ADVERTISEMENT

ನೆಟ್‌ನಿಂದ ದೂರ ಉಳಿಯುವ ಹೋರಾಟ

ಹೇಮಾ ವೆಂಕಟ್
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ನೆಟ್‌ನಿಂದ ದೂರ ಉಳಿಯುವ ಹೋರಾಟ
ನೆಟ್‌ನಿಂದ ದೂರ ಉಳಿಯುವ ಹೋರಾಟ   

‘ಇಂಟರ್‌ನೆಟ್‌ ಬಂದ ನಂತರ  ಎಲ್ಲವೂ ಸುಲಭವಾಗಿದೆ’ ಎಂದುಕೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ‘ಇಂಟರ್‌ನೆಟ್‌ನಿಂದ ನನ್ನತನ ಕಳೆದು ಹೋಗುತ್ತಿದೆ. ಸಂಗಾತಿಗೆ– ಮಕ್ಕಳಿಗೆ ನಾನು ದೂರವಾಗುತ್ತಿದ್ದೇನೆ’ ಎಂಬ ಹಳಹಳಿಕೆಯೂ ಅನೇಕರಲ್ಲಿ ಆರಂಭವಾಗಿದೆ. 

ಇಂಥವರು ಇದೀಗ ‘ಇಂಟರ್‌ನೆಟ್‌ ಫಾಸ್ಟಿಂಗ್’ (ಅಂತರ್ಜಾಲ ಉಪವಾಸ) ಎಂಬ ಹೊಸ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಇಂಟರ್‌ನೆಟ್‌ ಜಮಾನದ ಯುವಜನರಿಗೆ ‘ನೆಟ್‌ಲೋಕ’ದಿಂದ ಆಚೆಗಿನ ಜಗತ್ತು ಗಮನಿಸಿ ಎಂದು ಕಿವಿಮಾತು ಹೇಳುತ್ತಿದ್ದಾರೆ.

ಏನಿದು ‘ಇಂಟರ್‌ನೆಟ್‌ ಫಾಸ್ಟಿಂಗ್‌’
ಒಂದು ಇಡೀ ದಿನ ಆಹಾರ ಸೇವಿಸದೆ ಇರುವುದು ಮಾಮೂಲಿ ಉಪವಾಸವಾದರೆ, ಇಂಟರ್‌ನೆಟ್‌ ಬಳಸದೇ ಇರುವುದು ‘ಇಂಟರ್‌ನೆಟ್‌ ಫಾಸ್ಟಿಂಗ್’ (ಅಂತರ್ಜಾಲ ಉಪವಾಸ) ಎನಿಸಿಕೊಳ್ಳುತ್ತದೆ. ಕೆಲವರು ದಿನದ ಕೆಲ ನಿರ್ದಿಷ್ಟ ಅವಧಿಯಲ್ಲಿ ಇಂಟರ್‌ನೆಟ್‌ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಕೆಲವರು ವಾರಾಂತ್ಯದಲ್ಲಿ ಇಂಟರ್‌ನೆಟ್‌ನಿಂದ ದೂರ ಉಳಿಯುತ್ತೇವೆ ಎಂದು ಘೋಷಿಸಿಕೊಳ್ಳುತ್ತಾರೆ. ಕೆಲವರದು ತಿಂಗಳಲ್ಲಿ ಒಂದು ವಾರ ಇಂಟರ್‌ನೆಟ್‌ ಬಳಸುವುದಿಲ್ಲ ಎಂಬ ವೀರ ಪ್ರತಿಜ್ಞೆ.

ಮಕ್ಕಳೇ ಕಾರಣ
ಇಂಟರ್‌ನೆಟ್‌ ಫಾಸ್ಟಿಂಗ್ ಆರಂಭಿಸಲು ಒಬ್ಬೊಬ್ಬರಿಗೆ ಒಂದೊಂದು ಕಾರಣ ಇದೆ.  ಆದರೆ ಬಹುತೇಕ ಗೃಹಸ್ಥರು ವಿವರಿಸುವ ಕಾರಣಗಳು ಜೆ.ಪಿ.ನಗರದ ಟೆಕಿ ಶ್ರೀಕಾಂತ್ ಅವರ ಮಾತಿನ ಧಾಟಿಯಲ್ಲಿಯೇ ಇರುತ್ತದೆ.  

