ADVERTISEMENT

ಮರದ ಅದ್ಭುತ ಕಲಾಕೃತಿಗಳು

ಕೆ.ಬಿ.ಭೀಮಪ್ಪ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಮರದ ಅದ್ಭುತ ಕಲಾಕೃತಿಗಳು
ಮರದ ಅದ್ಭುತ ಕಲಾಕೃತಿಗಳು   

ಬಡತನದ ದಟ್ಟ ಅನುಭವಗಳನ್ನು ಮೈದುಂಬಿಕೊಂಡವರು ತಮಿಳುನಾಡಿನ ಕಲಾವಿದ ವಿಜಯ್‌ ಪಿಚುಮಣಿ. ’ವುಡ್‌ಕಟ್‌ ಪ್ರಿಂಟ್‌’  ಇವರು ಆರಿಸಿಕೊಂಡಿರುವ ಕಲಾಪ್ರಕಾರ. ಮರಗಳಿಂದ ವಿಶಿಷ್ಟವಾದ ಸೂಕ್ಷ್ಮ ಕಲಾಕೃತಿಗಳನ್ನು ಬಿಡಿಸುತ್ತಾರೆ. ಈ ವಿಶಿಷ್ಟ ಕಲಾ ಪ್ರದರ್ಶನದ ಹೆಸರು ‘ಡಾಟ್‌ ಶೋ’.

ವಿಜಯ್‌ ಪಿಚುಮಣಿ ಓದಿದ್ದು ಸರ್ಕಾರಿ ಶಾಲೆಗಳಲ್ಲಿ. ಆರ್ಥಿಕ ಸಮಸ್ಯೆಗಳು ಅವರಿಗೆ ಹೊಸತಲ್ಲ. ತಾವು ರೂಪಿಸಿದ ಕಲಾಕೃತಿಗಳನ್ನು ಮಾರಿ ಬಂದ ಹಣದಿಂದಲೇ ಸುಂದರ ಜೀವನ ಕಟ್ಟಿಕೊಂಡಿದ್ದಾರೆ.

‘ಈ ಕಲಾಕೃತಿಗಳು ಇಷ್ಟು ಸೊಗಸಾಗಿ ಮೂಡಿಬರಲು ಕಾರಣ ಯಾರು’ ಎಂದು ಪ್ರಶ್ನಿಸಿದರೆ, ‘ನನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹಾಗೂ ಕನ್ಯಾಕುಮಾರಿ ಪಟ್ಟಣದ ವಾತಾವರಣವೇ ನನಗೆ ಸ್ಫೂರ್ತಿ. ಮೊದಲು ರಬ್ಬರ್ ಮರದಿಂದ ಕಲಾಕೃತಿಗಳನ್ನು ರೂಪಿಸುತ್ತಿದ್ದೆ. ತುಂಬಾ ಕಷ್ಟ ಎನಿಸುತ್ತಿತ್ತು. ಈಗ ವಿದೇಶದಿಂದ ಬರುವ ಪೈನ್‌ಮರದಿಂದ ಚಿತ್ರ ಬಿಡಿಸುತ್ತಿದ್ದೇನೆ’ ಎನ್ನುತ್ತಾರೆ. ಇವರ ಕಲಾಕೃತಿಗಳು ಬದುಕಿನ ಗಾಢ ಅನುಭವದಿಂದ ಪ್ರಭಾವಿತವಾಗಿವೆ.

ADVERTISEMENT

ಕಾಗೆ, ಹಸು, ಹಗ್ಗ, ರೈತರು, ನಿಸರ್ಗದ ನಡುವೆ ಪರಸ್ಪರ ಬಂಧ ಬೆಸೆದು ಕಲಾಕೃತಿಗಳನ್ನು ರೂಪಿಸುತ್ತಾರೆ. ಚರ್ಮದ ಕೆಳಗಿನ ಕೈ, ಭೂಮಿಯೊಳಗಿನ ನೀರ ಸೆಲೆ, ಮರದ ಬೇರುಗಳು, ಮಣ್ಣಿಗೆ ಬೆರೆಯುವ ದೇಹ, ರೋಮಾಂಚನ, ಭ್ರೂಣ, ಕಿಡ್ನಿ, ಹಣ್ಣಿನ ಒಳಗಿನ ಬೀಜ ಹೇಗೆ ಹತ್ತಾರು ವಸ್ತುಗಳಿಗೆ ಬಂಧ ಬೆಸೆದು ಕಲಾಕೃತಿಗಳನ್ನು ರೂಪಿಸುತ್ತಾರೆ.

ಅಮೆರಿಕ, ಮಲೇಷ್ಯಾ, ಕೊರಿಯಾ ದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಇವರಿಗೆ ಅಭಿಮಾನಿಗಳೂ ಇದ್ದಾರೆ.

ಚೆನ್ನೈನ ಲಲಿತಕಲಾ ಆಕಾಡೆಮಿಯಿಂದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. 2012ರಲ್ಲಿ ಕಾಲೇಜಿನಲ್ಲಿ ಬೆಸ್ಟ್‌ ಔಟ್ ಗೋಯಿಂಗ್ ಪ್ರಶಸ್ತಿ, ಓವಿಯಾ ನುಂಕಾಲಯ್ ಕುಜು ರಾಜ್ಯ ಪ್ರಶಸ್ತಿ, ಅರ್ನವಾಸ್ ವಾಸುದೇವ ಮತ್ತು ಚಂದ್ರ ಲಿಂಗ ಆರ್ಟ್ ಫೌಂಡೇಷನ್‌ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

‘ದೆಹಲಿಯಲ್ಲಿ ಪ್ರತಿವರ್ಷ ಕಲಾಸಂತೆ (ಆರ್ಟ್‌ಫೇರ್) ನಡೆಯುತ್ತದೆ. ಸಮಾನ ಸಮಾಜದ ಆಶಯ ಬಿಂಬಿಸುವ ಆನೆಚಿತ್ರವನ್ನು ನಾನು ಪ್ರದರ್ಶಿಸಿದ್ದೆ. ಎಂಟು ಜನರಲ್ಲಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಒಬ್ಬರು ಕೊಂಡುಕೊಂಡರು’ ಎಂಬ ವಿಜಯ್ ಅವರ ನೆನಪನ್ನು ಆರ್ಟ್‌ಹೌಸ್‌ನ ಆಡಳಿತ ವ್ಯವಸ್ಥಾಪಕಿ ಜಯಂತಿ ಶೇಗಾರ್‌ ಅನುಮೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.