ADVERTISEMENT

ಚಿನ್ನ ಖರೀದಿಗೂ ಮುನ್ನ...

ರಮೇಶ ಕೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST
ಚಿನ್ನ ಖರೀದಿಗೂ ಮುನ್ನ...
ಚಿನ್ನ ಖರೀದಿಗೂ ಮುನ್ನ...   

ಅಕ್ಷಯ ತೃತೀಯದ ನೆಪದಲ್ಲಿ ಬಂಗಾರದ ಒಡವೆ ಖರೀದಿಸಲು ಪ್ಲ್ಯಾನ್‌ ಮಾಡಿದ್ದೀರಾ? ಮುಟ್ಟಿದ್ದೆಲ್ಲಾ ಚಿನ್ನವಾಗಲಿ ಎಂಬ ಮಹದಾಸೆ ನಿಮ್ಮದಾದರೆ, ಚಿನ್ನ ಖರೀದಿಸುವ ಮುನ್ನ ಒಂದಿಷ್ಟು ಮಾಹಿತಿ ನಿಮಗಿರಬೇಕು...

ನಂಬಿಕೆ ಮತ್ತು ಮಹತ್ವಾಕಾಂಕ್ಷೆಯ ನೆಲೆಗಟ್ಟಿನಲ್ಲಿ ನಿಂತಿರುವ ಅಕ್ಷಯ ತೃತೀಯವೆಂಬ ದಿನ, ಬೆಳ್ಳಿ ಬಂಗಾರ ಹಾಗೂ ಅದರಷ್ಟೇ ಮಹತ್ವದ ವಸ್ತುವಿನ ಖರೀದಿಗೆ ಮೀಸಲಾದ ದಿನವಾಗಿಬಿಟ್ಟಿದೆ.

ಅಕ್ಷಯ ತೃತೀಯದಂದು ಏನೇ ಖರೀದಿಸಿದರೂ ಅದು ಅಕ್ಷಯವಾಗುತ್ತದೆ, ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಅಕ್ಷಯವಾಗಬೇಕು, ಸಮೃದ್ಧಿ ಸಂಪನ್ನವಾಗಬೇಕು ಎಂಬುದು ಮಹತ್ವಾಕಾಂಕ್ಷೆ. ಈ ಎರಡೂ ಭಾವಗಳು  ಮಾರುಕಟ್ಟೆಯನ್ನು ವಿಸ್ತಾರಗೊಳಿಸುತ್ತಲೇ ಇವೆ. ವಿಶೇಷವಾಗಿ, ದಿನೇದಿನೇ ಹಿಗ್ಗುತ್ತಿರುವ ಆಭರಣ ಮಾರುಕಟ್ಟೆಯಂತೂ ಅಕ್ಷಯ ತೃತೀಯಕ್ಕೆ ತಿಂಗಳಿಗೂ ಮೊದಲೇ ಸಜ್ಜಾಗಿದ್ದು, ಈ ಭಾನುವಾರದವರೆಗೂ ಗ್ರಾಹಕರಿಂದ ತುಂಬಿ ತುಳುಕಲಿದೆ.

ADVERTISEMENT

ಮುಟ್ಟಿದ್ದೆಲ್ಲಾ  ಚಿನ್ನವಾಗುವುದಾದರೆ ಯಾರಿಗೆ ಬೇಡ ಅಲ್ವೇ? ಗ್ರಾಹಕರ ಈ ಮನಸ್ಥಿತಿಗೆ ತಕ್ಕುದಾಗಿ ಒಂದೊಂದು ಬ್ರ್ಯಾಂಡ್‌ಗಳೂ, ಮಳಿಗೆಗಳೂ ಒಡ್ಡಿರುವ ಕೊಡುಗೆ, ಉಡುಗೊರೆಗಳ ಆಮಿಷವೆಂಬ ಗಾಳ ಬೇರೆ! ಮಾರುಕಟ್ಟೆ ಮಂತ್ರ ಏನೇ ಇದ್ದರೂ ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ವಾಹನ ಖರೀದಿ, ಜಮೀನು ನೋಂದಣಿಗೆ ಜನ ಮುಗಿಬೀಳುವುದು  ಕಡಿಮೆಯಾಗಿಲ್ಲ, ಆಗುವುದೂ ಇಲ್ಲ. ನಂಬಿಕೆಯ ಮಂತ್ರ!

ಕಷ್ಟಪಟ್ಟು ಹಣ ಸಂಗ್ರಹಿಸಿ ಬಂಗಾರದ ಒಡವೆ ಖರೀದಿಸುವ ಮಂದಿ ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಇವರದು ಶುದ್ಧ ಚಿನ್ನದ ಒಡವೆಗಳಿಗೆ ಮೊದಲ ಆದ್ಯತೆ. ಅಂಗಡಿಯವರ ಹತ್ತಿರ 916 ‘ಮಾರ್ಕ್‌’ನ ಒಡವೆಯನ್ನು ಕೇಳಿ ಪಡೆಯುತ್ತಾರೆ. ಆದರೆ ಈ ಮಾರ್ಕ್‌ ಇದ್ದರೂ ಬಂಗಾರದ ಪ್ಯೂರಿಟಿ ಕಡಿಮೆ ಇರಬಹುದು. 

916 ಮಾರ್ಕ್‌ ಇದೆ ಎಂಬ ಮಾತ್ರಕ್ಕೆ  ಅದು ಶುದ್ಧ ಬಂಗಾರ ಆಗಿರಲಾರದು. 916 ಗುರುತಿನ ಬಂಗಾರ ಖರೀದಿಸುವಾಗ ವಹಿಸಬೇಕಾದ ಎಚ್ಚರಗಳೇನು ಗೊತ್ತೇ...
ಕಡಿಮೆ ಶುದ್ಧತೆಯ ಬಂಗಾರದ ಮೇಲೆ 916 ಚಿಹ್ನೆಯನ್ನು ಯಾರು ಬೇಕಾದರೂ ಸೀಲ್‌ ಮಾಡಬಹುದು.  ಆದರೆ ಬ್ಯೂರೊ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ (ಬಿಐಎಸ್‌)ನವರು ಪರೀಕ್ಷೆ ಮಾಡಿ ಒತ್ತಿದ ತ್ರಿಕೋನ ಚಿಹ್ನೆಯನ್ನು ಗಮನಿಸಬೇಕು. ಅದರ ಪಕ್ಕದಲ್ಲೇ 916 ಮಾರ್ಕ್ ಇರುತ್ತದೆ.
ಕೆಲವು ಅಂಗಡಿಗಳಲ್ಲಿ ‘ಸ್ಕಿನ್‌ ಟೆಸ್ಟಿಂಗ್‌’ ಯಂತ್ರ ಇಟ್ಟಿರುತ್ತಾರೆ. ಅದರಲ್ಲಿಯೂ 916 ಪ್ಯೂರಿಟಿ ಪರೀಕ್ಷೆ ಮಾಡಬಹುದು. ಚಿಕ್ಕಪೇಟೆಯಲ್ಲಿ ಲೋಹ ಪರೀಕ್ಷೆ ಮಾಡುವ ಅಂಗಡಿಗಳಿವೆ. ಅಲ್ಲಿಯೂ ₹60 ಕೊಟ್ಟರೆ ಬಂಗಾರ ಶುದ್ಧತೆ ಪರೀಕ್ಷೆ ಮಾಡಿಸಬಹುದು.

‘ಈಗ ಕೆಡಿಎಂ ಬಂಗಾರ ನಿಷೇಧ ಆಗಿದೆ. 916 ಮಾರ್ಕ್‌ ಇರುವ ಬಂಗಾರದ ಒಡವೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. 916 ಅಂದ್ರೆ 91.6ರಷ್ಟು ಪ್ಯೂರಿಟಿ ಎಂದರ್ಥ. ಉಳಿದ 8.4ರಷ್ಟು ಬೆಳ್ಳಿ ಅಥವಾ ತಾಮ್ರ ಇರಬಹುದು. ಶೇ100 ಬಂಗಾರ ಅಂದ್ರೆ 24 ಕ್ಯಾರಟ್ ಆಗಿರುತ್ತದೆ. 22 ಕ್ಯಾರಟ್‌ ಪ್ಯೂರಿಟಿ 916 ಚಿನ್ನದಲ್ಲಿ ಇರುತ್ತದೆ. ಈ ಚಿನ್ನವನ್ನು ಮತ್ತೆ ಕರಗಿಸಿದಾಗ ಅದರಲ್ಲಿ ಅದೇ 91.6 ಶುದ್ಧತೆ ಇರುತ್ತದೆ. ಆದ್ದರಿಂದ ಗ್ರಾಹಕರು ಜನಪ್ರಿಯ, ಹಳೆ ಬಂಗಾರದ ಅಂಗಡಿಗಳಲ್ಲಿ ಒಡವೆ ಖರೀದಿಸಿದರೆ ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ ರಿಚ್ಮಂಡ್‌ ವೃತ್ತದಲ್ಲಿರುವ ಪ್ರತಿಭಾ ಜ್ಯುವೆಲರ್ಸ್‌ ಪಾಲುದಾರರಾದ ಎಸ್‌.ಎನ್‌. ಶರತ್‌ ಕುಮಾರ್‌.

ಗ್ರಾಹಕರು ಚಿನ್ನ ಖರೀದಿ ವೇಳೆ  ‘ಹಾಲ್‌ಮಾರ್ಕ್’ ಚಿಹ್ನೆಯನ್ನು  ಸರಿಯಾಗಿ ಗಮನಿಸುವುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.