ADVERTISEMENT

ಚಾಟ್ಸ್‌ ಸಮಯ ಆನಂದಮಯ

ಸತೀಶ ಬೆಳ್ಳಕ್ಕಿ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಜಯನಗರ, ಬಿಟಿಎಂ ಲೇಔಟ್‌, ಜೆ.ಪಿ.ನಗರ,  ಹನುಮಂತನಗರದಲ್ಲಿರುವ ಚಾಟ್ಸ್‌ ಪ್ರಿಯರೆಲ್ಲರೂ ‘ಚಾಟ್ಸ್‌ಟೈಮ್ಸ್‌’ ಹೆಸರು ಕೇಳಿರಬಹುದು. ಅನೇಕರು ಇಲ್ಲಿನ ಚಾಟ್ಸ್‌ ಸವಿರುಚಿ ಸವಿದಿರಬಹುದು. ಇನ್ನೂ ಇಲ್ಲಿನ ಚಾಟ್ಸ್‌ ರುಚಿ ನೋಡದವರಿಗೆ ಈ ಸೆಂಟರ್‌ ಉತ್ತಮ ಆಯ್ಕೆ.

ಆ್ಯಂಬಿಯೆನ್ಸ್‌ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದೇ ನಿಂತುಕೊಂಡು ಇಲ್ಲಿನ ಚಾಟ್ಸ್‌ ಸವಿ ಉಣ್ಣಬಹುದು. ಟೊಕ್ರಿ ಇಲ್ಲಿನ ಸಿಗ್ನೇಚರ್‌ ಚಾಟ್‌. ಯಮ್ಮಿ ಯಮ್ಮಿಯಾಗಿರುವ ಈ ಚಾಟ್‌ ಅನ್ನು ಮೊದಲ ಬಾರಿಗೆ ತಿನ್ನುವವರಿಗೆ ಸಖತ್‌ ಮಜ ಸಿಗುತ್ತದೆ. ಹಾಗೆಯೇ, ಇಲ್ಲಿನ ಮಸಾಲಪುರಿ ಕೂಡ ಭಿನ್ನರುಚಿಯಿಂದ ಇಷ್ಟವಾಗುತ್ತದೆ.

ಅಂದಹಾಗೆ, ಈ ‘ಚಾಟ್ಸ್‌ಟೈಮ್ಸ್‌’ ಮಾಲೀಕರು ಐಟಿ ಕ್ಷೇತ್ರದ ಉದ್ಯೋಗಿ ವೀರೇಶ್‌ ಬಿ.ಬುಲ್ಲ. ಹೊಸದೇನಾದರೂ ಉದ್ಯಮ ಆರಂಭಿಸಬೇಕು ಎಂದು ಯೋಚಿಸಿದ ಅವರು ಇನ್ಫೊಸಿಸ್‌ ಉದ್ಯೋಗ ಬಿಟ್ಟು ಚಾಟ್ಸ್‌ ಬ್ಯುಸಿನೆಸ್‌ ಆರಂಭಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಹನುಮಂತನಗರದಲ್ಲಿ (ಗಣೇಶ ಭವನದ ಎದುರು) ಚಾಟ್ಸ್‌ಟೈಮ್ಸ್‌ನ ಮೊದಲ ಅಂಗಡಿ ತೆಗೆದ ಇವರು, ಈಗ ಜಯನಗರ 4ನೇ ಹಂತ,  ಜೆ.ಪಿ.ನಗರ 3ನೇ ಹಂತಕ್ಕೂ ತಮ್ಮ ಉದ್ಯಮ ವಿಸ್ತರಿಸಿದ್ದಾರೆ.

ಸದ್ಯದಲ್ಲೇ ಮಲ್ಲೇಶ್ವರ ಮತ್ತು ಚಾಮರಾಜಪೇಟೆಯಲ್ಲಿ ಹೊಸ ಮಳಿಗೆ ತೆರೆಯುವ ಉತ್ಸಾಹದಲ್ಲಿದ್ದಾರೆ. ತಮ್ಮದೇ ಆಧುನಿಕ ಸೆಂಟ್ರಲೈಸ್ಡ್‌ ಕಿಚನ್‌ ಹೊಂದಿರುವ ಚಾಟ್ಸ್‌ಟೈಮ್ಸ್‌ ಗುಣಮಟ್ಟ ಮತ್ತು ಶುಚಿರುಚಿಯಿಂದ ಚಾಟ್ಸ್‌ಪ್ರಿಯರ ಮನಗೆದ್ದಿದೆ. ‘ಚಾಟ್ಸ್‌ಟೈಮ್ಸ್‌ ನನ್ನ ಕನಸಿನ ಕೂಸು. ಹೊಸತೇನ್ನಾದರೂ ಮಾಡಬೇಕು ಹಂಬಲ ನನ್ನಲ್ಲಿ ಮೂಡಿದಾಗ ಹೊಳೆದಿದ್ದು ಈ ಉದ್ಯಮ. ಆಹಾರೋದ್ಯಮದ ಎಬಿಸಿಡಿ ಕೂಡ ನನಗೆ ಗೊತ್ತಿರಲಿಲ್ಲ. ಆದರೂ, ಧೈರ್ಯ ಮಾಡಿ ಐದಂಕಿ ಸಂಬಳದ ಉದ್ಯೋಗ ಬಿಟ್ಟು ಈ ಉದ್ಯಮ ಆರಂಭಿಸಿದೆ.