‘ನಾನು ಸ್ಮಾರ್ಟ್‌ಫೋನ್ ಬಳಸಲು ಆರಂಭಿಸಿ ಸುಮಾರು ನಾಲ್ಕು ವರ್ಷವಾಯಿತು. ಮೊದಲು ಆಫೀಸಿನ ಕೆಲಸ ಆಫೀಸಿಗೇ ಮುಗಿಯುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಗೆ ಬಂದ ಮೇಲೂ ಇಮೇಲ್ ನೋಡುವುದು, ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಸ್ತಾವನೆಗಳನ್ನು ಪರಿಶೀಲಿಸುವುದು ಮುಂದುವರಿಯುತ್ತಿದೆ. ಎಷ್ಟೋ ಸಲ ಊಟ ಮಾಡುವಾಗಲೂ ಮೊಬೈಲ್‌ ಕೈಲಿ ಹಿಡಿದಿರುತ್ತಿದ್ದೆ. ರಾತ್ರಿ ಮಲಗಿದಾಗಲೂ ದಿಂಬಿನಡಿ ಮೊಬೈಲ್ ಇಟ್ಟಿರುತ್ತಿದ್ದೆ.

ಸರಿ ರಾತ್ರಿಯಲ್ಲಿ ಫೇಸ್‌ಬುಕ್‌/ವಾಟ್ಸ್‌ಆ್ಯಪ್ ಮೆಸೇಜ್‌ ‘ಟಪ್’ ಅಂದರೂ ತೆಗೆದು ನೋಡುತ್ತಿದ್ದೆ. ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹೆಮ್ಮೆಯಿಂದ ‘online everytime 24X7’ ಎಂದು ಬರೆದುಕೊಂಡಿದ್ದೆ’ ಎಂದು ನೆನಪಿಸಿಕೊಂಡರು ಶ್ರೀಕಾಂತ್.

‘ಒಮ್ಮೆ ನನ್ನ ಐದು ವರ್ಷದ ಮಗಳು ಹೊಸ ಡ್ರೆಸ್ ಹಾಕಿಕೊಂಡು ಬಂದು ಮುಂದೆ ನಿಂತಳು. ನಾನು ಫೋಟೊ ತೆಗೆದು ಫೇಸ್‌ಬುಕ್‌ಗೆ ಹಾಕೋಣ ಎಂದು ಮೊಬೈಲ್ ಹೊರ ತೆಗೆದೆ. ಅವಳಿಗೆ ಸಿಟ್ಟು ಬಂತು. ‘ನಂಗೆ ಮೊದಲಿನ ಅಪ್ಪ ಬೇಕು– ನನ್ನ ಮುದ್ದು ಮಾಡೋ ಅಪ್ಪ ಬೇಕು. ಮೂರು ಹೊತ್ತೂ ಮೊಬೈಲ್ ನೋಡೋ ಅಪ್ಪ ಬೇಡ’ ಅಂತ ಅತ್ತೇ ಬಿಟ್ಟಳು. ನನಗೂ ಪಿಚ್ ಎನಿಸಿತು. ಅಂದಿನಿಂದ ನಾನು ಬದಲಾದೆ’ ಎಂದು ತಮಗೆ ಜ್ಞಾನೋದಯವಾದ ಕ್ಷಣವನ್ನು ಆಸ್ಥೆಯಿಂದ ವಿವರಿಸಿದರು.

‘ಈಗ ಮನೆಯಲ್ಲಿದ್ದಾಗ ಮಗಳೊಂದಿಗೆ ಆಡುತ್ತೇನೆ, ಹೆಂಡತಿಯೊಂದಿಗೆ ಮಾತನಾಡುತ್ತೇನೆ. ವಾರಾಂತ್ಯದಲ್ಲಿಯೂ ಇದೇ ಪ್ರವೃತ್ತಿ ಮುಂದುವರೆಸುತ್ತೇನೆ’ ಎನ್ನುವುದು ಅವರ ವಿವರಣೆ. ಸ್ಮಾರ್ಟ್‌ಫೋನ್‌ನಿಂದ ದೂರ ಇರಿ ಎಂದು ಹೆಂಡತಿ ಹೇಳುವುದಕ್ಕಿಂತ ಮಕ್ಕಳು ಹೇಳುವುದು ಹೆಚ್ಚು ಪರಿಣಾಮಕಾರಿ ಎನ್ನುವ ಮಾತನ್ನು ಕೌನ್ಸೆಲಿಂಗ್ ಮಾಡುವವರೂ ಒಪ್ಪುತ್ತಾರೆ. ಆದರೆ ಮಕ್ಕಳನ್ನು ಸ್ಮಾರ್ಟ್‌ಫೋನ್– ಇಂಟರ್‌ನೆಟ್‌ನಿಂದ ದೂರ ಇರಿಸುವುದು ಹೇಗೆ? ಅವರಿಗೆ ಯಾರು ಹೇಳಬೇಕು?

ಏನೋ ಕಳೆದುಕೊಂಡಿದ್ದೇವೆ
ಹೀಗೆ ಇಂಟರ್‌ನೆಟ್‌ ಬಳಕೆಗೆ ಮಿತಿ ಹಾಕಿಕೊಂಡವರ ಫೇಸ್‌ಬುಕ್ ಖಾತೆಗಳನ್ನು ಕುತೂಹಲದಿಂದ ಇಣುಕಿ ನೋಡಿದಾಗ ಹಲವು ಸ್ವಾರಸ್ಯಕರ ಸಂಗತಿಗಳು ಕಣ್ಣಿಗೆ ಬಿದ್ದವು.

‘ಸ್ಮಾರ್ಟ್‌ಫೋನ್‌– ಇಂಟರ್‌ನೆಟ್‌ ಬಳಕೆ ಆರಂಭಿಸಿದ ಮೇಲೆ ಬದುಕಿನಲ್ಲಿ ಏನೋ ಕಳೆದುಕೊಂಡಿದ್ದೇನೆ ಎನಿಸುತ್ತಿದೆ. ಇಂಟರ್‌ನೆಟ್‌ನಿಂದ ದೂರವಿದ್ದು ವಾಸ್ತವ ಬದುಕಿನ ಸೌಂದರ್ಯ ಅನುಭವಿಸಬೇಕಿದೆ’ ಎಂದು ಒಬ್ಬರು ಬರೆದುಕೊಂಡಿದ್ದರು.

‘ಇನ್ನು ಮುಂದೆ ಸದಾ ಇಮೇಲ್ ಚೆಕ್ ಮಾಡುವುದಿಲ್ಲ. ಫೇಸ್‌ಬುಕ್‌, ಟ್ವಿಟರ್‌ ಖಾತೆಗಳನ್ನು ಸಹ ದಿನಕ್ಕೆ ಒಮ್ಮೆ ಮಾತ್ರ ನೋಡುತ್ತೇನೆ. ಸದಾ ಸೋಷಿಯಲ್ ಮೀಡಿಯಾ– ಇಮೇಲ್ ಚೆಕ್ ಮಾಡುವುದು. ಯಾರು ಲೈಕ್ ಮಾಡಿದ್ದಾರೆ? ಏನಂತ ಕಾಮೆಂಟ್ ಹಾಕಿದ್ದರೆ ಎಂದು ಕಾತರಿಸುವುದು ಒಂದು ರೀತಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ’ ಎಂದು ಮತ್ತೊಬ್ಬರ ಗೋಡೆ ಬರಹ ಸಾರಿ ಹೇಳುತ್ತಿತ್ತು.

‘ಆಫ್‌ಲೈನ್‌ ಆದ ಮೇಲೆ ನನಗೆ ಅಂತ ಒಂದಿಷ್ಟು ಟೈಂ ಸಿಕ್ತು. ಓದೋಣ ಅಂತ ಪುಸ್ತಕ ತಂದಿಟ್ಟುಕೊಂಡಿದ್ದೇನೆ. ಸ್ನೇಹಿತರನ್ನು ಭೇಟಿಯಾದಾಗ ಮೊಬೈಲ್ ಸ್ಕ್ರೀನ್ ಸ್ವೈಪ್ ಮಾಡುತ್ತಾ ಅವರಿಗೆ ಮುಜುಗರ ಮಾಡುವುದಿಲ್ಲ’ ಎಂದು ಯುವತಿಯೊಬ್ಬರು ಹೇಳಿಕೊಂಡಿದ್ದರು.

‘ಇಂಟರ್‌ನೆಟ್‌ ಫಾಸ್ಟಿಂಗ್‌ ಆರಂಭಿಸಿದ ನಂತರ ಗುಲಾಮಗಿರಿಯ ಸರಪಳಿಗಳಿಂದ ಬಿಡಿಸಿಕೊಂಡು ಸ್ವತಂತ್ರ ಪಡೆದ ಅನುಭವವಾಗುತ್ತಿದೆ. ಕುಟುಂಬದಲ್ಲಿ  ಸಂತೋಷ ತುಂಬಿದೆ’ ಎಂಬ ಒಕ್ಕಣೆಯೂ ಕೆಲವರ ವಾಲ್‌ಗಳ ಮೇಲೆ ಕಂಡು ಬಂತು.

