ADVERTISEMENT

ಪೇಪರ್‌ಗೆ ಕಿವಿಯೊಡ್ಡಿ...

ಹವ್ಯಾಸ

ಸುರೇಖಾ ಹೆಗಡೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಕ್ಷಣಕ್ಷಣವೂ ಹೊಸತನವನ್ನು ನೀಡುವ ಕಲೆಗೆ ಹಾಗೂ ಸೃಜನಶೀಲತೆಗೆ ಕೊನೆ ಎಂಬುದಿಲ್ಲ. ಕಲಿಯುವ ಆಸಕ್ತಿ ಹಾಗೂ ಹಿಡಿದ ಕೆಲಸವನ್ನು ಮಾಡದೆ ಬಿಡುವ ಛಲ ಇದ್ದರೆ ಕಲೆಯನ್ನು ಕರಗತ ಮಾಡಿಕೊಳ್ಳುವುದು ಸುಲಭ.

ಯಾವ ಕಲಾ ತರಗತಿಗೂ ತೆರಳದೆ ಮನಸ್ಸಿನ ಕರೆಗೆ ಓಗೊಟ್ಟು ಹವ್ಯಾಸವನ್ನು ರೂಢಿಸಿಕೊಂಡ ಅನೇಕರು ಕಲೆಯಲ್ಲಿ ನಿಪುಣತೆ ಪಡೆದ ಉದಾಹರಣೆಗಳು ಸಾಕಷ್ಟಿವೆ. ಅಂಥವರಲ್ಲಿ ನಗರದ ಪೀಣ್ಯ ದಾಸರಹಳ್ಳಿ ನಿವಾಸಿ ಪಾವನಾ ಕೂಡ ಒಬ್ಬರು.

ಬಯೊಕೆಮೆಸ್ಟ್ರಿಯಲ್ಲಿ ಎಂಎಸ್ಸಿ ಮಾಡಿರುವ ಇವರು ಭರತನಾಟ್ಯ ಕಲಾವಿದೆ. ಯೋಗಾ ಹೇಳಿಕೊಟ್ಟಿರುವ ಅನುಭವವೂ ಬೆನ್ನಿಗಿದೆ. ಕಳೆದ ಎರಡು ವರ್ಷದ ಹಿಂದೆ ಸ್ವಪ್ರಯತ್ನದಿಂದ ಕ್ವಿಲ್ಲಿಂಗ್‌ ವಿದ್ಯೆ ಕಲಿತು ವಿಭಿನ್ನ ವಿನ್ಯಾಸದ ಕಿವಿಯೋಲೆ, ಸರ, ಪೆಂಡೆಂಟ್‌ಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಫೇಸ್‌ಬುಕ್‌ನಲ್ಲಿ ‘ಬಾಟಮ್‌ ಲೈನ್ಸ್‌’ ಎನ್ನುವ ಪೇಜ್‌ ಪ್ರಾರಂಭಿಸಿ, ತಾನು ವಿನ್ಯಾಸಗೊಳಿಸಿದ ಕಿವಿಯೋಲೆಗಳನ್ನು ಮಾರಾಟ ಕೂಡ ಮಾಡುತ್ತಾರೆ. ವಿಭಿನ್ನ ವಿನ್ಯಾಸ ಹಾಗೂ ಬಣ್ಣಗಳ ಸಂಯೋಜನೆಯಿಂದ ಈ ಕಿವಿಯೋಲೆಗಳು ಕಣ್‌ಸೆಳೆಯುವಂತೆ ಮಾಡಿದ್ದಾರೆ ಪಾವನಾ.

‘ಶಾಲಾ ಮಕ್ಕಳಿಗೆ ಕಾರ್ಯಾಗಾರ ನಡೆಸುತ್ತಿದ್ದೆ. ಅವರಿಗೆ ಹೊಸದನ್ನು ಹೇಳಿಕೊಡುವ ಆಸೆಯಿಂದ ಅಂತರ್ಜಾಲ ತಡಕಿದೆ. ಅಲ್ಲಿ ಕ್ವಿಲ್ಲಿಂಗ್‌ ಪೇಪರ್‌ ವಿನ್ಯಾಸಗಳು ಕಣ್ಣಿಗೆ ಬಿದ್ದವು. ನಿಧಾನವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದೆ. ಇಷ್ಟು ಸುಲಭವಾದ ಕಲೆ ಕಲಿಯದೆ ಬಿಡಲು ಅಸಾಧ್ಯ ಎಂದೆನಿಸಿ ಗೂಗಲ್‌, ಯುಟ್ಯೂಬ್‌ಗಳ ಮೂಲಕ ವಿನ್ಯಾಸಗಳನ್ನು ಅರಿತುಕೊಂಡೆ. ಈ ಬಗ್ಗೆ ಸಾಕಷ್ಟು ರಿಸರ್ಚ್‌ ಕೂಡ ಮಾಡಿದೆ. ಕ್ರಮೇಣ ನನ್ನ ಕ್ರಿಯಾಶೀಲತೆ ಬಳಸಿ ವಿಭಿನ್ನ ವಿನ್ಯಾಸ ಮಾಡಲು ಪ್ರಾರಂಭಿಸಿದೆ’ ಎನ್ನುತ್ತಾರೆ ಪಾವನಾ.

ಪ್ರತಿ ಬಾರಿ ಹೊಸ ವಿನ್ಯಾಸ ಪ್ರಾರಂಭಿಸುವಾಗಲೂ ಸಾಕಷ್ಟು ಚಿಂತನೆ ನಡೆಸುವ ಇವರು ವರ್ಣ ಸಂಯೋಜನೆಯ ಕುರಿತು ಹೆಚ್ಚು ಯೋಚಿಸುತ್ತಾರೆ. ವಿನ್ಯಾಸ ಬದಲಾದಂತೆ ತೆಗೆದುಕೊಳ್ಳುವ ಸಮಯದಲ್ಲೂ ಏರುಪೇರಾಗುತ್ತದೆ. ಅಲ್ಲದೆ ಸೂಕ್ಷ್ಮ ಕೆಲಸ ಇದಾಗಿರುವುದರಿಂದ ಸಮಯ ಉಳಿಸುವ ನೆಪದಲ್ಲಿ ಬಸ್‌ನಲ್ಲಿ ಸಂಚರಿಸುವಾಗಲೂ ಕ್ವಿಲ್ಲಿಂಗ್‌ ಕೆಲಸ ಮಾಡುತ್ತಿದ್ದರು ಪಾವನಾ.

ವಾಲ್‌ ಹ್ಯಾಂಗಿಂಗ್‌, ಪೇಂಟಿಂಗ್‌ನಲ್ಲೂ ಆಸಕ್ತಿ ಹೊಂದಿರುವ ಪಾವನಾಗೆ ಶಿಕ್ಷಕಿಯೊಬ್ಬರ ಮಾತೇ ಕ್ವಿಲ್ಲಿಂಗ್‌ ಪೇಪರ್‌ನಿಂದ ಕಿವಿಯೋಲೆ ಮಾಡುವ ಹವ್ಯಾಸ ರೂಢಿಸಿಕೊಳ್ಳಲು ಕಾರಣವಂತೆ. ಅವರು ವಿನ್ಯಾಸಗೊಳಿಸಿದ ಕೆಲವು ಕಿವಿಯೋಲೆಗಳನ್ನು ಸ್ನೇಹಿತರು, ಸಂಬಂಧಿಕರು ಇಷ್ಟಪಟ್ಟು ಮಾಡಿಕೊಡುವಂತೆ ಕೇಳಿಕೊಳ್ಳುತ್ತಿದ್ದರು. ಇದೀಗ ಆಯಾ ದಿರಿಸಿಗೆ ಮ್ಯಾಚ್‌ ಆಗುವಂತೆಯೂ ‍ಪಾವನಾ ಕಿವಿಯೋಲೆ ತಯಾರಿಸಿಕೊಡುತ್ತಾರೆ.

ದಿರಿಸಿನ ಚಿತ್ರ ಕಳುಹಿಸಿದರೆ ಸಾಕು, ಅದಕ್ಕೆ ತಕ್ಕಂತೆ, ಮ್ಯಾಚ್‌ ಆಗುವ ಕಿವಿಯೋಲೆ ಮಾಡಿಕೊಡುವ ಪಾವನಾ ವಿನ್ಯಾಸಗೊಳಿಸಿರುವ ಕಿವಿಯೋಲೆಗೆ ₹ 30ರಿಂದ ₹ 300ವರೆಗೆ ಬೆಲೆ ನಿಗದಿ ಪಡಿಸಿದ್ದಾರೆ.

