ADVERTISEMENT

ಮುಂಬೈಯಲ್ಲಿ ಕನ್ನಡದ ಘಮ

ವಿದ್ಯಾಶ್ರೀ ಎಸ್.
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಮುಂಬೈಯಲ್ಲಿ ಕನ್ನಡದ ಘಮ
ಮುಂಬೈಯಲ್ಲಿ ಕನ್ನಡದ ಘಮ   

ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಅದು ಸ್ನೇಹವನ್ನು ಬೆಸೆಯುತ್ತದೆ. ಅದರ ಇಂಪನ್ನು ಆಸ್ವಾದಿಸುವ ಮನಸ್ಸಿದ್ದರೆ, ಭಾವ ಪ್ರತಿಯೊಬ್ಬರನ್ನು ತಲುಪುತ್ತದೆ... ಹೀಗೆ ಆ ವೇದಿಕೆಯಲ್ಲಿ ಸಂಗೀತ ಮತ್ತು ಸ್ನೇಹದ ಸುತ್ತಲೇ ಮಾತು ಹೊರಳುತ್ತಿತ್ತು. ಭಿನ್ನ ಭಾಷೆ, ರಾಜ್ಯಗಳ ಸಂಗೀತ ಮೋಹಿಗಳು ಇದ್ದ ಈ ಸಮಾರಂಭ ನಡೆದಿದ್ದು, ಮುಂಬೈಯ ತಾಜ್‌ ಮಹಲ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ.

ಮ್ಯಾಕ್‌ ನಂ.1 ಸೋಡಾ ತನ್ನ ಹೊಸ ಜಿಂಗಲ್‌ ಬಿಡುಗಡೆಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕನ್ನಡ, ಮರಾಠಿ, ಹಿಂದಿ, ರಾಜಾಸ್ತಾನಿ, ಪಂಜಾಬಿ ಭಾಷೆಯಲ್ಲಿ ಈ ವಿಡಿಯೊ ತಯಾರಾಗಿದೆ. ಸಾಮಾನ್ಯವಾಗಿ ಜಾಹೀರಾತು ಒಂದೇ ಭಾಷೆಯಲ್ಲಿ ತಯಾರಾಗಿ, ಸ್ಥಳೀಯ ಭಾಷೆಗೆ ಡಬ್‌ ಆಗುತ್ತದೆ. ಆದರೆ ಇದು ಐದು ಭಾಷೆಯಲ್ಲಿ ತಯಾರಾಗಿರುವುದರ ಜೊತೆಗೆ ಐದರಲ್ಲೂ ವಿಭಿನ್ನವಾದ ಥೀಮ್‌ ಇದೆ.

ಗೆಳೆತನದ ಮಹತ್ವ, ಸಂಭ್ರಮ, ಸಂತೋಷವನ್ನು ತಿಳಿಸುವ ಜೊತೆಗೆ ‘ಮ್ಯಾಕ್‌ ಡೊವೆಲ್ಸ್‌ ಸೋಡಾ ಕೂಡ ನಿಮ್ಮ ಸ್ನೇಹಿತ' ಎಂದು ತಿಳಿಸುವ ಇರಾದೆ ಈ ಜಿಂಗಲ್‌ನದ್ದು. ಐದು ಭಾಷೆಯಲ್ಲಿ ಸಂಗೀತ ಸಂಯೋಜನೆಗೆ ನೆರವಾಗಿದ್ದ ಜೋಡಿಗಳು ಅಲ್ಲಿದ್ದರು.

ADVERTISEMENT

2014ರಲ್ಲಿ ಬಿಡುಗಡೆಯಾಗಿದ್ದ ‘ಯಾರಿ (ಸ್ನೇಹಿತ)’ ಹಾಡಿಗೆ ಈಗ ಹೊಸದೊಂದು ರೂಪು ಸಿಕ್ಕಿದೆ. ಬಾಲಿವುಡ್‌ನ ಜನಪ್ರಿಯ ಸಂಗೀತ ಜೋಡಿಗಳಾದ ಸಲೀಂ, ಸುಲೇಮಾನ್‌ಗೆ ಈ ಜಿಂಗಲ್‌ ತಯಾರಿಕೆಯ ಜವಾಬ್ದಾರಿ ವಹಿಸಲಾಗಿತ್ತು. ಐದು ಭಾಷೆಯಲ್ಲಿ ಪ್ರತಿಭಾವಂತರನ್ನು ಹುಡುಕಿ ವಿಭಿನ್ನವಾಗಿ ವಿಡಿಯೊ ಹೊರತಂದಿದೆ ಈ ಜೋಡಿ.

