ADVERTISEMENT

‘ಫೇಸ್‌ಬುಕ್‌’ನಲ್ಲಿ ಪ್ರೇಮಗಾಳ!

ಪ್ರೇಮಿಗಳ ದಿನ

ರಮೇಶ ಕೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
‘ಫೇಸ್‌ಬುಕ್‌’ನಲ್ಲಿ ಪ್ರೇಮಗಾಳ!
‘ಫೇಸ್‌ಬುಕ್‌’ನಲ್ಲಿ ಪ್ರೇಮಗಾಳ!   

ಯುವಕರು, ಕಾಲೇಜು ವಿದ್ಯಾರ್ಥಿಗಳು, ಪ್ರೀತಿಸಿದವರನ್ನು ತಮ್ಮತ್ತ ಆಕರ್ಷಿಸಲು ಏನೆಲ್ಲಾ ಸರ್ಕಸ್‌ ಮಾಡುತ್ತಾರೆ ಗೊತ್ತಾ? ಎರಡು ಮನಸ್ಸುಗಳ ಪಿಸುಮಾತಿಗಷ್ಟೇ ಸೀಮಿತವಾಗಿದ್ದ ಪ್ರೀತಿ ಇದೀಗ ‘ಅವಕಾಶಗಳ ವ್ಯಾಪ್ತಿ’ಯನ್ನು ಹೆಚ್ಚಿಸಿಕೊಂಡಿದೆ.

ಮೊದಲೆಲ್ಲಾ ಕಾಲೇಜುಗಳಿರುವ ರಸ್ತೆಯಲ್ಲೋ, ಕಾಲೇಜು ಕಾಂಪೌಂಡ್‌ ಮೇಲೆ ಕುಳಿತೋ  ಹುಡುಗಿಯರ ಉಡುಪು ನೋಡಿ ಟೀಕೆ ಟಿಪ್ಪಣಿ ಮಾಡುವುದು, ಸಿನಿಮಾ ಹಾಡು ಹೇಳಿ ಕಿಚಾಯಿಸುವುದು ಸಾಮಾನ್ಯವಾಗಿತ್ತು. ಬಹುತೇಕ ಸಿನಿಮಾಗಳಲ್ಲೂ ಹುಡುಗಿಯರನ್ನು ಒಲಿಸಿಕೊಳ್ಳಲು ಇಂಥ ದೃಶ್ಯಗಳನ್ನು ತೋರಿಸುವುದು ಮಾಮೂಲಿ. ಆದರೀಗ ಇಷ್ಟಪಟ್ಟ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳಲು ಹುಡುಗರು ಬೇರೆಯೇ ದಾರಿ ಕಂಡುಕೊಂಡಿದ್ದಾರೆ. ಅದು ಸಾಮಾಜಿಕ ಜಾಲತಾಣ.

ಹೌದು, ಬಹಳಷ್ಟು ಹುಡುಗರು, ಕಾಲೇಜು ವಿದ್ಯಾರ್ಥಿಗಳು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಾಲೇಜಿಗೆ ಹೋಗುವ ಹುಡುಗಿಯರ ಮುಂದೆ ಬೈಕ್‌ ವ್ಹೀಲಿಂಗ್‌ ಮಾಡುವುದು, ದೊಡ್ಡ ಸೈಲೆನ್ಸರ್‌ ಹಾಕಿಸಿದ ಬೈಕ್‌ನಲ್ಲಿ ಜೋರು ಶಬ್ದ ಮಾಡುವುದು, ವಿಭಿನ್ನ ಕೇಶವಿನ್ಯಾಸ ಮಾಡಿಸುವುದು, ಮಾರುಕಟ್ಟೆಗೆ ಬರುವ ಹೊಸಹೊಸ ಫ್ಯಾನ್ಸಿ ಉಡುಪುಗಳನ್ನು ಧರಿಸುವುದು... ಹೀಗೆ ಹುಡುಗಿಯರು ತಮ್ಮನ್ನು ಗಮನಿಸಬೇಕು, ಸ್ನೇಹ ಬೆಳೆಸಬೇಕು ಎಂದು ಹುಡುಗರು ಬಯಸುತ್ತಾರೆ.

