ADVERTISEMENT

ಮಂಜನ ಗೀತಮಾಧುರಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST
‘ಮೇಲ್ಕೋಟೆ ಮಂಜ’ ಜಗ್ಗೇಶ್‌ ಮತ್ತು ಐಂದ್ರಿತಾ ರೇ
‘ಮೇಲ್ಕೋಟೆ ಮಂಜ’ ಜಗ್ಗೇಶ್‌ ಮತ್ತು ಐಂದ್ರಿತಾ ರೇ   

‘ಹಾಡು ಬರೆಯೋದು ನನಗೆ ಕಷ್ಟವೇನೂ ಅಲ್ಲ. ಈ ಮೊದಲು ಕೂಡ, ನನ್ನ ಸಿನಿಮಾಗಳ ಅನೇಕ ಹಾಡುಗಳಿಗೆ ಕೆಲವು ಸಾಲುಗಳನ್ನು ಕೊಟ್ಟಿದ್ದೇನೆ. ಟ್ಯೂನ್‌ಗೆ ತಕ್ಕಂತೆ ಪದಗಳನ್ನು ಬದಲಿಸಿದ್ದೇನೆ. ಆದರೆ, ಹೀಗೆ ಪೂರ್ಣ ಪ್ರಮಾಣದಲ್ಲಿ ಹಾಡು ಬರೆದಿರೋದು ಇದೇ ಮೊದಲು. ಆ ಹಾಡನ್ನು ನೀವು ಕೇಳ್ತೀರಾ?’

ತಮ್ಮ ಮನೆಯ ಕೆಳ ಮಹಡಿಯಲ್ಲಿನ ಕಚೇರಿಯಲ್ಲಿ ಕುಳಿತು ಮಾತನಾಡುತ್ತಿದ್ದ ಜಗ್ಗೇಶ್‌ ಅವರ ಮಾತುಗಳೇ ಒಂದು ಹಾಡಿನಂತಿದ್ದವು. ಹಾಡು ಶುರುವಾಯಿತು. ಪ್ರೇಮಿಗಳು ತಮ್ಮ ಹೃದಯದ ಮಾತುಗಳನ್ನು ನಿವೇದಿಸಿಕೊಳ್ಳುವ ಯುಗಳಗೀತೆಯದು. ಜಗ್ಗೇಶ್‌ ತಲೆದೂಗತೊಡಗಿದರು. ಹಾಡು ಹಾಗೂ ಆ ಗೀತೆಗೆ ಗೀತರಚನೆಕಾರನ ಸಂಭ್ರಮದ ಸ್ಪಂದನ– ಆಡುವ ತನ್ನ ಮಗುವನ್ನು ನೋಡಿ ಅಮ್ಮ ಮೈಮರೆತಂತಿತ್ತು.

ಪ್ರೇಮದ ಹಾಡಿನ ನಂತರ ಶುರುವಾದುದು ಸಾಲಗಾರನ ಹಾಡು. ‘ಇಂಡ್ಯಾ ದೇಶವೇ ಸಾಲದಲ್ಲಿದೆ ನಂದ್ಯಾವ ಲೆಕ್ಕ’ ಎನ್ನುವ ಈ ಗೀತೆ ಸಿನಿಮಾದ ಒಟ್ಟಾರೆ ಕಥನವನ್ನು ಧ್ವನಿಸುವಂತಿತ್ತು. ಅಷ್ಟುಮಾತ್ರವಲ್ಲ, ಈ ಹಾಡಿಗೆ ಸಾಲಗಾರರ ಪ್ರಾರ್ಥನಾಗೀತೆ ಆಗುವ ಎಲ್ಲ ಲಕ್ಷಣಗಳೂ ಇದ್ದಂತಿದೆ. ಯೋಗರಾಜ ಭಟ್ಟರು ಬರೆದಿರುವ ಈ ಗೀತೆಗೂ ಜಗ್ಗೇಶ್‌ ತಲೆದೂಗಿದರು.

ಅಂದಹಾಗೆ, ಜಗ್ಗೇಶ್‌ರ ಈ ಗೀತಸಂಭ್ರಮ ‘ಮೇಲ್ಕೋಟೆ ಮಂಜ’ ಚಿತ್ರಕ್ಕೆ ಸಂಬಂಧಿಸಿದ್ದು. ಇನ್ನೇನು ಶೂಟಿಂಗ್‌ಗೆ ಹೊರಡಲು ಮಂಜನ ಬಳಗ ಕೊನೆಕ್ಷಣಗಳ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಗ್ಗೇಶ್‌ ಹಾಡುಗಳಲ್ಲಿ ಮುಳುಗಿದ್ದರು. ಕಳೆದ ದಿನವಷ್ಟೇ ಚೆನ್ನೈನಲ್ಲಿ ಹಾಡುಗಳ ಧ್ವನಿಮುದ್ರಣ ಮುಗಿಸಿಕೊಂಡು ಬಂದಿದ್ದ ಅವರು ಸಹಜವಾಗಿಯೇ ಗೀತೆಗಳ ಗುಂಗಿನಲ್ಲಿದ್ದರು.

‘ಟಿಪ್ಪು ಎಂಥ ಅದ್ಭುತ ಹಾಡುಗಾರ. ಹೀಗೆ ಬಂದ. ಸಾಹಿತ್ಯ ಏನೆಂದು ಕೇಳಿಕೊಂಡ. ಹಾಡಿ ಹೊರಟೇಬಿಟ್ಟ. ಕಾರ್ತಿಕ್‌ ಕೂಡ ಅಷ್ಟೇ. ಅದ್ಭುತ ಹಾಡುಗಾರ. ಎಲ್ಲವೂ ಎರಡು ಎರಡೂವರೆ ಗಂಟೆಗಳಲ್ಲಿ ಮುಗಿದೇಹೋಯಿತು’. ಜಗ್ಗೇಶ್‌ ಮಾತುಗಳಲ್ಲಿ ಬೆರಗಿತ್ತು, ಮೆಚ್ಚುಗೆಯೂ ಇತ್ತು.

ಅಂದಹಾಗೆ, ‘ಮೇಲ್ಕೋಟೆ ಮಂಜ’ ಜಗ್ಗೇಶ್‌ ನಿರ್ದೇಶಿಸುತ್ತಿರುವ ಸಿನಿಮಾ. ತಮ್ಮ ಪುತ್ರ ಗುರುರಾಜ್‌ಗಾಗಿ ‘ಗುರು’ ಸಿನಿಮಾ ನಿರ್ದೇಶಿಸಿದ್ದ ಅವರು, ಇದೀಗ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರದ ನಾಯಕನೂ ಅವರೇ. ಐಂದ್ರಿತಾ ರೇ ಮಂಜನಿಗೆ ನಾಯಕಿ. ‘ಸಿಕ್ಕಾಪಟ್ಟೆ ಕಾಮಿಡಿ’ ಎನ್ನುವುದು ಸಿನಿಮಾದ ಬಗ್ಗೆ ಅವರ ಬಣ್ಣನೆ.

ಐವತ್ತು ದಾಟಿದ್ದಾಯಿತು. ಈ ಹೊತ್ತಿನಲ್ಲೂ ಕಾಮಿಡಿಯಾ? ಸ್ವಂತ ಸಿನಿಮಾದಲ್ಲಾದರೂ ಇಮೇಜು ಮೀರುವ ಪ್ರಯತ್ನ ಮಾಡಬಹುದಲ್ಲವಾ ಎಂದು ಕೆಣಕಿದರೆ, ಜಗ್ಗೇಶ್‌ ಪಟ್ಟಿಗೆ ಸಿಗುವವರೇನೂ ಅಲ್ಲ. ‘ಮನಸ್ಸಿಗೆ ಇಷ್ಟವಾಗುವ ಸಿನಿಮಾನೂ ಮಾಡೋಣ. ವರ್ಷಕ್ಕೊಂದಾದರೂ ಒಳ್ಳೆಯ ಸಿನಿಮಾ ಮಾಡುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಒಂದು ಸ್ಕ್ರಿಪ್ಟ್‌ ತಯಾರಿಯೂ ನಡೆದಿದೆ’ ಎಂದರು. ಅಲ್ಲಿಗೆ ಸಿನಿಮಾ ನಿರ್ಮಾಣದ ಪಂಚವಾರ್ಷಿಕ ಯೋಜನೆಯೊಂದು ಜಗ್ಗೇಶ್‌ ಅವರ ಬಳಿ ಇದೆ ಎಂದಾಯಿತು.

ಮಂಜನ ಪ್ರವರದಿಂದ ಮಾತು ಹೊರಳಿದ್ದು ‘ವಾಸ್ತುಪ್ರಕಾರ’ ಸಿನಿಮಾದತ್ತ. ಯೋಗರಾಜ ಭಟ್‌ ನಿರ್ದೇಶನದ ‘ವಾಸ್ತುಪ್ರಕಾರ’ ಸಿನಿಮಾದಲ್ಲಿ ಜಗ್ಗೇಶ್‌ರ ಪಾತ್ರದ ಶೂಟಿಂಗ್‌ ಹೆಚ್ಚೂಕಡಿಮೆ ಮುಗಿದಿದೆ. ಗೀತೆಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ‘ಸಿನಿಮಾ ತುಂಬಾ ಚೆನ್ನಾಗಿಬಂದಿದೆ’ ಎಂದ ಜಗ್ಗೇಶ್‌, ಯೋಗರಾಜ ಭಟ್ಟರ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಅದೇ ವೇಳೆಗೆ ‘ನಿಮ್ಮ ಟೈಮಿಂಗ್‌ ಅದ್ಭುತವಾಗಿದೆ. ಏನದರ ಗುಟ್ಟು?’ ಎಂದು ಭಟ್ಟರು ತಮ್ಮ ನಟನೆಯ ಬಗ್ಗೆ ಬೆರಗಿನಿಂದ ನೋಡಿದ್ದನ್ನೂ ಹೇಳಿಕೊಂಡರು. ಅಂದಹಾಗೆ, ಆ ಟೈಮಿಂಗ್‌ನ ಗುಟ್ಟಾದರೂ ಏನು?  ‘ನನಗೂ ಗೊತ್ತಿಲ್ಲ’ ಎಂದರು ಜಗ್ಗೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.