ADVERTISEMENT

ಬಾಸ್ಟನ್‌ನಲ್ಲಿ ವಿಜಯ್‌ ಗಾನಲಹರಿ

ಸುಶೀಲಾ ಡೋಣೂರ
Published 30 ನವೆಂಬರ್ 2015, 19:59 IST
Last Updated 30 ನವೆಂಬರ್ 2015, 19:59 IST

‘ಜೈ ಹೊ’ ಹಾಡು ನೆನಪಾದರೆ ಸಾಕು. ಈ ಗಾಯಕನ ಸ್ನಿಗ್ಧ ನಗು ಕಣ್ಮುಂದೆ ಕಟ್ಟುತ್ತದೆ. ದೇಶದಾದ್ಯಂತ ಸಂಗೀತ ಪ್ರಿಯರ ಮನ ಗೆದ್ದ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಈಗ ದೇಶದ ಆಚೆಗೂ ಸದ್ದು ಮಾಡಿ ಬಂದಿದ್ದಾರೆ. ಅಮೆರಿಕದ ಬಾಸ್ಟನ್‌ನ ಬರ್ಕ್‌ಲೀ ಸಂಗೀತ ಶಾಲೆಯಲ್ಲಿ ಭಾರತೀಯ ಸಂಗೀತದ ಹುಚ್ಚು ಹಿಡಿಸಿದ ವಿಜಯ್‌, ನೂರು ನೆನಪುಗಳ ಬುತ್ತಿ ಕಟ್ಟಿಕೊಂಡು ಸ್ವದೇಶಕ್ಕೆ ಮರಳಿದ್ದಾರೆ.

‘ಅಲ್ಲಿ ಕಳೆದ ಪ್ರತಿ ದಿನವೂ, ಪ್ರತಿ ಕ್ಷಣವೂ ಅವಿಸ್ಮರಣೀಯ. ಪ್ರತಿ ದಿನವೂ ಒಂದೊಂದು ಹೊಸ ಅನುಭವವನ್ನು ಕಟ್ಟಿಕೊಟ್ಟ, ಹೊಸ ಆಯಾಮವನ್ನು ತೆರೆದಿಟ್ಟ ಕಾರ್ಯಕ್ರಮ ಅದು’ ಎನ್ನುವ ಗಾಯಕ ವಿಜಯ್‌ ಪ್ರಕಾಶ್‌, ಅಲ್ಲಿನ ಅನುಭವನ್ನು ತಮ್ಮದೇ ಮಾತಿನಲ್ಲಿ ಕಟ್ಟಿಕೊಟ್ಟ ಬಗೆ ಇದು.

ಪ್ರಪಂಚದಲ್ಲಿಯೇ ವಿಶೇಷ ಮನ್ನಣೆ ಪಡೆದ ಕಾಲೇಜು ‘ಬರ್ಕ್‌ಲೀ ಕಾಲೇಜ್ ಆಫ್ ಮ್ಯೂಸಿಕ್‌’. ಅನೇಕ ದೇಶಗಳ ವಿದ್ಯಾರ್ಥಿಗಳು ಅಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಅಲ್ಲಿನ ಸಿಬ್ಬಂದಿಯೂ ಅಷ್ಟೇ. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದ ಅವರು, ವಿದ್ಯಾರ್ಥಿಗಳಿಗೆ ಎಲ್ಲಾ ದೇಶದ ಸಂಗೀತವನ್ನು ಪರಿಚಯಿಸಲು ಪಣ ತೊಟ್ಟಂತಿದೆ. ಅಲ್ಲಿನ ವಿದ್ಯಾರ್ಥಿಗಳ ಸಂಗೀತ ಮೋಹ ಕಂಡು ನಿಜಕ್ಕೂ ಬೆರಗಾದೆ. ಭಾರತೀಯ ಸಂಗೀತದ ಬಗ್ಗೆ ಅವರಿಗಿರುವ ಆಸಕ್ತಿ, ಪ್ರೀತಿ, ಆಧರ ನಿಜಕ್ಕೂ ಪ್ರಶಂಸನಾರ್ಹ.

ಅಲ್ಲಿನ ವಿದ್ಯಾರ್ಥಿಗಳ ಜೊತೆಗೆ ಸಂಗೀತ ಹಬ್ಬದಲ್ಲಿ ಪಾಲ್ಗೊಳ್ಳುವ ಮೊದಲ ಅವಕಾಶ ಪಡೆದವರು ಕ್ಲಿಂಟನ್‌ ಸೆರೆಜೊ, ಕಳೆದ ವರ್ಷ ಎ.ಆರ್‌. ರೆಹಮಾನ್‌ ಹೋಗಿದ್ದರು. ಈ ಬಾರಿ ಅವಕಾಶ ನನ್ನ ಪಾಲಿಗಿತ್ತು.

ಆರೋಹ್‌: ಮರೆಯಲಾರದ ನೆನಪು
ಆ ಸಂಗೀತ ಕಾರ್ಯಕ್ರಮದ ಹೆಸರು ‘ಆರೋಹ್‌’. 22 ದೇಶಗಳ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ನಿಂತು ನನ್ನೊಂದಿಗೆ ‘ಸ ರಿ ಗ ಮ ಪ’ ಹೇಳುವಾಗ ಕ್ಷಣ ರೋಮಾಂಚನಗೊಂಡೆ. ಕ್ಲಿಂಟನ್‌ ಸೆರೆಯೊ ರಚಿಸಿದ ‘ಬೈನ ಬೈನ’, ಸಲೀಂ ಸುಲೇಮಾನ್‌ ರಚಿಸಿದ ‘ಸಾಥಿ’, ಯುವರಾಜ್‌ ಚಿತ್ರದ ‘ಮನ್‌ ಮೋಹಿನಿ ಮೋರೆ’ ಗೀತೆಗಳಲ್ಲಿ ನನ್ನೊಂದಿಗೆ ಅಲ್ಲಿನ ವಿದ್ಯಾರ್ಥಿಗಳೂ ದನಿಗೂಡಿಸಿದರು. ‘ವಂದೇ ಮಾತರಂ’ ಹಾಡಿಗೆ ಅಲ್ಲಿನ ಜನ ತೋರಿದ ಪ್ರತಿಕ್ರೆಯೆ ಅದ್ಭುತವಾಗಿತ್ತು. ಪಾಶ್ಚಾತ್ಯರ ಬಾಯಿಯಲ್ಲಿ ಭಾರತೀಯ ಸಂಗೀತವನ್ನು ಕೇಳುವುದು ನಿಜಕ್ಕೂ ಒಂದು ಹೊಸ ಅನುಭವ.

ಹುಚ್ಚೆಬ್ಬಿಸಿದ ‘ಕಲ್ಪನಾ ಸ್ವರ’
‘ಕಲ್ಪನಾ ಸ್ವರ’ ಅಂದರೆ ವೇದಿಕೆ ಮೇಲೆ ಆ ಕ್ಷಣಕ್ಕೆ, ಅಲ್ಲಿನ ಶ್ರೋತೃಗಳ ನಡುವೆ ಹುಟ್ಟಿಕೊಳ್ಳುವ ಹೊಸ ರೀತಿಯ ಸಂಗೀತಧಾರೆ. ಶಾಸ್ತ್ರೀಯ ಸಂಗೀತವನ್ನೇ ಮೂಲವಾಗಿಟ್ಟುಕೊಂಡು, ಅದಕ್ಕೆ ಪಾಶ್ಚಾತ್ಯ ಸಂಗೀತದ ಸ್ಪರ್ಶ ನೀಡಿ ಪ್ರಸ್ತುಪಡಿಸಿದ ‘ಕಲ್ಪನಾ ಸ್ವರ’ಕ್ಕೆ ನೆರೆದ ಜನ ಮಂತ್ರಮುಗ್ಧರಾದರು.

ಕನ್ನಡದ ಜಾನಪದ ಶೈಲಿಯಲ್ಲಿ ಆರಂಭಿಸಿ, ನಡುವೆ ಬಂಗಾಲಿ ಶೈಲಿಯನ್ನು ಸೇರಿಸಿ, ಆಫ್ರಿಕನ್‌ ವೋಕಲ್‌ ಜೊತೆಗೆ ಪ್ರಸ್ತುತಪಡಿಸಿದ ಮಿಶ್ರ ಗಾಯನಕ್ಕೆ ಬಹಳ ಜನ ಬೆರಗಾದರು.

ಕಳೆದ ಮೂರು ವರ್ಷಗಳಲ್ಲಿ ಬರ್ಕ್‌ಲೀ ಕಾಲೇಜ್ ಆಫ್ ಮ್ಯೂಸಿಕ್ ಇಂತಹ ಸಂಗೀತ ಕಾರ್ಯಕ್ರಮ ನಡೆಸುತ್ತ ಬಂದಿದೆ. ಮೊದಲ ವರ್ಷ ಕ್ಲಿಂಟನ್ ಸೆರೆಯೊ ಕಾರ್ಯಕ್ರಮದ ಭಾಗವಾಗಿದ್ದರು. 2ನೇ ವರ್ಷದಲ್ಲಿ ಎ.ಆರ್. ರೆಹಮಾನ್ ತಮ್ಮ ಅದ್ವಿತೀಯ ಸಂಗೀತದ ಮೋಡಿ ಮಾಡಿದ್ದರು. ಈ ಬಾರಿ ಭಾರತೀಯ ಸಂಗೀತದ ಪ್ರತಿನಿಧಿಯಾಗುವ ಬಹುದೊಡ್ಡ ಜವಾಬ್ದಾರಿ ನನ್ನ ಹೆಗಲೇರಿತ್ತು.

ಪ್ರತಿ ದಿನವೂ ನಮ್ಮ ಅನುಭವದ ಬುಟ್ಟಿಗೆ ಒಂದೊಂದು ಹೊಸ ಹೂವನ್ನು ಸೇರಿಸುತ್ತ ಹೋಗುತ್ತದೆ. ಹಾಗೆಯೇ ಬರ್ಕ್‌ಲೀ ಕಾಲೇಜ್‌ನಲ್ಲಿ ಕಳೆದ ಪ್ರತಿದಿನವೂ ಒಂದೊಂದು ಅವಿಸ್ಮರಣೀಯ ಅನುಭವವನ್ನು ಕಟ್ಟಿಕೊಟ್ಟಿದೆ. ಅವರಿಗೆ ಭಾರತೀಯ ಸಂಗೀತವನ್ನು ಪರಿಚಯಿಸುತ್ತ, ಜಗತ್ತಿನ ಎಲ್ಲಾ ಪ್ರಕಾರದ ಸಂಗೀತವನ್ನು ಅರಿತುಕೊಳ್ಳಲು ಸಾಧ್ಯ ವಾಯಿತು. ಪ್ರತಿಯೊಂದು ದೇಶಕ್ಕೂ ಒಂದೊಂದು ಚರಿತ್ರೆ, ಇತಿಹಾಸ, ಸಂಸ್ಕೃತಿ, ಪರಂಪರೆ ಇರುತ್ತದೆ. ಆಯಾ ದೇಶದ ಸಂಗೀತ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಅದನ್ನೆಲ್ಲ ನೋಡುವ, ಅರಿಯುವ ಅವಕಾಶ ನನಗೆ ಒದಗಿಬಂದಿದ್ದು ಸುದೈವ ಎಂದೇ ನಾನು ಅಂದುಕೊಂಡಿದ್ದೇನೆ.

***
ಸಂಗೀತವೇ ಬದುಕು
ಮೈಸೂರು ಮೂಲದ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸಂಗೀತವೇ ಬದುಕು. ಚಿಕ್ಕಂದಿನಿಂದಲೇ ಸಂಗೀತದ ನಂಟು ಬೆಳೆಸಿಕೊಂಡ ಅವರದು ಸಂಗೀತದ ಮನೆತನ. ತಾತ, ತಂದೆ-ತಾಯಿ ಸಂಗೀತ ಲೋಕದವರೇ. ಈವರೆಗೆ ವಿಜಯ್ ಪ್ರಕಾಶ್ ಸುಮಾರು 3,000 ಗೀತೆಗಳನ್ನು ಹಾಡಿದ್ದಾರೆ. ವಿವಿಧ ಭಾರತೀಯ ಭಾಷೆಗಳಲ್ಲಿ 10,000ಕ್ಕೂ ಅಧಿಕ ಜಾಹೀರಾತುಗಳಿಗೆ ದನಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.