ಸ್ನೇಹವಾದ ನಂತರ ಆ ಹುಡುಗಿಯ ನಂಬರ್‌ ಪಡೆದು, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಚಾಟ್‌ ಮಾಡಲು ಮುಂದಾಗುತ್ತಾರೆ. ಹುಡುಗಿಯರು ಪೋಸ್ಟ್‌ ಮಾಡುವ ಫೋಟೊಗಳಿಗೆ ಲೈಕ್‌ ಒತ್ತುವುದು, ಸಿನಿಮಾ ನಟಿಯರಿಗೆ ಹೋಲಿಕೆ ಮಾಡುವುದು... ಹೀಗೆ ಮುಂದುವರಿಯುತ್ತದೆ.

ಕೆಲವರು ಸ್ನೇಹ ಮಾಡಿದ ಎಲ್ಲಾ ಹುಡುಗಿಯರನ್ನೂ ಫಾಲೊ ಮಾಡುತ್ತಾರೆ, ಒಬ್ಬಾಕೆಯಾದರೂ ಪ್ರೀತಿಯ ಬಲೆಗೆ ಬೀಳಲಿ ಎಂಬ ದೂರಾಲೋಚನೆ! ಪ್ರೇಮಿಗಳ ದಿನದವರೆಗೂ ಕಾದು ಪ್ರೀತಿ ವಿಷಯ ಪ್ರಸ್ತಾಪಿಸುವ ಹುಡುಗರೂ ಇದ್ದಾರೆ. ಪ್ರೀತಿಸಿದವಳು ನಿರಾಕರಿಸಿದ ಮೇಲೆ ಪ್ರೀತಿಸುವಂತೆ ಒತ್ತಾಯಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗರಿಗೇನೂ ಕಡಿಮೆ ಇಲ್ಲ. ಆದರೆ ‘ಪ್ರೀತಿ ಮಾಯೆ ಹುಷಾರು’ ಎಂಬ ಸಿನಿಮಾ ಹಾಡನ್ನು ಹುಡುಗರು ನೆನಪಿಸಿಕೊಂಡರೆ ಸಾಕು.

ಈಗಿನ ಹುಡುಗರು ಪ್ರೀತಿಯನ್ನು ಹೇಗೆಲ್ಲಾ ಪ್ರಸ್ತಾಪಿಸುತ್ತಾರೆ, ಪ್ರಪೋಸ್‌ ಮಾಡುತ್ತಾರೆ, ಹುಡುಗಿಯರನ್ನು ಆಕರ್ಷಿಸಲು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ಕುತೂಹಲದ ಸಂಗತಿ.

ಒಳ್ಳೆ ಫೋಟೊ ಹಾಕ್ಕೋತೀವಿ:  ‘ಈಗ ಪ್ರೀತಿ ಮಾಡಬೇಕು ಅಂದ್ರೆ ಬೈಕ್‌, ಹಣ ಇರಬೇಕು. ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಗೊತ್ತಿಲ್ಲ ಉಡುಗೊರೆಯಂತೂ ತೆಗೆದುಕೊಳ್ಳುತ್ತಾರೆ. ಫೇಸ್‌ಬುಕ್‌ನಲ್ಲಿ  ನಮ್ಮ ಫೋಟೊಗಳ ಲೈಕ್‌ ನೋಡಿ ಇಷ್ಟಪಡುತ್ತಾರೆ. ಅದಕ್ಕಾಗಿ ನಾವು ಒಳ್ಳೆಯ ಫೋಟೊಗಳನ್ನು ಪೋಸ್ಟ್‌ ಮಾಡುತ್ತೇವೆ. ಡ್ರೆಸ್‌ ಸೆನ್ಸ್ ಸಹ ಮುಖ್ಯವಾಗುತ್ತದೆ. ಫೇಸ್‌ಬುಕ್‌ ಮೂಲಕವೂ ಸ್ನೇಹವಾಗಿ, ಅದು ಪ್ರೀತಿಗೆ ತಿರುಗುವ ಸಾಧ್ಯತೆ ಇರುತ್ತದೆ ಎಂಬ ನಂಬಿಕೆ ನಮ್ಮದು’ ಎನ್ನುತ್ತಾರೆ ರಾಜಾಜಿನಗರದ ಕೆ.ಎಲ್‌.ಇ ಕಾಲೇಜಿನ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿ ಶಬರೀಶ್‌.

ಆ ಹೀರೊಯಿನ್‌ ಥರ ಅಂತೀನಿ: ‘ನನಗೆ ಇಷ್ಟವಾಗುವ ಹುಡುಗಿ ಸಿಕ್ಕರೆ ಫೇಸ್‌ಬುಕ್‌ನಲ್ಲೇ ರಿಕ್ವೆಸ್ಟ್‌ ಕಳುಹಿಸುತ್ತೇನೆ. ಅವರು ರಿಕ್ವೆಸ್ಟ್‌ ಒಪ್ಪಿಕೊಂಡರೆ ಸ್ನೇಹ ಮುಂದುವರಿಯುತ್ತದೆ. ಹುಡುಗಿಯರು ಪೋಸ್ಟ್‌ ಮಾಡುವ ಫೋಟೊಗಳಿಗೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ಅವರ ಫೋಟೊ ಜೊತೆಗೆ ನಟಿಯರ ಫೋಟೊ ಹಾಕಿ ಹೋಲಿಕೆ ಮಾಡುತ್ತೇನೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಇದರಿಂದ  ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಬಹುದು ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಕಸ್ತೂರಿ ನಗರ ನಿವಾಸಿ ಮಧ್ವರಾಜ್‌.

ಹುಡುಗೀರ ಮುಂದೆ ವ್ಹೀಲಿಂಗ್‌: ‘ನಾನು ಪ್ರೀತಿ ಮಾಡೋದಿಲ್ಲ, ಆದ್ರೆ ಹುಡುಗಿಯರ ಮುಂದೆ ಬೈಕ್‌ ಸ್ಟಂಟ್‌ ಮಾಡುತ್ತೇನೆ. ವ್ಹೀಲಿಂಗ್‌ ಮಾಡುವುದೆಂದರೆ ತುಂಬಾ ಇಷ್ಟ. ಕ್ರಿಕೆಟ್‌ ಆಟಗಾರರ ಕೇಶವಿನ್ಯಾಸವನ್ನು ನಾನು ಮಾಡಿಸುತ್ತೇನೆ’ ಎನ್ನುತ್ತಾರೆ ಮತ್ತೀಕೆರೆಯ  ಹರೀಶ್‌.

ಒಟ್ಟಿನಲ್ಲಿ ಪ್ರೇಮಪತ್ರ ಬರೆದು ಕದ್ದುಮುಚ್ಚಿ, ಮೂರನೆ ವ್ಯಕ್ತಿ ಮೂಲಕ ಪ್ರೀತಿಸಿದ ಹುಡುಗಿಗೆ ಕೊಟ್ಟು ಪ್ರೀತಿ ಪ್ರಸ್ತಾಪಿಸುವ ಕಾಲ ಇದಲ್ಲ. ನೇರವಾಗಿ, ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ‘ನೀನು ಇಷ್ಟವಾಗಿದ್ದೀಯಾ, ನಿನ್ನ ಅಭಿಪ್ರಾಯ ತಿಳಿಸು’ ಎಂದು ಹೇಳುವ ಜಮಾನವಿದು. 

*
ಬಹುತೇಕ ಹುಡುಗಿಯರು ಹುಡುಗನ ಬಳಿ ಐಫೋನ್‌, ಬೈಕ್‌ ಇರಲೇಬೇಕು ಎಂದು ಬಯಸುತ್ತಾರೆ. ಒಳ್ಳೊಳ್ಳೆ ಡ್ರೆಸ್‌ ಹಾಕಿಕೊಂಡು ಕಾಲೇಜಿಗೆ ಬರಬೇಕು. ಹುಡುಗಿಯರಿಗೆ ಇಷ್ಟವಾಗುವ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು
–ಶಶಾಂಕ್‌, ನಂದಿನಿ ಲೇಔಟ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.