ADVERTISEMENT

ಛತ್ರಿ ರಿಪೇರಿ ಅಜ್ಜನ ಮಾಸದ ಮೆಲುಕು

ಅನಿತಾ ಈ.
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಮೆಟ್ರೊ ಸಿಟಿಗಳಲ್ಲಿ ದಿನಬಳಕೆ ವಸ್ತುಗಳು ಹಾಳಾದರೆ ರಿಪೇರಿ ಮಾಡಿಸಿ ಮರುಬಳಕೆ ಮಾಡುವ ಪದ್ಧತಿ ದಿನೇ ದಿನೇ ಕಡಿಮೆಯಾಗುತ್ತಿದೆ. ಇದಕ್ಕೀಗ ಕೊಡೆಯೂ ಸೇರಿಕೊಂಡಿದೆ.

ಹಿಂದೆ ಷೋರೂಂಗಳಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಕೊಡೆಗಳು ಈಗ ಗಲ್ಲಿಗಲ್ಲಿಗಳಲ್ಲೂ ದೊರೆಯುತ್ತಿವೆ. ಹಿಂದೆ ಬರುತ್ತಿದ್ದ ಕಪ್ಪು ಬಣ್ಣದ ದೊಡ್ಡ ದೊಡ್ಡ ಕೊಡೆಗಳು ಹಾಳಾದರೆ ಅದನ್ನು ರಿಪೇರಿ ಮಾಡುವವರು ಮನಗೇ ಬರುತ್ತಿದ್ದರು. ಈಗ ಕೊಡೆ ರಿಪೇರಿ ಮಾಡುವವರನ್ನು ಹುಡುಕಬೇಕು. ಕೊಡೆ ರಿಪೇರಿ ಮಾಡುತ್ತಿದ್ದವರು ಈಗ ಅದರೊಂದಿಗೆ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗೆ ನಗರದಲ್ಲಿ ಕೇವಲ ಕೊಡೆ ರಿಪೇರಿ ಮಾಡುತ್ತಿದ್ದ ನಭಿ ಅವರು ಈಗ ಬೀಗಗಳನ್ನೂ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದಾರೆ.

‘ನಾನು ಕೊಡೆ ರಿಪೇರಿ ಮಾಡಲು ಪ್ರಾರಂಭಿಸಿ 40 ವರ್ಷಗಳೇ ಕಳೆದಿವೆ. ಮೊದಲು ಬೀದಿ ಬೀದಿ ಸುತ್ತಿ ಕೊಡೆ ರಿಪೇರಿ ಮಾಡುತ್ತಿದ್ದೆ. ಆಗ ಆ ವ್ಯಾಪಾರದಲ್ಲಿ ಲಾಭ ಸಿಗುತ್ತಿತ್ತು. ಮಳೆಗಾಲಕ್ಕೆ ಮುಂಚಿತವಾಗಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿದರೆ ಜೇಬು ತುಂಬುತ್ತಿತ್ತು. ಜೊತೆಗೆ ಆಗ ಬರುತ್ತಿದ್ದ ಕೊಡೆಗಳಿಗೆ ಬೇಕಾದ ಬಿಡಿ ಭಾಗಗಳು ದೊರೆಯುತ್ತಿದ್ದವು. ಅದರಲ್ಲೂ ಹರಿದ ಬಟ್ಟೆಗಳಿಗೆ ತೇಪೆ ಹಾಕುವ ಕೆಲಸ ಸಹ ಮಾಡುತ್ತಿದ್ದೆ. ಮಧ್ಯಾಹ್ನದ ವೇಳೆಗೆ ರಿಪೇರಿ ಕೆಲಸ ಸಿಕ್ಕರೆ ಆ ಮನೆಯವರೇ ಊಟ ನೀಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಎಲ್ಲರೂ ಎಲ್ಲರನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾರೆ’ ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ ಕೊಡೆ ರಿಪೇರಿ ಮಾಡುವ ಅಜ್ಜ ನಭಿ.

‘ಈಗ ಕಾಲ ಬದಲಾಗಿದೆ. ಹಿಂದೆ ಮಳೆಗಾಗಿ ಬಳಕೆಯಾಗುತ್ತಿದ್ದ ಕೊಡೆಗಳನ್ನು ಸೂರ್ಯನ ತಾಪದಿಂದ ಪಾರಾಗಲು ಬಳಸುತ್ತಿದ್ದಾರೆ. ಹೀಗಾಗಿ ಕೊಡೆಗಳ ಬಳಕೆ ಹೆಚ್ಚಾಗಿದೆ. ಆದರೆ ಅದರ ರಿಪೇರಿಗೆ ಮಾತ್ರ ಯಾರೂ ಬರುವುದಿಲ್ಲ. ಅದರಲ್ಲೂ ಎಲ್ಲರ ಗಮನಕ್ಕೆ ಬಾರದಂತಹ ಸ್ಥಳದಲ್ಲಿ ಹಾಳಾಗಿದ್ದರೆ ಮಾತ್ರ ಕೊಡೆಗಳನ್ನು ರಿಪೇರಿ ಮಾಡಿಸಿಕೊಳ್ಳುತ್ತಾರೆ. ಒಂದು ವೇಳೆ ಬಟ್ಟೆ ಹರಿದರೆ ಅದನ್ನು ಯಾರೂ ಬಳಸುವುದೇ ಇಲ್ಲ. ಕಾರಣ ತೇಪೆ ಹಾಕಿದ ಕೊಡೆಗಳನ್ನು ಈಗ ಯಾರೂ ಬಳಸುವುದಿಲ್ಲ. ಇದರಿಂದಾಗಿ ಕೆಲವು ವರ್ಷಗಳಿಂದ ವ್ಯಾಪಾರ ತುಂಬಾ ಕಡಿಮೆಯಾಗಿದೆ. ಹೀಗಾಗಿಯೇ ಕೊಡೆ ರಿಪೇರಿ ಮಾಡುವವರು ಈಗ ಬೆರಳೆಣಿಕೆ ಯಷ್ಟು ಮಂದಿ ಮಾತ್ರ ಸಿಗುತ್ತಾರೆ’ ಎನ್ನುತ್ತಾರೆ ಅವರು.

‘ಈಗ ವಯಸ್ಸಾಗಿರುವ ಕಾರಣ ನಾನು ಎಲ್ಲೂ ಹೋಗುವುದಿಲ್ಲ. ಚಿಕ್ಕಪೇಟೆಯ ಬಜಾರಿನಲ್ಲೇ ಕೊಡೆ ಹಾಗೂ ಬೀಗ ರಿಪೇರಿ ಮಾಡಿಕೊಂಡಿದ್ದೇನೆ. ಕಡ್ಡಿ ಹಾಗೂ ಬಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ಸ್ಟಕ್ಚರ್‌ ಹಾಳಾದ ಕೊಡೆಗಳನ್ನು ಮಾತ್ರ ನಾನು ರಿಪೇರಿ ಮಾಡುತ್ತೇನೆ. ಅದರಲ್ಲೂ ಮಾರುಕಟ್ಟೆಯಲ್ಲಿ ಈಗ ಹಳೇ ಹಾಗೂ ಹೊಸ ಕೊಡೆಗಳ ಬಿಡಿಭಾಗಗಳು ದೊರೆಯುವುದಿಲ್ಲ.

ಗ್ರಾಹಕರು ರಿಪೇರಿ ಮಾಡಿಸದೆ ಎಸೆಯುವ ಹಾಗೂ ಗುಜರಿಯಲ್ಲಿನ ಸ್ಕ್ರ್ಯಾಪ್‌ ಐಟಂನಿಂದ ದೊರೆಯುವ ಕೊಡೆಯ ಬಿಡಿಭಾಗಗಳನ್ನು ಬಳಸಿ ರಿಪೇರಿ ಕೆಲಸ ಮಾಡುತ್ತೇನೆ. ಒಂದು ಕೊಡೆ ರಿಪೇರಿಗೆ ₹40ರಿಂದ ₹50 ಪಡೆಯುತ್ತೇನೆ. ಮಳೆ ಬಂದಾಗ ನಿತ್ಯ ₹400ರಿಂದ ₹ 500 ವ್ಯಾಪಾರವಾಗುತ್ತದೆ.

ಮಳೆಗಾಲದಲ್ಲಿ ಹೆಚ್ಚಿನ ವ್ಯಾಪಾರ ವಾದರೆ, ಉಳಿದಂತೆ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆ. ಹೊಸ ಕೊಡೆಗಳನ್ನು ಖರೀದಿಸಿ ಮಾರುವವರು ಸಹ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ತಂದು ಸರಿಪಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಸದ್ಯಕ್ಕೆ ವ್ಯಾಪಾರ ಸುಮಾರಾಗಿ ನಡೆಯುತ್ತಿದೆ’ ಎಂದು ವಿವರಿಸುತ್ತಾರೆ ನಭಿ.

ಬರೀ ಕೊಡೆ ರಿಪೇರಿಯಿಂದ ಜೀವನ ಸಾಗದು ಎಂದು ಅರಿತ ಅವರು ಈಗ ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ತುತ್ತಿನ ಬುತ್ತಿ ತುಂಬಿಸಿಕೊಳ್ಳುತ್ತಿದ್ದಾರೆ. ಇಂತಹವರ ಮಧ್ಯೆಯೂ ಮೊದಲು ಅನ್ನ ನೀಡಿದ ವೃತ್ತಿಯನ್ನು ಸಾಯುವವರೆಗೂ ಬಿಡದೆ ಮುಂದುವರೆಸುವ ಕೆಲವರು ಇದ್ದಾರೆ ಎನ್ನುವುದಕ್ಕೆ ನಭಿ ಅವರೇ ಉದಾಹರಣೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.