ADVERTISEMENT

ಬಿ.ಕಾಂ ಪಾಸಾದ ಗಣೇಶನ ಕಥೆ!

ಮಂಜುಶ್ರೀ ಎಂ.ಕಡಕೋಳ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಬಿ.ಕಾಂ ಪಾಸಾದ ಗಣೇಶನ ಕಥೆ!
ಬಿ.ಕಾಂ ಪಾಸಾದ ಗಣೇಶನ ಕಥೆ!   

‘ನಮ್ಮನೆಯ ನಾಯಿಯಾದರೂ ವಾಸಿ. ಊಟ ಹಾಕಿದ್ದಕ್ಕೆ ಕನಿಷ್ಠ ನಿಯತ್ತಿನಿಂದ ಮನೆಯನ್ನಾದರೂ ಕಾಯುತ್ತದೆ...’ ಜತೆಯಲ್ಲಿ ಊಟಕ್ಕೆ ಕುಳಿತ ನಿರುದ್ಯೋಗಿ ಮಗನಿಗೆ ತಂದೆ ಹೇಳುವ ಮಾತಿದು. ‘ಹೌದಪ್ಪಾ. ಒಂದು ಕೆಲಸ ಮಾಡಿ ಆ ನಾಯಿಯನ್ನು ಎಲ್ಲಾದರೂ ದೂರ ಬಿಟ್ಟುಬನ್ನಿ. ಆ ನಾಯಿಗಿಂತ ನಿಯತ್ತಗಾಗಿ ನಾನೂ ಮನೆ ಕಾಯ್ದೀನಿ. ಬೇಕಿದ್ದರೆ ಅದಕ್ಕಿಂತ ಚೆನ್ನಾಗಿ ಬೊಗಳ್ತೀನಿ...’ ಹೀಗಂತ ಮಗ ತಿರುಗಿ ಉತ್ತರಿಸಿದಾಗ ತಂದೆ ಬೇಸರದಿಂದ ಉಣ್ಣಬೇಕಿದ್ದ ಅನ್ನದ ತಟ್ಟೆಯಲ್ಲೇ ಕೈತೊಳೆದು ಏಳುತ್ತಾರೆ.

ಬೃಹದಾಕಾರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ‘ಗಣಿ ಬಿ.ಕಾಂ ಪಾಸ್’ ಕಿರುಚಿತ್ರದ ಮೂಲಕ ಆಸಕ್ತಿಕರವಾಗಿ ಹೇಳಿದ್ದಾರೆ ನಟ, ನಿರ್ದೇಶಕ ಅಭಿಷೇಕ್ ಶೆಟ್ಟಿ.

ಈ ಕಿರುಚಿತ್ರದ ನಾಯಕ ಗಣೇಶ್. ಬಿ.ಕಾಂ ಪಾಸಾಗಿರುವ ಆತನಿಗೆ ಇಂಗ್ಲಿಷ್ ಭಾಷೆ ಸಮಸ್ಯೆಯಿಂದಾಗಿ ಎಲ್ಲೂ ಕೆಲಸ ದೊರಕುವುದಿಲ್ಲ. ನಾಯಕ ನಿರುದ್ಯೋಗಿಯಾಗಿದ್ದರೂ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುತ್ತಾನೆ. ಇಷ್ಟಪಡುವ ಹುಡುಗನಿಗೆ ಸೋಮಾರಿತನ, ಕೆಲಸ ಸಿಗುವ ಲಕ್ಷಣ ಕಾಣದಿದ್ದಾಗ ಹುಡುಗಿ ಮತ್ತೊಬ್ಬನನ್ನು ಮದುವೆಯಾಗುತ್ತಾಳೆ. ಬೇಸತ್ತ ನಾಯಕ ಹೇಗಾದರೂ ಸರಿ ಸ್ವಂತ ಸಾಮರ್ಥ್ಯದಿಂದ ವ್ಯಾಪಾರ ಮಾಡಬೇಕೆಂದು ವರದಕ್ಷಿಣೆಯೊಂದಿಗೆ ಮದುವೆಯಾಗಬೇಕೆಂದು ಹುಡುಗಿ ಹುಡುಕಾಟಕ್ಕೆ ಮ್ಯಾರೇಜ್ ಬ್ರೋಕರ್ ಬಳಿ ತೆರಳುತ್ತಾನೆ. ಇವನ ಸ್ಥಿತಿ ಕಂಡು ಸಿಟ್ಟಿಗೇಳುವ ಮ್ಯಾರೇಜ್ ಬ್ರೋಕರ್ ನಿನಗೆ ಗೌರಿನೂ ಸಿಗೋಲ್ಲ, ಡೌರಿಯೂ ಸಿಗೋಲ್ಲ. ಮೊದಲು ಕೆಲಸ ಹುಡುಕಿಕೋ ಎಂದು ಬುದ್ಧಿವಾದ ಹೇಳುತ್ತಾನೆ. ಹಾಗಾದರೆ ನಾಯಕನಿಗೆ ಕೆಲಸ ಸಿಕ್ಕಿತೇ? ಮದುವೆ ಆಯಿತೇ? ಎಂಬ ಪ್ರಶ್ನೆಗಳ ಕುತೂಹಲ ಕಥನವೇ ಈ ಕಿರುಚಿತ್ರದ ವಿಶೇಷ.

ADVERTISEMENT

‘5 ಡಿ ಮಾರ್ಕ್ ತ್ರಿ’ ಕ್ಯಾಮೆರಾ ಬಳಸಿ, 35 ಸಾವಿರ ರೂಪಾಯಿ ವೆಚ್ಚದಲ್ಲಿ  ಈ ಕಿರುಚಿತ್ರ ನಿರ್ಮಿಸಲಾಗಿದೆ. ಬೇಗೂರು ರಸ್ತೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಕಿರುಚಿತ್ರಕ್ಕೂ ಮುನ್ನ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಆದರೆ, ಅವೆಲ್ಲವನ್ನೂ ಅಭ್ಯಾಸದ ನೆಲೆಯುಲ್ಲಿ ಮಾಡಿದ್ದೆ. ‘ಗಣಿ ಬಿ.ಕಾಂ ಪಾಸ್‌’ ನಿರುದ್ಯೋಗಿ ಯುವಕರ ಸಂಕಷ್ಟವನ್ನು ತೆರೆದಿಡುವ ಕಿರುಚಿತ್ರ. ಭಾಷೆ, ಸೋಮಾರಿತನ, ನಿರ್ದಿಷ್ಟ ಗುರಿ ಇಲ್ಲದಿದ್ದರೆ ಯುವಕರ ಸ್ಥಿತಿ ಏನಾಗುತ್ತದೆ ಎಂಬುದರ ಜತೆಗೇ ಉದ್ಯೋಗ ಮಾಡಲು ಇಂಗ್ಲಿಷ್ ಭಾಷೆಯೇ ಮಾನದಂಡವಾಗಬೇಕಿಲ್ಲ ಎಂಬುದನ್ನೂ ಈ ಕಿರುಚಿತ್ರ ಹೇಳುತ್ತದೆ’ ಎನ್ನುತ್ತಾರೆ ಅಭಿಷೇಕ್.

‘ಗಣಿ ಬಿ.ಕಾಂ ಪಾಸ್’ ಕಿರುಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯಮೂರ್ತಿ ಮ್ಯಾರೇಜ್ ಬ್ರೋಕರ್ ಆಗಿ ನಟಿಸಿದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕ ಅಭಿಷೇಕ್ ಆ್ಯಕ್ಷನ್ ಕಟ್ ಜತೆಗೆ ಅಭಿನಯವನ್ನೂ ಮಾಡಬಲ್ಲೆ ಎಂಬುದನ್ನು ಸಾಬೀತಪಡಿಸಿದ್ದಾರೆ. ಉತ್ತಮ ಛಾಯಾಗ್ರಹಣ (ರಾಹುಲ್ ದೇವ್), ಪೂರಕ ಹಿನ್ನೆಲೆ ಸಂಗೀತ (ವಿಕಾಸ್ ವಸಿಷ್ಟ) ಈ ಕಿರುಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ನಿರುದ್ಯೋಗದಂಥ ಗಂಭೀರ ಸಮಸ್ಯೆಯನ್ನು ನಿರ್ದೇಶಕ ಅಭಿಷೇಕ್ ಲವಲವಿಕೆಯ ಜತೆಗೇ ವಾಸ್ತವಕ್ಕೆ ಮುಖಾಮುಖಿಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುತೇಕ ನಿರುದ್ಯೋಗಿಗಳ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳನ್ನು ಆಕರ್ಷಕವಾಗಿ ಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.