ADVERTISEMENT

ಬೆಚ್ಚನೆಯ ಫ್ಯಾಷನ್ ಟ್ರೆಂಡ್

ಮಾನಸ ಬಿ.ಆರ್‌
Published 13 ನವೆಂಬರ್ 2017, 4:38 IST
Last Updated 13 ನವೆಂಬರ್ 2017, 4:38 IST
ಚಳಿಗಾಲಕ್ಕೆ ಬೆಚ್ಚನೆ ಲೆದರ್ ಜಾಕೆಟ್  (ಚಿತ್ರಕೃಪೆ: aliexpress.com)
ಚಳಿಗಾಲಕ್ಕೆ ಬೆಚ್ಚನೆ ಲೆದರ್ ಜಾಕೆಟ್ (ಚಿತ್ರಕೃಪೆ: aliexpress.com)   

ಮುದ್ದು ಕಂದಮ್ಮಗಳಿಗೆ ಟ್ರೆಂಡಿ ಬಟ್ಟೆಗಳನ್ನು ಆಯ್ಕೆ ಮಾಡುವ ಅಮ್ಮಂದಿರಿಗೆ ಚಳಿಗಾಲದ ಉಡುಪುಗಳಲ್ಲಿ ಹೊಸತನವನ್ನು ಹುಡುಕುವುದು ದೊಡ್ಡ ಸವಾಲು. ಈ ಸವಾಲಿಗೆ ಉತ್ತರ ಕಂಡುಕೊಳ್ಳುವುದನ್ನು ಸುಲಭ ಮಾಡಲೆಂಬಂತೆ ಮಾರುಕಟ್ಟೆಗೆ ಈಗ ಬೆಚ್ಚನೆಯ ಅನುಭವ ನೀಡುವ ಮತ್ತು ಟ್ರೆಂಡಿಯಾಗಿರುವ ಹತ್ತಾರು ಮಾದರಿಗಳ ಉಡುಪುಗಳು ಲಗ್ಗೆಯಿಟ್ಟಿವೆ.

ಸ್ವೆಟ್ ಫ್ರಾಕ್‍ಗಳು: ಇತ್ತೀಚೆಗೆ ಮಕ್ಕಳ ಲೋಕದಲ್ಲಿ ಕಾಲಿರಿಸಿರುವ ಸ್ವೆಟ್ ಫ್ರಾಕ್‍ಗಳು ಹೆಣ್ಣು ಮಕ್ಕಳ ಫ್ಯಾಷನ್ ಲೋಕದಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಉದ್ದನೆಯ ತೋಳು ಹಾಗೂ ಸ್ವೆಟರ್ ಮಾದರಿಯ ಫ್ರಾಕ್‍ಗಳು ಮಕ್ಕಳಿಗೆ ಚಳಿಯಿಂದ ರಕ್ಷಣೆ ನೀಡುವುದರ ಜೊತೆಗೆ ಹೊಸ ಕಾಲಕ್ಕೆ ತಕ್ಕಂತೆ ಟ್ರೆಂಡಿಯಾಗಿಯೂ ಕಾಣುತ್ತವೆ. ಫ್ರಾಕ್‍ಗಳ ಮೇಲೆ ಹಾಕಿರುವ ಚಿತ್ರಗಳು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆ. ಬಣ್ಣಬಣ್ಣದ ಗೊಂಬೆಗಳು, ನಕ್ಷತ್ರ, ಪ್ರಾಣಿಗಳು, ಆಟದ ವಸ್ತುಗಳನ್ನು ಶರ್ಟ್‍ಗಳ ಮೇಲೆ ಹಾಕಿರುವುದು ಈ ಬಟ್ಟೆಗಳ ವಿಶೇಷ.

ಸ್ವೆಟರ್ ರೀತಿಯ ಶರ್ಟ್‍ಗಳಿಗೆ ಫ್ರಾಕ್ ಜೋಡಿಸಿ ಈ ಬಟ್ಟೆಯನ್ನು ಟ್ರೆಂಡಿಯಾಗಿ ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ವೆಟ್ ಮಿಡಿಗಳು ಕೂಡ ಮಕ್ಕಳಿಗೆ ಅಚ್ಚುಮೆಚ್ಚು.

ADVERTISEMENT

(ಸ್ವೆಟ್‌ ಫ್ರಾಕ್‌ಗಳು ಮಕ್ಕಳನ್ನು ಬೆಚ್ಚಗಿಡುತ್ತವೆ  (ಚಿತ್ರಕೃಪೆ: ventra.in))

ಕೂಲ್ ಶೋಲ್ಡರ್: ಚಳಿಗಾಲದ ಮಕ್ಕಳ ಬಟ್ಟೆಗಳಲ್ಲೂ ಕೂಲ್ ಶೋಲ್ಡರ್ ಉಡುಪುಗಳು ಸಿಗುತ್ತಿವೆ. ಸ್ವೆಟರ್ ಮಾದರಿಯ ಫ್ರಾಕ್ ಹಾಗೂ ಮಿಡಿಗಳಲ್ಲಿ ಕೂಲ್ ಶೋಲ್ಡರ್ ಟ್ರೆಂಡ್ ಹೆಚ್ಚು ಪ್ರಚಲಿತ. ಇಂಥ ಉಡುಗೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚು.

ಲೆದರ್ ಹಾಗೂ ಫ್ಯಾನ್ಸಿ ಕೋಟ್‍ಗಳು: ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾದ ಲೆದರ್ ಹಾಗೂ ಮೆತ್ತಗಿನ ಫ್ಯಾನ್ಸಿ ಕೋಟ್‍ಗಳು ಈಗಿನ ಟ್ರೆಂಡ್. ಇವುಗಳು ಫೂಟಿ, ಬೌನ್ಸರ್ಸ್, ಡಂಗ್ರೀಸ್ ಮಾದರಿಯಲ್ಲೂ ಸಿಗುತ್ತವೆ.

ಜೀನ್ಸ್: ಚಳಿಗಾಲದಲ್ಲಿ ಜೀನ್ಸ್ ಬಟ್ಟೆಗಳು ಮಕ್ಕಳಿಗೆ ಬೆಚ್ಚನೆಯ ಅನುಭವ ನೀಡುತ್ತದೆ. ಜೀನ್ಸ್ ಬಟ್ಟೆಯಲ್ಲಿ ತಯಾರಾದ ಕೋಟ್, ಪ್ಯಾಂಟ್, ಉದ್ದನೆಯ ಡಂಗ್ರೀಸ್‍ಗಳನ್ನು ಮಕ್ಕಳಿಗೆ ಹಾಕುವುದರಿಂದ ಫ್ಯಾಷನ್ ಜೊತೆಗೆ ಚಳಿಯಿಂದಲೂ ರಕ್ಷಣೆ ಸಿಗುತ್ತದೆ.

'ಮೊದಲೆಲ್ಲಾ ಮಕ್ಕಳಿಗೆ ಮದುವೆಗೆ ಹೋಗುವಾಗಲೂ ಚಳಿಗಾಲದಲ್ಲಿ ಸ್ವೆಟರ್, ಸಾಕ್ಸ್ ಹಾಕಿಕೊಂಡು ಹೋಗಬೇಕಿತ್ತು. ಈಗ ಟ್ರೆಂಡಿಯಾಗಿರುವ ಬಟ್ಟೆಗಳು ಮಾರುಕಟ್ಟೆಯಲ್ಲಿವೆ. ಸ್ವೆಟರ್ ಮಾದರಿಯ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಸುಂದರವಾಗಿ ಕಾಣುತ್ತದೆ. ಜೊತೆಗೆ ಚಳಿಯೂ ಆಗುವುದಿಲ್ಲ' ಎನ್ನುವುದು ಬಸವನಗುಡಿಯಲ್ಲಿ ನೆಲೆಸಿರುವ ಎರಡು ಮಕ್ಕಳ ತಾಯಿ ಅಕ್ಷತಾ ಅವರ ಮಾತು.

ಸಾಫ್ಟ್‌ವೇರ್ ಎಂಜಿನಿಯರ್ ಸಹ ಆಗಿರುವ ಅವರು ತಮ್ಮ ಮಕ್ಕಳಿಗಾಗಿ ಬಟ್ಟೆ ಖರೀದಿಸುವಾಗ ಆನ್‌ಲೈನ್‌ಗೆ ಖರೀದಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ.

'ಮಾರುಕಟ್ಟೆಗೆ ಹೋಗಿ ಗಂಟೆಗಟ್ಟಲೆ ಅಂಗಡಿಗಳನ್ನು ಸುತ್ತಿ ಬಟ್ಟೆಗಳನ್ನು ಆಯ್ಕೆ ಮಾಡುವಷ್ಟು ಸಮಯವೂ ಅವರಿಗೆ ಇಲ್ಲ. ಆನ್‍ಲೈನ್ ಖರೀದಿಯಿಂದ ಸಮಯ ಉಳಿಸಬಹುದು. ಮಾರುಕಟ್ಟೆಗೆ ಬರುವ ಮೊದಲೇ ಟ್ರೆಂಡಿ ಬಟ್ಟೆಗಳು ಆನ್‌ಲೈನ್‌ ಮಳಿಗೆಗಳಲ್ಲಿ ಸಿಗುತ್ತವೆ' ಎನ್ನುವುದು ಅವರ ಅನುಭವದ ಮಾತು.

ಟ್ರೆಂಡ್‍ಗೆ ತಕ್ಕ ವಿನ್ಯಾಸ ಹೊಂದಿರುವ ಈ ಬಟ್ಟೆಗಳು ತುಸು ದುಬಾರಿಯೂ ಹೌದು. ಬೆಂಗಳೂರಿನ ಬಹುತೇಕ ಅಂಗಡಿಗಳಲ್ಲಿ ₹ 800 ಆರಂಭಿಕ ದರ ಎನಿಸಿದೆ. ಮಲ್ಲೇಶ್ವರಂ, ಗಾಂಧಿಬಜಾರ್, ಬಸವನಗುಡಿ, ಕಮರ್ಷಿಯಲ್ ಸ್ಟ್ರೀಟ್‍ಗಳ ಕೆಲ ಅಂಗಡಿಗಳಲ್ಲಿ ₹ 2000 ವರೆಗೂ ಬೆಲೆ ಇದೆ.

ಆನ್‍ಲೈನ್‍ನಲ್ಲಿ ₹ 300ರಿಂದ ಆರಂಭವಾಗಿ ₹ 3000 ವರೆಗಿನ ಬಟ್ಟೆಗಳು ಲಭ್ಯ. ಹಾಫ್‌ಸ್ಕಾಚ್, ಪೆಟ್‍ಪೆಟ್ ಆನ್‍ಲೈನ್ ಖರೀದಿಯಲ್ಲಿ ಅವಕಾಶಗಳು ಹೆಚ್ಚು. ಟ್ರೆಂಡಿ ಫ್ರಾಕ್‍ಗಳಿಗೆ ಹೊಂದಿಕೊಳ್ಳುವ ಸ್ವೆಟರ್‌ಗಳನ್ನು ಜೊತೆಯಾಗಿ ಮಾರಾಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.