ADVERTISEMENT

ನಾವು ನೀರು ಉಳಿಸಿದೆವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ನಾವು ನೀರು ಉಳಿಸಿದೆವು
ನಾವು ನೀರು ಉಳಿಸಿದೆವು   

ತರಕಾರಿ ತೊಳೆದ ನೀರು ಗಿಡಕ್ಕೆ
ನೀರನ್ನು ಉಳಿಸುವ ಸಲುವಾಗಿ ನಾನು ನೀರಿನ ಟ್ಯಾಂಕ್, ಸಂಪ್ ಮತ್ತು ನಲ್ಲಿಗಳನ್ನು ಸುಸ್ಥಿತಿಯಲ್ಲಿರಿಸಿಕೊಂಡಿದ್ದೇನೆ. ಅಂಗಳದಲ್ಲಿ ರಂಗೋಲಿ ಹಾಕುವಷ್ಟು ಜಾಗಕ್ಕೆ ಮಾತ್ರ ಮಗ್‌ನಿಂದ ನೀರು ಸಿಂಪಡಿಸಿಕೊಳ್ಳುತ್ತೇನೆ.  ಟಾರ್ ರಸ್ತೆಗೆ ಬಕೆಟ್ಟುಗಟ್ಟಲೆ ನೀರು ಹಾಕಿ ತೊಳೆಯುವುದಿಲ್ಲ. ಅಡುಗೆ ಮನೆಯಲ್ಲಿ ಅಕ್ಕಿ ಹಾಗೂ ತರಕಾರಿ ತೊಳೆದ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ ಗಿಡಗಳಿಗೆ ಹಾಕುತ್ತೇನೆ.

ರಾತ್ರಿ ಕುಡಿಯಲು ಇಟ್ಟುಕೊಂಡಿದ್ದ ನೀರನ್ನು ಹಾಗೂ ಅರ್ಧ ಕುಡಿದು ಲೋಟಗಳಲ್ಲೇ ಉಳಿಸಿದ ನೀರನ್ನು ಚೆಲ್ಲುವ ಬದಲು ಗಿಡಗಳಿಗೆ ಹಾಕುತ್ತೇನೆ. ಬಟ್ಟೆ ಒಗೆಯುವ ಯಂತ್ರದಲ್ಲಿ ಹೆಚ್ಚು ಕೊಳೆಯಾಗಿರದ ದಿನ ನಿತ್ಯದ ಬಟ್ಟೆಗಳನ್ನು ಒಗೆಯುವಾಗ ಕಡಿಮೆ ನೀರಿನಲ್ಲೇ ಒಗೆಯಬಹುದಾದ ‘ಕ್ವಿಕ್ ವಾಶ್’ ಮೋಡಿನಲ್ಲಿ ಬಳಸುತ್ತೇನೆ.

-ಎಚ್.ಎಸ್. ಶ್ರೀಮತಿ

ADVERTISEMENT

**

ಊರೂರು ಸುತ್ತಿ ಬಂದ ಕಾರಣ

ಹಲವು ಊರು ಸುತ್ತಿ ಬಂದ ನಮಗೆ ನೀರಿನ ಸಮಸ್ಯೆಯ ಅರಿವಿದೆ. ಅದಕ್ಕಾಗಿಯೇ ನೀರಿನ ಮಿತವ್ಯಯಕ್ಕೆ ಒತ್ತು ಕೊಡುತ್ತೇವೆ. ಬಾಡಿಗೆ ಮನೆಯಲ್ಲಿರುವ ಕಾರಣ ಅದು ನಮ್ಮ ಬಜೆಟ್‌ಗೂ ಒಂದಿಷ್ಟು ಕೊಡುಗೆ ನೀಡುತ್ತಿದೆ.

ಬಟ್ಟೆ ಒಗೆಯಲು ಕಡಿಮೆ ಸಣ್ಣ ಬಕೆಟ್‌ ಬಳಸುತ್ತೇನೆ. ಬಟ್ಟೆ ಒಗೆದ ಬಳಿಕ ಉಳಿದ ನೀರನ್ನು ಮನೆ ನೆಲ ಒರೆಸಲು ಬಳಸುತ್ತೇನೆ. ಕನಿಷ್ಠ ಹೂವಿನ ಗಿಡಗಳಿದ್ದು ಅವುಗಳಿಗೆ ಬೆಳಿಗ್ಗೆ ಮತ್ತು ಸಂಜೆ ಸಣ್ಣ ಮಗ್‌ ಬಳಸಿ ನೀರುಣಿಸುತ್ತೇನೆ.

ಮೂರು ಹೊತ್ತು ಎಲ್ಲ ಪಾತ್ರೆಗಳನ್ನು ಒಟ್ಟು ಸೇರಿಸಿ ತೊಳೆಯುವ ಕಾರಣ ಅಲ್ಲಿಯೂ ಮಿತವ್ಯಯ ಸಾಧಿಸಲು ಸಾಧ್ಯವಾಗಿದೆ.

ಉಷಾ ಎಸ್‌. 2ನೇ ಹಂತ, ಬಸವೇಶ್ವರ ನಗರ

**

ಉಳಿಕೆ ನೀರು ಗಿಡಕ್ಕೆ

ಮಕ್ಕಳು ಶಾಲೆಗೊಯ್ಯುವ ಕುಡಿಯುವ ನೀರಿನ ಬಾಟಲಿಯಲ್ಲಿ  ಉಳಿಯುವ ನೀರನ್ನು (ಎಷ್ಟೇ ಇರಲಿ) ಗಿಡಗಳಿಗೋ ಅಥವಾ ಬಚ್ಚಲುಮನೆಯಲ್ಲಿ ಉಪಯೋಗಿಸುತ್ತೇನೆ. ಅಂಗಳಕ್ಕೆ ನೀರು ಹಾಕಿ ರಂಗೋಲಿ ಇಡುವ ಕೆಲಸಕ್ಕೆ ಫುಲ್ ಸ್ಟಾಪ್ ಹಾಕಿದ್ದೇನೆ. ಟ್ಯಾಂಕಿ ನೀರು ಪೂರ್ತಿಯಾಗಿ ತುಂಬಿ ಹೊರಚೆಲ್ಲುವ ಮೊದಲೇ ಆಫ್ ಮಾಡುತ್ತೇನೆ. ಮನೆಯಲ್ಲಿ ಎಲ್ಲರಿಗೂ ಸ್ನಾನಕ್ಕೆ ಬಕೇಟು ಉಪಯೋಗಿಸುವಂತೆ ತಾಕೀತು ಮಾಡಿದ್ದೇನೆ.

–ಶ್ರೀರಂಜನಿ, ಕುಮಾರಸ್ವಾಮಿ ಲೇಔಟ್

**

ವಾಷಿಂಗ್‌  ಮಷಿನ್ ನೀರು ಬಾಳೆಗಿಡಕ್ಕೆ

ವಾಷಿಂಗ್ ಮಷಿನ್‌ನಿಂದ ಬರುವ ನೀರು ನೇರವಾಗಿ ಬಾಳೆ ಗಿಡಕ್ಕೆ ಬಿಡುತ್ತೇವೆ. ಅಡುಗೆ ಮನೆಯಲ್ಲಿ ಬಳಸುವ ನೀರು ಕೂಡ ನೇರವಾಗಿ ಹೂವಿನ ಗಿಡಗಳಿಗೆ ಪೈಪ್ ಮೂಲಕ ಬಿಡುತ್ತೇವೆ. ನೆಲ ಒರೆಸುವ ನೀರನ್ನು ಕೂಡ ಗಿಡಗಳಿಗೆ ಹಾಕುತ್ತೇವೆ.  ಮನೆಯ ಹಿಂದಿನ ನಲ್ಲಿಯ ಕೆಳಗೆ ಯಾವಾಗಲೂ ಒಂದು ಬಕೆಟ್ ಇಟ್ಟಿರುತ್ತೇವೆ. ಕೈ ತೊಳೆದ ನೀರು ಅದರಲ್ಲಿ ಶೇಖರಣೆಯಾದ ಮೇಲೆ ಅದನ್ನೂ ಗಿಡಗಳಿಗೆ ಹಾಕುತ್ತೇವೆ.

–ಪ್ರೇಮಾ ಎಸ್., ಎಚ್ಎಎಲ್

**

ಸ್ನಾನಕ್ಕೆ ಕಡಿಮೆ ನೀರು

ಸ್ನಾನಕ್ಕೆ ಒಂದು ಬಕೇಟ್ ನೀರು ಮಾತ್ರ ಬಳಸುವಂತೆ ಮನೆಯ ಎಲ್ಲರಿಗೂ ಸೂಚಿಸಿದ್ದೇನೆ. ನಲ್ಲಿಗಳಿಂದ ನೀರು ಪೋಲಾಗದಂತೆ ತಡೆಯಲು ಎಲ್ಲಾ ನಲ್ಲಿಗಳು ಸರಿಯಾಗಿದೆ ಎಂದು ಪರಿಶೀಲಿಸುತ್ತೇನೆ.  ಮಕ್ಕಳಿಗೆ ನೀರಿನ ಮಹತ್ವದ ತಿಳಿಸಿ ನೀರು ಕಡಿಮೆ ಬಳಸಲು ಪ್ರೇರೇಪಿಸಿದ್ದೇನೆ.

–ರತ್ನಾ ಗೋಪಿನಾಥ್, ಕನಕಪುರ ರಸ್ತೆ

**

ಬಕೇಟ್‌ ನೀರಿನ ಬಳಕೆ

ವಾಷಿಂಗ್ ಮಷಿನ್‌ನಿಂದ ಬರುವ ಅನುಪಯುಕ್ತ ನೀರನ್ನು ಶೌಚಾಲಯ ಸ್ವಚ್ಛ ಮಾಡಲು ಬಳಸುತ್ತೇನೆ. ಪಾತ್ರೆ ತೊಳೆಯಲು, ಕೈ ತೊಳೆಯಲು ನಲ್ಲಿ ನೀರನ್ನು ಬಳಸದೇ ಬಕೇಟಿನಲ್ಲಿ ತುಂಬಿಟ್ಟ ನೀರನ್ನು ಬಳಸುತ್ತೇವೆ.

–ಜ್ಯೋತಿ ಐಶು, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.