ADVERTISEMENT

ಪಲ್ಲವಿ ಕನಸಿಗೆ ‘ಕಿಡಿ’ ಹತ್ತಿಕೊಂಡಿದೆ!

ಸುಮನಾ ಕೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಪಲ್ಲವಿ ಕನಸಿಗೆ ‘ಕಿಡಿ’ ಹತ್ತಿಕೊಂಡಿದೆ!
ಪಲ್ಲವಿ ಕನಸಿಗೆ ‘ಕಿಡಿ’ ಹತ್ತಿಕೊಂಡಿದೆ!   

ಅಂದುಕೊಂಡದ್ದೆಲ್ಲಾ ಕಾರ್ಯರೂಪಕ್ಕೆ ಬರುವುದು ಅಂತಾರಲ್ಲ. ಈ ಮಾತು ಪಲ್ಲವಿ ಗೌಡ ಅವರಿಗೆ ಈಗ ಅನ್ವಯವಾಗುತ್ತದೆ. ಮಲಯಾಳಂನ ‘ಕಲಿ’ ಚಿತ್ರ ನೋಡಿದಾಗ ‘ಅಯ್ಯೋ ಸಾಯಿಪಲ್ಲವಿ ಜಾಗದಲ್ಲಿ ನಾನಿರಬಾರದಿತ್ತೇ’ ಎಂದು ಹೊಟ್ಟೆ ಉರಿದುಕೊಂಡಿದ್ದರು ಪಲ್ಲವಿ. ಆದರೆ ಅದ್ಯಾವ ದೇವರು ಅವರ ಒಳಬೇಗುದಿಯನ್ನು ಅರ್ಥ ಮಾಡಿಕೊಂಡರೋ? ‘ಕಲಿ’ಯ ಕನ್ನಡ ಅವತರಣಿಕೆಯಾದ ‘ಕಿಡಿ’ಯಲ್ಲಿ ನಾಯಕಿಯಾಗಿ ಮಾಡ್ತೀರಾ ಎಂಬ ಕರೆ ಬಂದೇಬಿಟ್ಟಿತು! ಅವರ ಕನಸಿಗೆ ‘ಕಿಡಿ’ ಹತ್ತಿಕೊಂಡಿದೆ. ಅದರ ಪ್ರಭೆಯಲ್ಲಿ ಪಲ್ಲವಿ ಬೆಳಗುತ್ತಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೊಂದು ಮೂರು ಬಾಗಿಲು’ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದವರು ನಟಿ ಪಲ್ಲವಿ. ನಟಿಸಿದ ಮೊದಲ ಪಾತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡ ಖುಷಿ ಅವರದು. ಅನಂತರ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದು 'ಗಾಳಿಪಟ' ಧಾರಾವಾಹಿಯಲ್ಲಿ. ಈ ಧಾರಾವಾಹಿ ಐದು ವರ್ಷ ಪ್ರಸಾರವಾಗಿತ್ತು.

ಪಲ್ಲವಿಗೆ ಕಾಲೇಜಿನಲ್ಲಿದ್ದಾಗಲೇ ಸಿನಿಮಾಗಳಿಂದ ಅನೇಕ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ ಈ ಕ್ಷೇತ್ರದಲ್ಲಿ ಗಾಡ್‌ ಫಾದರ್‌ಗಳು ಇಲ್ಲ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಕೇಳಿದ್ದ ಕೆಲ ಸುದ್ದಿಗಳಿಂದ ಇವರ ಅಪ್ಪ ಸಿನಿಮಾ ಕ್ಷೇತ್ರಕ್ಕೆ ಹೋಗಲು ಒಪ್ಪಲಿಲ್ಲ. ಕೊನೆಗೆ ಅನಿಮೇಶನ್‌ ಕೋರ್ಸ್‌ ಮಾಡುತ್ತಿದ್ದಾಗ ಅಪ್ಪನನ್ನು ಕಾಡಿ 'ಮನೆಯೊಂದು ಮೂರು ಬಾಗಿಲು' ಧಾರಾವಾಹಿ ಒಪ್ಪಿಕೊಂಡರು. ಪಲ್ಲವಿಗೆ ಕಿರುತೆರೆಗೆ ಪ್ರವೇಶಿಸುವಂತೆ ಹುರಿದುಂಬಿಸಿದವರು ನಟಿ ಸುಂದರಶ್ರೀ. ಅವರ ಪ್ರೋತ್ಸಾಹದಿಂದ ಈ ಕ್ಷೇತ್ರಕ್ಕೆ ಬಂದೆ ಎನ್ನುತ್ತಾರೆ ಪಲ್ಲವಿ.

ADVERTISEMENT

ತೆಲುಗಿನ ’ಪಸ್ಪು ಕುಂಕುಮ’ ಎಂಬ ಧಾರಾವಾಹಿಯಲ್ಲಿ ಪಲ್ಲವಿ ನಟಿಸಿದ್ದಾರೆ. ಈ ಧಾರಾವಾಹಿಯ ನಟನೆಗೆ ಉತ್ತಮ ನಾಯಕಿ ನಟಿ, ಉತ್ತಮ ಉದಯೋನ್ಮುಖ ನಟಿ ಸೇರಿದಂತೆ ಐದು ಪ್ರಶಸ್ತಿಗಳು ಪಲ್ಲವಿ ಪಾಲಾಗಿವೆ. ಇದಾದ ಬಳಿಕ 'ಚಂದ್ರಚಕೋರಿ' ಧಾರಾವಾಹಿಯಲ್ಲೂ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

ಸದ್ಯ ಪಲ್ಲವಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ’ಪರಿಣಯ’ ಹಾಗೂ ಜೀ ವಾಹಿನಿಯ ’ಜೋಡಿಹಕ್ಕಿ’ಯಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿದ್ದಾರೆ. ’ಪರಿಣಯ’ದಲ್ಲಿ ಮೋಜಿನ ಮತ್ತು ಪೆದ್ದು ಮುದ್ದು ನಾಯಕಿಯ ಪಾತ್ರವಾದರೆ, ಜೋಡಿಹಕ್ಕಿಯಲ್ಲಿ ಖಳನಾಯಕಿ.

’ಮೃದು ಪಾತ್ರ ಮಾಡುವಾಗ ಖುಷಿ, ಅಳು, ನಗು ಇದಕ್ಕಷ್ಟೇ ಅವಕಾಶ. ಆದರೆ ವಿಲನ್‌ ಪಾತ್ರದಲ್ಲಿ ಎಲ್ಲಾ ಬಗೆ ಭಾವ, ನಟನೆಗೆ ಅವಕಾಶವಿದೆ. ಜಗದೀಶ್‌ ಸರ್‌ ವಿಲನ್‌ ಪಾತ್ರ ಮಾಡಬೇಕು ಎಂದು ಕೇಳಿಕೊಂಡಾಗ ಎಲ್ಲರೂ ಬೇಡ ಎಂದಿದ್ದರು. ಈ ಧಾರಾವಾಹಿಯಲ್ಲಿ ನನ್ನ ಪಾತ್ರಕ್ಕೆ ನಾಯಕಿಯಷ್ಟೇ ಸಮಾನ ಅವಕಾಶವಿದೆ. ನಟನೆಗೂ ಅವಕಾಶವಿದೆ. ಹೀಗಾಗಿ ಒಪ್ಪಿಕೊಂಡೆ’ ಎಂದು ಹೇಳುತ್ತಾರೆ.  

ಆರಂಭದಲ್ಲಿ ಪಲ್ಲವಿ ಸಿನಿಮಾ ಕ್ಷೇತ್ರವೇ ಬೇರೆ, ಕಿರುತೆರೆಯೇ ಬೇರೆ ಎಂದು ಸಿನಿಮಾದಿಂದ ದೂರ ಇದ್ದರು. ಆದರೆ ಛಾಯಾಗ್ರಾಹಕ ರುದ್ರಮುನಿ ಅವರು ’ಪ್ರೇಮ ಗೀಮ ಜಾನೆದೊ’ ಸಿನಿಮಾದಲ್ಲಿ ನಟಿಸುವಂತೆ ಹೇಳಿದರು. ಕಳೆದ ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಆದರೆ ಅದೇ ಸಮಯದಲ್ಲಿ ಏಳು ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿದ್ದರಿಂದ ಈ ಸಿನಿಮಾ ನಿರೀಕ್ಷಿಸಿದಷ್ಟು ಹಿಟ್‌ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪಲ್ಲವಿ.

