ADVERTISEMENT

ನಾವು ನೀರು ಉಳಿಸಿದೆವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ನಾವು ನೀರು ಉಳಿಸಿದೆವು
ನಾವು ನೀರು ಉಳಿಸಿದೆವು   

ಟಬ್‌ನಲ್ಲಿ ಸಂಗ್ರಹಿಸಿ..

ವಾಟರ್ ಪ್ಯೂರಿಫೈಯರ್‌ನಿಂದ ಬರುವ ಅನುಪಯುಕ್ತ ನೀರನ್ನು ಟಬ್‌ನಲ್ಲಿ ಸಂಗ್ರಹಿಸಿ ಮನೆ ಒರೆಸಲು ಬಳಸುತ್ತೇನೆ.
ಅಶ್ವಿನಿ ಸುರೇಶ್, ಬಾಲಾಜಿ ಬಡಾವಣೆ, ಕೊಡಿಗೇಹಳ್ಳಿ

***

ADVERTISEMENT

ಬಗೆ ಬಗೆ ಮಾರ್ಗ

ನೀರು ಹೆಚ್ಚು ಪೋಲಾಗುವ ಕಾರಣ ವಾಷಿಂಗ್‌ಮಷಿನ್‌ ಬಳಸುವುದನ್ನು ಬಿಟ್ಟಿದ್ದೇನೆ. ಮುಂಚೆ ಇದ್ದ ಓವರ್‌ ಹೆಡ್ ಟ್ಯಾಂಕ್ ತುಂಬಿದ ನಂತರ ನೀರು ಹೊರ ಚೆಲ್ಲುತ್ತಿತ್ತು ಹಾಗಾಗಿ ಆಟೊಮೆಟಿಕ್ ಪದ್ಧತಿಯ ಓವರ್‌ಹೆಡ್‌ ಟ್ಯಾಂಕ್ ಅಳವಡಿಸಿಕೊಂಡಿದ್ದೇವೆ.

ಗಾಡಿಗಳನ್ನು ತೊಳೆಯಲು, ಮನೆ ಒರೆಸಲು, ವಾಟರ್‌ ಫ್ಯೂರಿಫೈಯರ್‌ನ ಅನುಪಯುಕ್ತ ನೀರನ್ನು ಬಳಸುತ್ತೇನೆ.

–ಕೀರ್ತಿ, ಕೋರಮಂಗಲ.

**

ಎಲ್ಲರ ಮೇಲೆ ಕಣ್ಣಿಟ್ಟಿದ್ದೇನೆ

ಮನೆಯಲ್ಲಿ ಅನಗತ್ಯವಾಗಿ ಯಾರೂ ನೀರನ್ನು ಬಳಸದಂತೆ ನೋಡಿಕೊಳ್ಳುತ್ತೇನೆ. ಮೊಮ್ಮಕ್ಕಳನ್ನು  ಸುಮ್ಮನೆ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲ. ವಾಷಿಂಗ್‌ ಮೆಷಿನ್‌ ಇದ್ದರೂ, ಪ್ರತಿದಿನ  ಆಫೀಸ್‌ಗೆ ಹಾಕಿಕೊಳ್ಳುವ ಉಡುಪನ್ನು ಕೈಯಲ್ಲಿಯೇ ಒಗೆಯುತ್ತೇನೆ. ಫ್ಲಶ್‌ ಮಾಡುವಾಗ ಹೆಚ್ಚು ನೀರು ಖರ್ಚಾಗದಂತೆ ಎಚ್ಚರ ವಹಿಸುತ್ತೇನೆ. ಗಿಡಗಳಿಗೆ ಪೈಪ್‌ನಲ್ಲಿ ನೀರು ಹಾಕುವ ಬದಲು ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಹಾಕುತ್ತೇನೆ.
–ಜಲಜಾಕ್ಷಿ, ಕಸ್ತೂರಿ ನಗರ

**

ಅಕ್ಕಿ ನೀರೂ ಬಳಕೆಗೆ‌

ಪ್ರತಿ ನಿತ್ಯ ಒದ್ದೆ ಬಟ್ಟೆಯಲ್ಲಿ  ಮನೆ ಒರೆಸುತ್ತೇನೆ. ತರಕಾರಿ, ಅಕ್ಕಿ ತೊಳೆದ ನೀರನ್ನು ಸಿಂಕ್‌ ಸ್ವಚ್ಚ ಮಾಡಲು ಬಳಸುತ್ತೇನೆ. ಬಟ್ಟೆ ತೊಳೆದ ನೀರನ್ನು ಸಿಂಕ್ ಸ್ವಚ್ಛಮಾಡಲು, ಕಮೋಡ್ ಸ್ವಚ್ಚ ಮಾಡಲು ಉಪಯೋಗಿಸುತ್ತೇನೆ.
–ವೇದಪ್ರಭಾ, ಕೋರಮಂಗಲ

**

ಮಿತವಾಗಿ ನೀರು ಬಳಸುವೆ

ಮನೆ ಒರೆಸಿದ ನೀರನ್ನು ಅಂಗಳಕ್ಕೆ ಹಾಕಿ ಗುಡಿಸುತ್ತೇನೆ. ಕೆಲವರು ಪಾತ್ರೆ ತೊಳೆಯುವಾಗ ಇನ್ನೊಂದು ಕಡೆ ಅನವಶ್ಯಕವಾಗಿ ನೀರು ಹರಿಯಲು ಬಿಟ್ಟಿರುತ್ತಾರೆ. ಇದರಿಂದ ಅತ್ಯಧಿಕ ನೀರು ಖರ್ಚಾಗುತ್ತದೆ. ನಾನು ಎಲ್ಲಾ ಪಾತ್ರೆಗಳನ್ನು ಗುಡ್ಡೆ ಹಾಕಿಕೊಂಡು ತೊಳೆಯುತ್ತೇನೆ. ಇದರಿಂದ ಬೇರೆ ಪಾತ್ರೆಗಳ ಜಿಡ್ಡೂ ಹೋಗುತ್ತದೆ, ಕಡಿಮೆ ನೀರೂ ಸಾಕಾಗುತ್ತದೆ. ತರಕಾರಿ ತೊಳೆದ ನೀರಿನಿಂದ ಸಿಂಕ್‌ ತೊಳೆಯುತ್ತೇನೆ. ವಾಟರ್‌ ಪ್ಯೂರಿಫೈಯರ್‌ ನೀರನ್ನು ಗಿಡಕ್ಕೆ ಹಾಕುತ್ತೇನೆ.

- ಲತಾ, ಸಿಂಗಪುರ ಲೇಔಟ್‌ ನಿವಾಸಿ

**

ಮೆಷಿನ್‌ಗೆ ಕಡಿಮೆ ಟೈಂ ಸೆಟ್‌ ಮಾಡಿ...

ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು ಉಳಿದ ಪಾತ್ರೆಗಳನ್ನು ಅದರಿಂದ ನೆನೆಸುತ್ತೇನೆ. ಹೀಗೆ ಹೆಚ್ಚಿನ ಜಿಡ್ಡು ಹೋಗಲಾಡಿಸಿ ನಂತರ ನಲ್ಲಿ ನೀರಿನಲ್ಲಿ ಪಾತ್ರೆ ತೊಳೆಯುತ್ತೇನೆ. ಬೆಂಗಳೂರಿನಲ್ಲಿರುವುದರಿಂದ ಬಟ್ಟೆ ಹೆಚ್ಚೇನೂ ಕೊಳೆ ಆಗುವುದಿಲ್ಲ. ಹೀಗಾಗಿ ವಾಷಿಂಗ್‌ ಮೆಷಿನ್‌ನಲ್ಲಿ ಕಡಿಮೆ ಟೈಮ್‌ ಸೆಟ್‌ ಮಾಡಿ ಬಟ್ಟೆ ತೊಳೆಯುತ್ತೇನೆ.  ಉಗುರು ಬೆಚ್ಚಗಿನ ಸ್ನಾನ ಮಾಡುತ್ತೇವೆ. ಮನೆಯಲ್ಲೂ ನೀರು ಬಳಸುವಾಗ ತುಂಬಾ ಕಾಳಜಿಯಿಂದ ಖರ್ಚು ಮಾಡುತ್ತಿದ್ದೇವೆ.
ಸುಲಭಾ, ಗೃಹಿಣಿ, ಬಾಗಲಗುಂಟೆ

**

ಮೋಟಾರ್‌ ಮೇಲೆ ನಿಗಾ

ಟ್ಯಾಂಕ್‌ ಓವರ್‌ಫ್ಲೋ ಆಗುವುದಕ್ಕೂ ಮುನ್ನ ಮೋಟಾರ್‌ ಪಂಪ್‌ ಆಫ್‌ ಮಾಡುತ್ತೇನೆ. ಬಟ್ಟೆ ತೊಳೆದ ನೀರು ಬಾಲ್ಕನಿ/ವರಾಂಡ ತೊಳೆಯಲು, ಹೂವಿನ ಗಿಡಕ್ಕೆ, ಶೌಚಾಲಯಕ್ಕೆ ಬಳಸುತ್ತೇನೆ.

ಬಟ್ಟೆ, ಪಾತ್ರೆ, ಮುಖ ತೊಳೆಯುವಾಗ ಟ್ಯಾಪ್‌ ನೀರು ಬಿಟ್ಟುಕೊಳ್ಳುವ ಬದಲು ಬಕೆಟ್‌ನಲ್ಲಿ ನೀರು ತುಂಬಿ ಬಳಸುತ್ತೇನೆ. ಟ್ಯಾಪ್‌ನಲ್ಲಿ ಹನಿ ನೀರು ಬೀಳುತ್ತಿದ್ದರೂ ಅದನ್ನು ಶೀಘ್ರವೇ ಸರಿಮಾಡಿಸಿ ಕೊಂಡುಬಿಡುತ್ತೇನೆ. ಸಾಧ್ಯವಾದಷ್ಟೂ ವಾಷಿಂಗ್‌ ಮೆಷಿನ್‌ ಬಳಸುವ ಬದಲು ಕೈಯಲ್ಲೇ ಬಟ್ಟೆ ತೊಳೆಯುತ್ತೇನೆ.
–ಸವಿತಾ ವಿಶ್ವನಾಥ, ಗೃಹಿಣಿ, ಗಿರಿನಗರ

**

ಮಳೆ ನೀರು ಬಳಸುತ್ತೇವೆ

ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಸಂಗ್ರಹವಾದ ನೀರನ್ನು ಬಟ್ಟೆತೊಳೆಯಲು, ಗಿಡಗಳಿಗೆ ನೀರುಣಿಸಲು ಹಾಗೂ ವಾಹನ ತೊಳೆಯಲು ಬಳಸಿಕೊಂಡಿದ್ದೇವೆ. ಶವರ್‌ ಬಳಕೆ ಕಡಿಮೆ ಮಾಡಿ ಬಕೆಟ್‌ ಸ್ನಾನಕ್ಕೆ ಆದ್ಯತೆ ನೀಡಿದ್ದೇವೆ. ಸಂಪಿನ ನೀರು ತುಂಬಿ ಹೊರಚೆಲ್ಲದಂತೆ ನೋಡಿಕೊಳ್ಳುತ್ತೇವೆ. ಮನೆಮಂದಿಯ ಅಗತ್ಯಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಟ್ಯಾಂಕ್‌ನಲ್ಲಿ ತುಂಬಿಸುತ್ತೇವೆ.
–ಪಾರ್ವತಿ ಎಲ್‌.ಭಟ್‌, ಗೃಹಿಣಿ, ಯಲಹಂಕ

**

ಉಳಿತಾಯದೊಂದಿಗೆ ವ್ಯಾಯಾಮ

ನೀರನ್ನು ಉಳಿಸುವ ಮಾತು ಬೇರೆ. ಈಗ ನಮ್ಮ ಮುಂದಿರುವುದು ನೀರನ್ನು ಮಿತವಾಗಿ ಬಳಸಲೇಕಾದ ಅನಿವಾರ್ಯತೆ. ಹೆಚ್ಚಿಗೆ ಬಳಸಲು ನೀರೇ ಇಲ್ಲವಲ್ಲ.

ಅದಕ್ಕಾಗಿ ನಾನು ಆರಿಸಿಕೊಂಡ ಮೊದಲ ಮಾರ್ಗ ಎಂದರೆ ಕೈಯಿಂದಲೇ ಬಟ್ಟೆ ತೊಳೆಯುವುದು. ಇದರಿಂದ ಸಾಕಷ್ಟು ನೀರು ಉಳಿಸಬಹುದು. ಅಲ್ಲದೇ ದೇಹಕ್ಕೆ ವ್ಯಾಯಾಮವೂ ಸಿಗುತ್ತದೆ. ಅಕ್ಕಿ,–ತರಕಾರಿ ತೊಳೆದ ನೀರನ್ನು ಕುಂಡಗಳಿಗೆ, ಗಿಡಕ್ಕೆ ಹಾಕುತ್ತೇನೆ.
–ಇಂದು ಎಸ್‌.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.