ADVERTISEMENT

ಬಣ್ಣದ ಮಾತುಗಳು...

ವಾಸ್ತು ಪ್ರಕಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST

‘ಬಣ್ಣ ಬಣ್ಣದ ಲೋಕ / ಬಣ್ಣಿಸಲು ಸಾಲದು ಈ ಸಾಲು’ ಎನ್ನುವುದು ‘ಏಕಾಂಗಿ’ ಕನ್ನಡ ಸಿನಿಮಾದ ಹಾಡು. ಜಗತ್ತನ್ನು ವರ್ಣಮಯ ಎಂದು ಬಣ್ಣಿಸುವ ಈ ಹಾಡು, ಮನೆಗೂ ಮನಸ್ಸಿಗೂ ಅನ್ವಯಿಸುವಂತಹದ್ದು. ಬಣ್ಣಗಳಿಲ್ಲದೆ ಹೋದರೆ ಮನೆಯಾಗಲೀ ಬದುಕಾಗಲೀ ನೀರಸ ಅನ್ನಿಸದೆ ಇರದು.

ಮನೆಗೆ ಸಂಬಂಧಿಸಿದಂತೆ ಈ ಬಣ್ಣಗಳ ಮಹತ್ವ ಮತ್ತೂ ಮಿಗಿಲಾದುದು. ಸೂಕ್ತ ಬಣ್ಣಗಳನ್ನು ಸಂಯೋಜಿಸದೆ ಹೋದಲ್ಲಿ ಮನೆಯು ಅಂದಗೆಡುವುದು ಮಾತ್ರವಲ್ಲ, ಮನಸ್ಸಿನ ನೆಮ್ಮದಿಯೂ ಹಾಳಾಗುತ್ತದೆ. ಅಂತೆಯೇ, ಹಿತಕರ ಬಣ್ಣಗಳಿಂದ ಮನೆಯ ಶೋಭೆಯ ಜೊತೆಗೆ ಮನಸ್ಸಿಗೆ ಆಹ್ಲಾದವೂ ದೊರೆಯುತ್ತದೆ.

ಇಡೀ ಮನೆಯನ್ನು ಬಿಳಿ ಬಣ್ಣದಿಂದ– ಸುಣ್ಣದಿಂದ– ಸಿಂಗರಿಸುತ್ತಿದ್ದ ದಿನಗಳು ಈಗಿಲ್ಲ. ಪೇಟೆಯಲ್ಲಂತೂ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿ, ಗುಣಮಟ್ಟದ ಬಣ್ಣಗಳು ಕಾಣಿಸಿಕೊಳ್ಳುತ್ತಲೇ ಇವೆ. ಕಣ್ಣಿಗೆ, ಮನೆಗೆ ಹಿತಕರವಾದ ಈ ಬಣ್ಣಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ವಾಸ್ತುಶಾಸ್ತ್ರವಂತೂ ಬಣ್ಣಗಳ ಆಯ್ಕೆಗೆ ವಿಪರೀತ ಮಹತ್ವ ಕೊಟ್ಟಿದೆ. ಒಂದೆರಡು ಬಣ್ಣದ ಮಾತುಗಳು, ಅರ್ಥಾತ್‌ ಬಣ್ಣದ ಆಯ್ಕೆಗೆ ಸಂಬಂಧಿಸಿದ ಕಿವಿಮಾತುಗಳು ಕೆಳಗಿನಂತಿವೆ:

ಬಿಳಿ ಬಣ್ಣ ಮನೆಯ ಯಾವುದೇ ಭಾಗಕ್ಕೆ ಹೊಂದುತ್ತದೆ. ವಾಸ್ತುಶಾಸ್ತ್ರ ‘ಬಿಳಿ’ಯನ್ನು ತಿಳಿಯೆಂದೂ ಪವಿತ್ರವೆಂದೂ ಭಾವಿಸುತ್ತದೆ. ನೀವು ಶ್ವೇತಪ್ರಿಯರಾಗಿದ್ದರೆ, ಇಡೀ ಮನೆಯನ್ನು ಬಿಳಿ ಬಣ್ಣದಿಂದ ಸಿಂಗರಿಸಬಹುದು. ಬಿಳಿ ಶಾಂತಿಯ ಸಂಕೇತವೂ ಮನಸ್ಸಿಗೆ ಉಲ್ಲಾಸವನ್ನು ತಂದುಕೊಡುವ ಬಣ್ಣವೂ ಹೌದು. ಇದು ಶಾಸ್ತ್ರದ ಮಾತಾಯಿತು, ವಿಜ್ಞಾನ ಕೂಡ ಬಿಳಿ ಬಣ್ಣವನ್ನು ಉನ್ನತ ಸ್ಥಾನದಲ್ಲೇ ಇಟ್ಟಿದೆ.

ಮಲಗುವ ಕೋಣೆಗೆ ಬಿಳಿಗಿಂತ ಸೊಗಸಾದ ವರ್ಣ ಇನ್ನೊಂದಿಲ್ಲ. ರಸಿಕರು ಬಿಳಿಯ ಬದಲಿಗೆ, ತಿಳಿ ನೀಲಿ ಬಣ್ಣವನ್ನು ಕೂಡ ಮಲಗುವ ಕೋಣೆಗೆ ಪ್ರಯತ್ನಿಸಬಹುದು. ಮನೆಮಂದಿಯ ಹಸಿವು ತಣಿಸುವ ಅಡುಗೆ ಮನೆಗೆ ಕಿತ್ತಳೆ ಬಣ್ಣ ಒಪ್ಪುತ್ತದೆ. ಇನ್ನು ಕಪ್ಪು ಬಣ್ಣದ ವಿಷಯಕ್ಕೆ ಬರೋಣ. ಬಿಳಿ\ಗೆ ವಿರುದ್ಧ ಪದ ಈ ಕಪ್ಪು. ವಾಸ್ತುಶಾಸ್ತ್ರ ಕೂಡ ಕಪ್ಪು ಬಣ್ಣದ ಬಳಕೆಯನ್ನು ಒಪ್ಪುವುದಿಲ್ಲ.

ಅದನ್ನು ‘ಮಲಿನಗೊಂಡ ವರ್ಣ’ ಎಂದೇ ವಾಸ್ತು ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಕಪ್ಪು ಮಾತ್ರವಲ್ಲ– ಕಡು ಕೆಂಪು ಹಾಗೂ ಕಡು ಹಳದಿ ಬಣ್ಣಗಳನ್ನು ಕೂಡ ವಾಸ್ತು ವಿಜ್ಞಾನ ಶಿಫಾರಸು ಮಾಡುವುದಿಲ್ಲ. ಅಂತೆಯೇ ಮನೆಯ ಮಾಲೀಕರ ಜನ್ಮ ರಾಶಿ – ನಕ್ಷತ್ರಗಳಿಗೆ ಅನುಗುಣವಾಗಿ ನಿರ್ಣಯಿಸಿದ ಬಣ್ಣಗಳನ್ನೂ ಮನೆಗೆ ಬಳಸಬಹುದು.

ಹೊರಾಂಗಣಕ್ಕೆ ಸಂಬಂಧಿಸಿದಂತೆಯೂ ಕೆಲವು ಸೂಚನೆಗಳಿವೆ. ಚಂದನ ವರ್ಣ ಮನೆಯ ಹೊರಮೈಗೆ ಉತ್ತಮ ಎನ್ನುವುದು ಹಿರಿಯರ ಮಾತು. ವಾಹನಗಳನ್ನು ನಿಲ್ಲಿಸುವ ಸ್ಥಳಕ್ಕೆ ಗುಲಾಬಿ ವರ್ಣವೂ, ಸಾಕು ಪ್ರಾಣಿಗಳ ತಂಗುದಾಣಗಳಿಗೆ ತಿಳಿ ನೀಲಿ ಅಥವಾ ಹಸಿರು ಬಣ್ಣ ಹೊಂದಿಕೆಯಾಗುತ್ತದಂತೆ.

ದಿಕ್ಕುಗಳನ್ನು ಆಧರಿಸಿಯೂ ಬಣ್ಣಗಳನ್ನು ನಿರ್ಧರಿಸುವುದಿದೆ. ಪೂರ್ವ ಸೂರ್ಯೋದಯದ ದಿಕ್ಕು. ಹಾಗಾಗಿ, ಪೂರ್ವದ ಭಾಗಕ್ಕೆ ಅರುಣೋದಯದ ನಸು ಕೆಂಪು ಬಣ್ಣವನ್ನು ಬಳಸಬಹುದು. ಎಲೆ ಹಸಿರು ಉತ್ತರ ದಿಕ್ಕನ್ನು ಸಂಕೇತಿಸಿದರೆ ನೀಲಿ ಪಶ್ಚಿಮವನ್ನು ಸೂಚಿಸುತ್ತದಂತೆ. ಕುಂಕುಮ ವರ್ಣ ದಕ್ಷಿಣಕ್ಕೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.