ADVERTISEMENT

ಬಿ–ಟೌನ್‌ ಹಿರಿಯರ ಹಿರಿಮೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ವಯಸ್ಸು 60ರ ಗಡಿ ದಾಟಿದರೂ ಇಂದಿಗೂ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಿರಿಯ ನಟರನ್ನು ಆರಾಧಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ.

ಮಿಥುನ್‌ ಚಕ್ರವರ್ತಿ (64)
ಮಿಥುನ್‌ ದಾ ಎಂಬ ಹೆಸರಿನಿಂದಲೇ ಗುರುತಿಸಲಾಗುವ ಮಿಥುನ್‌ ಚಕ್ರವರ್ತಿ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋಗಳಲ್ಲಿ ತೀರ್ಪುಗಾರನ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬೆಳ್ಳಿತೆರೆಯಲ್ಲೂ ಕಮಾಲ್‌ ಮಾಡುತ್ತಿದ್ದಾರೆ. ಈಚೆಗೆ ಅಕ್ಷಯ್‌ಕುಮಾರ್‌ ನಟನೆಯ ‘ಎಂಟರ್‌ಟೇನ್‌ಮೆಂಟ್‌’, ಸಲ್ಮಾನ್‌ ಖಾನ್‌ ಅಭಿನಯದ ‘ಕಿಕ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯ ಕಾರ್ಯಕ್ರಮ ಮತ್ತು ಹಾಸ್ಯಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ರಾಜ್ಯಸಭೆ ಸದಸ್ಯನ ಹೊಣೆಗಾರಿಕೆಯೂ ಇವರ ಮೇಲಿದೆ. ಇಷ್ಟೆಲ್ಲವುಗಳ ಮಧ್ಯೆ ಈಗಲೂ ಮೊದಲಿನಷ್ಟೇ ಚುರುಕುತನ ಹೊಂದಿದ್ದಾರೆ.

ಪರೇಶ್‌ ರಾವಲ್‌ (64)
ಎಲ್ಲ ರೀತಿಯ ಪಾತ್ರಗಳಿಗೆ ಜೀವಂತಿಕೆ ತುಂಬುವ ಸಾಮರ್ಥ್ಯ ಹೊಂದಿದವರು ಪರೇಶ್‌ ರಾವಲ್‌. ಇದಕ್ಕೆ ಸಾಕ್ಷಿ ಅವರು ನಟಿಸಿದ ಪಾತ್ರಗಳು. ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಎನ್ನುವುದು ವಿಶೇಷ. ಪೂರ್ವ ಅಹಮದಾಬಾದ್‌ ಲೋಕಸಭೆ ಕ್ಷೇತ್ರದ ಸಂಸದನ ಜವಾಬ್ದಾರಿ ನಿರ್ವಹಿಸುತ್ತಲೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ವೆಲ್‌ಕಂ ಬ್ಯಾಕ್‌, ರಾಜಾ ನಟವರ್‌ಲಾಲ್‌, ಹೇರಾಫೇರಿ ೪ ಇವರ ನಟನೆಯ ಮುಂಬರುವ ಚಿತ್ರಗಳು.

ಹೇಮಾ ಮಾಲಿನಿ (65)
ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನ ಇವರನ್ನು ಇಂದಿಗೂ ಡ್ರೀಮ್‌ ಗರ್ಲ್‌ ಎಂದು ಸಂಬೋಧಿಸುವುದನ್ನು ಮರೆಯುವುದಿಲ್ಲ ಅಷ್ಟರಮಟ್ಟಿಗೆ ಹೇಮಾ ಮಾಲಿನಿ ಜನಮಾನಸದಲ್ಲಿ ಬೇರೂರಿದ್ದಾರೆ. ಇತಿಹಾಸ ನಿರ್ಮಿಸಿದ ‘ಶೋಲೆ’ ಚಿತ್ರದಲ್ಲಿ ಇವರು ನಟಿಸಿದ ‘ಬಸಂತಿ’ ಪಾತ್ರವನ್ನು ಯಾರು ತಾನೇ ಮರೆಯಲು ಸಾಧ್ಯ? ಅನೇಕ ಹಿಟ್‌ ಚಿತ್ರಗಳನ್ನು ನೀಡಿರುವ ಇವರು ೨೦೧೨ರಲ್ಲಿ ಕೊನೆಯ ಬಾರಿಗೆ ಬಾರ್ಬರಿಕ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದ ಹೊರತಾಗಿ ಭರತನಾಟ್ಯ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ದೇಶ ವಿದೇಶಗಳಲ್ಲಿ ಈಗಲೂ ಭರತನಾಟ್ಯ ಕಾರ್ಯಕ್ರಮ ನೀಡುತ್ತಾರೆ. ಸದ್ಯ ಮಥುರಾ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ.

ADVERTISEMENT

ಅಮಿತಾಭ್‌ ಬಚ್ಚನ್‌ (71)
ಬಾಲಿವುಡ್‌ನಲ್ಲಿ ಬಿಗ್‌ ಬಿ ಎಂದೇ ಗುರುತಿಸಿಕೊಂಡಿರುವ ಅಮಿತಾಭ್‌ ಬಚ್ಚನ್‌ಗೆ ವಯಸ್ಸು ೭೧ ಆಗಿದ್ದರೂ ಈಗಲೂ ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಇವರ ಕಾಲದ ಬಹುತೇಕ ನಟ–ನಟಿಯರು ಚಿತ್ರರಂಗದಿಂದ ದೂರ ಸರಿದಿದ್ದಾರೆ. ಆದರೆ, ಇವರು ಮಾತ್ರ ಮೊದಲಿನಂತೆ ಅದೇ ಲವಲವಿಕೆಯಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ, ಸದ್ಯ ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಮಹಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಕನ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅನೇಕ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಗಡುಸಾದ ಧ್ವನಿ ಇವರ ವ್ಯಕ್ತಿತ್ವಕ್ಕೆ ಸರಿಸಾಟಿ ಎಂಬಂತಿದೆ. ಗುಜರಾತ್‌ ಪ್ರವಾಸೋದ್ಯಮ ಇಲಾಖೆಯು ಪ್ರಚಾರ ರಾಯಭಾರಿ ಆಗಿ ನೇಮಿಸಿಕೊಂಡಿದೆ.

ಶಬಾನಾ ಅಜ್ಮಿ (63)
ಶಬಾನಾ ಅಜ್ಮಿ ಅವರಿಗೆ ನಟನೆ ವೃತ್ತಿಯಾದರೆ, ಸಾಮಾಜಿಕ ಕಾರ್ಯ ಪ್ರವೃತ್ತಿ. ಏಡ್ಸ್‌, ಪೋಲಿಯೊ, ವರದಕ್ಷಿಣೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಸದೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇದೆ. ಬೆಳ್ಳಿತೆರೆ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ರಂಗಭೂಮಿ ಜೊತೆಗಿನ ನಂಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಆಗಾಗ ನಾಟಕಗಳಿಗೆ ಬಣ್ಣ ಹಚ್ಚುವ ಅವರು, ಫ್ಯಾಷನ್‌ ಷೋಗಳಲ್ಲಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಲೂ ಹಿಂದೇಟು ಹಾಕುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.