ADVERTISEMENT

ಟೆಕ್ನೊ ಶೈಲಿಗೆ ಮಾರುಹೋಗಿ...

ಸುರೇಖಾ ಹೆಗಡೆ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಟಿ.ವಿ, ರೇಡಿಯೊ ಹಚ್ಚಿದಾಗ ಅವುಗಳಲ್ಲಿ ಪ್ರಸಾರವಾಗುವ ಇಂಪಾದ ಸಂಗೀತದಲ್ಲಿ ಮನಸ್ಸು ತಲ್ಲೀನವಾಗುತ್ತಿತ್ತು. ಶಾಲಾ ಕಾಲೇಜು ಮೆಟ್ಟಿಲು ಹತ್ತಿದರೂ ಮನದ ತುಂಬೆಲ್ಲಾ ಸಂಗೀತದ್ದೇ ಗುಂಗು. 

ಎಳವೆಯಿಂದಲೇ ಹತ್ತಿಸಿಕೊಂಡ ಸಂಗೀತ ಗೀಳಿಗೆ ಓಗೊಟ್ಟು ಎಲ್ಡಿನ್‌ ಆರಿಸಿಕೊಂಡಿದ್ದು ಡಿಜೆಯಿಂಗ್‌ ವೃತ್ತಿಯನ್ನು. ಮೊದಲಿನಿಂದಲೂ ಸಂಗೀತ ಪ್ರೀತಿ ಅವರಲ್ಲಿ ಮನೆಮಾಡಿದ್ದರಿಂದ ಅದನ್ನೇ ಬದುಕಾಗಿಸಿಕೊಳ್ಳಬೇಕು ಎಂಬುದು ಅವರ ನಿರ್ಧಾರವಾಗಿತ್ತು. ಹೀಗೆ ಸ್ನೇಹಿತರಿಂದ ಡಿಜೆಯಿಂಗ್‌ ವೃತ್ತಿ ಬಗ್ಗೆ ಅರಿತುಕೊಂಡ ಎಲ್ಡಿನ್‌ ಸ್ಪರ್ಧೆ, ಕ್ಲಬ್‌ಗಳಿಗೆ ಭೇಟಿ ನೀಡಿ ಡಿ.ಜೆ.ಗಳು ಪ್ಲೇ ಮಾಡುವ ಸಂಗೀತವನ್ನು ಆಸ್ವಾದಿಸಲಾರಂಭಿಸಿದರು.

ನಂತರ ಸ್ನೇಹಿತರೊಬ್ಬರ ಮುಖಾಂತರ ಪರಿಚಯವಾದ ಡಿ.ಜೆ. ಜೇಮ್ಸ್‌ ಅವರಿಂದ ಡಿಜೆಯಿಂಗ್‌ ಮೂಲ ಸಂಗತಿಗಳನ್ನು ಅರಿತರು. ಬಿ.ಕಾಂ. ಓದುತ್ತಿರುವಾಗಲೇ ಪಾರ್ಟ್‌ಟೈಮ್‌ ಡಿ.ಜೆ. ಆಗಿ ವೃತ್ತಿ ಪ್ರಾರಂಭಿಸಿದ ಅವರಿಗೆ ಈ ಕ್ಷೇತ್ರದಲ್ಲಿ 17 ವರ್ಷಗಳ ಅನುಭವವಿದೆ. ಕ್ಯಾಸೆಟ್‌ ಪ್ಲೇಯರ್‌ನಿಂದ ಸಿ.ಡಿ. ಪ್ಲೇಯರ್‌, ಪೆನ್‌ ಡ್ರೈವ್‌, ಲ್ಯಾಪ್‌ಟಾಪ್‌, ಮಿಕ್ಸರ್‌ ಹೀಗೆ ಬದಲಾದ ತಂತ್ರಜ್ಞಾನದೊಂದಿಗೆ ತಾನೂ ಬದಲಾಗುತ್ತಾ ಬೆಳೆದಿರುವ ಎಲ್ಡಿನ್‌ ಬಹುಬೇಡಿಕೆಯ ಡಿ.ಜೆ. ಕೂಡ ಹೌದು.

