ADVERTISEMENT

ನಾವೂ ನೀರು ಉಳಿಸಿದೆವು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನಾವೂ ನೀರು ಉಳಿಸಿದೆವು
ನಾವೂ ನೀರು ಉಳಿಸಿದೆವು   

ನೀರು ಮಿತವ್ಯಯದಲ್ಲಿ ಗೃಹಿಣಿಯರ ಪಾತ್ರ ಮಹತ್ವದ್ದು. ಇಂದು ಬಳಕೆಗೆ ಕಡಿವಾಣ ಹಾಕಿದರೆ ಭವಿಷ್ಯದ ನಾಳೆಗಾಗಿ   ನೀರು ಉಳಿಸಿದಂತೆ ಎಂಬ ನಾಗರಿಕ ಪ್ರಜ್ಞೆಯೊಂದಿಗೆ ಮಿತವ್ಯಯ ಮಾಡುವವರು ಕೆಲವರಾದರೆ, ವಿದ್ಯುತ್‌ ಮತ್ತು ನೀರಿನ ಬಿಲ್‌ನಲ್ಲಿ ಉಳಿತಾಯ ಮಾಡುವ ಉದ್ದೇಶ ಇನ್ನು ಕೆಲವರದ್ದು. ನೀರು ಉಳಿತಾಯಕ್ಕೆ ನೀವು ಕಂಡುಕೊಂಡ ಮಾರ್ಗಗಳೇನು ಎಂದು ಗೃಹಿಣಿಯರಿಂದ ಅನುಭವಗಳನ್ನು ಆಹ್ವಾನಿಸಲಾಗಿತ್ತು. ಅಚ್ಚರಿ ಎನಿಸುವಷ್ಟು ಪ್ರತಿಕ್ರಿಯೆಗಳು ಬಂದಿವೆ. ನೀವೂ ಓದಿಕೊಳ್ಳಿ...

**

ಅಡುಗೆ ಮನೆಯಲ್ಲೊಂದು ಬಕೆಟ್‌

ADVERTISEMENT

ನಾನು ಬೆಳಿಗ್ಗೆ ಸುಮಾರು 2 ಗಂಟೆ ಕಾಲ ಅಡುಗೆ ತಯಾರಿಯಲ್ಲಿರುತ್ತೇನೆ. ಪದೇಪದೇ ನಲ್ಲಿ ತಿರುಗಿಸಿ ಕೈ ತೊಳೆಯುವ ಸಂದರ್ಭದಲ್ಲಿ ಎಷ್ಟೊಂದು ನೀರು ಪೋಲಾಗುತ್ತದೆ. ಹಾಗಾಗಿ ಒಂದು ಸಣ್ಣ ಬಕೆಟ್‌ನಲ್ಲಿ ನೀರು ಸಂಗ್ರಹಿಸಿ ಅದರಲ್ಲೇ ಕೈ ಅದ್ದುತ್ತೇನೆ. ನಂತರ ಆ ನೀರನ್ನು ಗಿಡಕ್ಕೆ ಹಾಕುತ್ತೇನೆ.

ಇದು ಸಣ್ಣ ಪ್ರಯತ್ನವಾದರೂ ನೀರು ಉಳಿಸಿದ ತೃಪ್ತಿ ದೊಡ್ಡದು.

–ಡಾ.ಪದ್ಮಿನಿನಾಗರಾಜು,ಕನ್ನಡ ಉಪನ್ಯಾಸಕಿ, ಲೇಖಕಿ

**

ನಾನು ಕಂಡುಕೊಂಡ ಮಾರ್ಗ

ಮೂರು ದಿನಕ್ಕೊಮ್ಮೆ ಹೊಸ್ತಿಲು, ಬಾಗಿಲು ತೊಳೆಯುತ್ತೇನೆ ಉಳಿದ ದಿನಗಳಲ್ಲಿ ಒದ್ದೆ ಬಟ್ಟೆಯಿಂದ ಒರೆಸುತ್ತೇನೆ. ಅಕ್ಕಿ, ತರಕಾರಿ ತೊಳೆದ ನೀರನ್ನು ಗಿಡಗಳಿಗೆ ಹಾಕುತ್ತೇನೆ. ಬಟ್ಟೆ ತೊಳೆದ ನೀರನ್ನು ಸಿಂಕ್‌ ಹಾಗೂ ವರಾಂಡ ಸ್ವಚ್ಛಗೊಳಿಸಲು ಬಳಸುತ್ತೇನೆ. ಒಂದೊಂದೇ ಪಾತ್ರೆಗಳನ್ನು ತೊಳೆಯುವ ಬದಲಿಗೆ ಒಟ್ಟಿಗೆ ತೊಳೆದು ನೀರು ಉಳಿಸುತ್ತೇನೆ.

– ಹೇಮಲತಾ, ರಾಜಾಜಿನಗರ

**

ವಾಷಿಂಗ್‌ ಮೆಷಿನ್‌ಗೆ ಗುಡ್‌ಬೈ!

ಮಿತವಾಗಿ ನೀರನ್ನು ಬಳಸಿ ಅದನ್ನು ಉಳಿಸುವಲ್ಲಿ ಗೃಹಿಣಿಯರ ಪಾತ್ರ ಬಹಳ ಮುಖ್ಯ ಎಂದುಕೊಂಡವಳು ನಾನು. ಇದುವರೆಗೆ ನಾವಿರುವಲ್ಲಿ ನೀರಿನ ಕೊರತೆ ಅಷ್ಟೇನೂ ಕಾಡಿಲ್ಲ. ಆದರೆ ನೀರನ್ನು ಕಡಿಮೆ ಖರ್ಚು ಮಾಡುತ್ತಲೇ ಬಂದಿದ್ದೇನೆ.

ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆ ತೊಳೆಯುವುದರಿಂದ ವಿಪರೀತ ನೀರು ಖರ್ಚಾಗುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಅದನ್ನು ಮೊದಲಿನಿಂದಲೂ ಉಪಯೋಗಿಸುವುದಿಲ್ಲ. ಬಕೆಟ್‌ನಲ್ಲಿಯೇ ಬಟ್ಟೆ ತೊಳೆಯುವುದರಿಂದ ಇನ್ನೂ ಒಂದು ಉಪಯೋಗ ಇದೆ. ಅದೇನೆಂದರೆ, ಬಟ್ಟೆ ತೊಳೆದ ನೀರನ್ನು ನಾವು ಮರುಬಳಕೆ ಮಾಡಬಹುದು. ನಾನು ಕೂಡ ಬಟ್ಟೆ ತೊಳೆದ ನೀರನ್ನು ಟೆರೇಸ್‌ ತೊಳೆಯಲು ಬಳಸುತ್ತೇನೆ.

ಇನ್ನೊಂದು ವಿಷಯ ಎಂದರೆ, ಪಾತ್ರೆ ತೊಳೆಯುವಾಗ ಮಾತ್ರ ನೀರು ಬೇಕು. ಆದರೆ ಸಾಮಾನ್ಯವಾಗಿ ಗೃಹಿಣಿಯರು ಪಾತ್ರೆಗಳನ್ನು ತಿಕ್ಕುವಾಗಲೂ ಅನಗತ್ಯವಾಗಿ ನಲ್ಲಿ ಓಪನ್‌ ಮಾಡಿಕೊಂಡಿರುತ್ತಾರೆ. ಇದರಿಂದ ತುಂಬಾ ನೀರು ಪೋಲಾಗುತ್ತದೆ. ಇದರ ಬಗ್ಗೆಯೂ ಗಮನ ಹರಿಸಿದರೆ ಒಳ್ಳೆಯದು.

- ವೈಶಾಲಿ ಲಕ್ಷ್ಮಿನಾರಾಯಣ, ಎಂಟನೇ ಮೈಲಿ

**

ಶುದ್ಧೀಕರಣ ಪ್ರಕ್ರಿಯೆಯಿಂದ...

ಬಹುತೇಕರ ಮನೆಯಲ್ಲಿ ನೀರು ಶುದ್ಧೀಕರಣ ಸಾಧನ (ವಾಟರ್ ಪ್ಯೂರಿಫೈಯರ್‌) ಸಾಮಾನ್ಯ. ಆದರೆ ಒಂದು ಲೋಟ ಶುದ್ಧ ನೀರು ಪಡೆಯಬೇಕಾದರೆ ಮೂರು ಲೋಟ ನೀರು ವ್ಯರ್ಥವಾಗಿ ಕೊಳವೆ ಮೂಲಕ ಮೋರಿ ಪಾಲಾಗುತ್ತದೆ. ನಮ್ಮ ಮನೆಯಲ್ಲಿ ದಿನಕ್ಕೆ ಎರಡು ಮೂರು ಬಿಂದಿಗೆಯಷ್ಟು ನೀರು ಸಂಗ್ರಹವಾಗುತ್ತದೆ.

ಇದೇ ನೀರನ್ನು ಗಿಡಗಳಿಗೆ ಹಾಕುತ್ತೇನೆ, ಶೌಚಾಲಯದ ಬಳಕೆಗೆ ಹಾಗೂ ಬಚ್ಚಲು ತೊಳೆಯಲು ಉಪಯುಕ್ತ. ಒಂದು ಸುತ್ತು ಪಾತ್ರೆ ತೊಳೆಯಲೂ  ಬಳಸುತ್ತೇನೆ. ಮನೆ ಅಂಗಳ ತೊಳೆಯಲು ಅದನ್ನೇ ಬಳಸುತ್ತೇನೆ.  ಉಳಿದರೆ ನೀರನ್ನು ಸಂಗ್ರಹ ತೊಟ್ಟಿಗೆ ಬಿಡುತ್ತೇನೆ.

- ಶಶಿಕಲಾ, ಚಿಕ್ಕಬಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.