ADVERTISEMENT

ಚೈತ್ರದ ಜೊತೆಗೆ ಅನಂತ ನೃತ್ಯ ವೈಭವ

ಸುಕೃತ ಎಸ್.
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಚೈತ್ರದ ಜೊತೆಗೆ ಅನಂತ ನೃತ್ಯ ವೈಭವ
ಚೈತ್ರದ ಜೊತೆಗೆ ಅನಂತ ನೃತ್ಯ ವೈಭವ   

ನಮ್ಮಿಬ್ಬರ ಆಸಕ್ತಿ ಕನಸು ಒಂದೇ ಆಗಿತ್ತು. ನಾವು ಕಲಿತ ವಿದ್ಯೆ ನಮ್ಮಲ್ಲೇ ಉಳಿಯಬಾರದು. ಅದು ತಲೆಮಾರಿಂದ ತಲೆಮಾರಿಗೆ ದಾಟಬೇಕು. ಆ ಮೂಲಕ ಕಲೆ ಉಳಿಯಬೇಕು ಮತ್ತು ಹೊಸ ಹೊಸ ಪ್ರಯೋಗಗಳು ಆಗಬೇಕು. ಈ ದೃಷ್ಟಿಯಿಂದ ನಾವು ‘ಶೈಲೂಷಂ ಆರ್ಟ್ಸ್‌ ಅಂಡ್‌ ಕ್ರಿಯೇಶನ್ಸ್‌’ ನೃತ್ಯ ಶಾಲೆಯನ್ನು ಸ್ಥಾಪಿಸಿದೆವು’ ಎನ್ನುತ್ತಾರೆ ಚೈತ್ರಾ ಅನಂತ್‌.

‘ಶೈಲೂಷಂ ಆರ್ಟ್ಸ್‌ ಅಂಡ್‌ ಕ್ರಿಯೇಶನ್ಸ್‌’ ನೃತ್ಯ ಶಾಲೆಯನ್ನು ಚೈತ್ರಾ ಅನಂತ್‌ ಹಾಗೂ ಅನಂತ್‌ ವಿಕ್ರಂ ದಂಪತಿ 2010ರಲ್ಲಿ ನಗರದ ಉತ್ತರಹಳ್ಳಿಯಲ್ಲಿ ಪ್ರಾರಂಭಿಸಿದರು. ಸದ್ಯ, ಮೈಸೂರಿನಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಕಾರ್ಯಕ್ರಮ ನೀಡುವ ತಯಾರಿಯಲ್ಲಿದೆ ಈ ಶಾಲೆ. ಸಮ್ಮೇಳನದಲ್ಲಿ ದಶಾವತಾರ ಕುರಿತ ‘ದಶಾನಂತ ವೈಭವ’ ಎನ್ನುವ ನೃತ್ಯ ರೂಪಕವನ್ನು ಈ ತಂಡ ಪ್ರದರ್ಶಿಸಲಿದೆ. ಚೈತ್ರಾ ಅನಂತ್‌ ಹಾಗೂ ಅನಂತ್‌ ವಿಕ್ರಂ ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. ಸಮ್ಮೇಳನದ ಮೊದಲ ದಿನವಾದ ಶುಕ್ರವಾರ(24) ಇವರ ಕಾರ್ಯಕ್ರಮವಿದೆ.

ನೃತ್ಯ ಶಾಲೆಯ ಕುರಿತು:

ADVERTISEMENT

ಇದು 6 ವರ್ಷಗಳಿಂದ ತನ್ನ ಕಲಾಸೇವೆಯನ್ನು ಮಾಡುತ್ತಾ ಬಂದಿದೆ. ಕೇವಲ ಭಾರತದಲ್ಲಿ ಅಲ್ಲ‌ದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ನೀಡಿದೆ. ಇಲ್ಲಿ ಭರತನಾಟ್ಯದ ಜೊತೆಗೆ ಮೋಹಿನಿಯಾಟ್ಟಂ, ಕಳರಿಪಯಟ್ಟು, ಜನಪದ ನೃತ್ಯ ಸೇರಿದಂತೆ ಹಲವು ನೃತ್ಯ ಪ್ರಕಾರಗಳನ್ನು ಹೇಳಿಕೊಡಲಾಗುತ್ತದೆ. ‘ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಸ್ವಂತ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಯಶಸ್ವಿ ಕಲಾವಿದರೂ ಆಗಿದ್ದಾರೆ’ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾರೆ ಚೈತ್ರಾ.

ಎರಡು ವರ್ಷದಿಂದ ಜೂನ್‌ ತಿಂಗಳಿನಲ್ಲಿ ‘ಚಿಣ್ಣರ ಕಲರವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಸ್ಪರ್ಧೆ ಅಲ್ಲ. ಬದಲಿಗೆ ಚಿಣ್ಣರ ಪ್ರತಿಭಾ ಪ್ರದರ್ಶನಕ್ಕೆ ಇರುವ ವೇದಿಕೆ. ಚಿಣ್ಣರು ಮೊದಲಿಗೆ ತಮ್ಮ ಪ್ರತಿಭೆಯ ಸಣ್ಣ ಝಲಕ್‌ ಅನ್ನು ಚಿತ್ರೀಕರಿಸಿ ಸಿ.ಡಿ. ರೂಪದಲ್ಲಿ ಈ ಶಾಲೆಗೆ ಕಳುಹಿಸಿಕೊಡಬೇಕು. ಇಲ್ಲಿ ಒಪ್ಪಿತವಾದರೆ, ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ. ಇದರೊಟ್ಟಿಗೆ ಹಿರಿಯ ಸಾಧಕರಿಗೆ ‘ಶೈಲೂಷಂ ರತ್ನ’ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತದೆ. ಸಾಧಕರು ನೃತ್ಯಪಟುಗಳಾಗಿರಬೇಕಾಗಿಲ್ಲ. ಎಲ್ಲಾ ಕ್ಷೇತ್ರದ ಸಾಧಕರನ್ನು ಶಾಲೆ ಗುರುತಿಸಿ ಗೌರವಿಸುತ್ತದೆ.

ಈ ತಂಡ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡಿದೆ. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌, ಹಂಪಿ ಉತ್ಸವ, ಕಿತ್ತೂರು ಉತ್ಸವ, ಮೂಡುಬಿದರೆಯಲ್ಲಿ ನಡೆಯುವ ಆಳ್ವಾಸ್‌ ನುಡಿಸಿರಿ, ಮೈಸೂರು ದಸಾರ ಉತ್ಸವ, ಒಡಿಶಾದ ಸೂರ್ಯ ಉತ್ಸವ, ಮುಂಬೈನ ಕೆಎಸ್‌ಐಸಿ ನಡೆಸುವ ಕಲಾ ಉತ್ಸವ, ಮಲೇಷ್ಯಾ, ಪೋಲೆಂಡ್‌, ಸಿಂಗಪುರಗಳ ಕನ್ನಡ ಸಂಘ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿಯೂ ಈ ಶಾಲೆಯ ತಂಡ ಕಾರ್ಯಕ್ರಮಗಳನ್ನು ನೀಡಿದೆ.    ಇವರಿಬ್ಬರ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಸಂದಿವೆ. ಅನಂತ್‌ ವಿಕ್ರಂ ಈ ವರ್ಷದ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೈತ್ರಾ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕೊಡುವ ‘ಕರ್ನಾಟಕ ಕಲಾ ಕುಸುಮ’ ಪ್ರಶಸ್ತಿ ಸಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.