‘ಆಗ ನಾನು ಬಿ.ಕಾಂ. ಓದುತ್ತಿದ್ದೆ. ಬೆಳಿಗ್ಗೆ ತರಗತಿಗೆ ತೆರಳಿ ರಾತ್ರಿ 8ರಿಂದ 12.30ರವರೆಗೆ ಟೈಗರ್‌ ಟ್ರೇಲ್‌ ರೆಸ್ಟೊರೆಂಟ್‌ನಲ್ಲಿ ಮೊದಲ ಬಾರಿಗೆ ವೃತ್ತಿ ಪ್ರಾರಂಭಿಸಿದೆ. ಅಲ್ಲಿ ಎರಡು ವರ್ಷ ಕೆಲಸ ಮಾಡಿದೆ. ನಂತರ ರೆಸಿಡೆನ್ಸಿ ರಸ್ತೆಯಲ್ಲಿರುವ ಡೌನ್‌ಟೌನ್‌ ಪಬ್‌ನಲ್ಲಿ ಹಾಗೂ ಗೋಲ್ಡನ್‌ ಪಾಲ್ಮ್ಸ್‌ನಲ್ಲಿ ಕೆಲಸ ಮಾಡಿದೆ.

ಮೂರು ವರ್ಷ ಅಲ್ಲಿ ಕೆಲಸ ಮಾಡಿದ ನಂತರ ಫ್ಯಾಷನ್‌ ಬಾರ್‌ಗಳಲ್ಲಿ ಡಿ.ಜೆ. ಆಗಿ ಸಂಗೀತ ಸುಧೆ ಹರಿಸಿದೆ. ಎಂ.ಜಿ.ರಸ್ತೆಯಲ್ಲಿರುವ ಲೌಂಜ್‌ ಬಾರ್‌ನಲ್ಲೂ ಮೂರು ವರ್ಷ ಡಿ.ಜೆ. ಆಗಿದ್ದೆ. 2008ರಿಂದ ಫ್ರೀಲಾನ್ಸ್‌ ಡಿ.ಜೆ. ಆಗಿ ಗುರುತಿಸಿಕೊಂಡೆ. ಬೆಂಗಳೂರು, ಚೆನ್ನೈ, ಗೋವಾ, ಮುಂಬೈ ಮುಂತಾದೆಡೆ ಕಾರ್ಯಕ್ರಮ ನೀಡುತ್ತೇನೆ. ಅದೂ ಅಲ್ಲದೆ 2010ರಲ್ಲಿ ಆಫ್ರಿಕಾದ ಮುಂಬಾಜಾ ದ್ವೀಪದಲ್ಲಿ ಡಿ.ಜೆ. ಆಗಿ ಕಾರ್ಯ ನಿರ್ವಹಿಸಿದ ಸನ್ನಿವೇಶ ಹೆಚ್ಚು ಖುಷಿ ಕೊಟ್ಟಿದೆ’ ಎಂದು ತಮ್ಮ ಆಸಕ್ತಿಯ ವೃತ್ತಿ ಪಯಣದ ಬಗ್ಗೆ ವಿವರಿಸುತ್ತಾರೆ ಎಲ್ಡಿನ್‌.

ಸಂಪೂರ್ಣವಾಗಿ ತಂತ್ರಜ್ಞಾನ ಅವಲಂಬಿತವಾದ ಟೆಕ್ನೊ ಮ್ಯೂಸಿಕ್‌ ಪ್ರಕಾರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಎಲ್ಡಿನ್‌ ಕಾರ್ಯಕ್ರಮಕ್ಕೂ ಮುಂಚೆ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಅನೇಕ ಹಾಡುಗಳನ್ನು ಕೇಳಿ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಎಂಥ ಕಾರ್ಯಕ್ರಮಗಳಿಗೆ ಯಾವ ಹಾಡು ಸರಿಹೊಂದುತ್ತದೆ ಎಂದು ಅವುಗಳನ್ನು ಜೋಡಿಸಿಕೊಳ್ಳುತ್ತಾರೆ. ತಾನು ನೀಡುವ ಸಂಗೀತ ವಿಭಿನ್ನವಾಗಿರಬೇಕು ಎನ್ನುವ ಕಾರಣಕ್ಕೆ ಅಲ್ಲಲ್ಲಿ ಎಫೆಕ್ಟ್ಸ್‌, ಸೌಂಡ್ಸ್‌ಗಳನ್ನು ಮಿಶ್ರಣ ಮಾಡಿ ನೀಡುತ್ತಾರೆ.

