ADVERTISEMENT

ಮನೆಯವರ ಕಾಡುವ ರಾಜಮಾರ್ಗ

ವಿಶಾಖ ಎನ್.
Published 24 ಏಪ್ರಿಲ್ 2018, 6:27 IST
Last Updated 24 ಏಪ್ರಿಲ್ 2018, 6:27 IST
ಮನೆಯವರ ಕಾಡುವ ರಾಜಮಾರ್ಗ
ಮನೆಯವರ ಕಾಡುವ ರಾಜಮಾರ್ಗ   

ಆ ರಾಮ ಕುರ್ಚಿ ಮೇಲೆ ಅರೆ ಅಂಗಾತ ಸ್ಥಿತಿಯಲ್ಲಿ ಕುಳಿತಿದ್ದರು ಪಾರ್ವತಮ್ಮ. ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣ ಸಂಸ್ಥೆಯ ಪ್ರತಿ ಇಟ್ಟಿಗೆಯಲ್ಲೂ ಸಣ್ಣ ಬಿರುಕೂ ಮೂಡದಂತೆ ನೋಡಿಕೊಂಡಿದ್ದವರು ಅವರು. ರಾಜ್‌ಕುಮಾರ್ ಅಗಲಿಕೆಯ ನಂತರ ಅವರು ತುಸು ಮೆತ್ತಗಾಗಿದ್ದರು. ಸಿನಿಮಾ ಚರ್ಚೆಗಳಿಗೆ ಮೊದಲಿನಷ್ಟು ಕೂರುತ್ತಿರಲಿಲ್ಲ. ಆದರೆ, ವಿಮರ್ಶಕಿಯಾಗಿ ಅವರ ಬಿರುಸು ಕೊಂಚವೂ ತಗ್ಗಿರಲಿಲ್ಲ. ಅದೇತಾನೆ ‘ಕುಮಾರರಾಮ’ ಸಿನಿಮಾ ತೆರೆಕಂಡು, ಸೋತಿತ್ತು.

ತಕ್ಷಣಕ್ಕೆ ಅವರು ನೆನಪಿಸಿಕೊಂಡದ್ದು ರಾಜ್‌ಕುಮಾರ್ ಕಾಲದ ಪೌರಾಣಿಕ, ಐತಿಹಾಸಿಕ ಚಿತ್ರಗಳನ್ನು. ‘ಯಾರು ಯಾರು ಯಾವ ಯಾವ ಕೆಲಸ ಮಾಡಬೇಕು ಎನ್ನುವುದನ್ನು ಆ ಕಾಲವೇ ನಿರ್ಧರಿಸಿದಂತಿತ್ತು’ ಎಂದು ನಾಸ್ಟಾಲ್ಜಿಕ್ ಆಗಿ ಹೇಳಿದ ಅವರು, ರಾಜ್‌ಕುಮಾರ್ ಕೂರುತ್ತಿದ್ದ ಕುರ್ಚಿಯ ಕಡೆಗೆ ಕಣ್ಣು ನೆಟ್ಟರು. ತಮ್ಮ ಪ್ರತಿ ವಿಮರ್ಶೆಯನ್ನು ಆ ಕುರ್ಚಿ ಮೇಲೆ ಕುಳಿತು ಮನೆಯೊಡೆಯ ಕೇಳುತ್ತಿರುತ್ತಾರೇನೋ ಎನ್ನುವ ಭಾವ ಮೂಡುತ್ತಿರುತ್ತದೆ ಎಂದಿದ್ದ ಅವರು, ಕಣ್ಣಂಚಿನಲ್ಲಿ ಜಮೆಯಾದ ಸಣ್ಣ ಹನಿ ಕೆಳಗಿಳಿಯದಂತೆ ಅಂಗೈನಿಂದ ಒರೆಸಿಬಿಟ್ಟಿದ್ದರು.

ಮಾಂಸದಡುಗೆಯ ಘಮಲು, ಸಮಾರಂಭಗಳಲ್ಲಿ ಬಂಧು–ಮಿತ್ರರು ಜಮೆಯಾಗುವ ಸಂದರ್ಭ, ಚಿತ್ರಕಥೆ ಆಯ್ಕೆ ನಡೆಯುವ ಪ್ರಕ್ರಿಯೆ ಎಲ್ಲದರಲ್ಲೂ ರಾಜ್‌ಕುಮಾರ್ ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ಸದಾ ಇದ್ದೇ ಇರುತ್ತಾರೆ ಎನ್ನುವ ಸ್ವಾನುಭವವನ್ನು ಆ ದಿನ ಅವರು ಹಂಚಿಕೊಂಡಿದ್ದರು.

ADVERTISEMENT

(2009ರಲ್ಲಿ ರಾಜ್‌ಕುಮಾರ್ ನೆನಪಿನಲ್ಲಿ ವಿಧಾನಸೌಧದಲ್ಲಿ ಜಿಪಿಒ ಅಂಚೆಚೀಟಿ ಬಿಡುಗಡೆ ಮಾಡಿದಾಗ...)

* ಪುನೀತ್ ರಾಜ್‌ಕುಮಾರ್ ಬೆಣ್ಣೆಬಿಳಿಯ ಟಿ–ಶರ್ಟ್ ತೊಟ್ಟು ನಿಂತರು. ಅದರ ಮೇಲೆ ರಾಜ್‌ಕುಮಾರ್ ಭಾವಚಿತ್ರ; ಅದೂ ನಗುಮುಖದ್ದು. ‘ವಂಶಿ’ ಸಿನಿಮಾ ಮುಹೂರ್ತದ ಶುಭಗಳಿಗೆ ಅದು. ರಾಜ್‌ಕುಮಾರ್ ಬಾಳಿ, ಬದುಕಿದ ಮನೆಯ ಆವರಣದ ತುಂಬೆಲ್ಲ ಜನ. ಕಾವಲಿಯಿಂದ ಅನಾಮತ್ತು ಮಸಾಲೆ ದೋಸೆಯನ್ನು ತಟ್ಟೆಗೆ ಹಾಕುತ್ತಿದ್ದ ವ್ಯಕ್ತಿ ಕೂಡ ‘ಅಣ್ಣಾವ್ರು ಹೇಗೆ ಚಪ್ಪರಿಸಿಕೊಂಡು ದೋಸೆ ತಿನ್ನುತ್ತಿದ್ದರು ಗೊತ್ತಾ’ ಎಂದು ನೆನಪಿನ ಗೆರೆಗಳನ್ನು ಮೂಡಿದ ಮುಖವನ್ನು ತುಸು ಬಾಡಿಸಿಕೊಂಡ. ಅವನ ಭುಜದ ಮೇಲೊಂದು ಕೈಯಿಟ್ಟು, ಪುನೀತ್ ಮುಂದಡಿ ಇಟ್ಟರು. ಹೊಟ್ಟೆಯ ಆಕಾರದ ಅಳತೆ ಮಾಡಿಕೊಳ್ಳತೊಡಗಿದವರ ನಡುವೆಯೂ ರಾಜ್‌ಕುಮಾರ್‌ ಅವರ ಕಟ್ಟುಮಸ್ತಾದ ಮೈಕಟ್ಟಿನದ್ದೇ ಪ್ರಸ್ತಾಪ. ಎಲ್ಲಕ್ಕೂ ಸಾಕ್ಷಿಯಾದಂತಿತ್ತು ಟಿ–ಶರ್ಟ್ ಮೇಲಿನ ರಾಜ್‌ ನಗುಮುಖದ ಪಟ.