’ಈಗ  ’ಕಿಡಿ’ ಚಿತ್ರ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರದ ಚಿತ್ರೀಕರಣ ಒಂದು ಒಳ್ಳೆಯ ಪಿಕ್‌ನಿಕ್‌ ಅನುಭವ ನೀಡಿದೆ. ಚಿತ್ರದ  ಹಾಡುಗಳ ಚಿತ್ರೀ ಕರಣ ಬ್ಯಾಂಕಾಕ್‌ನಲ್ಲಿ ನಡೆದಿದ್ದು, ಅಲ್ಲಿ ಭಯಂಕರ ಬಿಸಿಲು. ಮೂರು ದಿನದ ಚಿತ್ರೀಕರಣ ಮುಗಿಸಿ ಕೊಂಡು ಈಗ ವಾಪಸ್‌ ಆಗಿದ್ದರೂ ಇನ್ನೂ ನನ್ನ ನಿಜವಾದ ಬಣ್ಣ ವಾಪಸ್‌ ಬಂದಿಲ್ಲ. ಮೂಲ ಸಿನಿಮಾದಲ್ಲಿ ನಟಿ ಸಾಯಿಪಲ್ಲವಿ. ಇಲ್ಲಿ ಬರೀ ಪಲ್ಲವಿ’ ಎಂದು ಪುಳಕಗೊಳ್ಳುತ್ತಾರೆ.

ಡ್ರಾಯಿಂಗ್‌, ಪೇಂಟಿಂಗ್‌, ಹೊಸ ರುಚಿ ಪ್ರಯೋಗ ಪಲ್ಲವಿಯ ಹವ್ಯಾಸಗಳು. ಉತ್ತರ ಭಾರತ, ದಕ್ಷಿಣ ಭಾರತ, ಸಸ್ಯಾಹಾರಿ, ಮಾಂಸಾಹಾರಿ,ಸಿಹಿ ಹೀಗೆ ಎಲ್ಲಾ ಬಗೆಯ ಅಡುಗೆ ಮಾಡುತ್ತಾರಂತೆ. ’ಇಲ್ಲಿ ತನಕ ಯಾವ ಪ್ರಯೋಗಗಳೂ ಕೈಕೊಟ್ಟಿಲ್ಲ. ಚಿತ್ರೀಕರಣ ಇಲ್ಲದೇ ಇದ್ದಾಗ ಮನೆಯಲ್ಲಿ ಹೊಸ ಪ್ರಯೋಗ ಇದ್ದೇ ಇರುತ್ತದೆ’ ಎಂದು ನಗುತ್ತಾರೆ.

ಫಿಟ್‌ನೆಸ್‌ಗಾಗಿ ಪಲ್ಲವಿ ವಿಶೇಷ ಪ್ರಯತ್ನವೇನೂ ಮಾಡುವುದಿಲ್ಲ. ‘ರಜೆ ಇದ್ದಾಗ ಚೆನ್ನಾಗಿ ತಿಂದು ಮಲಗುತ್ತೇನೆ. ಮೂರು ವರ್ಷದ ಹಿಂದೆ ಹೈದ ರಾಬಾದ್‌ನಲ್ಲಿ ಕಾಲು ಮುರಿದು ಮೂರು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರಿಂದ 12 ಕೆ.ಜಿ ತೂಕ ಹೆಚ್ಚಾಗಿತ್ತು. ಆದರೆ ಈಗ ನಾಲ್ಕು ಕೆ.ಜಿ ಕಡಿಮೆ ಆಗಿದ್ದೇನೆ. ಆದರೆ ಚರ್ಮದ ರಕ್ಷಣೆಗೆ ಗಮನ ಕೊಡುತ್ತೇನೆ. ಒಂದು ಬಾರಿ ಧಾರಾವಾಹಿಯಲ್ಲಿ ಚರ್ಮದ ಆಲರ್ಜಿ ಆಗಿ ಕಷ್ಟಪಟ್ಟಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.