‘ಎಲ್ಲ ಡಿ.ಜೆ.ಗಳೂ ತಮ್ಮದೇ ಆದ ವಿಶೇಷ ಶೈಲಿಯ ಸಂಗೀತ ನೀಡುವುದನ್ನು ರೂಢಿಸಿಕೊಂಡಿರುತ್ತಾರೆ. ಅಲ್ಲದೆ ನಮಗೆ ಅನುಯಾಯಿಗಳು ಕೂಡ ಇರುತ್ತಾರೆ. ಅವರಿಗೆ ಬೇಕಾದಂಥ ಸಂಗೀತವನ್ನು ನಾವು ನೀಡಿ ಖುಷಿಪಡಿಸಬೇಕು. ಅದೂ ಅಲ್ಲದೆ ಇಂದಿನ ಜನತೆ ಎಲ್ಲವನ್ನೂ ಅರಿತುಕೊಂಡಿರುತ್ತಾರೆ. ಎಂಥ ಸಂಗೀತ ತಮಗೆ ಹೆಚ್ಚು ರುಚಿಸುತ್ತದೆ ಎಂಬುದೂ ಅವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಎಂಥ ಕ್ರೌಡ್‌ ಇದೆ ಎನ್ನುವುದನ್ನು ಗಮನಿಸಿ ಡಿ.ಜೆ. ಆದವನು ಜಾಣ್ಮೆ ಮೆರೆಯಬೇಕಾಗುತ್ತದೆ’ ಎಂದು ಅನುಭವದ ಬುತ್ತಿ ಬಿಚ್ಚಿಡುತ್ತಾರೆ ಎಲ್ಡಿನ್‌.

ಪ್ರತಿ ಕ್ಷೇತ್ರದಲ್ಲೂ ಬದಲಾವಣೆಯ ಪರ್ವ ಇರುವಂತೆ ಡಿಜೆಯಿಂಗ್‌ ಕ್ಷೇತ್ರವೂ ಅಂದಂದಿನ ಬದಲಾವಣೆಗೆ ತೆರೆದುಕೊಳ್ಳುತ್ತಲೇ ಹೋಗುತ್ತಿದೆ. ಹಾಗೆಯೇ ಡಿ.ಜೆ. ಆದವನೂ ಅಪ್‌ಡೇಟ್‌ ಆಗಲೇಬೇಕು ಎಂದು ಅರಿತಿರುವ ಎಲ್ಡಿನ್‌, ತಂತ್ರಜ್ಞಾನದ ಬಗ್ಗೆಯೂ ಸಾಕಷ್ಟೂ ಮಾಹಿತಿ ಕಲೆ ಹಾಕಿ ಅಪ್‌ಡೇಟ್‌ ಆಗುತ್ತಿರುತ್ತಾರೆ.

ಕಳೆದ 17 ವರ್ಷಗಳಿಂದ ಇದೇ ಕ್ಷೇತ್ರದಲ್ಲಿರುವ ಎಲ್ಡಿನ್‌ ಬದಲಾವಣೆಗಳನ್ನು ತೀರಾ ಸೂಕ್ಷ್ಮವಾಗಿ ಗುರುತಿಸಿದ್ದಾರೆ. ‘ಇತ್ತೀಚೆಗೆ ಡಿಜೆಯಿಂಗ್‌ ಸುಲಭವಾಗುತ್ತಿದೆ. ಆನ್‌ಲೈನ್‌ಗಳ ಮೂಲಕ ಹಾಡು ಕೇಳಿ, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ತಂತ್ರಜ್ಞಾನವೂ ಬಳಕೆದಾರರ ಸ್ನೇಹಿಯಾಗಿದೆ. ಅದೂ ಅಲ್ಲದೆ ಆ ಕಾಲದಲ್ಲಿ ರೆಟ್ರೊ, ರಾಕ್‌, ರೆಗೆ ಹಾಗೂ ಟ್ರಾನ್ಸ್‌ನಂತಹ ಕೆಲವೇ ಕೆಲವು ಸಂಗೀತ ಪ್ರಕಾರಗಳು ಜನಪ್ರಿಯವಾಗಿದ್ದವು. ಈಗ ಲೆಕ್ಕವಿಲ್ಲದಷ್ಟು ಸಂಗೀತ ಶೈಲಿಗಳು ಜನರ ಮನಸ್ಸನ್ನು ಆಕ್ರಮಿಸಿವೆ. ಹಾಗಾಗಿಯೇ ಈ ಕ್ಷೇತ್ರಕ್ಕೂ ಲಗ್ಗೆ ಇಟ್ಟಿವೆ.