* ಮನೆಯ ಮುಂದಿನ ಕಾಂಪೌಂಡ್‌ಗೆ ಹೊಂದಿಕೊಂಡ ಗೂಡಿನಲ್ಲಿದ್ದ ಗಣಪನಿಗೆ ವಂದಿಸಿಯೇ ರಾಜ್‌ಕುಮಾರ್‌ ಎಲ್ಲಿಗಾದರೂ ಹೊರಡುತ್ತಿದ್ದದ್ದು. ಅವರ ಸದಾಶಿವನಗರದ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಕಾಲೇಜಿನ ಹುಡುಗರು ಕ್ಲಾಸ್‌ಗೆ ಬಂಕ್‌ ಮಾಡಿ, ಕಾವೇರಿ ಚಿತ್ರಮಂದಿರದ ಕಡೆಗೆ ಸಿನಿಮಾ ನೋಡಲು ಸಾಗುತ್ತಿದ್ದರು. ಅವರ ಕಣ್ಣಿಗೆ ಬಿದ್ದದ್ದು ರಾಜ್‌ಕುಮಾರ್. ತಮ್ಮ ಮನೆಯ ಮುಂದೆ ಗಣೇಶನಿಗೆ ವಂದಿಸುತ್ತಾ ನಿಂತಿದ್ದ ಅವರ ಕೈಕುಲುಕುವ ಭಾಗ್ಯ ವಿದ್ಯಾರ್ಥಿಗಳದ್ದು. ‘ಚೆನ್ನಾಗಿ ಓದಿ, ಕ್ಲಾಸಿಗೆ ಚಕ್ಕರ್ ಹೊಡೆದು ಸುತ್ತಾಡಬೇಡಿ’ ಎಂದು ತುಂಟ ನಗು ನಕ್ಕ ರಾಜ್‌ಕುಮಾರ್ ಅದು ಹೇಗೆ ‘ಮೈಂಡ್ ರೀಡ್’ ಮಾಡಿದ್ದರೋ? ಈ ಘಟನೆಯನ್ನು ವಿದ್ಯಾರ್ಥಿಗಳು ನೆನಪಿಸಿಕೊಂಡಾಗ, ಪುನೀತ್ ಕಣ್ಣಂಚಿನಲ್ಲೂ ಸಣ್ಣಗೆ ನೀರು ತುಂಬಿಕೊಂಡಿತ್ತು.

* ಶಿವರಾಜ್‌ಕುಮಾರ್ ಕಟ್ಟಿಸಿದ್ದು ಅರಮನೆಯಂಥ ಮನೆ. ‘ಅದನ್ನು ಅಪ್ಪಾಜಿ ನೋಡಿದ್ದರೆ ಎಷ್ಟು ಖುಷಿ ಪಡುತ್ತಿದ್ದರೋ ಏನೋ’ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೂ ದಾಸೋಹವೊಂದರ ನಡುವೆಯೇ. ದಾಸೋಹ ಎಂದೊಡನೆ ನೆನಪಾಗುವುದು ರಾಜ್ ಊಟೋಪಚಾರದ ವೈಖರಿ. ಊಟದ ಹೊತ್ತಿಗೆ ಯಾರೇ ಅತಿಥಿ, ಅಭ್ಯಾಗತರು ಮನೆಗೆ ಹೋದರೂ ಅವರಿಗೆ ಊಟ ಬಡಿಸದೇ ಕಳುಹಿಸುತ್ತಿರಲಿಲ್ಲ. ‘ಹಸಿದು ಬಂದವರಿಗೆ ಮೂರು ತುತ್ತು ಅನ್ನ ಕೊಡಬೇಕು ಕಂದಾ’ ಎಂದು ಅವರು ಪದೇ ಪದೇ ಹೇಳುತ್ತಿದ್ದ ಮಾತನ್ನು ಕಣ್ಣಿಗೊತ್ತಿಕೊಂಡೇ ಮಕ್ಕಳು ‘ಡಾ.ರಾಜ್‌ಕುಮಾರ್ ಇಂಟರ್‌ನ್ಯಾಷನಲ್ ಹೋಟೆಲ್’ ಕಟ್ಟಿಸಿದರು. ರಾಜ್‌ ಸಿನಿಮಾ ಚಿಂತನೆಗಳನ್ನು ಹೊತ್ತೊಯ್ಯುತ್ತಿದ್ದ ಗಾಳಿ ಸುಯ್ಯುವ ಗಾಂಧಿನಗರದಲ್ಲೇ ಆ ಹೋಟೆಲ್ ಇದೆ. ಅದರ ಉದ್ಘಾಟನೆಯ ದಿನ ಬಾಡಿಗೆ ಹಾಗೂ ಸೌಕರ್ಯಗಳ ಕುರಿತು ಯಾರೂ ಮಾತನಾಡಿರಲಿಲ್ಲ. ರಾಜ್‌ ಅನ್ನಪ್ರೀತಿಯನ್ನೇ ಎಲ್ಲರೂ ನೆನಪಿಸಿಕೊಂಡಿದ್ದರು.

