ADVERTISEMENT

ನಡುವೆ ಸುಳಿವಾತ್ಮ...

ಸಂದರ್ಶನ

ಮಂಜುಶ್ರೀ ಎಂ.ಕಡಕೋಳ
Published 19 ಮೇ 2017, 19:30 IST
Last Updated 19 ಮೇ 2017, 19:30 IST
ಫೌಜೆ ಜಲಾಲಿ
ಫೌಜೆ ಜಲಾಲಿ   

* ನಿಮ್ಮ  ಹೊಸ ನಾಟಕ ‘ಶಿಖಂಡಿ’ ಬಗ್ಗೆ ಹೇಳಿ...
ಮಹಾಭಾರತ ಆಧರಿತ ದೇವದತ್ತ ಪಟ್ನಾಯಕ್ ಅವರ ‘ಪ್ರೆಗ್ನೆಂಟ್ ರಾಜ’   ಕೃತಿ ಓದುತ್ತಿದ್ದಾಗ ಅದರಲ್ಲಿನ ಒಂದು ಪಾತ್ರ ‘ಶಿಖಂಡಿ’ ಬಹಳ ಗಮನ ಸೆಳೆಯಿತು. ಅದೇ ಸಮಯಕ್ಕೆ ಮಹಾಭಾರತವನ್ನೂ ಓದಿದೆ. ಹುಟ್ಟುವಾಗ ಹೆಣ್ಣಾಗಿ, ನಂತರ ಗಂಡಾಗಿ ಪರಿವರ್ತನೆಯಾದ ‘ಶಿಖಂಡಿ’ ಪಾತ್ರ ತೀವ್ರವಾಗಿ ಕಾಡತೊಡಗಿತು. ಹಿಂದಿನ ಜನ್ಮದಲ್ಲಿ ಅಂಬಾ ಆಗಿದ್ದ ಶಿಖಂಡಿ ಅನುಭವಿಸುವ ಸ್ವಗತ ಏನಿದ್ದಿರಬಹುದು ಎಂಬುದನ್ನು ರಂಗಕ್ಕೆ ತರಬೇಕೆಂಬ ಆಸೆಯಾಯಿತು. ಆಗ ರೂಪುಗೊಂಡಿದ್ದೇ ಈ ನಾಟಕ.

* ‘ಶಿಖಂಡಿ’ ವಿವಿಧ ಹಂತಗಳಲ್ಲಿ ಬದಲಾವಣೆ ಕಂಡಿದೆ ಅಲ್ಲವೇ?
ಹೌದು. 2014ರಲ್ಲಿ ರಂಗ ಕಾರ್ಯಾಗಾರವೊಂದರ ಭಾಗವಾಗಿ ಈ ನಾಟಕ ಹುಟ್ಟಿತು. ಆಗ ಅದನ್ನು ಏಕವ್ಯಕ್ತಿ ಪ್ರಯೋಗ ಮಾಡಿದ್ದೆ. ಪ್ರಬಲ ಪಾತ್ರವಾಗಿದ್ದ ಶಿಖಂಡಿಯನ್ನು ಮತ್ತಷ್ಟು ಬೆಳೆಸಬೇಕೆಂದು 2015ರಲ್ಲಿ ನಾಟಕವನ್ನು ಮತ್ತಷ್ಟು ವಿಸ್ತರಿಸಿದೆ. 2016ರಲ್ಲಿ ನಾಟಕ ಪೂರ್ಣ ಹಂತಕ್ಕೆ ಬಂತು. ಆನಂತರ ರಂಗಕ್ಕೆ ಅಳವಡಿಸಿದೆ.

* ಈ ನಾಟಕದ ಮೂಲಕ ಏನು ಹೇಳಲು ಹೊರಟಿದ್ದೀರಿ?
ನೋಡಿ ಈ ನಾಟಕ ಮಹಾಭಾರತದ ಕಾಲದ ಕಥಾವಸ್ತುವನ್ನು ಹೊಂದಿದ್ದರೂ ವರ್ತಮಾನಕ್ಕೆ ಸ್ಪಂದಿಸುವ ಗುಣ ಹೊಂದಿದೆ. ನಾವು ಜಗತ್ತನ್ನು ಬರೀ ಕಪ್ಪು–ಬಿಳುಪು ಬಣ್ಣಗಳಿಂದ ಮಾತ್ರ ನೋಡುತ್ತೇವೆ. ಅಂತೆಯೇ ಹೆಣ್ಣು–ಗಂಡನ್ನೂ ಕೂಡಾ. ಆದರೆ, ಅವೆರಡರ ನಡುವೆ ಎಷ್ಟೊಂದು ಬಣ್ಣಗಳಿವೆ. ಆ ನಡುವಿನ ಚಿತ್ರಣವನ್ನೇ ನಾನು ನಾಟಕದಲ್ಲಿ ಹೇಳಿದ್ದೇನೆ.

