ADVERTISEMENT

‘ನರ್ವಸ್ ಆದಾಗಲೇ ಚೆನ್ನಾಗಿ ಹಾಡ್ತೀನಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
‘ನರ್ವಸ್ ಆದಾಗಲೇ  ಚೆನ್ನಾಗಿ ಹಾಡ್ತೀನಿ’
‘ನರ್ವಸ್ ಆದಾಗಲೇ ಚೆನ್ನಾಗಿ ಹಾಡ್ತೀನಿ’   

ಸಂದರ್ಶನ: ಟಿನಿ ಸಾರಾ ಏನಿಯನ್

* ‘ಧಡ್ಕನೆ ಆಜಾದ್ ಹೈ’ ಬಗ್ಗೆ ಹೇಳಿ...
ನನಗೇ ಗೊತ್ತಿಲ್ಲ ಈ ಯೋಚನೆ ಹೇಗೆ ಬಂತೆಂದು. ನಿರ್ದಿಷ್ಟ ಚೌಕಟ್ಟು ಅಥವಾ ಗಡಿ ಇಲ್ಲದ ಸಿನಿಮಾ, ಕಥೆ ಅಥವಾ ನಿರೂಪಣೆ ಯಾವತ್ತೂ ನನಗೆ ಇಷ್ಟವಾಗುತ್ತದೆ. ಹಾಗೆಯೇ ಯಾವುದೇ ಚೌಕಟ್ಟಿಲ್ಲದೇ ’ಧಡ್ಕನೆ ಆಜಾದ್ ಹೈ’ ರೂಪುಗೊಂಡಿದೆ.

* ಈ ಆಲ್ಬಂನಲ್ಲಿ ಗಾಯನದ ಜತೆಗೆ ನೀವು ಅಭಿನಯ ಕೂಡಾ ಮಾಡಿದ್ದೀರಿ...
ಹೌದು. ಈ ಆಲ್ಬಂನಲ್ಲಿ ಗಾಯನ, ಅಭಿನಯದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದೇನೆ. ಹಾಡು ಒಂದು ನಿರ್ದಿಷ್ಟ ಸ್ವರೂಪ ಪಡೆದುಕೊಂಡ ಮೇಲೆ ಇದನ್ನು ಚೆನ್ನಾಗಿ ಚಿತ್ರೀಕರಿಸಬೇಕೆಂಬ ಆಸೆ ಹುಟ್ಟಿತು. ಇದರಲ್ಲಿ ಒಂದೇ ಹಾಡು ಇರುವುದರಿಂದ ನಾನೇ ಅಭಿನಯಿಸಲು ನಿರ್ಧರಿಸಿದೆ. ನಿಜಕ್ಕೂ ಇದೊಂದು ಭಿನ್ನ ಅನುಭವ. ಆಲ್ಬಂ ನಿರ್ಮಾಣ ಮಾಡುವ ಮೂಲಕ ಅನೇಕ ಹೊಸ ಕೆಲಸಗಳನ್ನು ಕಲಿಯುವಂತಾಯಿತು.

ADVERTISEMENT

* ಹಾಡನ್ನು ಎಲ್ಲಿ ಚಿತ್ರೀಕರಿಸಿದ್ದೀರಿ?
ಮನಾಲಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ಮಾರ್ಚ್‌ ತಿಂಗಳಲ್ಲಿ ಮನಾಲಿಯಲ್ಲಿ ತುಂಬಾ ಚಳಿ ಇರುತ್ತೆ. ಆ ವಾತಾವರಣದಲ್ಲಿ ಚಿತ್ರೀಕರಣ ಮಾಡಿದೆವು. ನಾವು ಶೂಟಿಂಗ್ ಆರಂಭಿಸುವುದಕ್ಕೂ ಮುನ್ನ ಸ್ವಲ್ಪ ಮಟ್ಟಿಗೆ ಹಿಮವೂ ಬಿದ್ದಿತ್ತು. ಎಲ್ಲವನ್ನೂ ಯೋಜನಾಬದ್ಧವಾಗಿ ಆಯೋಜಿಸಿದ ಮೇಲೂ ಪ್ರಕೃತಿ ಸಹಕರಿಸದಿದ್ದರೆ ಏನೂ ಮಾಡಲಾಗದು ಎಂಬ ಅರಿವೂ ಆ ಕ್ಷಣದಲ್ಲಾಯಿತು (ನಗು).

