ADVERTISEMENT

ಜಿ.ಎಸ್‌.ಸಿದ್ಧಲಿಂಗಯ್ಯ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ಜಿ.ಎಸ್‌.ಸಿದ್ಧಲಿಂಗಯ್ಯ ಅಭಿನಂದನೆ
ಜಿ.ಎಸ್‌.ಸಿದ್ಧಲಿಂಗಯ್ಯ ಅಭಿನಂದನೆ   

ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಜಿ.ಎಸ್‌. ಸಿದ್ಧಲಿಂಗಯ್ಯ ಅವರಿಗೆ ಈಗ 86 ವರ್ಷ ವಯಸ್ಸು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಸೇರಿ ಭಾನುವಾರ (ಮಾರ್ಚ್‌ 26) ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ನಿಸ್ಸೀಮ’ ಅಭಿನಂದನಾ ಗ್ರಂಥ ಸಮರ್ಪಣೆಯಾಗಲಿದೆ.

ಸಿದ್ಧಲಿಂಗಯ್ಯ ಅವರು (ಜನನ: ಫೆ.20, 1931) ತುಮಕೂರು ಜಿಲ್ಲೆಯ ಬೆಳ್ಳಾವೆಯವರು. ತಂದೆ ಶ್ರೀಕಂಠಯ್ಯ, ತಾಯಿ ಸಂಗಮ್ಮ. ಪ್ರಾಥಮಿಕ ಶಾಲೆ
ಯಲ್ಲಿ ಗುರುಗಳಾಗಿದ್ದ ಜಗ್ಗು ಶಿಂಗ್ರಯ್ಯಂಗಾರ್, ಮಾಧ್ಯಮಿಕ ಶಾಲೆಯಲ್ಲಿ  ವೆಂಕಟರಾಮಯ್ಯ, ಪ್ರೌಢಶಾಲೆಯಲ್ಲಿ ಎ.ರಾಮಚಂದ್ರ ರಾಯರಿಂದ ಇವರಿಗೆ ಸಾಹಿತ್ಯದ ಗೀಳು ಹಿಡಿಯಿತು ಎಂದು ಅವರು ನೆನಪು ಮಾಡಿಕೊಳ್ಳುತ್ತಾರೆ.

ಎಂ.ಎ. ಮುಗಿದ ಬಳಿಕ ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ತುಮಕೂರು, ಶಿವಮೊಗ್ಗ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿ ನಂತರ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ರೀಡರ್ ಆಗಿದ್ದರು. ನಂತರ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರಾಗಿ, ಆರ್.ಸಿ. ಕಾಲೇಜಿನ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅದರ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದ ಸಿದ್ಧಲಿಂಗಯ್ಯ ಅವರು ಪರಿಷತ್ತಿನ ಹಣಕಾಸಿನ ವ್ಯವಹಾರದ ಬಗ್ಗೆ  ಕೈಗೊಂಡ ನಿರ್ಣಯಗಳು ಮಹತ್ವದ್ದು.

ADVERTISEMENT

ಪ್ರಮುಖ ಕೃತಿಗಳು: ರಸಗಂಗೆ, ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ ಇವರ ಕವನ ಸಂಕಲನಗಳು. ಕವಿ ಲಕ್ಷ್ಮೀಶ, ಹೊಸಗನ್ನಡ ಕಾವ್ಯ, ರತ್ನಾಕರವರ್ಣಿ, ಪಂಚಮುಖಿ, ವಚನ ಸಾಹಿತ್ಯ ಒಂದು ಇಣುಕು ನೋಟ  ವಿಮರ್ಶಾ ಕೃತಿಗಳು. ಮಹಾನುಭಾವ ಬುದ್ಧ, ಬಸವಣ್ಣ, ವಿರತಿಯ ಸಿರಿ ಸಣ್ಣಪ್ಪನವರು, ಕಾವ್ಯಾನಂದ ಇವರ ಜೀವನ ಚಿತ್ರಣಗಳು. ‘ಪ್ರಾಗ್ಜೀವಶಾಸ್ತ್ರ’  ವಿವಿಧ ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ‘ಸಾಲು ದೀಪಗಳು’  ಸಂಪಾದಿತ ಕೃತಿ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಸಾ.ಶಿ. ಮರುಳಯ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 
 

***

ವಿಚಾರಸಂಕಿರಣ/ ಅಭಿನಂದನೆ: ಉದ್ಘಾಟನೆ– ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ, ಪುಸ್ತಕ ಪ್ರದರ್ಶನ ಉದ್ಘಾಟನೆ– ಆರ್.ಕೆ.ನಲ್ಲೂರು ಪ್ರಸಾದ್‌, ಬೆಳಿಗ್ಗೆ 10. ಗೋಷ್ಠಿ1– ವಚನಸಾಹಿತ್ಯ ಅಧ್ಯಯನ– ಡಾ.ಪಿ.ವಿ. ನಾರಾಯಣ, ಕಾವ್ಯ– ಕಾ.ವೆಂ. ಶ್ರೀನಿವಾಸಮೂರ್ತಿ, ಶೂನ್ಯ ಸಂಪಾದನೆ– ಜಯಶ್ರೀ ದಂಡೆ, ಬೆಳಿಗ್ಗೆ 11.30, ಗೋಷ್ಠಿ2, ಛಂದಸ್ಸು– ಎಂ.ಎಚ್‌. ಕೃಷ್ಣಯ್ಯ, ಜೀವನ ಹಾಗೂ ಸಾಧನೆ– ಆರ್. ಲಕ್ಷ್ಮೀನಾರಾಯಣ, ಪ್ರಾಧ್ಯಾಪಕರಾಗಿ– ಡಿ.ವಿ. ಪರಶಿವಮೂರ್ತಿ, ಮಧ್ಯಾಹ್ನ 2, ಸಂವಾದ– ಸಂಜೆ 4.

ಅಭಿನಂದನೆ: ಸಾನಿಧ್ಯ– ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ– ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ, ಅಭಿನಂದನಾ ಗ್ರಂಥ ಬಿಡುಗಡೆ– ಹಂ.ಪ.ನಾಗರಾಜಯ್ಯ, ‘ನೆನಪಿಗೊಗ್ಗರಣೆ’ ಆತ್ಮಕತೆ ಬಿಡುಗಡೆ– ಡಾ.ಎಂ. ಚಿದಾನಂದಮೂರ್ತಿ, ‘ಅಸಮಗ್ರ’ ಸಮಗ್ರ ಕಾವ್ಯ ಬಿಡುಗಡೆ– ಡಾ. ಸುಮತೀಂದ್ರ ನಾಡಿಗ, ಸಂಜೆ 6. ಸ್ಥಳ– ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಜಗಜ್ಯೋತಿ ಬಸವೇಶ್ವರ ಉಚಿತ ವಿದ್ಯಾರ್ಥಿ ನಿಲಯ, ಸರ್ವೀಸ್‌ ರಸ್ತೆ, ವಿಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.