* ಪಾರ್ವತಮ್ಮ ಇನ್ನೂ ಮೆತ್ತಗಾಗಿದ್ದರು. ಕ್ಯಾನ್ಸರ್ ಬಾಧಿಸತೊಡಗಿತ್ತು. ಕಿಮೊ ಥೆರಪಿಗೆ ಹೋಗಿಬಂದಿದ್ದ ಅವರು ಟೀಪಾಯಿಯ ಮೇಲೆ ಕಾಲು ಚಾಚಿಕೊಂಡು ಕುಳಿತಿದ್ದರು. ‘ಕಾಲು ಚಾಚಿಕೊಂಡಿದ್ದೇನೆ ಎಂದು ತಪ್ಪು ತಿಳಿಯಬೇಡಿ’ ಎಂಬ ಅವರ ನುಡಿಯಲ್ಲಿ ಕಂಡಿದ್ದು ರಾಜ್‌ಕುಮಾರ್ ಅವರಿಗಿದ್ದ ಅದೇ ವಿನಯವಂತಿಕೆ. ಹಿಂದಿನ ದಿನ ಟಿ.ವಿ.ಯಲ್ಲಿ ಮೂರನೇ ಮಗನ ಅಭಿನಯದ ಸಿನಿಮಾ ನೋಡಿದ್ದ ಅವರಿಗೆ ‘ಒಂದು ಆ್ಯಂಗಲ್‌ನಿಂದ ಅವನು ಅವರಪ್ಪನ ತರಹವೇ ಕಂಡ. ಹಿಂದೆ ಎರಡನೇ ಮಗನ ಸಿನಿಮಾ ನೋಡಿದಾಗ ಅವನ ಕಣ್ಣಲ್ಲೂ ಅವರಲ್ಲಿದ್ದ ಅದೇ ತೀವ್ರತೆ ಕಂಡಿತ್ತು. ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದು ಹೀಗೆಲ್ಲ ಅನಿಸಿದಾಗ ಏನೋ ಸಮಾಧಾನ’ ಎಂದಿದ್ದರು ಪಾರ್ವತಮ್ಮ.

ಈಗ ಪಾರ್ವತಮ್ಮ ಬದುಕಿಲ್ಲ. ರಾಘವೇಂದ್ರ ರಾಜ್‌ಕುಮಾರ್ ಮೆತ್ತಗಾಗಿದ್ದಾರೆ. ಶಿವರಾಜ್‌ಕುಮಾರ್ ಸಿನಿಮಾ ಫಾರ್ಮ್ ಮುಂದುವರಿದಿದೆ. ಪುನೀತ್ ಈಗಲೂ ಸೂಪರ್‌ಸ್ಟಾರ್. ಕರಗಿಸಿದ ತಮ್ಮ ಹೊಟ್ಟೆಗಳನ್ನು ನೋಡಿಕೊಂಡಾಗಲೆಲ್ಲ ಅವರಿಗೆ ನೆನಪಾಗುವುದು ಅದೇ ರಾಜ್‌ಕುಮಾರ್; ಅವರ ಹೆಮ್ಮೆಯ ತಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.