ಹನುಮಂತನಗರದಲ್ಲಿ ಮೊದಲ ಮಳಿಗೆ ಪ್ರಾರಂಭಿಸಿದೆವು. ಬಂಗಾರಪೇಟೆ ಚಾಟ್ಸ್ ರೀತಿ ನಮ್ಮ ಚಾಟ್ಸ್‌ ಚಟ್‌ಪಟ್‌ ಎಂದು ಸಿಡಿಯುವುದಿಲ್ಲ. ನಾವು ತಯಾರಿಸುವ ಯಾವುದೇ ಚಾಟ್‌ಗೂ ಬಣ್ಣ ಬೆರೆಸುವುದಿಲ್ಲ. ಚಾಟ್‌ ತಯಾರಿಕೆಗೆ ಬೇಕಿರುವ ಯಾವ ವಸ್ತುವನ್ನೂ ಹೊರಗಿನಿಂದ ತರುವುದಿಲ್ಲ. ರುಚಿ–ಶುಚಿ ಮತ್ತು ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆ. ಹಾಗಾಗಿ, ಜನರು ನಮ್ಮ ಚಾಟ್ಸ್‌ ರುಚಿಯನ್ನು ಇಷ್ಟಪಟ್ಟರು. ಯಾವುದೇ ಒಂದು ಹೊಸ ಚಾಟ್ಸ್‌ ಪರಿಚಯಿಸುವ ಮುನ್ನ ನಾವು ಸಾಕಷ್ಟು ಸಂಶೋಧನೆ ನಡೆಸುತ್ತೇವೆ. ನೀವು ನಂಬುತ್ತೀರೋ, ಇಲ್ಲವೋ ನಮ್ಮ ಸೆಂಟರ್‌ನಲ್ಲಿ ಮಸಾಲಾಪುರಿ ಇಡುವ ಮುನ್ನ ಹೆಚ್ಚುಕಮ್ಮಿ ಒಂದು ವರ್ಷ ರಿಸರ್ಚ್‌ ಮಾಡಿದ್ದೇವೆ. ಈಗ ನಮ್ಮ ಸೆಂಟರ್‌ನಲ್ಲಿ ಸಿಗುವ ಮಸಾಲಾಪುರಿ ಬೇರೆಲ್ಲಾ ಚಾಟ್ಸ್‌ಗಿಂತಲೂ ತುಂಬ ಭಿನ್ನವಾಗಿರುತ್ತದೆ’ ಎನ್ನುತ್ತಾರೆ ವೀರೇಶ್‌.

ಈಗಿರುವ ನಾಲ್ಕು ಚಾಟ್ಸ್‌ ಮಳಿಗೆಗಳಿಗೂ ಬಸವನಗುಡಿಯಲ್ಲಿರುವ ಸೆಂಟ್ರಲೈಸ್ಡ್‌ ಕಿಚನ್‌ನಿಂದಲೇ ಎಲ್ಲವೂ ಸರಬರಾಜಾಗುತ್ತದೆ. ಕುಕ್ಕಿಂಗ್‌ಗೆ  ಕ್ಯಾನ್‌ ವಾಟರ್‌ ಮತ್ತು ಸನ್‌ಫ್ಲವರ್‌ ಆಯಿಲ್‌ ಬಳಕೆ ಮಾಡುತ್ತಾರೆ. ಇಲ್ಲಿ 70–80 ಬಗೆಯ ಚಾಟ್ಸ್‌ ಸಿಗುತ್ತದೆ. ರುಚಿ ಮೊಗ್ಗುಗಳನ್ನು ಅರಳಿಸುವ ಚಾಟ್ಸ್‌ ಜೊತೆಗೆ ಸ್ಯಾಂಡ್‌ವಿಚ್‌, ಪಾವ್‌ಭಾಜಿ, ಕೂಲರ್‌ಗಳ ಆಯ್ಕೆಯೂ ಇದೆ.

