ADVERTISEMENT

ಪ್ರಸಾಧನ ಪಂಡಿತ

ಪಂಚರಂಗಿ

ವಿದ್ಯಾಶ್ರೀ ಎಸ್.
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಪ್ರಸಾಧನ ಪಂಡಿತ
ಪ್ರಸಾಧನ ಪಂಡಿತ   
ಮುದ್ದಾದ ನಟಿ ಅಮೂಲ್ಯ ಮದುವೆಯಲ್ಲಿ ಮತ್ತಷ್ಟು ಕಂಗೊಳಿಸುವಂತೆ ಮಾಡುವಲ್ಲಿ ಮೇಕಪ್‌ ಕಲಾವಿದ ನಟರಾಜ್‌ ಕೈಚಳಕವಿದೆ. ಬ್ರೈಡಲ್‌ ಮೇಕಪ್‌ ಮತ್ತು ಕೇಶವಿನ್ಯಾಸದಲ್ಲಿ ಹತ್ತು ವರ್ಷದ ಅನುಭವವಿರುವ ಇವರು ತುರುವೇಕರೆಯವರು.  ಹಲವು ಸೆಲೆಬ್ರಿಟಿಗಳ ಮೊಗವನ್ನು ತಿದ್ದಿ ತೀಡಿರುವ ನಟರಾಜ್‌,  ತಮ್ಮ ವೃತ್ತಿಯಲ್ಲಿ ಬೆಳೆದ ಆಸಕ್ತಿಯನ್ನು   ವಿವರಿಸುವುದು ಹೀಗೆ... 
 
* ಬಣ್ಣದ ನಂಟು ಬೆಳೆದಿದ್ದು ಹೇಗೆ?
ನನ್ನ ಭಾವ ಸಿನಿಮಾ ಮಂದಿಗೆ ಕೇಶವಿನ್ಯಾಸ ಮಾಡುತ್ತಿದ್ದರು.  ಶಿವರಾಜ್‌ಕುಮಾರ್‌, ರವಿಚಂದ್ರನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಕೇಶ ವಿನ್ಯಾಸ ಮಾಡಿದ್ದಾರೆ. ಅವರಿಂದ ನನಗೂ ಈ ಕ್ಷೇತ್ರದಲ್ಲಿ ಆಸಕ್ತಿ ಬಂತು. ಐದು ವರ್ಷ ಸಿನಿಮಾದವರಿಗೆ ಮೇಕಪ್‌ ಮತ್ತು ಕೇಶ ವಿನ್ಯಾಸ ಮಾಡುತ್ತಿದ್ದೆ. ಬ್ರೈಡಲ್‌ ಮೇಕಪ್‌ ಬಗ್ಗೆ ತಿಳಿದುಕೊಂಡ ನಂತರ ನನ್ನ ಆಸಕ್ತಿ ಇತ್ತ ಹೊರಳಿತು. ಇಲ್ಲಿ ಸೃಜನಶೀಲತೆಗೆ ಹೆಚ್ಚು ಒತ್ತು ಇರುತ್ತದೆ. 
 
* ಮೇಕಪ್ ಬಗ್ಗೆ ನೀವು ನೀಡುವ ವ್ಯಾಖ್ಯಾನ?
ಮೇಕಪ್‌ ಹಚ್ಚುವುದು ಸುಲಭದ ಕೆಲಸವಲ್ಲ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಹಚ್ಚುವ ಕೌಶಲ ಅರಿತಿರಬೇಕು.  ಮೇಕಪ್ ಕಲಾವಿದನಾದವನು ಸದಾ ಕ್ರಿಯಾಶೀಲನಾಗಿರಬೇಕು.  ಪ್ರಯೋಗಕ್ಕೆ ತನ್ನನ್ನು ತಾನು ತೆರೆದುಕೊಂಡರಷ್ಟೇ ಈ ಕ್ಷೇತ್ರದಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯ. ಮೇಕಪ್‌ ಮಾಡಿಸಿಕೊಳ್ಳುವವರು ನಮ್ಮ ಮೇಲೆ ನಂಬಿಕೆ ಇಟ್ಟು ಮುಖ ಒಡ್ಡುತ್ತಾರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. 
 
* ಮೇಕಪ್‌ ಈಗ ಎಷ್ಟರಮಟ್ಟಿಗೆ ಪ್ರಾಮುಖ್ಯ ಪಡೆದಿದೆ? 
ಈಗಂತೂ ಎಲ್ಲಾ ಸಂದರ್ಭಗಳಲ್ಲಿಯೂ ಮೇಕಪ್‌ ಹಚ್ಚಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.  ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಸರಳ ಸಮಾರಂಭದಲ್ಲಿಯೂ ಮೇಕಪ್‌ ಹಚ್ಚಿಕೊಳ್ಳದೇ ಇರಲಾರರು. ಕಚೇರಿಗೆ ಹೋಗುವುದರಿಂದ ಶಾಪಿಂಗ್‌ಗೆ ಹೋಗುವ ತನಕ ಮೇಕಪ್‌ ಇಲ್ಲದೇ ಹೊರಗೆ ಹೋಗುವವರು ಕಡಿಮೆ. ಹೀಗಾಗಿ ನಮ್ಮ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ.
 
* ಬ್ರೈಡಲ್‌ ಮೇಕಪ್‌, ಸಿನಿಮಾ ಮತ್ತು ರೂಪದರ್ಶಿಯರ ಮೇಕಪ್‌ನಲ್ಲಿ ವ್ಯತ್ಯಾಸವೇನು?
ಬ್ರೈಡಲ್‌ ಮೇಕಪ್‌ನಲ್ಲಿ ನಮ್ಮ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವುದು ಸಾಧ್ಯ. ವಧುವಿಗೆ ಯಾವ ರೀತಿಯ ಮೇಕಪ್‌ ಹೊಂದುತ್ತದೆ ಎಂಬುದನ್ನು ನಾವೇ ಸಲಹೆ ನೀಡಿ ಪ್ರಯೋಗ ಮಾಡುತ್ತೇವೆ. ಸಿನಿಮಾ ಕಲಾವಿದರಿಗೆ ಮೇಕಪ್‌ ಮಾಡುವಾಗ ನಮ್ಮ ಕೌಶಲ ತೋರಿಸಲು ಇರುವ ಅವಕಾಶ ಕಡಿಮೆ. ಪಾತ್ರ, ಸನ್ನಿವೇಶಕ್ಕೆ ತಕ್ಕಂತೆ ಮೇಕಪ್‌ ಮಾಡಬೇಕಾಗುತ್ತದೆ. ರೂಪದರ್ಶಿಯರ ಮೇಕಪ್‌ ಅವರ ಉಡುಪಿನ ಮೇಲೆ ನಿರ್ಧಾರವಾಗುತ್ತದೆ. ಕಣ್ಣಿನ ಮೇಪಕ್‌ ಅತಿ ಎನ್ನುವಷ್ಟರ ಮಟ್ಟಿಗೆ ಇರುತ್ತದೆ. ಹೇರ್‌ಸ್ಟೈಲ್‌ ಕೂಡ ವಿಭಿನ್ನವಾಗಿರುತ್ತದೆ. ಪರಿಕಲ್ಪನೆಗೆ ತಕ್ಕಂತೆ ಮೇಕಪ್‌ ಮಾಡಬೇಕಾಗುತ್ತದೆ
 
* ಯಾವ್ಯಾವ ಸೆಲೆಬ್ರಿಟಿಗಳಿಗೆ ಮೇಕಪ್‌ ಮಾಡಿದ್ದೀರಿ?
ಮಲಯಾಳಿ ನಟಿ ಮುಕ್ತಾ, ನಟಿ ಅಮೂಲ್ಯ, ಮಾನಸಾ ಜೋಷಿ, ಮಯೂರಿ, ತೆಲುಗಿನ ಶ್ರೇಯಾ ಶರಣ್‌ ಹೀಗೆ ಸಾಕಷ್ಟು ಮಂದಿಗೆ ಮಾಡಿದ್ದೇನೆ. 
 

 
* ಮೇಕಪ್ ಮಾಡುವಾಗ ನಿಮ್ಮ ತಯಾರಿ ಹೇಗಿರುತ್ತದೆ?  
ವಿಶೇಷವಾಗಿ ತಯಾರಿಯನ್ನೇನು ಮಾಡುವುದಿಲ್ಲ. ಅನುಭವಗಳೇ ಕಲಿಸುತ್ತದೆ. ಈಗ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ವಧುವಿಗೆ ಡೆಮೊ ಕೊಡುತ್ತೇವೆ. ಅವರಿಗೆ ಇಷ್ಟವಾದರೆ ಆರ್ಡರ್‌ ಕೊಡುತ್ತಾರೆ.  
 
