾದ ರೂಪದಲ್ಲಿ ಪುಳಿಯೋಗರೆ, ಸಿಹಿ, ಚಕ್ಕುಲಿ ಅಥವಾ ಕೋಡುಬಳೆ ನೀಡುತ್ತೇವೆ ಎನ್ನುತ್ತಾರೆ ಕವಿತಾ.

ಇಸ್ಕಾನ್‌ ರಾಧಾಕೃಷ್ಣ ವಿಗ್ರಹ ಹೊಸದಾಗಿ ಈ ಪ್ರದರ್ಶನದಲ್ಲಿ ಸೇರಿಕೊಂಡಿದೆ. ಚಿನ್ನದ ಪುಟ್ಟ ವಿಗ್ರಹ, ಬೆಣ್ಣೆ ಕೃಷ್ಣ, ಒರಳು ಕಲ್ಲಿಗೆ ಕಟ್ಟಿದ ಬೆಣ್ಣೆ ಕೃಷ್ಣ, ಗೋವರ್ಧನ ಗಿರಿ ಎತ್ತಿದ ಕೃಷ್ಣ, ಕಾಳಿಂಗ ಮರ್ದನದ ದೃಶ್ಯದ ಕೃಷ್ಣ– ಹೀಗೆ ವೈವಿಧ್ಯಮಯ ವಿಗ್ರಹ ಜೋಡಣೆ ಸಂತಸ ಕೊಡುವುದಾಗಿ ಹೇಳುತ್ತಾರೆ ಅಶ್ವಿನಿ.

ವಸುದೇವ ಕೃಷ್ಣನನ್ನು ಎತ್ತಿ ಕೊಂಡೊಯ್ಯುವುದು, ಆಲದ ಎಲೆಯ ಮೇಲಿನ ಕೃಷ್ಣ, ವಿಶ್ವರೂಪ ದರ್ಶನ ಗಮನ ಸೆಳೆದುದಾಗಿ ಪ್ರದರ್ಶನ ನೋಡಲು ಬಂದಿದ್ದ ಉಷಾ ಹೇಳುತ್ತಾರೆ.

ಆರಂಭದಲ್ಲಿ ಎರಡರಿಂದ ಮೂರು ಸಾವಿರ ಖರ್ಚಾಗುತ್ತಿತ್ತು. ಇದೀಗ ಹತ್ತಾರು ಸಾವಿರ ರೂಪಾಯಿ ಖರ್ಚಾಗುತ್ತಿದೆ. ಆದರೂ ಶ್ರದ್ಧೆಯಿಂದ ಗೊಂಬೆ ಜೋಡಿಸುತ್ತೇವೆ. ನೆಂಟರು ಮಾತ್ರವಲ್ಲ ನೂರಾರು ಜನ ಬಂದು ನೋಡಿ ಹೋದಾಗ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಶ್ರೀನಿವಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.