ADVERTISEMENT

ಬೋಳು ನೋಟದ ನಟ–ನಟಿಯರು

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2015, 19:49 IST
Last Updated 15 ಡಿಸೆಂಬರ್ 2015, 19:49 IST

ಪಾತ್ರಕ್ಕಾಗಿ ತಾವು ಏನು ಬೇಕಾದರೂ ಮಾಡಲು ಸಿದ್ಧ ಎನ್ನುವುದನ್ನು ಅನೇಕ ನಟ–ನಟಿಯರು ಆಗಾಗ ಖಚಿತಪಡಿಸುತ್ತಲೇ ಇರುತ್ತಾರೆ. ಇನ್ನು ನಿರ್ದಿಷ್ಟ ಪಾತ್ರಕ್ಕೆ ಬೋಳು ಬೋಳಾಗಿ ಕಾಣುವುದು ಅದರಲ್ಲೊಂದು. ಅರೆ ಬರೆ ಅಥವಾ ಸಂಪೂರ್ಣ ಬೋಳು  ನೋಟದಲ್ಲಿಯೇ ಬೋಲ್ಡ್‌ ಆಗಿ ಕಾಣಿಸಿಕೊಂಡ ಅಂತಹ ನಟ–ನಟಿಯರ ಸಾಲು ಇಲ್ಲಿದೆ...

ಆಯಾ ಪಾತ್ರ ಹಾಗೂ ಚಿತ್ರಕಥೆಯನ್ನು ಆಧರಿಸಿ ‘ಬೋಳು ನೋಟ’ ಪಡೆಯುವುದು ಬಿ-ಟೌನ್‌ ಪಾಲಿಗೆ ಹೊಸ ಸಂಗತಿ ಏನೂ ಅಲ್ಲ.  ಅಮಿತಾಭ್‌ ಅವರಂತಹ ದಿಗ್ಗಜರಿಂದ ಹಿಡಿದು, ಸಂಜಯ್‌ ದತ್, ಅಮೀರ್‌ ಖಾನ್, ಸಲ್ಮಾನ್‌ ಖಾನ್‌, ಶಾಹೀದ್‌ ಕಪೂರ್‌, ರಣವೀರ್‌ ಸಿಂಗ್‌ ಅವರವರೆಗೂ ಅನೇಕ ನಟರು ಪಾತ್ರಕ್ಕಾಗಿ ಬೋಳು ಬೋಳಾಗಿ ಕಾಣಿಸಿಕೊಂಡಿದ್ದಿದೆ.

ಆದರೆ ನಟರಿಗಷ್ಟೇ ಸೀಮಿತವಾಗಿ ಉಳಿದಿಲ್ಲ ಈ ನಂಟು. ಕೆಲ ನಟಿಯರೂ ಸಹ ಪಾತ್ರದ ಅಗತ್ಯಕ್ಕಾಗಿ ಬೋಳುತಲೆಯಲ್ಲಿ ಕಾಣಿಸಿಕೊಂಡಿದ್ದೂ ಇದೆ. ಅಂಥವರಲ್ಲಿ ಪ್ರಿಯಾಂಕಾ ಚೋಪ್ರಾ, ಶಿಲ್ಪಾ ಶೆಟ್ಟಿ, ಕಂಗನಾ ಕೂಡ ಇದ್ದಾರೆ.

ಬೋಳು ನೋಟ ಪಡೆಯಲು ಕೆಲವರು ಪ್ರಾಸ್ಥೆಟಿಕ್ ಮೇಕಪ್ ಮೊರೆಹೋದರೆ, ಇನ್ನು ಕೆಲವರು ಸ್ಪೆಷಲ್ ಎಫೆಕ್ಟ್ ಆಯ್ಕೆಗೆ ಹೋಗುವುದುಂಟು. ಕೆಲವರಂತೂ ನೈಜತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿಜವಾಗಿಯೂ ತಲೆ ಬೋಳಿಸಿಕೊಂಡಿದ್ದು ಇದೆ. ಕ್ರೀಡಾ ಕಥಾಹಂದರ ಹೊಂದಿರುವ ಚಿತ್ರಗಳಿಗಾಗಿ ಅನೇಕ ನಟ–ನಟಿಯರು ಹೀಗೆ ಬೋಳು ನೋಟದಲ್ಲಿ ಕಂಗೊಳಿಸಿದ್ದಿದೆ.

ಈಗಾಗಲೇ ‘ಗಜಿನಿ’ ಚಿತ್ರದಲ್ಲಿ ಅಂತಹ ಲುಕ್‌ನಿಂದ ಗೆದ್ದು ಬಂದ ಅಮೀರ್‌, ಮತ್ತೊಮ್ಮೆ ‘ದಂಗಲ್’ ಚಿತ್ರಕ್ಕಾಗಿ ಬೋಳು ತಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರೀಡಾ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಮೀರ್ ಖಾನ್ ಕುಸ್ತಿಪಟು ಮಹಾವೀರ್ ಫೊಗಾಟ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಮಹವೀರ್ ಫೊಗಾಟ್ ರೀತಿಯಲ್ಲಿಯೇ ಹೇರ್ ಟ್ರಿಮ್ ಮಾಡಿಸಿಕೊಂಡಿರುವ ಅಮೀರ್, ಪೈಲ್ವಾನ್ ಲುಕ್‌ನಲ್ಲಿ ಮೋಡಿ ಮಾಡಲಿದ್ದಾರೆ. ಕಳೆದೆರಡು ತಿಂಗಳ ಹಿಂದಷ್ಟೇ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಸುಲ್ತಾನ್’ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.

ಇದರಲ್ಲೂ ಜನರ ಗಮನ ಸೆಳೆದಿದ್ದು ಸಲ್ಲೂ ಬಾಯ್‌ ಬಾಲ್ಡ್‌ ಲುಕ್‌. ಇದೂ ಹರಿಯಾಣದ ಕುಸ್ತಿಪಟು ‘ಸುಲ್ತಾನ್’ ಅಲಿ ಖಾನ್ ಎನ್ನುವವರ ಪಾತ್ರವನ್ನಾಧರಿಸಿದ ಚಿತ್ರ. ‘ತೇರೆ ನಾಮ್’ ಚಿತ್ರದ ನಂತರ ‘ಸುಲ್ತಾನ್‌’ನಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಲ್ಲು. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೋವಲ್ ಬಳಿ ಕುಸ್ತಿಯನ್ನೂ ಕಲಿಯುತ್ತಿದ್ದಾರೆ.

‘ಬಾಜಿರಾವ್‌ ಮಸ್ತಾನಿ’ ಚಿತ್ರಕ್ಕಾಗಿ ರಣವೀರ್‌ ಸಹ ಬೋಳು ನೋಟದ ಮೊರೆಹೋಗಿದ್ದಾರೆ. ‘ಹೈದರ್‌’ ಚಿತ್ರದಲ್ಲಿ ಎರಡು ರೀತಿಯ ಬಾಲ್ಡ್‌ ಲುಕ್‌ನಲ್ಲಿ ಶಾಹಿದ್‌ ಅಭಿನಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶಾರುಖ್‌ ಜೊತೆಗೆ ‘ರಾವಣ್‌’ನಲ್ಲಿ ನಟಿಸಲು ಅರ್ಜುನ್‌ ರಾಮ್‌ಪಾಲ್‌ ಸಹ ಬೋಳುತಲೆಯಲ್ಲಿ ಕಾಣಿಸಿಕೊಂಡಿದ್ದರು. ‘ಶಿವಾಜಿ’ ಚಿತ್ರಕ್ಕಾಗಿ ರಜನಿಕಾಂತ್‌ ಸಹ ತಮ್ಮ ಕೇಶಕ್ಕೆ ಕತ್ತರಿ ಹಾಕಿದ್ದರು.

ಬಾಲಿವುಡ್‌ ಬಿಗ್‌ ಸ್ಟಾರ್‌ ಅಮಿತಾಭ್ ಸಹ ‘ಪಾ’ ಚಿತ್ರಕ್ಕಾಗಿ ಬೋಳುತಲೆಯ ಗೆಟಪ್‌ ಮಾಡಿಸಿಕೊಂಡಿದ್ದರು.  ಇದಕ್ಕಾಗಿ ಅವರು ಕೂದಲಿಗೆ ಕತ್ತರಿ  ಪ್ರಯೋಗ ಮಾಡಿಸಿರಲಿಲ್ಲ. ಆದರೂ ಪ್ರಾಸ್ಥೆಟಿಕ್ ಮೇಕಪ್‌ಗಾಗಿ ಗಂಟೆಗಟ್ಟಲೇ ಕುಳಿತುಕೊಳ್ಳುತ್ತಿದ್ದುದು ನಿಜ.

ನಟಿಯರ ಸರದಿ
ತಾವೇನು ಕಡಿಮೆ ಎಂದು ಹೊರಟ ನಟಿಯರ ಸಾಲೂ ದೊಡ್ಡದಿದೆ. ‘ದಿ ಡಿಸೈರ್‌’ ಚಿತ್ರಕ್ಕಾಗಿ ನಟಿ ಶಿಲ್ಪಾ ಶೆಟ್ಟಿ ಬೋಳುತಲೆ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅವರೇನೂ ನಿಜವಾಗಿ ತಲೆ ಬೋಳಿಸಿಕೊಂಡಿಲ್ಲ. ಆದರೆ ಪ್ರಾಸ್ಥೆಟಿಕ್ ಮೇಕಪ್‌ಗಾಗಿ ಮೂರು ಗಂಟೆ  ಕೂರುತ್ತಿದ್ದರು.

ಮೇರಿ ಕೋಮ್‌ ಚಿತ್ರಕ್ಕಾಗಿ ಪ್ರಿಯಾಂಕಾ ಸಹ ಬಾಲ್ಡ್‌ ಲುಕ್‌ ಪಡೆದು ಸುದ್ದಿಯಾಗಿದ್ದರು. ಇತ್ತೀಚಿನ ಸಿನಿಮಾಗಳಲ್ಲಿ ಉತ್ತಮ ನಟನೆ ಹಾಗೂ ವಿಭಿನ್ನ ನೋಟಗಳಿಂದ ಗಮನ ಸೆಳೆದ ನಟಿ ಕಂಗನಾ. ‘ಕಟ್ಟಿ ಬಟ್ಟಿ’ ಸಿನಿಮಾದಲ್ಲಿ ಬೋಳು ತಲೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ, ಈ ಸನ್ನಿವೇಶಕ್ಕಾಗಿ ಕಂಗನಾ ಕೃತಕ ಸಾಧನ ಬಳಸಿದ್ದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT