ADVERTISEMENT

ದೇಹದ ಅಂದಕೆ ಸ್ಟಡ್‌ ಮೆರುಗು

ಹರವು ಸ್ಫೂರ್ತಿ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಬಿ.ರಾಜು
ಬಿ.ರಾಜು   

ಬಹುಜನ ಸಂಸ್ಕೃತಿಯನ್ನು ಒಳಗೊಂಡಿರುವ ಬೆಂಗಳೂರು ನಗರದಲ್ಲಿ ಹಲವು ಬಗೆಯ ಫ್ಯಾಷನ್ ಟ್ರೆಂಡ್‌ಗಳು ಸದಾ ಚಾಲ್ತಿಯಲ್ಲಿರುತ್ತವೆ. ಎಂ.ಜಿ.ರಸ್ತೆ ಸುತ್ತಮುತ್ತಲ ಬ್ರಿಗೇಡ್ ರಸ್ತೆ, ಕಮರ್ಷಿಯಲ್‌ ರಸ್ತೆಗಳು ಸಾಮಾನ್ಯವಾಗಿ ಇಂಥ ಟ್ರೆಂಡ್‌ಗಳ ಉಗಮ ಸ್ಥಾನ. ಈ ರಸ್ತೆಯಲ್ಲಿ ಓಡಾಡುವ ಯುವಕರು ಧರಿಸಿದ್ದೆಲ್ಲಾ  ಫ್ಯಾಷನ್‌. ನಂತರದ ದಿನಗಳಲ್ಲಿ ಇಡೀ ನಗರ ಅದನ್ನು ಅನುಸರಿಸುವುದು ವಾಡಿಕೆ.

ಬಗೆಬಗೆಯ ದಿರಿಸು, ಕೈಗೆ ಹಾಕುವ ಬ್ಯಾಂಡ್‌, ಓಲೆ, ಕನ್ನಡಕ ಹೀಗೆ ಎಲ್ಲ ವಸ್ತುಗಳಲ್ಲೂ ಫ್ಯಾಷನ್ ಅಡಕ. ಅಂತರರಾಷ್ಟ್ರೀಯ ಬ್ರ್ಯಾಂಡ್‌ನ ವಸ್ತುಗಳು ಲಭ್ಯ. ಈ ಥಳುಕುಬಳುಕಿನ ರಸ್ತೆಗಳಲ್ಲಿ ಸಂಚರಿಸುವಾಗ ಗೂಡಂಗಡಿಗಳಲ್ಲಿರುವ ಕಿವಿ ಚುಚ್ಚುವವರು ಗಮನ ಸೆಳೆಯುತ್ತಾರೆ.

ಕಮರ್ಷಿಯಲ್ ಸ್ಟ್ರೀಟ್‌ನ ಮೊದಲ ಬಲ ತಿರುವಿನಲ್ಲಿರುವ ಕಲ್ಯಾಣ್ ಸೀರೆ ಅಂಗಡಿ ಎದುರಿನ ಬೀದಿಯು ಚಿನ್ನ–ಬೆಳ್ಳಿಗಳಿಂದ ಆಭರಣ ತಯಾರಿಸುವ ಕುಶಲಕರ್ಮಿಗಳಿಂದ ತುಂಬಿದೆ. ಗಲ್ಲಿಗಳಲ್ಲಿರುವ ಪುಟ್ಟ ಗೂಡಂಗಡಿಗಳಲ್ಲಿ ಕುಶಲಕರ್ಮಿಗಳು ಅನೇಕ ವರ್ಷಗಳಿಂದ ಬದುಕು ಕಂಡುಕೊಂಡಿದ್ದಾರೆ.

