ADVERTISEMENT

ಫೇಸ್‌ಬುಕ್‌ನಲ್ಲಿ ‘ಹಲೋ ಹಲೋ’

ಪಂಚರಂಗಿ

ದಯಾನಂದ ಎಚ್‌.ಎಚ್‌.
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಫೋನ್‌, ಮೊಬೈಲ್‌ ಇಲ್ಲದ ದಿನಗಳನ್ನು ಇಂದು ಊಹಿಸಿಕೊಳ್ಳುವುದೂ ಕಷ್ಟ. ನಿತ್ಯ ಜೀವನದ ಅವಿಭಾಜ್ಯ ಅಂಗದಂತಾಗಿರುವ ಫೋನ್‌, ಮೊಬೈಲ್‌ಗಳ ಸಂಭಾಷಣೆಯ ಮೊದಲ ಮಾತು ‘ಹಲೋ’. ಅದು ‘ಸ್ಥಾವರ’ವಿರಲಿ, ‘ಜಂಗಮ’ವಿರಲಿ ಅತ್ತಲಿಂದೊಂದು ಕರೆ ಬಂದಾಗ ಮೊದಲು ಹೇಳುವುದೇ ‘ಹಲೋ’.

ಹಲವರ ಬದುಕಿನಲ್ಲಿ ಹಲವು ಬಗೆಯ ‘ಹಲೋ’ಗಳು ಬಂದು ಹೋಗುತ್ತವೆ. ಕೆಲವು ‘ಹಲೋ’ಗಳು ಅರಗಿಸಿಕೊಳ್ಳಲಾಗದಂಥ ಸುದ್ದಿ ಕೊಟ್ಟರೆ, ಕೆಲವು ‘ಹಲೋ’ಗಳು ಸಿಹಿ ಸುದ್ದಿ ನೀಡಿ ಖುಷಿ ನೀಡುತ್ತವೆ. ಸಂವಹನದ ಬಹುಮುಖ್ಯ ಮಾಧ್ಯಮದಲ್ಲಿ ಇಂದು ಈ ‘ಹಲೋ’ ಪದದ ಪಾತ್ರವೂ ಮುಖ್ಯವೇ!

ಇಂಥ ‘ಹಲೋ’ದ ಹಲವು ಮಗ್ಗಲುಗಳ ಬಗ್ಗೆ ಹೊಸ ತಂಡವೊಂದು ಕಿರುಚಿತ್ರ ತಯಾರಿಕೆಯಲ್ಲಿ ತೊಡಗಿದೆ. ಈ ಕಿರುಚಿತ್ರ ಧಾರಾವಾಹಿಯಾಗಿ ಬಿತ್ತರವಾಗುವುದು ಒಂದು ವಿಶೇಷವಾದರೆ, ಆ ಧಾರಾವಾಹಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಸಾರವಾಗುವುದು ಇನ್ನೊಂದು ವಿಶೇಷ.

‘ಹಲೋ’ ಕಿರುಚಿತ್ರವನ್ನು ಹಲವು ಸಂಚಿಕೆಗಳಾಗಿ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡುವ ಆಲೋಚನೆ ಈ ತಂಡದ್ದು. ಈಗಾಗಲೇ ಕೆಲವು ಕಿರುಚಿತ್ರಗಳ ತಯಾರಿಕೆಯಲ್ಲಿ ಪಳಗಿರುವ ನಿರ್ದೇಶಕ ಅವಿರಾಮ್‌ ಹಲವು ಹೊಸಬರೊಂದಿಗೆ ಸೇರಿ ‘ಹಲೋ’ ರೂಪಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಬಂದಮೇಲೆ ಫೇಸ್‌ಬುಕ್‌ ತನ್ನ ಜಾಲವನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಫೇಸ್‌ಬುಕ್‌ ‘ಆಗುಹೋಗು’ ಕೂಡ ನಡೆಯುತ್ತಿದೆ. ಇಂಥ ಹೊತ್ತಲ್ಲಿ ‘ಹಲೋ’ ಕಿರುಚಿತ್ರವನ್ನು ಫೇಸ್‌ಬುಕ್‌ ಮೂಲಕವೇ ಹರಿಯಬಿಡುವ ಆಲೋಚನೆ ಬಂದಿರುವುದು ಕನ್ನಡದ ಮಟ್ಟಿಗೆ ಹೊಸದೇ.

ತಯಾರಿಸಿದ ಕಿರುಚಿತ್ರವನ್ನು ಹಂತಹಂತವಾಗಿ ಧಾರಾವಾಹಿಯಂತೆ ಕಂತುಗಳಲ್ಲಿ ಪ್ರಸಾರ ಮಾಡುವ ಯೋಚನೆ ತಂಡದ್ದು. ಮೊದಲು ಯೂಟ್ಯೂಬ್‌ಗೆ ಧಾರಾವಾಹಿಯ ಕಂತನ್ನು ಅಪ್‌ಲೋಡ್‌ ಮಾಡಿ, ಅದರ ಕೊಂಡಿಯನ್ನು (ಲಿಂಕ್‌) ಫೇಸ್‌ಬುಕ್‌ಗೆ ಸಿಕ್ಕಿಸುವ ಮೂಲಕ ‘ಹಲೋ’ ಫೇಸ್‌ಬುಕ್‌ನಲ್ಲಿ ಹರಿಯುವಂತೆ ಮಾಡುವುದು ಚಿತ್ರ ತಂಡದ ಕನಸು.

‘ಸ್ಮಾರ್ಟ್‌ಫೋನ್‌ ಮತ್ತು ಫೇಸ್‌ಬುಕ್‌ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿವೆ. ಕರೆ ಮಾಡಿದಾಗ ಹೇಳುವ ಮೊದಲ ಪದ ‘ಹಲೋ’ ಸುತ್ತ ಕಥೆ ಹರಿದಾಡುತ್ತದೆ. ಫೇಸ್‌ಬುಕ್‌ ಮೂಲಕವೇ ಈ ಕಿರುಚಿತ್ರವನ್ನು ಪ್ರಸಾರ ಮಾಡಬೇಕೆಂಬುದು ಹೊಸ ಪ್ರಯತ್ನ’ ಎನ್ನುತ್ತಾರೆ ನಿರ್ದೇಶಕ ಅವಿರಾಮ್‌.

ಹಾಸ್ಯ ಕಲಾವಿದ ಚಿಕ್ಕಣ್ಣ ಶೀರ್ಷಿಕೆ ಗೀತೆ ಹಾಡಿರುವುದು ಇದರ ಮತ್ತೊಂದು ವಿಶೇಷ. ಮೊದಲ ಬಾರಿಗೆ ಹಾಡೊಂದಕ್ಕೆ ದನಿಯಾಗಿರುವ ಬಗ್ಗೆ ಚಿಕ್ಕಣ್ಣ ಕೂಡ ಖುಷಿಯಾಗಿದ್ದಾರೆ. ರಾಗ ತಾಳಗಳ ಗಂಧವಿಲ್ಲದೆ ಚಿಕ್ಕಣ್ಣ ಸಹಜವಾಗಿ ‘ಹಲೋ’ಗೆ ಕಂಠ ನೀಡಿದ ಬಗ್ಗೆ ಚಿತ್ರ ತಂಡ ಕೂಡ ಸಂಭ್ರಮದಲ್ಲಿದೆ.

ಜೂನ್‌ನಲ್ಲಿ ಈ ಕಿರುಚಿತ್ರವನ್ನು ಫೇಸ್‌ಬುಕ್‌ ಪರದೆಯ ಮೇಲೆ ತರಲು ತಂಡ ಸಿದ್ಧತೆ ನಡೆಸಿದೆ. ಹೊಸಬರ ಈ ‘ಹಲೋ’ ಪ್ರಯತ್ನದ ಫೇಸ್‌ಬುಕ್‌ ಪೇಜ್‌ಗೆ ಈವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ (ಲೈಕ್‌) ಸೂಚಿಸಿದ್ದಾರೆ. ತಮ್ಮ ಹೊಸ ಪ್ರಯತ್ನಕ್ಕೆ ಅಂತರ್ಜಾಲಿಗರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಚಿತ್ರ ತಂಡಕ್ಕಿದೆ.
ಮುಂದಿನ ದಿನಗಳಲ್ಲಿ ಈ ಕೊಂಡಿಯಲ್ಲಿ ‘ಹಲೋ’ ಸರಣಿ ಲಭ್ಯವಾಗಲಿದೆ: www.facebook.com/HelloCineserial 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.