ತಂತ್ರಜ್ಞಾನದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಟೆಕ್ನೊ ಹಾಗೂ ಟ್ರಾನ್ಸ್‌ ಸಂಗೀತ ಶೈಲಿಯತ್ತ ಜನ ಆಕರ್ಷಿತರಾಗುತ್ತಿದ್ದು, ಈಡಿಯಂ ಶೈಲಿ ನಿಧಾನವಾಗಿ ಪ್ರಾಶಸ್ತ್ಯ ಕಳೆದುಕೊಳ್ಳುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ. ತನ್ನೀ ವೃತ್ತಿಗೆ ಕೌಟುಂಬಿಕ ಬೆಂಬಲ ಚೆನ್ನಾಗಿದೆ ಎಂದು ಹಿಗ್ಗುವ ಎಲ್ಡಿನ್‌ ಪ್ರಕಾರ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಸಾಕಷ್ಟು ಅವಕಾಶಗಳಿವೆ. ಅನೇಕರು ರೆಸ್ಟೊರೆಂಟ್‌ ಅಥವಾ ಕ್ಲಬ್‌, ಪಬ್‌ಗಳಲ್ಲಿ ಖಾಯಂ ವೃತ್ತಿಯಾಗಿ ಡಿಜೆಯಿಂಗ್‌ ಮಾಡುತ್ತಾರೆ. ಅಂಥವರಿಗೆ ತಿಂಗಳ ಲೆಕ್ಕದಲ್ಲಿ ಸಂಬಳ ಸಿಗುತ್ತದೆ.

ಆದರೆ ಫ್ರೀಲಾನ್ಸ್‌ ಡಿಜೆಯಿಂಗ್‌ ಮಾಡುವವರಿಗೆ ಅವರ ಕಾಂಟ್ಯಾಕ್ಟ್‌, ಎಷ್ಟು ಕಾರ್ಯಕ್ರಮ ಸಿಗುತ್ತದೆ ಎನ್ನುವುದರ ಮೇಲೆ ಸಂಬಳ ನಿಗದಿಯಾಗುತ್ತದೆ. ಆದರೂ ಜನಪ್ರಿಯತೆ ಸಿಗುತ್ತಿದ್ದಂತೆ ಚೆನ್ನಾಗಿ ಸಂಪಾದನೆಯನ್ನೂ ಮಾಡಬಹುದು ಎಂಬುದು ಅವರ ಗಟ್ಟಿ ಅನುಭವದ ಮಾತು.  

***
ಸಂಗೀತದ ಮೂಲಕ ಪಬ್‌, ಕ್ಲಬ್‌ಗಳಲ್ಲಿ ಭಾಗವಹಿಸುವವರಿಗೆ ಖುಷಿ ನೀಡುವ ಎಲ್ಡಿನ್‌, ಟೆಕ್ನೊ ಹಾಗೂ ಡೀಪ್‌ ಹೌಸ್‌ ಶೈಲಿಯ ಸಂಗೀತವನ್ನೇ ಹೆಚ್ಚು ನುಡಿಸುತ್ತಾರೆ. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಡಿ.ಜೆ. ವೃತ್ತಿಗೆ ಅತ್ಯಗತ್ಯವಾದ ಸಂಗೀತ ಜ್ಞಾನ ತನ್ನಲ್ಲಿದೆ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.