ಎಲ್ಲಾ ಅಂಗಡಿಗಳ ಎದುರಲ್ಲೂ ಪಿಯರ್ಸಿಂಗ್‌ (piercing), ಗನ್‌ಶಾಟ್‌, ಟ್ಯಾಟೊ ಎಂಬ ಫಲಕ ಕಾಣಬಹುದು. ಇವರಲ್ಲಿ ನುರಿತರು ಸೈಮನ್‌ ಜಾನ್. ತಮ್ಮ ತಾತ ಮತ್ತು ತಂದೆಯಿಂದ ಕಿವಿಚುಚ್ಚುವ ಕಲೆ ಕಲಿತವರು ಇವರು. 40 ವರ್ಷಗಳಿಂದ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬಳಿ ಪ್ರತಿದಿನ ಐದರಿಂದ ಹತ್ತು ಜನ ಕಿವಿ ಚುಚ್ಚಿಸಿಕೊಳ್ಳುವುದಕ್ಕೆ ಬರುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ತುಸು ಹೆಚ್ಚುವುದು ವಾಡಿಕೆ. ‘ಕೆಲ ವರ್ಷಗಳ ಹಿಂದೆ ಕಿವಿ ಚುಚ್ಚಿಸಿಕೊಳ್ಳುವುದು ದೊಡ್ಡ ಫ್ಯಾಷನ್‌ ಆಗಿತ್ತು.

ಒಂದೇ ಕಿವಿಗೆ ಹತ್ತು ಓಲೆಗಳನ್ನು ಒಮ್ಮೆಲೆ ಹಾಕಿಕೊಳ್ಳುವ ಟ್ರೆಂಡ್ ಸಹ ಚಾಲ್ತಿಯಲ್ಲಿ ಇತ್ತು. ದಿನಕ್ಕೆ ಕನಿಷ್ಠ 20 ಜನರಾದರೂ ಕಿವಿ ಚುಚ್ಚಿಸಿಕೊಳ್ಳುತ್ತಿದ್ದರು. ಈಗ ಈ ಸಂಖ್ಯೆ ಕಡಿಮೆಯಾಗಿದೆ’ ಎನ್ನುತ್ತಾರೆ ಜಾನ್.

ಚುಚ್ಚುವ ಕಲೆ
ಕಿವಿ ಚುಚ್ಚುವುದು ಒಂದು ಕಲೆ. ಕಿವಿಯನ್ನು ಹೇಗೆಂದರೆ ಹಾಗೆ ಚುಚ್ಚಲು ಸಾಧ್ಯವಿಲ್ಲ. ನರದ ಮೇಲೆ ಚುಚ್ಚಿದರೆ, ಗಾಯ ಮಾಯುವುದು ಕಷ್ಟ. ಚುಚ್ಚಿದ ತೂತಿನ ಬಳಿ ನರ ಉಬ್ಬಿ ಗಂಟಾಗುವ ಸಮಸ್ಯೆಗಳೂ ಇವೆ. ‘ನಾನು ಹಲವು ವರ್ಷಗಳಿಂದ ಕಿವಿ ಚುಚ್ಚುತ್ತಿರುವುದರಿಂದ ಹೇಗೆ ಚರ್ಚ ಹಿಡಿಯಬೇಕು, ಎಲ್ಲಿ ಚುಚ್ಚಬೇಕು ಎಂಬ ಬಗ್ಗೆ ತಿಳಿದಿದೆ. ಚುಚ್ಚುವ ಮೊದಲು ಗುರುತು ಹಾಕುವುದು ಕೂಡ ಮುಖ್ಯ, ಸ್ವಲ್ಪ ಹೆಚ್ಚು ಕಮ್ಮಿಯಾದರೂ ಓಲೆ ಮೇಲೆ ಕೆಳಗೆ ಆಗುತ್ತದೆ. ಅದು ಲಕ್ಷಣವಾಗಿ ಕಾಣುವುದಿಲ್ಲ’ ಎನ್ನುತ್ತಾರೆ ಜಾನ್.

ಕಿವಿ ಚುಚ್ಚುವ ಪರಿಕರಗಳ ಆಯ್ಕೆ ಮತ್ತು ಅದರ ಶುಚಿತ್ವ ಕೂಡ ಮುಖ್ಯ. ಒಬ್ಬರಿಗೆ ಚುಚ್ಚಿದ ಸೂಜಿಯಿಂದ ಮತ್ತೊಬ್ಬರಿಗೆ ಚುಚ್ಚಬಾರದು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

‘ಈ ಮೊದಲು ಗೊಬ್ಬಳಿ ಮುಳ್ಳು, ನಿಂಬೆ ಮುಳ್ಳು ಅಥವ ಚಿನ್ನದ ಸೂಜಿಯಿಂದ ಕಿವಿ ಚುಚ್ಚುತ್ತಿದ್ದರು, ನಂತರ ಗನ್‌ಶೂಟ್‌ ಬಂತು ಆದರೂ ಜನ ಚುಚ್ಚಿಸಿಕೊಳ್ಳುವುದಕ್ಕೆ ಹೆದರುತ್ತಾರೆ. ಇದಕ್ಕೆ ನೋವು ಮತ್ತು ಸೋಂಕಿನ ಭಯ ಕಾರಣ. ಹೀಗಾಗಿ ದಂತ ವೈದ್ಯರು ಬಳಸುವ ಲೋಕಲ್ ಅನಸ್ತೇಶಿಯಾ ಜೆಲ್ ಬಳಸಿ ಕಿವಿ ಚುಚ್ಚುವ ಪದ್ಧತಿಯನ್ನು ಇಲ್ಲಿ ಅನುಸರಿಸಲಾಗುತ್ತಿದೆ.

ಸರ್ವಾಂಗಕ್ಕೂ ಸಲ್ಲುವ ಸ್ಟಡ್‌
ಕಿವಿ ಮತ್ತು ಮೂಗು ಚುಚ್ಚಿಸಿಕೊಂಡು ಆಭರಣ ಧರಿಸುವ ವಾಡಿಕೆ ಇತ್ತು. ಕೆಲ ವರ್ಷಗಳ ಹಿಂದೆ ಹುಬ್ಬು, ಹೊಕ್ಕಳು, ನಾಲಿಗೆ, ಮೂಗಿನ ತುದಿ, ಭುಜ, ತುಟಿ ಹೀಗೆ ಎಲ್ಲೆಂದರಲ್ಲಿ ಸ್ಟಡ್‌ ಹಾಕಿಕೊಳ್ಳುವ ಫ್ಯಾಷನ್‌ ಬೆಳೆಯಿತು. ನಂತರದ ದಿನದಲ್ಲಿ ಅದು ಕಡಿಮೆಯಾಯಿತು. ಈಗ ಮೂಗಿನ ಎರಡೂ ಬದಿಗೆ ಚುಚ್ಚಿಸಿಕೊಳ್ಳುವುದು ಫ್ಯಾಷನ್‌ ಆಗಿದೆ. ಹುಡುಗ ಹುಡುಗಿಯರು ಎಂಬ ಬೇಧವಿಲ್ಲದೆ ಎಲ್ಲರೂ ಸ್ಟಡ್‌ಗಳ ಆಸೆಗೆ ಮಾರು ಹೋಗಿದ್ದಾರೆ.

ನಾಲಿಗೆಗೂ ಸ್ಟಡ್
‘ನಾನು ಮೊದಲು ಕಣ್ಣು, ಹುಬ್ಬು ಮತ್ತು ನಾಲಿಗೆಗೆ ಚುಚ್ಚುತ್ತಿದೆ. ಆದರೆ ಈಗ ಮೂಗು ಮತ್ತು ಕಿವಿಗೆ ಮಾತ್ರ ಚುಚ್ಚುತ್ತೇನೆ. ನಮ್ಮ ಪರಂಪರೆಯಲ್ಲಿ ಹಿಂದಿನಿಂದಲೂ ಕಿವಿ ಮತ್ತು ಮೂಗಿಗೆ ಮಾತ್ರ ಚುಚ್ಚುತ್ತೇವೆ ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ಬಿ.ರಾಜು.

‘ಕೆಲವರು ನಾಲಿಗೆಗೆ ಚುಚ್ಚಿಸಿಕೊಳ್ಳುತ್ತಾರೆ. ಅದರ ನೋವು ಸಹಿಸಲು ಅಸಾಧ್ಯ. ಅನಸ್ತೇಶಿಯಾ ಬಳಸಿದರೂ ಹಲವರು ಹೆದರುತ್ತಾರೆ. ಒಂದು ಕಡೆ ಮಾತ್ರ ಚುಚ್ಚಿಸಿಕೊಂಡು ಹೆದರಿ ಹೊರಟು ಹೋಗುತ್ತಾರೆ. ಹಲವರಿಗೆ ನಾನೇ ಧೈರ್ಯ ಹೇಳಿದ್ದೇನೆ. ಹೆಣ್ಣುಮಕ್ಕಳು ಮೊದಲು ಹೆದರುತ್ತಾರೆ ಆಮೇಲೆ ನಿರಾಳವಾಗಿ ಚುಚ್ಚಿಸಿಕೊಳ್ಳುತ್ತಾರೆ. ಆದರೆ ಹುಡುಗರು ಮೊದಲು ಧೈರ್ಯವಂತರಂತೆ ಕೂತಿರುತ್ತಾರೆ. ಒಂದು ಬದಿ ಚುಚ್ಚಿದ ಕೂಡಲೇ ಸಾಕು ಎಂದು ಎದ್ದು ಬಿಡುತ್ತಾರೆ’ ಎನ್ನುತ್ತಾರೆ ಜಾನ್.