‘ನಮ್ಮದೇ ಕಿಚನ್‌ ಇರುವುದರಿಂದ ಗುಣಮಟ್ಟ ಮತ್ತು ಶುಚಿತ್ವಕ್ಕೆ ನಾವು ಹೆಚ್ಚಿನ ಗಮನ ನೀಡುತ್ತೇವೆ. ಹಾಗಾಗಿ, ನಮ್ಮಲ್ಲಿ ಕ್ವಾಲಿಟಿ ಕಂಟ್ರೋಲ್‌ ಇದೆ. ಗುಣಮಟ್ಟದಲ್ಲಿ ನಾವು ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಟೊಕ್ರಿ ಚಾಟ್‌ ನಮ್ಮಲ್ಲಿ ಅತಿ ಹೆಚ್ಚು ಖರ್ಚಾಗುತ್ತದೆ. ಪಾವ್‌ಭಾಜಿಗೂ ಹೆಚ್ಚಿನ ಗ್ರಾಹಕರಿದ್ದಾರೆ. ಪಾನಿಪುರಿ, ವಡಾಪಾವ್‌, ಬಾಬೇಲಿ ಇವೆಲ್ಲಕ್ಕೂ ಗಿರಾಕಿಗಳಿದ್ದಾರೆ. ಬಿಟಿಎಂ ಭಾಗದಲ್ಲಿ  ಮಸಲಾಪುರಿಯನ್ನು ಯಾರೂ ಕೇಳುವುದಿಲ್ಲ.  ಆದರೆ ಹನುಮಂತನಗರ, ಮಲ್ಲೇಶ್ವರಕ್ಕೆ ಹೋದರೆ ಅದಿಲ್ಲದೇ ಇಲ್ಲ.

ಈ ಭಾಗದ ಹೆಚ್ಚಿನ ಜನರಿಗೆ ಚಾಟ್ಸ್‌ ಅಂದರೆ ಬರೀ ಮಸಾಲಾ ಪುರಿ ಎಂದಷ್ಟೇ ಗೊತ್ತಿದೆ. ಲೋಕಲ್‌ ಜನರು ಏನು ಬಯಸುತ್ತಾರೋ ಅದನ್ನು ನೀಡುತ್ತಿದ್ದೇವೆ. ನಮ್ಮ ಚಾಟ್ಸ್‌ಸೆಂಟರ್‌ಗೆ ಫ್ಯಾಮಿಲಿ ಕ್ರೌಡ್‌ ಹೆಚ್ಚಾಗಿದೆ. ನಂತರದ ಸ್ಥಾನ ವಿದ್ಯಾರ್ಥಿಗಳದ್ದು. ನಾವು ಮಾಡಿರುವ ಕಿಡ್ಸ್‌ ಮೆನು ಕೂಡ ಕ್ಲಿಕ್‌ ಆಗಿದೆ. ನಮ್ಮ ಚಾಟ್ಸ್‌ ಅನ್ನು ಎರಡು ಮೂರು ವರ್ಷದ ಮಗು ಕೂಡ ತಿನ್ನಬೇಕು ಎನ್ನುವುದು ನಮ್ಮ ಕಾನ್ಸೆಪ್ಟ್‌. ನಮ್ಮ ಮಕ್ಕಳಿಗೆ ನಾವು ತಿನ್ನಿಸಿದರೆ ಯಾರಿಗೆ ಬೇಕಾದರೂ ತಿನ್ನಿಸಬಹುದು  ಎನ್ನುವುದು ನಮ್ಮ ನಿಲುವು.

ಬೆಂಗಳೂರಂತಹ ನಗರಿಯಲ್ಲಿ ಪ್ರತಿದಿನವೂ ಒಂದೊಂದು ಚಾಟ್ಸ್‌ ಸೆಂಟರ್‌ಗಳು ತರೆದುಕೊಳ್ಳುತ್ತಿರುತ್ತವೆ. ಆದರೆ, ಅಲ್ಲೆಲ್ಲಾ ಶುಚಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಚಾಟ್ಸ್‌ ಸೆಂಟರ್‌ಗಳಿಗೆ ಪೂರೈಕೆಯಾಗುವ ಪೂರಿ ತಯಾರಿಸುವ ಸ್ಥಳ ನೋಡಿದರೆ ಮತ್ತ್ಯಾರೂ ಅಲ್ಲಿ ತಿನ್ನುವುದಿಲ್ಲ.  ಹಾಗಾಗಿ, ನಾವು ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಿದ್ದೇವೆ. ಮುಂದೆ ಬ್ರೇಕ್‌ಫಾಸ್ಟ್‌ ಹಾಗೂ ಹೊಸ ಬಗೆಯ ಟೀ ಪರಿಚಯಿಸುವ ಯೋಜನೆಯೂ ಇದೆ. ಹೌಸ್‌ ಪಾರ್ಟಿ, ಬರ್ತ್‌ಡೇ ಪಾರ್ಟಿ, ಮೆಹಂದಿ ಪಾರ್ಟಿ, ಮದುವೆ ಎಲ್ಲಕ್ಕೂ ನಾವು ಕೇಟರಿಂಗ್‌ ಮಾಡುತ್ತಿದ್ದೇವೆ. ಮುಂದೆ ಕಾರ್ಪೊರೇಟ್‌ ಕೇಟರಿಂಗ್‌ಗೂ ಲಗ್ಗೆ ಇಡುವ ಯೋಜನೆ ಇದೆ’ ಎನ್ನುತ್ತಾರೆ ವೀರೇಶ್‌.

ಮಾಹಿತಿಗೆ– 9945111997 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.