ADVERTISEMENT

ಬೀದಿ ಬೀದಿಯಲ್ಲಿ ರಂಗೋಲಿ...

ಬದುಕು ಬನಿ

ಪ್ರಜಾವಾಣಿ ವಿಶೇಷ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ನನ್ನ ಹೆಸರು ರಮೇಶ್. ಆಂಧ್ರಪ್ರದೇಶದ ನೆಲ್ಲೂರು ನನ್ನೂರು. ಕುಟುಂಬದಲ್ಲಿದ್ದ ಬಡತನ ಹತ್ತು ವರ್ಷಗಳ ಹಿಂದೆ ನಮ್ಮನ್ನೆಲ್ಲಾ ಬೆಂಗಳೂರಿಗೆ ಕರೆತಂದಿತ್ತು. ಅಲ್ಲಿಯೂ ನಾನು ರಂಗೋಲಿ ಮಾರಿಕೊಂಡೇ ಜೀವನ ನಡೆಸುತ್ತಿದ್ದೆ. ಆದರೆ ಆಂಧ್ರಪ್ರದೇಶದಲ್ಲಿ ಬೆಂಗಳೂರಿನಂತೆ ಚಿಕ್ಕ ಚಿಕ್ಕ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವುದು ಕಷ್ಟ. ರಂಗೋಲಿ ವ್ಯಾಪಾರ ಅಲ್ಲಿ ಕುದುರಲಿಲ್ಲ. ಹಾಗಾಗಿ ಎಲ್ಲರೂ ಈ ನಗರದತ್ತ ಹೊರಟು ಬಂದೆವು.

ಓದಿದ್ದು ಒಂಬತ್ತನೇ ತರಗತಿ. ಮನೆಯಲ್ಲಿದ್ದ ಬಡತನವೋ ಅಥವಾ ಆಗ ನನಗೆ ಓದಿನಲ್ಲಿದ್ದ ಅಸಡ್ಡೆಯೋ ಒಂಬತ್ತನೇ ತರಗತಿಗೆ ನನ್ನ ವಿದ್ಯಾಭ್ಯಾಸ ನೆಲಕಚ್ಚಿತ್ತು. ಈ ದಾರಿಯಲ್ಲಿ ಹೋಗು ಎಂದು ಹೇಳುವವರು ಯಾರೂ ಇರಲಿಲ್ಲ. ಹಾಗಾಗಿ ರಂಗೋಲಿ ಮಾರಿ, ನನ್ನ ಕುಟುಂಬ ಪೋಷಿಸಲು ಮುಂದಾದೆ. 

ನನಗೆ ಇಬ್ಬರು ಪುಟ್ಟ ಪುಟ್ಟ ಕಂದಮ್ಮಗಳಿದ್ದಾರೆ. ಅವರನ್ನು ಚೆನ್ನಾಗಿ ಓದಿಸಬೇಕೆಂಬುದೇ ನನ್ನ ಬಯಕೆ. ನನ್ನ ಹಾಗೆ ನನ್ನ ಮಕ್ಕಳು ಆಗಬಾರದು. ಎಷ್ಟೇ ಕಷ್ಟವಾಗಲಿ, ಅವರಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ. ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಪುಟ್ಟ ಮನೆಯೊಂದನ್ನು ಮಾಡಿಕೊಂಡಿದ್ದೇನೆ. ತಿಂಗಳಿಗೆ ಒಂದು ಸಾವಿರ ರೂಪಾಯಿ ಮನೆ ಬಾಡಿಗೆ ಕಟ್ಟಬೇಕು. ಮನೆಯ ಜವಾಬ್ದಾರಿ ಎಲ್ಲವೂ ನನ್ನದೇ. ನಾನು, ನನ್ನ ಮಡದಿ, ಮಕ್ಕಳು ಹಾಗೂ ಅತ್ತೆ ಆ ಮನೆಯಲ್ಲಿ ವಾಸವಾಗಿದ್ದೇವೆ. ಅವತ್ತಿನ ಹೊಟ್ಟೆ ಬಟ್ಟೆಗೆ ನನ್ನ ದುಡಿಮೆ ಸಹಾಯವಾಗಿದೆ. ರಂಗೋಲಿ ಮಾರುವುದು ಬಿಟ್ಟರೆ ಬೇರೆ ಕಾಯಕ ನನಗೊಲಿದಿಲ್ಲ. ಇಷ್ಟು ವರ್ಷ ಇದರಿಂದಲೇ ನಾನು ಜೀವನ ನಡೆಸಿದ್ದೇನೆ.

ನಮ್ಮ ಮಾಲೀಕ ಹೋಗಿ ತಮಿಳುನಾಡಿನಿಂದ ರಂಗೋಲಿ ಲೋಡ್ ಮಾಡಿಕೊಂಡು ಬರುತ್ತಾರೆ. ಅವರ ಬಳಿ ನಾನು ಚೀಲದ ಲೆಕ್ಕದಲ್ಲಿ ರಂಗೋಲಿ ಖರೀದಿಸುತ್ತೇನೆ. ಒಂದು ಮೂಟೆಗೆ ಸುಮಾರು 200ರಿಂದ 250 ರೂಪಾಯಿ ಲಾಭ ಸಿಗುತ್ತದೆ. ಅದೃಷ್ಟವಿದ್ದರೆ ಕೆಲವೊಮ್ಮೆ ಇನ್ನೂ ಹೆಚ್ಚು ಲಾಭವೇ ಸಿಗುತ್ತದೆ. ರಂಗೋಲಿಯ ಜೊತೆ ಕೆಮ್ಮಣ್ಣನ್ನೂ ಮಾರುತ್ತೇನೆ. ನನ್ನ ಈ ವೃತ್ತಿಗಾಗಿಯೇ ಒಂದು ಸೈಕಲ್ ಕೂಡ ಖರೀದಿಸಿದ್ದೇನೆ. ಪ್ರತಿನಿತ್ಯ ನಗರದ ಒಂದೊಂದು ಬಡಾವಣೆಯ ಬೀದಿಗಳಿಗೂ ತೆರಳಿ ರಂಗೋಲಿಯನ್ನು ಮಾರುತ್ತೇನೆ. ಒಂದು ಮೂಟೆ ರಂಗೋಲಿ ಮಾರಲು ಎರಡು ಮೂರು ದಿನಗಳಾದರೂ ಬೇಕು. ಹತ್ತು, ಇಪ್ಪತ್ತು, ಮೂವತ್ತು ರೂಪಾಯಿಯಂತೆ ಜನರಿಗೆ ಬೇಕಾದಷ್ಟು ಪ್ರಮಾಣದ ರಂಗೋಲಿ ಮಾರುತ್ತೇನೆ. ಹಬ್ಬದ ಸಮಯದಲ್ಲಿ ಕೊಂಚ ಹೆಚ್ಚು ವ್ಯಾಪಾರವಾಗುತ್ತದೆ.

ಆಗೆಲ್ಲಾ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದರು. ಈಗ ಈ ಸಂಸ್ಕೃತಿ ಕ್ಷೀಣಿಸುತ್ತಿದೆ. ಆದ್ದರಿಂದ ದಿನೇದಿನೇ ನನ್ನ ವ್ಯಾಪಾರವೂ ಕುಗ್ಗುತ್ತಿದೆ. ಈಗೇನೋ ಮಕ್ಕಳು ಚಿಕ್ಕವರು. ಶಾಲೆಗೆ ಹೋಗುತ್ತಿಲ್ಲ. ಅವರು ದೊಡ್ಡವರಾಗುತ್ತಿದ್ದಂತೆ ಮುಂದೆ ಹೇಗಪ್ಪಾ? ಎಂಬ ಭಯ ಕಾಡುತ್ತಿದೆ. ಸದ್ಯ ಹೇಗೋ ಜೀವನ ಬಂಡಿ ಸಾಗಿಸುತ್ತಿದ್ದೇನೆ. ಬೇಸರವಾದಾಗೆಲ್ಲಾ ಕುಟುಂಬದೊಟ್ಟಿಗೆ ನನ್ನೂರಿಗೆ ಹೋಗಿ ಬರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.