ಪಾವನಾ ಹವ್ಯಾಸಕ್ಕೆ ಅಪ್ಪ ಅಮ್ಮನೇ ಸ್ಫೂರ್ತಿ ಕೊಟ್ಟವರು. ಆಸಕ್ತಿಯಿಂದ ಕಲಿತ ಈ ಹವ್ಯಾಸವನ್ನು ಮುಂದೆ ಪೂರ್ಣಕಾಲಿಕ ವೃತ್ತಿಯನ್ನಾಗಿಸಿಕೊಳ್ಳುವ ಚಿಂತನೆಯೂ ಅವರಿಗಿದೆ. ‘ಅಷ್ಟೇನೂ ಕಷ್ಟವಲ್ಲದ ಈ ಕಲೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶನಕ್ಕಿಡಬೇಕು ಎಂದುಕೊಂಡಿದ್ದೇನೆ. ಅದೂ ಅಲ್ಲದೆ ಕೆಲ ಅಂಗಡಿಗಳನ್ನು ಸಂಪರ್ಕಿಸಿ ಹಾಗೂ ಆನ್‌ಲೈನ್‌ ಮೂಲಕ ಪೂರ್ಣಪ್ರಮಾಣದ ಮಾರಾಟ ಮಾಡುವ ಯೋಜನೆಯಿದೆ. ಸಮಕಾಲೀನ ವಿನ್ಯಾಸದ ಈ ಕಿವಿಯೋಲೆಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ ಪಾವನಾ.

ಕ್ವಿಲ್ಲಿಂಗ್‌ ಪೇಪರ್‌, ಗ್ಲ್ಯೂ, ವಾರ್ನಿಶ್‌ ಹಾಗೂ ಕಿವಿಯೋಲೆ ಮಾಡಲು ಬೇಕಾದ ಆ್ಯಕ್ಸಸರೀಸ್‌ ಬಳಸಿಕೊಂಡು ಅಂದದ ವಿನ್ಯಾಸ ಸೃಷ್ಟಿಸುವ ಪಾವನಾ ‘ಗೂಗಲ್‌ ಹಾಗೂ ಯೂಟ್ಯೂಬ್‌ ನೋಡಿ ಈ ವಿದ್ಯೆ ಕಲಿತಿದ್ದೇನೆ. ಆದರೆ ಯಾವ ವಿನ್ಯಾಸವನ್ನೂ ಅನುಕರಿಸಿಲ್ಲ. ಅಭ್ಯಾಸ ಮಾಡುತ್ತಾ ಮಾಡುತ್ತಾ ವಿವಿಧ ವಿನ್ಯಾಸ ಹಾಗೂ ಕ್ರಿಯಾಶೀಲತೆ ಬೆಳೆಯುತ್ತದೆ’ ಎನ್ನುತ್ತಾರೆ.

ಸರಳ ಕಲೆ ಕ್ವಿಲ್ಲಿಂಗ್‌
ಮನಸ್ಸಿಗೆ ಮುದ ನೀಡುವ ಹಾಗೂ ನೋಡುತ್ತಿದ್ದಂತೆ ವಾವ್‌ ಎನಿಸುವಂತೆ ಮಾಡುವ ಕ್ವಿಲ್ಲಿಂಗ್‌ ಪೇಪರ್‌ ವಿನ್ಯಾಸವನ್ನು ಯಾರು ಬೇಕಾದರೂ ಕರಗತ ಮಾಡಿಕೊಳ್ಳಬಹುದು. ಅಂತರ್ಜಾಲ ತಡಕಾಡಿ ವಿನ್ಯಾಸದ ಕೆಲ ಪಟ್ಟುಗಳನ್ನು ಅರಿತುಕೊಂಡರೆ ಸಾಕು. ಮುಂದೆ ನಿಮ್ಮ ಕ್ರಿಯಾಶೀಲತೆ ರೆಕ್ಕೆ ಕಟ್ಟಿ ವಿವಿಧ ವಿನ್ಯಾಸಗಳನ್ನು ಮಾಡಬಹುದು. ಏಕಾಗ್ರತೆ, ಆಸಕ್ತಿ ಹಾಗೂ ತಾಳ್ಮೆ ಇದ್ದರೆ ಅತ್ಯಂತ ಬೇಗನೆ ಹಾಗೂ ಸುಲಭವಾಗಿ ಕಲಿತುಕೊಳ್ಳಬಹುದಾದ ಕಲೆಯಿದು. ಅದೂ ಅಲ್ಲದೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ದುಬಾರಿಯೇನಲ್ಲ.

ಮಾಹಿತಿಗೆ: https://www.facebook.com/ BottomLines/ ammu.pavna@gmail.com

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.