ADVERTISEMENT

ತಾರಾಲೋಕದ ಹೋಳಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:30 IST
Last Updated 6 ಮಾರ್ಚ್ 2015, 19:30 IST
ತಾಪಸಿ ಪನ್ನು
ತಾಪಸಿ ಪನ್ನು   

ಬಣ್ಣಗಳ ಹಬ್ಬ ಹೋಳಿ. ಎತ್ತ ನೋಡಿದರೂ ಕೇವಲ ಬಣ್ಣಗಳೇ. ಅದರಲ್ಲೂ ಜನರನ್ನು ರಂಜಿಸಲು ನಿತ್ಯ ಬಣ್ಣ ಹಚ್ಚುವ ಬಿ–ಟೌನ್‌ ನಟ ನಟಿಯರು ಹೋಳಿ ಹಬ್ಬದಂದು ಎಲ್ಲವನ್ನು ಮರೆತು ಬಣ್ಣದಲ್ಲಿ ಮಿಂದೇಳುತ್ತಾರೆ. ಎಲ್ಲ ದುಃಖವನ್ನು ಮರೆಸುವ ಬಣ್ಣಗಳ ಹಬ್ಬ ಬಿ–ಟೌನ್‌ನ ನಟ–ನಟಿಯರಿಗೆ ನಿಜಕ್ಕೂ ದೊಡ್ಡ ಹಬ್ಬ. ಎಲ್ಲರೂ ಒಂದೆಡೆ ಸೇರಿ ಬಣ್ಣ ಹಚ್ಚಿ ಶುಭಾಶಯ ಕೋರುವ ಸ್ಟಾರ್‌ಗಳು ಸಂಭ್ರಮದಿಂದ ಹೋಳಿ ಪಾರ್ಟಿ ಆಚರಿಸುತ್ತಾರೆ.

ನಟ–ನಟಿಯರ ವಾರಾಂತ್ಯ ನಿಜಕ್ಕೂ ಕಲರ್‌ಫುಲ್‌ ಆಗಿರುತ್ತದೆ. ಅದರಲ್ಲೂ ಈ ಬಾರಿ ವಾರಾಂತ್ಯದಲ್ಲಿ ಹೋಳಿ ಬಂದಿದ್ದರಿಂದ ಬಣ್ಣದಾಟ ಕಳೆಗಟ್ಟಿದೆ.

ಬಿಪಾಶಾ ಬಸು ಹಾಗೂ ಟೈಗರ್ ಶ್ರಾಫ್: ನಟಿ ಬಿಪಾಶ ಹಾಗೂ ನಟ ಟೈಗರ್‌ ಶ್ರಾಫ್‌ ಹೋಳಿ ಆಚರಿಸುವುದಿಲ್ಲವಂತೆ. ಹಾಟ್‌ ಬೇಬಿ ಬಿಪ್ಸ್‌ಗೆ ಬಣ್ಣ ಎಂದರೆ ಅಲರ್ಜಿ. ಅದಕ್ಕಾಗಿ ತಾನು ಹೋಳಿ ಆಡುವುದಿಲ್ಲ ಎನ್ನುತ್ತಾರೆ. ಇನ್ನು ಚಾಕೊಲೇಟ್‌ ಹಿರೋ ಟೈಗರ್‌ ಶ್ರಾಫ್‌ ಸಹ ಹೋಳಿ ಆಡುವುದಿಲ್ಲವಂತೆ. ‘ಶ್ರಮಪಟ್ಟು ಕೆಲಸ ಮಾಡುವ ಮೂಲಕ ನನ್ನ ಪೋಷಕರ ಜೀವನದಲ್ಲಿ ಬಣ್ಣ ತುಂಬುತ್ತೇನೆ. ಅದೇ ನನಗೆ ನಿಜವಾಗಿ ಹೋಳಿ’ ಎಂದು ಅವರು ಹೇಳಿದ್ದಾರೆ.

ಸುಶಾಂತ್‌ ಸಿಂಗ್‌: ‘ಈ ವರ್ಷ ನಾನು ‘ಡರ್ಟಿ’ ಹೋಳಿ ಆಚರಿಸಲಿದ್ದೇನೆ. ನಾನು, ನನ್ನ ಗೆಳತಿ ಅಂಕಿತಾ ಹಾಗೂ ಆಪ್ತ ಸ್ನೇಹಿತರೊಂದಿಗೆ ಲಾವಾಸ್‌ನಲ್ಲಿ ಹೋಳಿ ಆಚರಿಸಲಿದ್ದೇನೆ’ ಎಂದಿದ್ದಾರೆ.

ಆಯುಷ್ಮಾನ್‌ ಖುರಾನ: ‘ಹೋಳಿ ಎಂದರೆ ಆಪ್ತ ಸ್ನೇಹಿತರೊಂದಿಗೆ ಸೇರಿ ರುಚಿಕರ ಖಾದ್ಯಗಳನ್ನು ಸವಿದು, ತಮಾಷೆ

ಹಾಗೂ ನೃತ್ಯ ಮಾಡುತ್ತಾ ಎಂಜಾಯ್‌ ಮಾಡುವುದು. ಹೋಳಿ ಹಬ್ಬದಲ್ಲಿ ಮಾತ್ರ ಎಲ್ಲರೂ ಬಣ್ಣ ಹಚ್ಚಿಕೊಳ್ಳುವುದರಿಂದ ಯಾರೂ ನಮ್ಮನ್ನು ಸೆಲೆಬ್ರಿಟಿಗಳು ಎಂದು ಗುರುತಿಸುವುದಿಲ್ಲ. ಬಣ್ಣ ಹಚ್ಚಿದಾಗ ಎಲ್ಲರೂ ಒಂದೇ ರೀತಿ ಕಾಣುತ್ತಾರೆ. ಚಂಡಿಗಡದಲ್ಲಿರುವ ತೋಟದ ಮನೆಯಲ್ಲಿ ಈ ಬಾರಿ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹೋಳಿ ಆಚರಿಸುತ್ತಿದ್ದೇನೆ’ ಎಂದು ಖುರಾನ ತಮ್ಮ ಹೋಳಿ ಸಂಭ್ರಮ ಹಂಚಿಕೊಂಡಿದ್ದಾರೆ.

ಅರ್ಜುನ್‌ ರಾಮ್‌ಪಾಲ್‌: ಕುಟುಂಬದ ಸದಸ್ಯರೊಂದಿಗೆ ಹೋಳಿ ಬಣ್ಣದಾಟ ಅರ್ಜುನ್‌ ಆರಿಸಿಕೊಂಡ ದಾರಿ.

ತಾಪಸಿ ಪನ್ನು: ‘ದೇಶದಲ್ಲಿ ಹೋಳಿಯನ್ನು ಆಚರಿಸುವ ಬಗೆ ನನಗೆ ಅಷ್ಟು ಇಷ್ಟವಿಲ್ಲ. ಎಲ್ಲರೂ ಹೇಳುವಂತೆ ನನಗೆ ಈ ಆಚರಣೆಯಲ್ಲಿ ಅಷ್ಟೊಂದು ಸಂಭ್ರಮ ಹಾಗೂ ಸಂತೋಷ ಕಾಣುವುದಿಲ್ಲ. ಜನರಿಗೆ ಇಷ್ಟವಾದಂತೆ ನಡೆದುಕೊಳ್ಳಲು ಇರುವ ಒಂದು ಕಾರಣವಿದು ಎಂದೆನಿಸುತ್ತದೆ. ನಾನು, ನನ್ನ ತಂಗಿ ಹಾಗೂ ಕೆಲ ಸ್ನೇಹಿತರು ಪರಸ್ಪರ ಸಾವಯವ ಗುಲಾಲ್‌ ಹಚ್ಚುವ ಮೂಲಕ ಖುಷಿ ಪಡುತ್ತೇವೆ. ರಾತ್ರಿ ಹೊರಗೆ ಊಟ ಮಾಡುತ್ತೇವೆ’ ಎಂದು ತಾಪಸಿ ತಮ್ಮ ವಿಚಾರಲಹರಿ ತೇಲಿಬಿಟ್ಟಿದ್ದಾರೆ.

ನಿಮ್ರತ್ ಕೌರ್‌: ‘ಇತ್ತೀಚೆಗೆ ವಿವಾಹವಾದ ನನ್ನ ಇಬ್ಬರು ಸ್ನೇಹಿತರು ರೈನ್‌ ಡಾನ್ಸ್‌ ಪಾರ್ಟಿ ಆಯೋಜಿಸಿದ್ದು, ಅಲ್ಲಿಗೆ ಹೋಗುತ್ತಿದ್ದೇನೆ. ವಿವಾಹದ ಮೊದಲ ಹೋಳಿ ಹಬ್ಬವಾದ್ದರಿಂದ ಎಲ್ಲರೂ ಅವರೊಂದಿಗೆ ಹಬ್ಬ ಆಚರಿಸುತ್ತೇವೆ. ಅದರಲ್ಲೂ ರಾಸಾಯನಿಕ ಮುಕ್ತ ಬಣ್ಣಗಳನ್ನು ಮಾತ್ರ ಬಳಸುತ್ತೇವೆ’ ಎಂದು ನಿಮ್ರತ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.