ಕಿವಿಚುಚ್ಚುವ ಕಲೆ ಮುಂದುವರಿಕೆ ಬಗ್ಗೆ ಆಸಕ್ತಿ ಇಲ್ಲದಂತೆ ಮಾತನಾಡುವ ಜಾನ್‌ ‘ತಿಂಗಳಿಗೆ ₹ 20 ರಿಂದ 30 ಸಾವಿರ ಸಂಪಾದನೆ ಇದೆ. ಆದರೆ ಜೀವನ ನಿರ್ವಹಣೆಗೆ ಇದು ಸಾಲದು. ಎಷ್ಟೋ ದಿನ ನಮಗೆ ಕೆಲಸವಿರುವುದಿಲ್ಲ. ನಮ್ಮ ಮಕ್ಕಳು ಈ ವಿದ್ಯೆ ಕಲಿತು ಸಂಪಾದಿಸುವುದು ಕಷ್ಟ’ ಎಂದು ಅಭಿಪ್ರಾಯಪಡುತ್ತಾರೆ. 

ಬಗೆಬಗೆ ವಿನ್ಯಾಸ
ಕಿವಿ, ಮೂಗಿಗೆ ಬಳಸುವ ಸ್ಟಡ್‌ಗಳ ವಿನ್ಯಾಸ ಒಂದನ್ನು ಮತ್ತೊಂದು ಮೀರಿಸುವಂತೆ ಇದೆ. ಕಪ್ಪಾಗಿಸಿದ ಬೆಳ್ಳಿಯ ಆಭರಣಗಳು ಇಂದಿನ ಫ್ಯಾಷನ್. ಹರಳಿನ ಓಲೆಗಿಂತ ಮ್ಯಾಕ್ಟ್ರಿಕ್ಸ್‌ ವಿನ್ಯಾಸದ ಸ್ಟಡ್‌ಗಳು ಹೆಚ್ಚು ಜನಪ್ರಿಯವಾಗಿವೆ. ತುಟಿ, ಹುಬ್ಬು, ಹೊಕ್ಕಳು, ಕೆನ್ನೆ ಹೀಗೆ ಬೇರೆಬೇರೆ ವಿನ್ಯಾಸ ಮತ್ತು ತಿರುಪಿನ ಸ್ಟಡ್‌ಗಳು ಲಭ್ಯ.

***
ಹೆಣ್ಮಕ್ಕಳೇ ಸ್ಟ್ರಾಂಗ್
ಕಿವಿ ಅಥವಾ ಮೂಗು ಚುಚ್ಚಿಸಿಕೊಳ್ಳಲು ಬರುವ ಹೆಣ್ಣುಮಕ್ಕಳು ಮೊದಲು ಹೆದರುತ್ತಾರೆ. ಆಮೇಲೆ ನಿರಾಳವಾಗಿ ಚುಚ್ಚಿಸಿಕೊಳ್ಳುತ್ತಾರೆ. ಆದರೆ ಹುಡುಗರು ಆರಂಭದಲ್ಲಿ ಧೈರ್ಯವಂತರಂತೆ ಕೂತಿರುತ್ತಾರೆ. ಆದರೆ, ಒಂದು ಬದಿ ಚುಚ್ಚಿದ ಕೂಡಲೇ ಸಾಕು ಎನ್ನುತ್ತಾ ಎದ್ದು ಬಿಡುತ್ತಾರೆ.
-ಜಾನ್, ಕಿವಿ ಚುಚ್ಚುವ ಕುಶಲಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.