ADVERTISEMENT

ಬೆಂಗಳೂರು ಹಾಡು ರಿನೋಶ್ ಹೆಜ್ಜೆ ಜಾಡು

ವಿಶಾಖ ಎನ್.
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ರಿನೋಶ್ ಜಾರ್ಜ್ ಎಂದ ತಕ್ಷಣ ‘ಬೆಂಗಳೂರು ಇದು ನಮ್ಮ ಊರು’ ಎಂಬ ಉದ್ಗಾರ ತೆಗೆಯುವ ಪಡ್ಡೆ ಹೈಕಳೀಗ ನಮ್ಮ ನಡುವೆ ಇದ್ದಾರೆ. ಯಾವುದೇ ತರಗತಿಗೆ ಹೋಗಿ ಸಂಗೀತ ಕಲಿಯದ ರಿನೋಶ್ ಬೆಂಗಳೂರು ಕುರಿತ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆನ್ನುವುದು ವಿಶೇಷ. ರ್ಯಾಪ್ ಶೈಲಿಯ ಹಾಡೊಂದನ್ನು ಅವರು ಆಲ್ಬಂ ಆಗಿ ಸಾಕಾರಗೊಳಿಸಿಕೊಳ್ಳಲು ಒಂದು ವರ್ಷ ತೆಗೆದುಕೊಂಡರೆನ್ನುವುದು ಆಸಕ್ತಿಕರ ಕಥೆ.

ರಿನೋಶ್ ಮಲಯಾಳಿ ಮೂಲದವರಾದರೂ ಹುಟ್ಟಿ, ಬೆಳೆದದ್ದು ಬೆಂಗಳೂರಿನಲ್ಲಿಯೇ. ಓದಿದ್ದು ಎಚ್‌ಎಸ್‌ಆರ್ ಲೇಔಟ್‌ನ ಆಕ್ಸ್‌ಫರ್ಡ್ ಕಾಲೇಜಿನಲ್ಲಿ. ತಮ್ಮಿಷ್ಟದ ಪತ್ರಿಕೋದ್ಯಮ, ಸೈಕಾಲಜಿಯಲ್ಲಿ ಪದವಿ ಪಡೆದರಾದರೂ ಎದೆಬಡಿತ ಇದ್ದುದು ಸಂಗೀತದಲ್ಲಿ. ಹಾಗಂತ ಅವರು ಯಾವುದೇ ತರಗತಿಗೆ ಸೇರಿ ಸಂಗೀತ ಕಲಿಯಲಿಲ್ಲ. ಉಳಿದ ಹುಡುಗರಂತೆ ಕೆಲಸಕ್ಕೆ ಸೇರಿ ಆಸಕ್ತಿಯನ್ನು ಮೊಟಕು ಮಾಡಲೂ ಇಲ್ಲ.

ಒಂದು ದಿನ ನಡುರಾತ್ರಿ ಕಾರಿನಲ್ಲಿ ಹೋಗುವಾಗ ಬೆಂಗಳೂರಿನ ನಿರ್ಜನ ರಸ್ತೆಗಳನ್ನು ಕಂಡ ರಿನೋಶ್‌ಗೆ ಹಳೆಯ ಕಾಲದ ನಗರ ನೆನಪಾಯಿತು. ‘ದಿಸ್  ಈಸ್ ಬೆಂಗಳೂರು... ಯೂ ಕ್ಯಾನ್ ಕಾಲ್ ಮಿ ಗುರು’ (ಇದು ಬೆಂಗಳೂರು... ನನ್ನನ್ನು ಕರೆಯಬಹುದು ಗುರು) ಎಂಬ ಎರಡು ಸಾಲುಗಳು ಹೊಳೆದವು. ಹೀಗೆ ಏನಾದರೂ ಹೊಳೆದರೆ ರಿನೋಶ್‌ಗೆ ಟ್ಯೂನ್ ಹಾಕುವ ಗೀಳು. ಮೊದಲು ಟ್ಯೂನ್ ಮಾಡಿದರು. ಆಮೇಲೆ ಸಾಲುಗಳನ್ನು ಬೆಳೆಸಿದರು. ಅದರ ಫಲವೇ ಬೆಂಗಳೂರಿನ ಹಾಡು. ಹೆಚ್ಚು ಇಂಗ್ಲಿಷ್‌, ಕಡಿಮೆ ಕನ್ನಡದ ಗಮನ ಸೆಳೆಯುವ ಹಾಡು ಇದು. 

ಒಂದು ವರ್ಷದ ಹಿಂದೆಯೇ ಸಿದ್ಧಗೊಂಡ ಹಾಡಿಗೆ ಆಲ್ಬಂನ ರೂಪ ಬಂದದ್ದು ತಡವಾಗಿಯೇ. ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಭರತ್ ಪರಶುರಾಮ್‌ಗೆ ಮೊದಲಿನಿಂದಲೂ ಸಿನಿಮಾಟೋಗ್ರಾಫರ್ ಆಗುವ ಉಮೇದು. ರಿನೋಶ್ ಗಾನಪ್ರೀತಿ ಅದಕ್ಕೂ ಅವಕಾಶ ಮಾಡಿಕೊಟ್ಟಿತು. ಅಮಿತ್ ಆನಂದ್ ಎಂಬ ಇನ್ನೊಬ್ಬ ಸ್ನೇಹಿತರು ಹಾಡಿನ ನಿರ್ಮಾಣಕ್ಕೆ ಮುಂದೆ ಬಂದರು.

ಹಾಡಿನ ಹುಚ್ಚು ರಿನೋಶ್‌ಗೆ ಹೊಸತೇನಲ್ಲ. ಮನದಲ್ಲಿ ಮೂಡುವ ಸಾಲುಗಳನ್ನು ಹಾಡಾಗಿಸಲು ಅವರು ಆರಂಭಿಸಿದ್ದು 2011ರಲ್ಲಿ. ಆಗ ‘ಬಿಲೀವ್’ ಎಂಬ ಇಂಗ್ಲಿಷ್ ಹಾಡನ್ನು ಮಾಡಿದ್ದರು. ಆಮೇಲೆ ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್ ಎಲ್ಲಾ ಭಾಷೆಗಳ ಮಿಶ್ರಣದ ಇನ್ನೊಂದು ಕಲಸುಮೇಲೋಗರದಂಥ ಹಾಡು ಮಾಡಿದರು. ಅದಾದ ಮೇಲೆ ರ್‍ಯಾಪರ್‌್ಸ ಸ್ನೇಹಿತರ ಸಹಯೋಗದಲ್ಲಿ ಇನ್ನೊಂದು ಗೀತೆಯನ್ನು ಚಿತ್ರೀಕರಿಸಿದರು. ಮೂಡಿದ ಹಾಡಿಗೆ ದೃಶ್ಯರೂಪ ಕೊಡುವ ಮೂಲಕ ಅದು ದೀರ್ಘಕಾಲ ಉಳಿಯುವಂತೆ ಮಾಡಬೇಕೆಂಬುದು ರಿನೋಶ್ ಉದ್ದೇಶ.

ಯೂಟ್ಯೂಬ್ ವೇದಿಕೆಯನ್ನು ಇವರು ಸಮರ್ಥವಾಗಿ ಬಳಸಿಕೊಂಡರು. ಚಿತ್ರೀಕರಿಸಿದ ಹಾಡಿನ ವಿಡಿಯೊಗಳನ್ನು ಅದರಲ್ಲಿ ಹಾಕಿದರು. ಮೊದಲ ಮೂರು ವಿಡಿಯೊಗಳಿಗೆ ಸಿಕ್ಕ ಪ್ರತಿಕ್ರಿಯೆಗಿಂತ ಹೆಚ್ಚು ಸ್ಪಂದನ ಬೆಂಗಳೂರು ಬಗೆಗಿನ ಆಲ್ಬಂಗೆ ದಕ್ಕಿದೆ. ‘ಬೆಂಗಳೂರು ನಮ್ಮ ಊರು. ಆ ಪ್ರೀತಿಯಿಂದಲೇ ನಾವು ಚಿತ್ರೀಕರಣಕ್ಕೆಂದು ಇಳಿದದ್ದು ಇದೇ ವರ್ಷ ಫೆಬ್ರುವರಿಯಲ್ಲಿ. ಸಿನಿಮಾ ಚಿತ್ರೀಕರಣಕ್ಕೆ ಪಡೆಯುವ ಯಾವುದೇ ಅನುಮತಿಯನ್ನು ಔಪಚಾರಿಕವಾಗಿ ಪಡೆದುಕೊಳ್ಳುವಷ್ಟು ಸಮಯ, ಬಜೆಟ್ ನಮಗೆ ಇರಲಿಲ್ಲ.