ಮೊಬೈಲ್‌ ಇಂಟರ್‌ನೆಟ್‌ ಹೆಚ್ಚು ಅಪಾಯಕಾರಿ
ದೊಡ್ಡ ಕಂಪ್ಯೂಟರ್‌ ಸ್ಕ್ರೀನ್‌ನಲ್ಲಿ ಇಂಟರ್‌ನೆಟ್‌ ಬಳಸುವುದಕ್ಕೂ– ಸಣ್ಣ ಮೊಬೈಲ್‌ ಸ್ಕ್ರೀನ್‌ನಲ್ಲಿ ಇಂಟರ್‌ನೆಟ್‌ ಬಳಸುವುದಕ್ಕೂ ವ್ಯತ್ಯಾಸವಿದೆ. ಮೊಬೈಲ್‌ನ ಸಣ್ಣ ಪರದೆಯ ಮೇಲೆ  ಇಂಟರ್‌ನೆಟ್‌ ಜಾಲಾಡುವುದು ಹೆಚ್ಚು ಅಪಾಯಕಾರಿ. ಎರಡೂ ಕಣ್ಣಿನ ದೃಷ್ಟಿ ಒಂದೇ ಕಡೆ ನೆಡುವ ಕಾರಣ ತಲೆನೋವು, ದೃಷ್ಟಿದೋಷ, ಕತ್ತು– ಭುಜಗಳ ನೋವು ಉಂಟಾಗುತ್ತದೆ.

ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಆನ್‌ ಆಗಿದ್ದರೆ ಸಂದೇಶಗಳು ಬರುವ ಸದ್ದಿಗೆ ನೋಡಬೇಕು ಎನಿಸುತ್ತದೆ. ಮೊಬೈಲ್ ಬಳಕೆಯ ಚಟ ಇರುವವರ ನಡವಳಿಕೆಯೆ ಬದಲಾಗುತ್ತದೆ.

ರಸ್ತೆಯಲ್ಲಿ ಹೋಗುವಾಗ, ಸಭೆ–ಸಮಾರಂಭಗಳಲ್ಲಿ, ಬೇರೆಯವರ ಜೊತೆ ಮಾತನಾಡುವಾಗ, ಊಟ ಮಾಡುವಾಗಲೂ ಇವರು ಮೊಬೈಲ್ ಸ್ಕ್ರೀನ್ ಸ್ವೈಪ್ ಮಾಡುತ್ತಲೇ ಇರುತ್ತಾರೆ. ಇದು ಅವರ ವ್ಯಕ್ತಿತ್ವದ ಬಗ್ಗೆಯೇ ಇತರರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ಹೀಗಾಗಿ ದಿನದಲ್ಲಿ ಸ್ವಲ್ಪ ಹೊತ್ತಾದರೂ ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್‌ ಬಳಕೆಯಿಂದ ದೂರ ಉಳಿಯುವುದು ಎಲ್ಲರಿಗೂ ಒಳಿತು.

ಅತಿಯಾದ್ರೆ ಹಲವು ಸಮಸ್ಯೆ
ಇಂಟರ್‌ನೆಟ್‌ಗಾಗಿ ಹೆಚ್ಚು ಸಮಯ ವಿನಿಯೋಗಿಸುವ ಯುವ ಸಮುದಾಯದಲ್ಲಿ ಹೊಸ ಬಗೆಯ ಮಾನಸಿಕ ಮತ್ತು ದೈಹಿಕ   ಸಮಸ್ಯೆಗಳು ಕಂಡು ಬರುತ್ತಿವೆ.ಒಂದು ವಿಷಯದ ಬಗ್ಗೆ ಮಾಹಿತಿ ಪಡೆಯಲು ಗೂಗಲ್‌ಗೆ ಪ್ರವೇಶಿಸಿದರೆ ನಮಗೆ ಬೇಕೋ ಬೇಡವೂ ಹತ್ತಾರು ಮಾಹಿತಿಗಳು ಬಂದು ಬೀಳುತ್ತಿರುತ್ತವೆ. ಕುತೂಹಲದಿಂದ  ಹುಡುಕಾಡುತ್ತೇವೆ.

ಐದು ನಿಮಿಷ ಎಂದು ಕಂಪ್ಯೂಟರ್‌ ಮುಂದೆ ಕುಳಿತವರಿಗೆ ಗಂಟೆಗಳೇ ಸವೆದರೂ ತಿಳಿಯುವುದಿಲ್ಲ. ಕೆಲವರಿಗೆ ಮಾಹಿತಿ ಹುಡುಕುವುದೇ ಚಟವಾಗುತ್ತಿದೆ.ತಮಗಿರುವ ಕಾಯಿಲೆಗಳ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುವ ರೋಗಿಗಳು ಗೊಂದಲ, ಆತಂಕಕ್ಕೆ ಒಳಗಾಗುತ್ತಾರೆ. ಬೆಟ್ಟಿನಷ್ಟು ಕಾಯಿಲೆಯನ್ನು ಬೆಟ್ಟ ಎಂದು ಭಾವಿಸಿ ಕೊರಗುತ್ತಾರೆ.

ತಮ್ಮ ಅಭ್ಯಾಸಕ್ಕೆ ಬೇಕಿರುವ ಮಾಹಿತಿಯನ್ನು ಜಾಲಾಡುವ ವಿದ್ಯಾರ್ಥಿಗಳು ಬೇರಾವುದೋ ಅನಗತ್ಯ ವಿಷಯದ  ಬಗ್ಗೆಯೂ ಗಮನ ಹರಿಸುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಾರೆ.

ಕಂಪ್ಯೂಟರ್‌ ಗೇಮಿಂಗ್‌ನಿಂದ ಮಕ್ಕಳ ಬಲ ಮಿದುಳಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಓದಿನ ಕಡೆ ಏಕಾಗ್ರತೆ ಕಡಿಮೆಯಾಗುತ್ತದೆ. ಅಧ್ಯಯನದ ಕಡೆಗೆ ಸಂಪೂರ್ಣ ಗಮನ ಸರಿಸುವುದು ಸಾಧ್ಯವಾಗದೆ ಕಲಿಕೆಯಲ್ಲಿ ಹಿಂದುಳಿಯುತ್ತಾರೆ.

ತಡ ರಾತ್ರಿಯವರೆಗೂ ಕಂಪ್ಯೂಟರ್ ಮುಂದೆ ಕಳೆಯುವುದರಿಂದ ನಿದ್ರೆ ಕಡಿಮೆಯಾಗುತ್ತದೆ.  ನಿದ್ರಾಹೀನತೆಯಿಂದ ಅಲರ್ಜಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. ದೇಹದ ತೂಕ ಹೆಚ್ಚು ಅಥವಾ ಕಡಿಮೆ ಆಗಬಹುದು.
–ಡಾ. ಜ್ಯೋತಿ, ವೈದ್ಯೆ

***

ಶಿಸ್ತಿನ ದಿನಚರಿ ಇರಲಿ
ಪೋಷಕರು ಇಂಟರ್‌ನೆಟ್‌ ಬಳಕೆಗೆ ಶಿಸ್ತು ರೂಢಿಸಿಕೊಳ್ಳುವುದು ಮುಖ್ಯ. ದಿನದ ಇಂತಿಷ್ಟು ಸಮಯದಲ್ಲಿ ಇಂತಿಂಥ ಕೆಲಸಗಳನ್ನು ಮಾತ್ರವೇ ಇಂಟರ್‌ನೆಟ್‌ ಮೂಲಕ ಮಾಡಿಕೊಳ್ಳುತ್ತೇವೆ ಎಂದು ನಿಗದಿಪಡಿಸಿಕೊಳ್ಳಿ. ನಿಮ್ಮನ್ನು ನೋಡಿ ಮಕ್ಕಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ ಎಂಬ ಸಂಗತಿ ನಿಮ್ಮ ಗಮನದಲ್ಲಿರಲಿ.

ಮಕ್ಕಳಲ್ಲಿ ಇಂಟರ್‌ನೆಟ್‌ ಚಟ ಹೆಚ್ಚಾಗಲು ಶಾಲೆ–ಕಾಲೇಜುಗಳೂ ಕಾರಣ. ಇಂಟರ್‌ನೆಟ್‌ ಆಧರಿತ ಪ್ರಾಜೆಕ್ಟ್‌ಗಳು– ಗೇಮಿಂಗ್‌ ಸ್ಪರ್ಧೆಗಳನ್ನು ಕೆಲವು ಶಿಕ್ಷಣ ಸಂಸ್ಥೆಗಳು ನಡೆಸುತ್ತಿವೆ. ಇದು ಮಕ್ಕಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಮನೆ ಮತ್ತು ಶಾಲೆಗಳಲ್ಲಿಯೂ ಇಂಟರ್‌ನೆಟ್‌ ಬಳಕೆಗೆ ಸಮಯದ ಮಿತಿ ಇರಿಸಿಕೊಳ್ಳುವುದು ಒಳಿತು. ಇಂಟರ್‌ನೆಟ್‌ ಬಳಕೆಯು ನಮ್ಮನ್ನು ಕೊಳ್ಳುಬಾಕರನ್ನಾಗಿಯೂ ಮಾಡಿಬಿಡುತ್ತದೆ.

ಒಮ್ಮೆ ಆನ್‌ಲೈನ್‌ನಲ್ಲಿ ಶಾಪಿಂಗ್‌  ಮಾಡಿದರೆ ಸಾಕು, ಪ್ರತಿದಿನ ಶಾಪಿಂಗ್‌ ಜಾಹೀರಾತುಗಳು ನಮ್ಮ ಇಮೇಲ್‌, ಫೇಸ್‌ಬುಕ್‌ ಖಾತೆಗೆ ಬಂದು ಬೀಳುತ್ತಿರುತ್ತವೆ. ಕುತೂಹಲಕ್ಕೆಂದು ಜಾಲಾಡಿದರೂ ಹಣ– ಸಮಯ ವ್ಯರ್ಥ.
–ಲಕ್ಷ್ಮೀ ಎಸ್‌. ಹೊಳ್ಳ, ವಕೀಲೆ ಮತ್ತು ಆಪ್ತ ಸಮಾಲೋಚಕಿ

ಜಾಲಾಟ ಬಿಡುವ ಮೊದಲು
ಇಂಟರ್‌ನೆಟ್‌ ಫಾಸ್ಟಿಂಗ್ ಆರಂಭಿಸುವ ಮೊದಲು ಕೆಲ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ನಿಮ್ಮ ವರ್ತನೆಯ ಬದಲಾವಣೆಯನ್ನು ಸಹೋದ್ಯೋಗಿಗಳು, ಕುಟುಂಬದ ಸದಸ್ಯರು ಮತ್ತು ಗೆಳೆಯರು ತಪ್ಪು ತಿಳಿಯಬಹುದು.
* ದಿನದ ಯಾವ ಅವಧಿಯಲ್ಲಿ ಸ್ಮಾರ್ಟ್‌ಫೋನ್– ಇಂಟರ್‌ನೆಟ್‌ನಿಂದ ದೂರ ಇರುವೆ ಎಂಬುದನ್ನು ಆಪ್ತರಿಗೆ ಸ್ಪಷ್ಟವಾಗಿ ತಿಳಿಸಿ.
* ದಿನಗಟ್ಟಲೆ ಇಂಟರ್‌ನೆಟ್‌– ಮೊಬೈಲ್‌ನಿಂದ ದೂರ ಇರುವಿರಾದರೇ ಅದನ್ನು ಸಾಕಷ್ಟು ಮುಂಚಿತವಾಗಿ ಮನಗಾಣಿಸಿ.
* ಅತಿ ಮುಖ್ಯವಾದ ಇಮೇಲ್, ವಾಟ್ಸ್‌ಆ್ಯಪ್ ಸಂದೇಶಗಳಿದ್ದರೆ ಫೋನ್ ಮಾಡಿ ತಿಳಿಸುವಂತೆ ವಿನಂತಿಸಿ.
* ನೀವು ಇಂಟರ್‌ನೆಟ್‌ ಫಾಸ್ಟಿಂಗ್ ಆರಂಭಿಸಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ನಿಮ್ಮನ್ನು ಗೌರವಿಸುವವರು ನಿಮ್ಮ ನಿರ್ಧಾರವನ್ನು ಬೆಂಬಲಿಸುತ್ತಾರೆ.
* ಪುಟಾಣಿಗಳ ಎದುರು ಸದಾ ಮೊಬೈಲ್‌ನಲ್ಲಿ ಲಾಲಿ, ರೈಮ್ಸ್‌ ಹಾಕಬೇಡಿ. ನೀವೇ ಕಲಿತು ಹಾಡಿ, ಮಕ್ಕಳಿಗೂ ಕಲಿಸಲು ಯತ್ನಿಸಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT