ADVERTISEMENT

ಬದುಕಿನ ವೈರುಧ್ಯಗಳಿಗೆ ಕಲಾ ಸ್ಪಂದನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST
ಬದುಕಿನ ವೈರುಧ್ಯಗಳಿಗೆ ಕಲಾ ಸ್ಪಂದನ
ಬದುಕಿನ ವೈರುಧ್ಯಗಳಿಗೆ ಕಲಾ ಸ್ಪಂದನ   

ಬದುಕಿನ ಹಲವು ವೈರುಧ್ಯಗಳಿಗೆ, ಸಮಾಜದ ಒಳಿತು ಕೆಡುಕುಗಳಿಗೆ, ಹುಳುಕು ಕೊಳಕುಗಳಿಗೆ ಕಲಾವಿದ ತನ್ನದೇ ಆದ ರೂಪಕಾತ್ಮಕ ಮಾಧ್ಯಮದ ಮೂಲಕ ಪ್ರತಿಸ್ಪಂದಿಸುತ್ತಿರುತ್ತಾನೆ. ಆದ್ದರಿಂದಲೇ ಕಲಾವಿದನನ್ನು ಸಮಾಜದ ಆಂತರಿಕ ಧ್ವನಿ ಎಂದು ಕರೆಯಬಹುದು.

ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾವಿದ್ಯಾಲಯದ ಕುಂಚ ಕಲಾ ವಿಭಾಗದ ವಿದ್ಯಾರ್ಥಿ ಓಂ ಪ್ರಭು ವಜ್ರಕಾಂತ್ ಭ್ರಂಗಿಮಠ ಇವರ ಕೃತಿಗಳು ಮಾನವನ ಮೂಲಸ್ವಭಾವಗಳಿಗೆ ಸಶಕ್ತ ರೂಪಕ ಎನಿಸುವುದರಿಂದಲೇ ಮಹತ್ವ ಎನಿಸಿಕೊಳ್ಳುತ್ತವೆ.
ಇದಕ್ಕೆ ಉದಾಹರಣೆ ಪ್ರಭು ರಚಿಸಿದ ಶಿವನ ವಿಗ್ರಹ. ಎತ್ತರವಾದ ಪೀಠದಲ್ಲಿ ಶಿವ ಆಸೀನನಾಗಿದ್ದು, ಅವನ ಪಾದದ ಕೆಳಗೆ ಹಲವಾರು ಜನರು ಮುತ್ತಿಕೊಂಡಿರುವ ಹಾಗೆ ಗೋಚರಿಸುವ ಈ ಕಲಾಕೃತಿಯು ವಿಭನ್ನವಾದ ಅರ್ಥಗಳನ್ನು ಸೂಚಿಸುತ್ತದೆ.

ಜೀವನದಲ್ಲಿ ತನ್ನನ್ನು ತಾನು ಅರಿಯದೇ ಬೇರೆಯವರನ್ನು ತುಳಿದು ಜೀವಿಸುತ್ತಿರುವ ಜನರು ದೇವರ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡುತ್ತಾ ಅವನನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾರೆ. ತನ್ನಂತಹುದೇ ಮನುಷ್ಯರ ಹೆಣಗಳ ರಾಶಿಯ ಮೇಲೆ ಶಿವನನ್ನು ತಲುಪಲು ಹಂಬಲಿಸುತ್ತಿರುವವರಂತೇ ತೋರುವ ಮಾನವರ ಹೋರಾಟವನ್ನು ಬಿಂಬಿಸುವಂತಹ ಈ ಕಲಾಕೃತಿಯು ಧರ್ಮ– ಮೋಕ್ಷದ ಸಾರ್ಥಕತೆಯನ್ನೇ ಪ್ರಶ್ನಿಸುವಂತೆಯೂ ತೋರುತ್ತದೆ.

ಮಣ್ಣಿನಿಂದ ರಚಿಸಿದ ಈ ಕಲಾಕೃತಿ ಸುಮ್ಮನೇ ನೋಡುತ್ತಾ ನಿಂತಷ್ಟು ಹೊಸ ಹೊಸ ಆಲೋಚನೆಗಳನ್ನು ಹುಟ್ಟಿಸುವಷ್ಟು ಸಶಕ್ತವಾಗಿದೆ.
ಕಣ್ಮನ ಸೆಳೆದ ಹೆಣ್ಣಿನ ಕಲಾಕೃತಿ ಕಲಾವಿದ ಓಂ ಪ್ರಭು ರಚಿಸಿದ ಇನ್ನೊಂದು ಹೆಣ್ಣಿನ ಕಲಾಕೃತಿಯನ್ನು ನೋಡುತ್ತಿದ್ದಂತೆಯೇ ಒಂದು ಕ್ಷಣ ಮಂತ್ರಮುಗ್ಧನನ್ನಾಗಿಸಿತು.

ತುಂಬ ಅಚ್ಚುಕಟ್ಟಾಗಿ ಕೂದಲ ಎಳೆಯೂ ಕೂಡ ಭಿನ್ನವಾಗದಂತೆ ಮಾಡಿದ ಈ ಕಲಾಕೃತಿಯು ಎಲ್ಲರನ್ನೂ ಬೆರಗುಗೊಳಿಸಿತು.
ಪ್ರಭು ಈ ಕಲಾಕೃತಿಯನ್ನು ಮಣ್ಣು ಮತ್ತು ಬಟ್ಟೆಯನ್ನು ಉಪಯೋಗಿಸಿ ನಿರ್ಮಿಸಿದ್ದಾರೆ. ಹೊಳಪು ಚರ್ಮ ಹೆಣ್ಣೊಬ್ಬಳು ಒದ್ದೆ ಬಟ್ಟೆಯಲ್ಲಿ ನಿಂತಿರುವ ಕಲಾಕೃತಿಯಿದು.

ಹೆಗಲಗುಂಟ ಇಳಿದ ಕೇಶರಾಶಿಯನ್ನು ಬಲಗೈಯಲ್ಲಿ ಸವರುತ್ತ ನಿಂತಿರುವ ಈ ಮಂದಹಾಸದ ಚೆಲುವೆಯ ಮುಖದಲ್ಲಿ ಮಾತೃತ್ವದ ಛಾಯೆ ಎದ್ದು ಕಾಣುವಂತಿತ್ತು. ವಿದ್ಯಾರ್ಥಿ ದಿಸೆಯಲ್ಲಿಯೇ ಇಂತಹ ವೃತ್ತಿಪರ ಕಲಾಕೃತಿಗಳನ್ನು ರಚಿಸಿರುವ ಪ್ರಭು ಅವರ ಕೌಶಲ ಅವರ ಭವಿಷ್ಯದ ಬಗ್ಗೆಯೂ ಆಶಾವಾದ ತಾಳುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.