ADVERTISEMENT

ಮೈಮನ ಬೆಚ್ಚಗಾಗಿಸುವ ಪೊನ್ಚೊ

ಮಂಜುಶ್ರೀ ಎಂ.ಕಡಕೋಳ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಮೈಮನ ಬೆಚ್ಚಗಾಗಿಸುವ ಪೊನ್ಚೊ
ಮೈಮನ ಬೆಚ್ಚಗಾಗಿಸುವ ಪೊನ್ಚೊ   

ಮಳೆಗಾಲ ಶುರುವಾದೊಡನೆ ಚಟಪಟ ಮಳೆಹನಿ ಸದ್ದಿನೊಂದಿಗೆ ಚಳಿರಾಯನೂ ಮೆತ್ತಗೆ ಕಾಲಿಡುತ್ತಾನೆ. ಹೊರಗೆ ಜೋರಾಗಿ ಮಳೆ ಬೀಳುತ್ತಿದ್ದರೆ ಬೆಚ್ಚಗೆ ಹೊದ್ದು ಮಲಗಬೇಕೆನ್ನುವ ಆಸೆ ಅನೇಕರದ್ದು. ಉದ್ಯೋಗಸ್ಥರು, ಮನೆ ಹೊರಗೆ ಹೋಗುವವರಿಗೆ ಈ ಆಸೆ ಈಡೇರಿಸಿಕೊಳ್ಳುವುದು ತುಸು ಕಷ್ಟ. ಆದರೆ, ಹೊದ್ದುಕೊಳ್ಳಲು ಪೊನ್ಚೊ ಮಾದರಿಯ ಮೇಲುಡುಪು ಇದ್ದರೆ ಬೆಚ್ಚಗಿದ್ದುಕೊಂಡೇ ಕಚೇರಿಯ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

‘ಪೊನ್ಚೊ’ ಮೂಲತಃ ಸ್ಪಾನಿಷ್ ಭಾಷೆಯ ಪದ. ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಲು ಬಳಸುತ್ತಿದ್ದ ಉಣ್ಣೆ ಬಟ್ಟೆಯನ್ನು ಪೊನ್ಚೊ ಎಂದು ಕರೆಯಲಾಗುತ್ತಿತ್ತು. ಬೊಲಿವಿಯಾ, ಪೆರು ದೇಶಗಳನ್ನು ಹಾದು ಬಂದಿರುವ ಈ ಉಡುಪು ಇದೀಗ ದಕ್ಷಿಣ ಅಮೆರಿಕದ ಸಾಂಪ್ರದಾಯಿಕ ದಿರಿಸೇ ಆಗಿಹೋಗಿದೆ. 1850ರಲ್ಲಿ ಅಮೆರಿಕದ ಸೇನೆಯಲ್ಲಿ ಚಳಿ ತಡೆಯಲು ಸೈನಿಕರಿಗೆ ಕೆಂಪು ಬಣ್ಣದ ಉಣ್ಣೆಯ ಪೊನ್ಚೊಅನ್ನು ಸಮವಸ್ತ್ರವನ್ನಾಗಿ ಮಾಡಿದ್ದರಂತೆ.

ಭಾರತದಲ್ಲಿ ಈಗಾಗಲೇ ಟ್ರೆಂಡಿಯಾಗಿರುವ ಪೊನ್ಚೊ ಚಳಿಗೆ ಹೇಳಿ ಮಾಡಿಸಿದ ಉಡುಪು. ಕುತ್ತಿಗೆ ಬಳಿ ತೆರೆದಿರುವ, ತೋಳುಗಳನ್ನು ಸುಲಭವಾಗಿ ತೂರಿಸಬಹುದಾದ ಈ ಉಡುಪು ಸೊಂಟದ ಬಳಿ ಸಡಿಲವಾಗಿರುತ್ತದೆ.

ADVERTISEMENT

ನೋಡಲು ಯಾವುದೋ ಬೆಡ್‌ಶೀಟ್ ಇಲ್ಲವೇ ರಗ್ಗು ಹೊದ್ದುಕೊಂಡಂತೆ ಭಾಸವಾಗುವ ಈ ಉಡುಪು, ಫ್ಯಾಷನ್ ಜಗತ್ತಿನಲ್ಲಿ ಅನೇಕ ಸೃಜನಶೀಲ ವಿನ್ಯಾಸಗಳಿಗೆ ಮುನ್ನುಡಿ ಬರೆದಿದೆ. ಹೆಚ್ಚಾಗಿ ಉಣ್ಣೆಯ ಬಟ್ಟೆಗಳಲ್ಲಿ ಮಾಡಲಾಗುವ ಪೊನ್ಚೊ ತುಸು ದಪ್ಪಗಿರುವವರಿಗೆ ಚೆನ್ನಾಗಿ ಕಾಣುತ್ತದೆ. ಧರಿಸಲು ತುಸು ಭಾರ ಇರುವ ಈ ಉಡುಪು ತೆಳ್ಳಗಿದ್ದವರ ತೋಳುಗಳಿಗೆ ಜೋತು ಬಿದ್ದತೆ ಕಂಡರೂ ಆರಾಮದಾಯಕವಾಗಿರುತ್ತದೆ.

ಹತ್ತಿ, ಶಿಫಾನ್, ರೇಯಾನ್, ಲಿನನ್ ಫ್ಯಾಬ್ರಿಕ್‌ಗಳಲ್ಲೂ ಪೊನ್ಚೊ ಮಾದರಿ ವಿನ್ಯಾಸಗಳನ್ನು ಮಾಡಲಾಗುತ್ತಿದೆ. ಪುಟ್ಟಮಕ್ಕಳಿಂದ ಹಿಡಿದು ವೃದ್ಧರೂ ಧರಿಸಬಹುದಾದ ಪೊನ್ಚೊ ವಿನ್ಯಾಸದ ಉಡುಪುಗಳು ಮಾರುಕಟ್ಟೆಯಲ್ಲೀಗ ಲಭ್ಯ. ಮೇಲಂಗಿಯ ಮಾದರಿಯಲ್ಲಿರುವ ಪೊನ್ಚೊವನ್ನು ಜೀನ್ಸ್ ಮೇಲೆ, ಲಾಂಗ್/ ಶಾರ್ಟ್ ಸ್ಕರ್ಟ್ ಮೇಲೂ ಧರಿಸಬಹುದು. ಸೀರೆ, ಕುರ್ತಾ, ಪ್ಯಾಂಟ್ ಶರ್ಟಿನ ಮೇಲೆ ಮೇಲಂಗಿ ಇಲ್ಲವೇ ಸ್ವೆಟರ್ ಶೈಲಿಯಲ್ಲೂ ಧರಿಸಬಹುದು.

ಹದಿಹರೆಯದವರಿಗೆ ಹೇಳಿ ಮಾಡಿಸಿದಂತಿರುವ ಈ ಉಡುಪಿಗೆ ಕಾಶ್ಮೀರಿ ಶೈಲಿಯ ಕಸೂತಿ ಸೂಕ್ತ. ಕಾಶ್ಮೀರಿ ಉಣ್ಣೆಯಿಂದ ಸಿದ್ಧಪಡಿಸಿದ ಪಾಶ್ಮಿನಾ ಮಾದರಿಯ ಪೊನ್ಚೊ ವಿಲಾಸಿ ನೋಟವನ್ನೂ ನೀಡುತ್ತದೆ. ಇಂತಹ ವಿನ್ಯಾಸದ ಪೊನ್ಚೊ ಈಗಿನ ಟ್ರೆಂಡ್ ಆಗಿದೆ. ಉದ್ದನೆಯ ಗೌನ್ ಮಾದರಿಯ ಪೊನ್ಚೊ ಉಡುಪುಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಗಾಢ ಬಣ್ಣಗಳ ಪೊನ್ಚೊ ಕಚೇರಿ ಇಲ್ಲವೇ ಶಾಪಿಂಗ್‌ಗೆ ಧರಿಸಲು ಸೂಕ್ತ. ಚಳಿ ತಡೆಯಲು ಪುಟ್ಟಮಕ್ಕಳಿಗೆ ಪೊನ್ಚೊ ಹೇಳಿ ಮಾಡಿಸಿದ ಉಡುಪು. ಕೈಕಾಲು ಆಡಿಸಲು ಅನುಕೂಲವಾಗಿರುವ ಈ ಉಡುಪನ್ನು ಮಕ್ಕಳೂ ಇಷ್ಟಪಟ್ಟು ಧರಿಸಬಹುದು.

ಕುತ್ತಿಗೆಯಿಂದ ಮೊಣಕೈ ತನಕ ಮಾತ್ರ ಇರುವ ಪಾರದರ್ಶಕ ಪೊನ್ಚೊಗಳನ್ನು ಸೀರೆಯ ಮೇಲೂ ಧರಿಸಬಹುದು. ಗಾಗ್ರಾ, ಲೆಹೆಂಗಾದ ಮೇಲೆ ತೆಳು ಪಾರದರ್ಶಕವಾಗಿರುವ ಪೊನ್ಚೊ ಧರಿಸುವುದು ಫ್ಯಾಷನಬಲ್ ಆಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.