* ತುಂಬಾ ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೀರಿ. ಹಿನ್ನೆಲೆ ಗಾಯನ ನಿಮ್ಮಲ್ಲಿ ಏನು ಬದಲಾವಣೆ ತಂದಿದೆ?
ಹಿನ್ನೆಲೆ ಗಾಯನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ನಿರ್ದಿಷ್ಟ ಶೈಲಿಯ ಗಾಯನಕ್ಕಿಂತ ನನ್ನ ದನಿಯನ್ನು ಭಿನ್ನವಾಗಿ ಮಾರ್ಪಡಿಸಿಕೊಂಡು ಹಾಡುವುದನ್ನು ಕಲಿತಿದ್ದೇನೆ.

* ಬೇರೆ ಭಾಷೆಗಳಲ್ಲೂ ಅಷ್ಟೊಂದು ಚೆನ್ನಾಗಿ ಹಾಡುತ್ತೀರಲ್ಲ. ಇದರ ರಹಸ್ಯವೇನು?
ಬೇರೆಬೇರೆ ಭಾಷೆಗಳ ಬಗ್ಗೆ ನನಗೆ ಮೊದಲಿನಿಂದಲೂ ಒಲವಿದೆ. ಆಯಾ ಭಾಷೆಯ ಉಚ್ಚಾರಣೆ, ಅದರಿಂದ ಹೊರಹೊಮ್ಮುವ ವಿಭಿನ್ನ ರೀತಿಯ ದನಿಯ ಬಗ್ಗೆಯೂ ಕುತೂಹಲವಿದೆ. ಹಾಡಿನ ರಚನೆ, ಅದರ ಹಿನ್ನೆಲೆಯನ್ನು ತುಂಬಾ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಅರಿತುಕೊಂಡು ಹಾಡುತ್ತೇನೆ. ಆಯಾ ಭಾಷೆಯನ್ನು ಹೇಗೆ ಉಚ್ಚರಿಸಬೇಕು, ಎಲ್ಲಿ ಪದವನ್ನು ತಡೆಯಬೇಕು ಎಂಬುದನ್ನು ನನ್ನದೇ ಭಾಷೆಯಲ್ಲಿ ಬರೆದಿಟ್ಟುಕೊಳ್ಳುತ್ತೇನೆ. ಹಾಡುವಾಗ ಎಲ್ಲಿ ಯಾವ ಪದಕ್ಕೆ ಎಷ್ಟು ಒತ್ತು ನೀಡಬೇಕು ಎಂಬುದನ್ನು ಅರಿತು ಹಾಡುತ್ತೇನೆ.

* ಯಾವ ಭಾಷೆಯಲ್ಲಿ ಹಾಡುವುದು ಸವಾಲೆನಿಸಿತು?
ಮಲಯಾಳಂ ಭಾಷೆಯಲ್ಲಿ ಹಾಡುವುದು ನಿಜಕ್ಕೂ ಕಷ್ಟ.

* ಹಾಡೊಂದು ಹಿಟ್ ಆಗಲು ಸಾಹಿತ್ಯ ಮುಖ್ಯವೋ ಅಥವಾ ಸಂಗೀತವೋ?
ಈ ಹಿಂದೆ ಸುಮಧುರವಾಗಿರುವ ಸಂಗೀತವೇ ಮೇಲುಗೈ ಸಾಧಿಸುತ್ತಿತ್ತು. ಆದರೆ, ಯಾವಾಗ ನಾನು ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆನೋ ಸಾಹಿತ್ಯವೂ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಅರಿತೆ. ಹಾಡೊಂದು ಚೆನ್ನಾಗಿ ಮೂಡಿಬರಲು ಸಂಗೀತ ಮತ್ತು ಸಾಹಿತ್ಯ ಎರಡೂ ಸಮಾನವಾದ ಪಾತ್ರ ವಹಿಸುತ್ತವೆ ಎಂಬುದು ನನ್ನ ಅಭಿಪ್ರಾಯ.

* ಸ್ಟುಡಿಯೊದಲ್ಲಿ ರೆಕಾರ್ಡಿಂಗ್  ಅಥವಾ ಸ್ಟೇಜ್ ಷೋನಲ್ಲಿ ಹಾಡೋದು ಇವೆರೆಡಲ್ಲಿ ಹೆಚ್ಚು ಇಷ್ಟವಾಗೋದು ಯಾವುದು?
ಎರಡೂ ನನಗಿಷ್ಟ. ಸ್ಟುಡಿಯೊದಲ್ಲಿ ರೆಕಾರ್ಡಿಂಗ್ ಮಾಡೋದು ಒಂದು ರೀತಿಯ ಧ್ಯಾನ ಮಾಡಿದಂತೆ. ಅಲ್ಲಿ ನೀವೊಂದು ಮುಚ್ಚಿದ ಕೋಣೆಯಲ್ಲಿದ್ದುಕೊಂಡು ಹೊಸದನ್ನು ಆವಿಷ್ಕರಿಸುತ್ತೀರಿ. ಅದೇ ಸ್ಟೇಜ್ ಷೋನಲ್ಲಿ ನೀವು ಮಾಡಿದ್ದೆಲ್ಲವೂ ಲೈವ್ ಆಗಿಯೇ ಹೋಗುತ್ತಿರುತ್ತದೆ. ಸ್ಟೇಜ್‌ ಮೇಲೆ ಸ್ವಾತಂತ್ರ್ಯ ಅನುಭವಿಸುತ್ತಲೇ ಎನರ್ಜೆಟಿಕ್ ಆಗಿ ಸಂಗೀತವನ್ನು ಪ್ರಸ್ತುತಪಡಿಸುವುದು ನಿಜಕ್ಕೂ ಅಪಾರ ಸಂತಸ ನೀಡುತ್ತದೆ.

* ಹಾಡುವಾಗ ನರ್ವಸ್ ಆಗುತ್ತೀರಾ?
ಸ್ಟುಡಿಯೊದಲ್ಲಿ ರೆಕಾರ್ಡಿಂಗ್ ಆಗುವಾಗ ನರ್ವಸ್ ಆಗೋದಿಲ್ಲ. ಆದರೆ, ಸ್ಟೇಜ್ ಷೋಗಳಲ್ಲಿ ಅದರಲ್ಲೂ ಹೊಸ ನಗರಗಳಲ್ಲಿ ಹಾಡುವಾಗ ಸ್ವಲ್ಪ ನರ್ವಸ್  ಆಗುತ್ತೇನೆ. ತಮಾಷೆಯೆಂದರೆ ಹಾಗೆ ನರ್ವಸ್ ಆದಾಗಲೆಲ್ಲಾ ನಾನು ಚೆನ್ನಾಗಿ ಹಾಡುತ್ತೇನೆ.

* ಯಾವ ಹಾಡು ನಿಮ್ಮಮುಖದಲ್ಲಿ ಸಂತೋಷ ಅರಳಿಸುತ್ತೆ?
ಪ್ರತಿ ಹಾಡಿನೊಂದಿಗೆ ಒಂದೊಂದು ಮಧುರ ನೆನಪು ಇದ್ದೇ ಇರುತ್ತದೆ. ಹಾಗಾಗಿ, ಎಲ್ಲಾ ರೀತಿಯ ಹಾಡುಗಳು ನನಗೆ ಸಂತಸ ನೀಡುತ್ತವೆ.

* ಒಂದು ವೇಳೆ ನೀವು ಹಿನ್ನೆಲೆ ಗಾಯಕಿ ಆಗಿರದಿದ್ದರೆ ಏನಾಗಿರುತ್ತಿದ್ರಿ?
ಸಂಗೀತ ಬಿಟ್ಟರೆ ಬೇರೆ ಏನನ್ನೂ ಯೋಚಿಸಲು ನನ್ನಿಂದಾಗದು. ನನ್ನ ತಂದೆ ಎಂಜಿನಿಯರ್. ಬಹುಶಃ ಗಾಯಕಿಯಾಗಿರದಿದ್ದರೆ ನಾನೂ ಅವರಂತೆಯೇ ಎಂಜಿನಿಯರ್ ಆಗಿರುತ್ತಿದ್ದೆ. ಹಾಂ ಮತ್ತೆ ನನಗೆ ಅಡುಗೆ ಮಾಡೋದು ಅಂದ್ರೆ ತುಂಬಾ ಇಷ್ಟ. ಬಹುಶಃ ಶೆಫ್ ಆಗಿರುತ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.