* ವೃತ್ತಿಯಲ್ಲಿ ಪಳಗಲು ಹೇಗೆ ತಯಾರಾಗುತ್ತೀರಿ? 
ಮಾರುಕಟ್ಟೆಯಲ್ಲಿ ಉತ್ಪನ್ನಗಳ ವೈವಿಧ್ಯ ಹೆಚ್ಚುತ್ತಿದೆ. ಹೀಗಾಗಿ ನಾವು ಅಪ್‌ಡೇಟ್‌ ಆಗುತ್ತಲೇ ಇರಬೇಕಾಗುತ್ತದೆ. ಯೂಟ್ಯೂಬ್‌ಗಳೆಲ್ಲ ಇರುವುದರಿಂದ ಕಲಿಕೆಯ ಹಾದಿ ಸುಲಭವಾಗಿದೆ. ಯಾರೊ ಒಬ್ಬರಿಗೆ ಏನೋ ಮಾಡಲು ಹೋದಾಗ ಅದು ಇನ್ನೇನೊ ಆಗುತ್ತದೆ. ಅದು ಚೆನ್ನಾಗಿ ಆದರೆ ಅದನ್ನೇ ಮತ್ತೊಬ್ಬರಿಗೆ ಮುಂದುವರೆಸುತ್ತೇವೆ. 
 
* ಮೊದಲಿನ ಮೇಕಪ್‌ ವಿಧಾನಕ್ಕೂ ಈಗಿನ ಮೇಕಪ್‌ಗೂ ವ್ಯತ್ಯಾಸವೇನಿದೆ?
ಹೆಚ್ಚೇನೂ ಬದಲಾವಣೆ ಆಗಿಲ್ಲ. ಆದರೆ ಈಗ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳು ಬರುತ್ತಿವೆ. ಹಾಗಾಗಿ ಸ್ವಲ್ಪ ಮೇಕಪ್‌ ಮಾಡಿದರೂ ಎದ್ದು ಕಾಣುತ್ತದೆ.  ಹಾಗಾಗಿ ಬೆಳಕು, ಸಮಯಕ್ಕೆ ಅನುಗುಣವಾಗಿ ಮೇಕಪ್‌ ಹಚ್ಚುವುದರಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. 
 
* ಮೇಕಪ್‌ ದಿನವಿಡೀ ಹಾಳಾಗದಂತೆ ಇರಲು ಏನು ಮಾಡುತ್ತೀರಿ? 
ಹೆಚ್ಚು ಹೊತ್ತು ಉಳಿಯುವಂತಹ ಗುಣಮಟ್ಟದ ಮೇಕಪ್‌ ಕಿಟ್‌ಗಳು ಈಗ ಮಾರುಕಟ್ಟೆಯಲ್ಲಿವೆ. ಚರ್ಮದ ಗುಣಕ್ಕೆ ಅನುಗುಣವಾಗಿ ಮೇಕಪ್‌ ಮುಖದಲ್ಲಿ ಉಳಿಯುತ್ತದೆ. ತುಂಬಾ ಬೆವರುವವರ ಮುಖದಲ್ಲಿ ಮೇಕಪ್‌ ಬೇಗ ಹೋಗಿ ಬಿಡುತ್ತದೆ. ಹೆಚ್ಚು ಹೊತ್ತು ಉಳಿಯುವಂತೆ ಕೆಲವು ಬಣ್ಣಗಳನ್ನು ಬೆರೆಸುತ್ತೇವೆ. 
 
* ಚರ್ಮ ಹಾಳಾಗದಂತೆ ಮೇಕಪ್‌ ಮಾಡಿಕೊಳ್ಳುವುದು ಹೇಗೆ?
ಮೇಕಪ್‌ ಹಚ್ಚಿಕೊಳ್ಳುವ ಮೊದಲು ಪ್ರೈಮರ್‌ ಬಳಸಬೇಕು. ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮೇಕಪ್‌ ತೆಗೆಯಬೇಕು. ಉತ್ತಮ ಗುಣಮಟ್ಟದ ಪ್ರಸಾದನ ಉತ್ಪನ್ನ ಬಳಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.