ಆದರೂ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಹಾಡಿನ ವಿಡಿಯೊದಲ್ಲಿ ತೋರಿಸಬೇಕಿತ್ತು. ಆಟೊ ಚಾಲಕರು, ತೃತೀಯ ಲಿಂಗಿಗಳು ಎಲ್ಲರನ್ನೂ ನಾನು ಖುದ್ದು ಮಾತನಾಡಿ ಚಿತ್ರೀಕರಣಕ್ಕೆ ಒಪ್ಪಿಸಿದೆ. ತೃತೀಯ ಲಿಂಗಿಗಳ ಬಳಿಗೆ ಮಾತನಾಡಲು ಹೋದಾಗ ನನಗೆ ಆತಂಕವಿತ್ತು. ಆಮೇಲೆ ಒಳ್ಳೆಯ ಅನುಭವವಾಯಿತು. ದಾರಿಯಲ್ಲಿ ಹೋಗುತ್ತಿದ್ದ ಕೆಲವರನ್ನು ಚಿತ್ರೀಕರಣಕ್ಕೆ ಸಹಕರಿಸುವಂತೆ ಕೇಳಿದೆ. ಒಪ್ಪದವರೇ ಹೆಚ್ಚು. ಒಪ್ಪಿದವರು ಹಲವು ಟೇಕ್‌ಗಳಿಗೆ ಸ್ಪಂದಿಸಿದರು. ಹತ್ತು ದಿನಗಳ ಚಿತ್ರೀಕರಣ ಮರೆಯಲಾಗದ ಕ್ಷಣಗಳನ್ನು ಕೊಟ್ಟಿತು’ ಎಂದು ಚಿತ್ರೀಕರಣದ ಸಿಹಿ-ಕಹಿ ನೆನಪನ್ನು ರಿನೋಶ್ ಮೆಲುಕು ಹಾಕಿದರು.

ಯೂಟ್ಯೂಬ್‌ನಲ್ಲಿ ಅವರು ಪೋಸ್ಟ್ ಮಾಡಿರುವ ಬೆಂಗಳೂರಿನ ಹಾಡಿಗೆ ಫೇಸ್‌ಬುಕ್ ಲಿಂಕಿಂಗ್‌ನಿಂದಲೇ ಎರಡು ಲಕ್ಷಕ್ಕೂ ಹೆಚ್ಚು ಹಿಟ್‌ಗಳು ಸಿಕ್ಕಿವೆ. ಮಂತ್ರಿ ಸಮುದಾಯದವರು ಮಾಡಿದ ಲಿಂಕನ್ನು ಒಂದು ಲಕ್ಷ ಜನ ನೋಡಿದ್ದಾರೆ. ‘ನಮ್ಮ ಹಾಡು ಈ ರೀತಿ ವೈರಲ್ ಆಗಿ ಪ್ರಚಾರ ಪಡೆಯುತ್ತಿರುವುದು ಸಂತೋಷ ತಂದಿದೆ. ಸಿನಿಮಾದಲ್ಲಿ ಅಭಿನಯಿಸಲು, ಹಾಡಲು ಕೆಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಭರತ್ ಈಗಾಗಲೇ ತ್ರಾಣ ಸಿನಿಮಾದಲ್ಲಿ ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮಿತ್ ಆನಂದ್ ಸಿನಿಮಾ ನಿರ್ಮಾಣವೊಂದಕ್ಕೆ ಕೈಹಾಕಿದ್ದಾರೆ.

ಯೂಟ್ಯೂಬ್ ವೇದಿಕೆಯಿಂದ ನಮಗೆಲ್ಲಾ ಸಂದಿರುವ ಫಲವಿದು’ ಎಂದು ಸಂತೋಷ ಹಂಚಿಕೊಳ್ಳುವ ರಿನೋಶ್ ತಲೆಯಲ್ಲಿ ಇನ್ನಷ್ಟು ಹಾಡುಗಳಿವೆ. ಇಂಥದೊಂದು ಹಾಡನ್ನು ಚಿತ್ರೀಕರಿಸಲು ಸುಮಾರು ಒಂದು ಲಕ್ಷ ರೂಪಾಯಿ ಬಜೆಟ್ ಬೇಕು ಎನ್ನುವ ಇವರ ಯಶೋಗಾಥೆಯಿಂದ ಸ್ಫೂರ್ತಿ ಪಡೆದು ಇನ್ನಷ್ಟು ಹುಡುಗರು ಗಿಟಾರ್ ತಂತಿ ಮೀಟುತ್ತಾ ಟ್ಯೂನ್ ಹಾಕತೊಡಗಿದ್ದಾರೆ.

ರಿನೋಶ್ ತಂದೆ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರೆ, ಅವರ ತಾಯಿ ಸೇಂಟ್ ಜಾನ್ಸ್ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಮಗ ಯಶಸ್ಸಿನ ಒಂದು ಮೆಟ್ಟಿಲನ್ನು ಹತ್ತಿರುವುದು ಅವರಿಗೂ ಹೆಮ್ಮೆಯ ಸಂಗತಿಯೇ. ‘ಬೆಂಗಳೂರು ಇದು ನಮ್ಮ ಊರು’ ಹಾಡಿನ ಯೂಟ್ಯೂಬ್ ಲಿಂಕ್:  http://bit.ly/RinoshBengaluru
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT