ADVERTISEMENT

ಮತ್ತೆ ಬಂತು ‘ಫ್ರಿಂಜ್‌’ ಸ್ಟೈಲ್

ಫ್ಯಾಷನ್‌

ಹೇಮಾ ವೆಂಕಟ್
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಮತ್ತೆ ಬಂತು ‘ಫ್ರಿಂಜ್‌’ ಸ್ಟೈಲ್
ಮತ್ತೆ ಬಂತು ‘ಫ್ರಿಂಜ್‌’ ಸ್ಟೈಲ್   
ಪಾಶ್ಚಾತ್ಯ ನೃತ್ಯಗಳಲ್ಲಿ ಕಲಾವಿದರು ತೊಡುತ್ತಿದ್ದ ಜಾಕೆಟ್‌ಗಳಲ್ಲಿ ಫ್ರಿಂಜ್‌ ವಿನ್ಯಾಸ ಢಾಳಾಗಿ ಇರುತ್ತಿತ್ತು. ಈಗ ಇಂಥ ವಿನ್ಯಾಸದ ಜಾಕೆಟ್‌ಗಳು ಎಲ್ಲ ಸಂದರ್ಭಗಳಿಗೂ ಸಲ್ಲುತ್ತಿವೆ. ನೃತ್ಯ, ಸಿನಿಮಾ, ಪಾರ್ಟಿ, ಸಮಾರಂಭ, ಶಾಪಿಂಗ್‌ ಹೀಗೆ ಎಲ್ಲೆಡೆ ಕಾಣಿಸುತ್ತಿವೆ.
 
ಭುಜದ ಸುತ್ತ, ತೋಳಿನ ತುದಿಯಲ್ಲಿ, ಸೊಂಟದ ಭಾಗಗಳಲ್ಲಿ ಲೆದರ್‌ ಎಳೆಗಳನ್ನು ಹೊಲಿದು  ವಿನ್ಯಾಸ ಮಾಡಿದ ಜಾಕೆಟ್‌ಗಳು ನೋಡಲು ಆಕರ್ಷಕವಾಗಿವೆ. ಅಲ್ಲಲ್ಲಿ ನೇತಾಡುವ  ಎಳೆಗಳು ಜಾಕೆಟ್‌ಗೆ ಹೊಸ ರೂಪ ನೀಡಿವೆ.  
 
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಲೆದರ್ ಜಾಕೆಟ್‌ಗಳನ್ನು ಬಾಂಬ್‌ ನಿರೋಧಕ  ಜಾಕೆಟ್‌ಗಳನ್ನಾಗಿ ನೀಡಲಾಯಿತು. ಆ ನಂತರ 1940–50ರ ದಶಕದಲ್ಲಿ ಅಮೆರಿಕದ ಕಾರ್ಮಿಕ ವರ್ಗದವರು ಲೆದರ್‌ ಜಾಕೆಟ್‌ಗಳನ್ನು  ತೊಡುವುದಕ್ಕೆ  ಆರಂಭಿಸಿದರು. ಹೀಗೆ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವಾಗ ದೇಹದ ರಕ್ಷಣೆಗಾಗಿ ತೊಡುತ್ತಿದ್ದ ಲೆದರ್‌ ಜಾಕೆಟ್‌ಗಳು ಕ್ರಮೇಣ ಯುವಜನರ ಮೆಚ್ಚಿನ  ಉಡುಗೆಗಳಾಗಿ ಬದಲಾದವು.
 
ಮಿಲಿಟರಿ ಅಧಿಕಾರಿಗಳು, ಬೈಕ್‌ ಸವಾರರು, ಪೊಲೀಸರಷ್ಟೇ ತೊಡುತ್ತಿದ್ದ ಕಪ್ಪು ಮತ್ತು ಕಂದು ಬಣ್ಣಗಳಲ್ಲಿ ಮಾತ್ರ ಸಿಗುತ್ತಿದ್ದ (ಪ್ರಾಣಿಗಳ ಚರ್ಮದಿಂದ ತಯಾರಿಸಿದ) ಲೆದರ್ ಜಾಕೆಟ್‌ಗಳು  ಈಗ ಫ್ಯಾಷನ್‌ ಪ್ರಿಯರ ನೆಚ್ಚಿನ ಉಡುಗೆ ಎನಿಸಿದೆ.
 
ಮತ್ತೆ ಬಂತು ಫ್ರಿಂಜ್‌ ವಿನ್ಯಾಸ
‘ರಫ್‌ ಅಂಡ್‌ ಟಫ್‌’ ಸ್ವಭಾವದವರಿಗೆ ಹೆಚ್ಚು ಹೊಂದುವ ಲೆದರ್‌ ಜಾಕೆಟ್‌ಗಳು,  ಸಿನಿಮಾದಲ್ಲೂ ಅಂಥ ವ್ಯಕ್ತಿತ್ವವನ್ನು ತೋರಿಸಲು ಬಳಕೆಯಾಗುತ್ತಿತ್ತು. ಅದರಲ್ಲೂ 1950ರ ದಶಕದ ಸಿನಿಮಾಗಳಲ್ಲಿ ‘ಫ್ರಿಂಜ್‌’ ವಿನ್ಯಾಸದ ಜಾಕೆಟ್‌ಗಳನ್ನು ಹೆಚ್ಚಾಗಿ ಕಾಣಬಹುದು. 
 
ಅಪ್ಪಟ ಲೆದರ್ ಜಾಕೆಟ್‌ಗಳು ಬೆಲೆಯಲ್ಲಿ ದುಬಾರಿ  ಎನಿಸಿದ್ದ ಕಾರಣ ಸಾಮಾನ್ಯರ ಕೈಗೆಟುಕುವಂತಿರಲಿಲ್ಲ.  ಆದರೆ, ಈಗ ಸಿಂಥೆಟಿಕ್‌ ಲೆದರ್‌ಗಳು ಮಾರುಕಟ್ಟೆಗೆ ಬಂದಿವೆ.  ದರವೂ ಕೊಂಚ ಕಡಿಮೆ ಇದೆ. ಬೇಡಿಕೆಯೂ ಕುದುರಿದೆ.
 
ಬೇಡಿಕೆಗೆ ಅನುಗುಣವಾಗಿ ಫ್ಯಾಷನಬಲ್‌ ಆದ ಜಾಕೆಟ್‌ಗಳನ್ನು ವಿನ್ಯಾಸಕರು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಲೆದರ್‌ ಮಾತ್ರವಲ್ಲದೇ ವೆಲ್ವೆಟ್‌, ಜೀನ್ಸ್‌ ಹೀಗೆ ವಿವಿಧ ಮೆಟೀರಿಯಲ್‌ಗಳಲ್ಲಿ ಫ್ರಿಂಜ್‌ ಜಾಕೆಟ್‌ಗಳು ಆನ್‌ಲೈನ್‌ನಲ್ಲೂ ಲಭ್ಯವಿದೆ.
 
ಹೆಣ್ಣುಮಕ್ಕಳು ತೊಡುವ ಜಾಕೆಟ್‌ಗಳಂತೂ ಬೇರೆ ಉಡುಪುಗಳ ರೀತಿಯಲ್ಲಿಯೇ ಸ್ಟೈಲಿಶ್‌ ಆಗಿ ವಿನ್ಯಾಸ ಮಾಡಲಾಗಿದೆ. ಮೊಣಕಾಲಿನವರೆಗೂ ಬರುವ ಉದ್ದದ ಜಾಕೆಟ್‌ಗಳು ಫ್ರಿಂಜ್‌  ವಿನ್ಯಾಸದಲ್ಲಿ ಆಕರ್ಷಕವಾಗಿ  ಕಾಣುತ್ತದೆ.
 
ಫ್ರಿಂಜ್‌ ವಿನ್ಯಾಸದ ಬ್ಯಾಗ್‌, ಶೂ, ಹೆಣ್ಣುಮಕ್ಕಳ ಕುರ್ತಾಗಳು ಈಗ ಚಾಲ್ತಿಗೆ ಬಂದಿವೆ.  ಸೀರೆಯ ಸರಗಿಗೂ ಇದೇ ರೀತಿಯ ಕುಚ್ಚುಗಳನ್ನು ಬಂದಿವೆ.
 
‘ಫ್ರಿಂಜ್‌  ವಿನ್ಯಾಸದ ಲೆದರ್‌ ಜಾಕೆಟ್‌ ಮೆಕ್ಸಿಕೊ ಮೂಲದಿಂದ ಬಂದಿದೆ. ಇದು ಕೌಬಾಯ್‌ ಸ್ಟೈಲ್‌. ಒಂದು ವರ್ಷದಿಂದೀಚೆಗೆ ಎಲ್ಲ ಉಡುಪುಗಳಿಗೂ  ಫ್ರಿಂಜ್ ವಿನ್ಯಾಸದ ಸ್ಪರ್ಶ ನೀಡಲಾಗುತ್ತಿದೆ’ ಎಂದು ವಸ್ತ್ರವಿನ್ಯಾಸಕಿ ಶಿಲ್ಪಿ ಚೌಧರಿ ಹೇಳುತ್ತಾರೆ.
 
ಚಳಿಗಷ್ಟೇ ಅಲ್ಲ ಸ್ಟೈಲ್‌ಗೂ ಸೈ
ಮುಂಭಾಗದಲ್ಲಿ ಜಿಪ್‌, ಬಟನ್‌ ಏನೂ ಇಲ್ಲದೆ ಚಳಿಗಷ್ಟೇ ಅಲ್ಲ, ಬೇಸಿಗೆಗೂ ಸೈ ಎಂಬಂತೆ ಫ್ರಿಂಜ್‌ ವಿನ್ಯಾಸದ ಜಾಕೆಟ್‌ಗಳು ಮೋಡಿ ಮಾಡುತ್ತಿವೆ. ಜೀನ್ಸ್ ಮತ್ತು ಟೀಶರ್ಟ್‌–ಕುರ್ತಾದ ಮೇಲೂ ಇದನ್ನು ಹಾಗೇ ಧರಿಸಿದರಾಯಿತು.   
 
ಸಂಜೆಯ ಚುಮು ಚುಮು ಚಳಿಗೆ ತೊಡುವ, ಮೈಯನ್ನು ಬೆಚ್ಚಗಿಡುವ ಜಿಪ್‌ ಇರುವ ಜಾಕೆಟ್‌ಗಳೂ ಫ್ರಿಂಜ್‌ ವಿನ್ಯಾಸದಲ್ಲಿ ಲಭ್ಯವಿದೆ.   ಬೈಕರ್ ಜಾಕೆಟ್‌, ಕ್ಯಾಶುವಲ್‌ ಜಾಕೆಟ್‌, ಸ್ಟೈಲಿಷ್‌ ಜಾಕೆಟ್‌ಗಳು ಬೇರೆ ಬೇರೆ ದರಗಳಲ್ಲಿ ಲಭ್ಯವಿದೆ.
 
**
ಸಿಂಗಪುರದಲ್ಲಿ ಮೊಸಳೆಯ ಚರ್ಮದಿಂದ ಸಿದ್ಧಪಡಿಸಿದ ಜಾಕೆಟ್‌ಗಳ ಕನಿಷ್ಠ ಬೆಲೆ ₹ 1ಲಕ್ಷದಿಂದ ಆರಂಭವಾಗುತ್ತದೆ. ನಮ್ಮ ದೇಶದಲ್ಲಿ ಕಾನೂನು ಬದ್ಧವಾಗಿ ಚರ್ಮದಿಂದ ಸಿದ್ಧಪಡಿಸಿದ ಜಾಕೆಟ್‌ ಬೆಲೆ ಕನಿಷ್ಠ ₹6 ಸಾವಿರ ಇದೆ. 
–ಶಿಲ್ಪಿ ಚೌಧರಿ, ವಸ್ತ್ರ ವಿನ್ಯಾಸಕಿ
 
**
ಆನ್‌ಲೈನ್ ದರ ವಿವರ: 
www.amazon.inನಲ್ಲಿ ₹1,500ರಿಂದ 80,000 ಇದೆ.
www.myntra.comನಲ್ಲಿ ₹2,000ದಿಂದ 10,000ದ ವರೆಗಿನ ಜಾಕೆಟ್‌ಗಳು ಲಭ್ಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.