ಪಾಪ್ ಸಂಗೀತದ ಚೌಕಟ್ಟಿಗೆ ಭಾವಗೀತೆ ಒಗ್ಗಿಸಿರುವ ಸ್ವರಾತ್ಮ ತಂಡ ಕನ್ನಡದಲ್ಲಿ ಜಿಂಗಲ್‌ ತಯಾರಿಗೆ ನೆರವಾಗಿದೆ. ಇದರಲ್ಲಿ ಸಲೀಂ ಹಾಡಿರುವುದು ವಿಶೇಷ. ತಮ್ಮ ಅನುಭವಗಳ ಜೊತೆಗೆ ತಮ್ಮ ಮುಂದಿನ ಯೋಜನೆಯ ಬಗ್ಗೆ ಸ್ವರಾತ್ಮ ತಂಡ ತಿಳಿಸುವುದು ಹೀಗೆ...

‘ಇದು ರಾಷ್ಟ್ರಮಟ್ಟದ ಪ್ರಾಜೆಕ್ಟ್‌. ಇದರ ಅವಕಾಶ ನಮಗೆ ಸಿಕ್ಕಿದ್ದು ಅದೃಷ್ಟ. ಇದರ ಥೀಮ್‌ ಕಂಪೆನಿಯದ್ದು. ಐದು ಹಾಡುಗಳಲ್ಲಿ ಕನ್ನಡಕ್ಕೂ ಅವಕಾಶ ನೀಡಿರುವುದು ಖುಷಿಯಾಗಿದೆ. ಪ್ರಪಂಚದಾದ್ಯಂತ ಸ್ಥಳೀಯ ಹಾಡುಗಳಿಗೂ ಪ್ರಾಮುಖ್ಯ ಹೆಚ್ಚುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಕನ್ನಡ ಬರದಿದ್ದರೂ, ಸಲೀಂ ಕನ್ನಡವನ್ನು ಚೆನ್ನಾಗಿ ಉಚ್ಚರಿಸಿದ್ದಾರೆ’ ಎನ್ನುತ್ತಾರೆ ತಂಡದ ವರುಣ್‌.

ಬಳಿಕ ಮಾತು ಸ್ವರಾತ್ಮದ ಮುಂದಿನ ಯೋಜನೆಗಳ ಬಗ್ಗೆ ಹರಿಯಿತು. ‘ಹೊಸ ಜಾಹೀರಾತೊಂದರ ತಯಾರಿ ನಡೆಯುತ್ತಿದೆ. ಇದರ ಜೊತೆಗೆ 2018ರಲ್ಲಿ ಹೊಸ ಆಲ್ಬಂ ಬಿಡುಗಡೆಯ ಸಿದ್ಧತೆಯೂ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಮೊದಲೆಲ್ಲ ಸಂಗೀತ ಬ್ಯಾಂಡ್‌ ಅಂದರೆ ಇಂಗ್ಲಿಷ್‌ ಹಾಡಷ್ಟೇ ಎಂಬ ಪರಿಕಲ್ಪನೆ ಇತ್ತು. ಆದರೆ ಈಗ ಸ್ಥಳೀಯ ಭಾಷೆಯ ಹಾಡಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಅದಕ್ಕೆ ಈ ವೇದಿಕೆಯೇ ಸಾಕ್ಷಿ. ನಾವು ಬ್ರಿಟನ್‌, ಆಸ್ಟ್ರೇಲಿಯಾ, ಹಾಂಕಾಂಗ್‌ನಲ್ಲೆಲ್ಲ ಕನ್ನಡದ ಹಾಡನ್ನೇ ಹಾಡುತ್ತೇವೆ. ಜನರಿಗೆ ಭಾಷೆ ಬರದಿರಬಹುದು. ನಮ್ಮ ಭಾವ ಅವರನ್ನು ತಲುಪಿದರೆ ಸಾಕು.

ಹಾಡುವ ಮೊದಲು ಅದರ ಥೀಮ್‌ ತಿಳಿಸುತ್ತೇವೆ. ನಮ್ಮ ಉತ್ಸಾಹ ಅವರಲ್ಲಿಯೂ ಸಂಗೀತದ ಬಗ್ಗೆ ಪ್ರೀತಿ ಬೆಳೆಸುತ್ತದೆ. ಸಂಗೀತದ ವಿಷಯದಲ್ಲಿ ಭಾಷೆ ಎಂದಿಗೂ ಆದ್ಯತೆ ಆಗುವುದೇ ಇಲ್ಲ’ ಎಂದು ಸಂಗೀತದ ಗರಿಮೆಯ ಬಗ್ಗೆ ತಿಳಿಸುತ್ತಾರೆ ತಂಡದ ಜಿಷ್ಣುದಾಸ್‌ ಗುಪ್ತಾ.

‘ನಮ್ಮ ತಂಡದಲ್ಲಿ ಹಾಡಿನ ಪರಿಕಲ್ಪನೆಯ ಬಗ್ಗೆ ಮೊದಲು ಚರ್ಚಿಸುತ್ತೇವೆ. ಸಂಗೀತ ಸಂಯೋಜನೆ ಮಾಡುತ್ತೇವೆ. ನಂತರ ಎಲ್ಲರೂ ಒಟ್ಟಿಗೆ ಚರ್ಚಿಸಿ, ನಮ್ಮ ಭಾವನೆಗಳ ಹದಕ್ಕೆ ತಕ್ಕಂತೆ ಹಾಡು ಬರೆಯುತ್ತೇವೆ’ ಎನ್ನುತ್ತಾರೆ ಅವರು.

‘ಈವರೆಗಿನ ಪಯಣ ಸುಖಕರವಾಗಿದೆ. ಈ ದಿನ ಇದ್ದ ಹಾಗೆ ಇನ್ನೊಂದು ದಿನ ಇರುವುದಿಲ್ಲ. ಈಗ ಈ ಜಿಂಗಲ್‌ ಮಾಡಿದ್ದೇವೆ. ಮುಂದೆ ಆಲ್ಬಂ ಹಾಡು ಮಾಡಬಹುದು. ಅನಂತರ ಸಿನಿಮಾದಲ್ಲಿಯೂ ಅವಕಾಶ ಸಿಗಬಹುದು. ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ ಈ ಪಯಣ ತುಂಬಾ ಸೊಗಸಾಗಿದೆ’ ಎಂಬ ಸಂತಸ ಹಂಚಿಕೊಳ್ಳುತ್ತದೆ ತಂಡ.

‘ಗುಂಪಿನಲ್ಲಿ ಜಗಳವೂ ಇರುತ್ತದೆ. ಸಂಗೀತ, ಕಂಪೆನಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವ ತರವಲ್ಲ. ಸುತ್ತಮುತ್ತಲ ಜಗತ್ತಿನ ಬಗ್ಗೆ ಮನದ ಭಾವನೆ ಹಂಚಿಕೊಳ್ಳಲು ಸಂಗೀತ ಸುಲಭಮಾರ್ಗ. ಆ ರೀತಿ ಕೆಲಸ ಮಾಡುವಾಗ ಎಲ್ಲರಿಗೂ ಇದು ನಮ್ಮದು ಎನ್ನುವ ಭಾವನೆ ಇರುತ್ತದೆ. ಹಾಗಿರುವಾಗ ಜಗಳ ಸಾಮಾನ್ಯ. ಆದರೆ ಕೊನೆಗೆ ಎಲ್ಲರೂ ಒಮ್ಮತ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎನ್ನುತ್ತದೆ ತಂಡ.

ಸಂಗೀತಾಸಕ್ತಿಯನ್ನು ಗೌರವಿಸುವ ಮನೋಧರ್ಮವಿರುವುದರಿಂದ ಇಂಥದ್ದೇ ಸ್ಥಳ ಎನ್ನದೇ ಎಲ್ಲೆಡೆಯೂ ಕಾರ್ಯಕ್ರಮ ನೀಡಲು ಖುಷಿಯಾಗುತ್ತದೆ. ಆದರೆ ಬೆಂಗಳೂರು ನಮ್ಮೂರು. ಅಲ್ಲಿ ಕಾರ್ಯಕ್ರಮ ನೀಡುವುದು ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತದೆ’ ಎನ್ನುತ್ತಾರೆ ವರುಣ್‌.

ಜಿಂಗಲ್‌ಗಾಗಿ ಕನ್ನಡದಲ್ಲಿ ‘ಸ್ವರಾತ್ಮ’ ಸಂಗೀತ ಸಂಯೋಜಿಸಿದರೆ, ರಾಜಸ್ತಾನಿಯಲ್ಲಿ ‘ಮಾಮೆ ಖಾನ್‌’, ಪಂಜಾಬಿನಲ್ಲಿ ‘ಇಶ್ಕ್‌ ಬೆಕ್ಟಾರ್‌’, ಮರಾಠಿಯಲ್ಲಿ ಸಿದ್ದಾರ್ಥ್‌ ಮಹದೇವನ್‌, ಸೌಮಿಲ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.