* ನಿಮ್ಮ ನಾಟಕಗಳಲ್ಲಿ ಲಿಂಗ ಸಂವೇದನೆಯೇ ಮೇಲುಗೈ ಸಾಧಿಸಿದೆ ಅನ್ನಿಸುತ್ತೆ...
ನಿಜ. ನನ್ನ ನಾಟಕಗಳನ್ನು ನೋಡಿದ ಬಹುತೇಕರಿಗೆ ಹಾಗೇ ಅನಿಸುತ್ತದೆ. ಆದರೆ, ನಾನು ನಾಟಕದ ಕಥೆಯನ್ನು ಮಾತ್ರ ನೋಡುತ್ತೇನೆ. ಇಂದಿನ ಸಮಾಜಕ್ಕೆ ಪ್ರಸ್ತುತವಾಗುವ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಪ್ರಜ್ಞಾಪೂರ್ವಕವಾಗಿ ಲಿಂಗ ಸಂವೇದನೆಯ ನಾಟಕ ಮಾಡಿಲ್ಲ. ಆದರೆ, ರಂಗದಲ್ಲಿ ಇಂಥ ನಾಟಕಗಳಿಗೆ ಆದ್ಯತೆ ನೀಡಬೇಕೆನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ನಾಟಕ ಮಾಡಿದಾಗ ಮನೋರಂಜನೆಯಷ್ಟೇ ನೀಡಲು ನಾವು ಬಯಸುವುದಿಲ್ಲ. ಹಾಗಂತ ಅದು ಸಂದೇಶವಲ್ಲ. ನಮ್ಮ  ಯೋಚನೆ, ಅಭಿಪ್ರಾಯ ಏನಿದೆ ಎಂಬುದನ್ನು ಮಾತ್ರ ನಾಟಕದಲ್ಲಿ ಹೇಳಬಯಸುತ್ತೇನೆ. ಭಾರಿ ಮೊತ್ತದ ಹಣ ನೀಡಿ ನೀನು ಇಂಥದ್ದೇ ನಾಟಕ ಮಾಡು ಅಂದರೆ ನನಗೆ ಮಾಡಲು ಆಗುವುದಿಲ್ಲ. ನನ್ನ ಮನಸಿಗೆ ಇಷ್ಟವಾದ ನಾಟಕಗಳನ್ನೇ ನಾನು ಮಾಡುತ್ತೇನೆ.

* ನಟಿ, ನಿರ್ದೇಶಕಿ ಈ ಎರಡಲ್ಲಿ ಯಾವ ಜವಾಬ್ದಾರಿ ನಿಮಗಿಷ್ಟ?
ಹಹ್ಹಹ್ಹ. ಬಾಲ್ಯದಿಂದಲೂ ನಾನು ನಟನೆಯಲ್ಲೇ ಹೆಚ್ಚು ತೊಡಗಿಸಿಕೊಂಡವಳು. ಯೌವನಕ್ಕೆ ಬಂದಾಗ ನಿರ್ದೇಶನ ಮಾಡಬೇಕೆಂಬ ಆಸೆಯಾಯಿತು. ಆದರೆ ನಾನು ಮೂಲತಃ ನಟಿಯೇ. ನಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನಿರ್ದೇಶನ ಮಾಡುವಾಗ ನಟನೆಯ ದೃಷ್ಟಿ ಇಟ್ಟುಕೊಳ್ಳುತ್ತೇನೆ. ನಾಟಕ ರಚನೆಯ ಸಂದರ್ಭದಲ್ಲೂ ಅಭಿನಯವನ್ನೇ ಮುಖ್ಯವಾಗಿಟ್ಟುಕೊಂಡು ಬರವಣಿಗೆ ಮಾಡುತ್ತೇನೆ.

* ಶಿಖಂಡಿ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ಕಾಣುತ್ತಿದೆ. ಏನನಿಸುತ್ತಿದೆ?
ಸ್ವಲ್ಪ ನರ್ವಸ್‌ ಆಗಿದ್ದೇನೆ. ಈ ಹಿಂದೆ ಮುಂಬೈನಲ್ಲಿ ನಾಟಕ ಮಾಡಿಸಿದ್ದೇನೆ. ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನಲ್ಲಿ ಜನರು ಇನ್ನೂ ಹೆಚ್ಚು ಪರಿಚಿತವಾಗಿಲ್ಲ. ಇಲ್ಲಿನ ಪ್ರೇಕ್ಷಕರು ನಾಟಕವನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ನಾಟಕ ಇಂಗ್ಲಿಷಿನಲ್ಲಿದೆ. ಅಲ್ಲಲ್ಲಿ ಹಿಂದಿಯನ್ನೂ ಬಳಸಿದ್ದೇನೆ.
* * *
ಫೌಜೆ ಕುರಿತು ಒಂದಿಷ್ಟು

* ಹುಟ್ಟಿ ಬೆಳೆದಿದ್ದು: ಮುಂಬೈ
* ಓದಿದ್ದು:  ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ, ರಂಗಕಲೆಯಲ್ಲಿ ಪದವಿ
* ಅಭಿನಯಿಸಿದ ಸಿನಿಮಾ: ‘ಖಿಸ್ಸಾ’, ‘ಕುರ್ಬಾನ್’, ‘ಸ್ಲಮ್ ಡಾಗ್ ಮಿಲಿಯೇನರ್’
* ನಾಟಕಗಳು: ಹತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ, ನಟನೆ
* * *
‘ಶಿಖಂಡಿ’ ನಾಟಕ ಪ್ರದರ್ಶನ: ಪ್ರಸ್ತುತಿ–ಎನ್‌ಸಿಪಿಎ, ರಚನೆ–ನಿರ್ದೇಶನ–ಫೌಜೆ  ಜಲಾಲಿ, ಸ್ಥಳ–ರಂಗಶಂಕರ, ಜೆ.ಪಿ.ನಗರ ಎರಡನೇ ಹಂತ, ಶನಿವಾರ ಮಧ್ಯಾಹ್ನ 3.30ಕ್ಕೆ , ಭಾನುವಾರ ಸಂಜೆ 7ಕ್ಕೆ. ಟಿಕೆಟ್ ದರ ₹ 300, www.bookmyshow ಟಿಕೆಟ್ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT