ADVERTISEMENT

ಚಿತ್ರೋತ್ಸವದಲ್ಲಿ ‘ಹರಿಕಥಾ ಪ್ರಸಂಗ’

ಸಿನಿಮಾ

ಹೇಮಾ ವೆಂಕಟ್
Published 23 ನವೆಂಬರ್ 2016, 19:30 IST
Last Updated 23 ನವೆಂಬರ್ 2016, 19:30 IST
ಅನನ್ಯ ಕಾಸರವಳ್ಳಿ
ಅನನ್ಯ ಕಾಸರವಳ್ಳಿ   

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಾದೇಶಿಕ ಭಾಷಾ ಸಿನಿಮಾಗಳು ಪ್ರದರ್ಶನಕ್ಕೆ ಅವಕಾಶ ಪಡೆಯುವುದು ಸುಲಭದ ಮಾತಲ್ಲ.
ಅದರಲ್ಲೂ  ಒಂದು ಸಣ್ಣ ಪ್ರದೇಶದ ಜನರು ಮಾತ್ರ ಮಾತನಾಡುವ ಕನ್ನಡದ ಉಪಭಾಷೆ ಕುಂದಗನ್ನಡದಲ್ಲಿ ತಯಾರಾದ ಚಿತ್ರ ಇಂಥ ಗೌರವಕ್ಕೆ ಪಾತ್ರವಾಗಿರುವುದು ಚಿತ್ರದ ಶ್ರೇಷ್ಠತೆಯನ್ನು ತೋರಿಸುತ್ತದೆ.

ಸದ್ಯ ಅನನ್ಯ ಕಾಸರವಳ್ಳಿ ನಿರ್ದೇಶನದ ‘ಹರಿಕಥಾ ಪ್ರಸಂಗ’ ಬಿಡುಗಡೆಗೂ ಮುನ್ನವೇ  ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕನ್ನಡದ ಶ್ರೇಷ್ಠ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಮಗಳು ಅನನ್ಯ. ಅಪ್ಪನ ಹಾದಿಯಲ್ಲಿಯೇ ಹೆಜ್ಜೆ ಇಡುತ್ತಿರುವ ಭರವಸೆಯ ನಿರ್ದೇಶಕಿ.

ಚಿತ್ರರಂಗಕ್ಕೆ ಅನನ್ಯ ಪದಾರ್ಪಣೆ ಮಾಡಿದ್ದು ನಟಿಯಾಗಿ. ನಂತರ ಹೊರಳಿದ್ದು ನಿರ್ದೇಶನದ ಕಡೆಗೆ. ಅವರ ನಿರ್ದೇಶನದ ಕಿರುಚಿತ್ರಗಳು ಈಗಾಗಲೇ ಅಂತರರಾಷ್ಟ್ರೀಯ  ಮನ್ನಣೆ ಗಳಿಸಿವೆ.

ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದ ಬೂಸಾನ್‌ ಚಲನಚಿತ್ರೋತ್ಸವದಲ್ಲೂ ‘ಹರಿಕಥಾ ಪ್ರಸಂಗ’ ಪ್ರದರ್ಶನ ಕಂಡು ಅಪಾರ ಮೆಚ್ಚುಗೆ ಗಳಿಸಿದೆ.
ನ.20ರಂದು ಆರಂಭವಾಗಿರುವ ‘ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಹರಿಕಥಾ ಪ್ರಸಂಗ ಆಯ್ಕೆಯಾಗಿರುವುದು ಅವರ ಅನನ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಮೊದಲ ನಿರ್ದೇಶನದ ಚಿತ್ರ ವಿಭಾಗದಲ್ಲಿ ಅದು ಆಯ್ಕೆಯಾಗಿದೆ. ಗೋವಾದಲ್ಲಿ ನ. 24ರಂದು ಈ ಚಿತ್ರ ಪ್ರದರ್ಶನಗೊಳ್ಳಲಿದೆ. 

ಗೋಪಾಲಕೃಷ್ಣ ಪೈ ಅವರ ಕಾದಂಬರಿ ಆಧಾರಿತ  ಪ್ರಸಂಗವನ್ನು ಚಿತ್ರಕ್ಕೆ ಅಳವಡಿಸಲು ಅನನ್ಯ ಅವರು ಎರಡು ವರ್ಷ ಕೆಲಸ ಮಾಡಿದ್ದಾರೆ.  ಕಾದಂಬರಿಯಲ್ಲಿ ಬರುವ ಹರಿ ಎಂಬ ಪಾತ್ರ ಇಡೀ ಚಿತ್ರದ ಜೀವಾಳ. ಉಡುಪಿಯ ಬಾರ್ಕೂರಿನಲ್ಲಿ ಚಿತ್ರೀಕರಣ ನಡೆದಿದೆ.

ಹರಿ ಎಂಬ ವ್ಯಕ್ತಿ ಯಕ್ಷಗಾನದಲ್ಲಿ ಸ್ತ್ರೀಪಾತ್ರಧಾರಿ. ತಾನು ಸ್ತ್ರೀಪಾತ್ರ ಧಾರಿಯಾಗಿ ಜನಮನ್ನಣೆ ಗಳಿಸಿದ ನಂತರ ಆತನಲ್ಲಿ ಉಂಟಾಗುವ ಮಾನಸಿಕ ತೊಳಲಾಟವನ್ನು ಕತೆ ಒಳಗೊಂಡಿದೆ. ‘ರಂಗದ ಮೇಲೆ ಸ್ತ್ರೀಯಾಗಿ ಪಾತ್ರ ನಿರ್ವಹಿಸುವಂತೆಯೇ, ನಿಜ ಜೀವನದಲ್ಲಿ  ಪುರುಷ  ಪಾತ್ರ ನಿರ್ವಹಿಸುತ್ತಿದ್ದೇನೆಯೇ’ ಎಂದು ಹರಿ ಸಂದಿಗ್ಧತೆಗೆ ಒಳಗಾಗುತ್ತಾನೆ.  ಹರಿಯ ಮೂಲಕ ಯಕ್ಷಗಾನ ಕಲಾವಿದರ ಬದುಕಿನ ನೈಜ ಚಿತ್ರಣವನ್ನು ಚಿತ್ರ ಬಿಂಬಿಸುತ್ತದೆ. ಗೋವಾ ಚಿತ್ರೋತ್ಸವಕ್ಕೆ ಹೊರಡುವ ತರಾತುರಿಯಲ್ಲಿದ್ದ ಅನನ್ಯ ಮೆಟ್ರೊ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ.

‘ಚಿತ್ರವನ್ನು ಮೊದಲು ವೀಕ್ಷಿಸಿದ ಅಪ್ಪ ಒಳ್ಳೆಯ ಸಿನಿಮಾ ಮಾಡಿದ್ದಿ ಮೆಚ್ಚುಗೆಯ ಮಾತನಾಡಿದ್ದರು. ನಂತರ ಚಿತ್ರ ಬೂಸಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ವಿದೇಶಿಗರ ಮೆಚ್ಚುಗೆ ಗಳಿಸಿದೆ. ಈಗ ಗೋವಾ ಚಲನಚಿತ್ರೋತ್ಸವದ ಗೌರವ ಲಭಿಸಿದೆ. ಇದು ಅತ್ಯಂತ ಖುಷಿ ಕೊಡುವ ವಿಷಯ.

ಉಡುಪಿಯ ಬಾರ್ಕೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದ ಸಂಭಾಷಣೆಯನ್ನು ನಾನೇ ಬರೆದಿದ್ದೇನೆ. ಕುಂದ ಕನ್ನಡಕ್ಕೆ ಲೇಖಕಿ ವೈದೇಹಿ ಅನುವಾದಿಸಿದ್ದಾರೆ. ಒಂದೂ ಮುಕ್ಕಾಲು ಗಂಟೆಯ ಚಿತ್ರದ ಹೆಚ್ಚಿನ ಭಾಗವನ್ನು ರಂಗಸ್ಥಳದಲ್ಲಿಯೇ  ಚಿತ್ರೀಕರಣ ಮಾಡಲಾಗಿದೆ. ಯಕ್ಷಗಾನ ಕಲಾವಿದರ  ಬದುಕಿನ ನೈಜ ಚಿತ್ರಣ ಬಿಂಬಿಸಲಾಗಿದೆ. 

ಅಪ್ಪನ ರೀತಿಯಲ್ಲಿ ಕಲಾತ್ಮಕ ಸಿನಿಮಾವನ್ನು ನಿರ್ದೇಶನ ಮಾಡುವುದರಲ್ಲಿಯೇ ನನಗೆ ಹೆಚ್ಚು ಆಸಕ್ತಿ ಇದೆ. ಹಣ ಮಾಡುವ, ವಾಣಿಜ್ಯ ಸರಕಿನ ಸಿನಿಮಾ ಮಾಡಲಾರೆ.

ಅಮ್ಮ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ದರು. ಅವರಿಲ್ಲದ ಕೊರತೆ ಕಾಡುತ್ತಿದೆ. ಆದರೆ, ನನ್ನ ಚಿತ್ರಕ್ಕೆ ಹಸ್ತಕ್ಷೇಪ ಮಾಡಲು ಅಮ್ಮನಿಗೆ  ಬಿಡುತ್ತಿರಲಿಲ್ಲ.
ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ.  ಇನ್ನೂ ಆರು ತಿಂಗಳು ಹರಿಕಥಾ ಪ್ರಸಂಗವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ. ಅಲ್ಲಿಯವರೆಗೆ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಯೋಚನೆ ಇಲ್ಲ.  

ಮುಂದೆ ಇಂಥಹ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳಲ್ಲಿ ತೊಡಗುವ ಆಸೆ ಇದೆ. ಕಿರುತೆರೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಇನ್ನೂ ಯೋಚಿಸಿಲ್ಲ’ ಎನ್ನುತ್ತಾರೆ ಅನನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT