ADVERTISEMENT

ಯಶೋದೆ ವೇಷ ತೊಟ್ಟ ತಾಯಂದಿರು

ಸಂತೋಷ ಜಿಗಳಿಕೊಪ್ಪ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಯಶೋದಾ–ಕೃಷ್ಣನ ವೇಷದಲ್ಲಿ ತಾಯಿ–ಮಗನ ಸಂಭ್ರಮ
ಯಶೋದಾ–ಕೃಷ್ಣನ ವೇಷದಲ್ಲಿ ತಾಯಿ–ಮಗನ ಸಂಭ್ರಮ   

ಆ ಮಕ್ಕಳ ಸೊಂಟದಲ್ಲೊಂದು ಅಂದದ ಪಟ್ಟಿ. ಅವರ ಕಾಲುಗಳನ್ನು ಮುಚ್ಚಿದ್ದ ಚೆಂದದ ಧೋತಿ. ತಲೆ ಮೇಲೊಂದು ನವಿಲುಗರಿ ಕಿರೀಟ. ಕೊರಳಿನ ಅಂದ ಹೆಚ್ಚಿಸಿದ ಆಭರಣಗಳು. ಇವೆಲ್ಲಕ್ಕಿಂತ ಮಿಗಿಲಾಗಿ ಕೈಯಲ್ಲೊಂದು ಕೊಳಲು.

ಹೀಗೆ ‘ಕೃಷ್ಣ’ನ ವೇಷಭೂಷಣ  ತೊಟ್ಟಿದ್ದ ಮಕ್ಕಳು, ತಮ್ಮದೇ ಶೈಲಿಯಲ್ಲಿ ಕೃಷ್ಣನ ತುಂಟಾಟಗಳನ್ನು ತೋರಿಸಿದರು. ಜತೆಗೆ ತಾಯಂದಿರು, ‘ಯಶೋದೆ’ಯಾಗಿ ತಮ್ಮ ಮಕ್ಕಳನ್ನು ಮುದ್ದು ಮಾಡಿದರು.

ಇವೆಲ್ಲ ದೃಶ್ಯಗಳು ಕಂಡುಬಂದದ್ದು  ನಂದಿನಿ ಲೇಔಟ್‌ನಲ್ಲಿರುವ ಸರ್ಕ್ಯೂಲರ್‌ ಪಾರ್ಕ್‌್ ಬಳಿಯ ನಗೆಕೂಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಯಲ್ಲಿ.

ಪ್ರತಿವರ್ಷದಂತೆ ಈ ವರ್ಷವೂ ‘ಕಿಡ್ಜೆ’ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು, ಕೃಷ್ಣನ ವೇಷಭೂಷಣದೊಂದಿಗೆ ಭಾಗವಹಿಸಿ  ಮೆಚ್ಚುಗೆ ಗಳಿಸಿದರು.

ಮಕ್ಕಳೊಂದಿಗೆ ತಾಯಂದಿರನ್ನು ಸಹ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ‘ಯಶೋದಾ’ ವೇಷಭೂಷಣ ತೊಡುವಂತೆ ಹೇಳಲಾಗಿತ್ತು. ಅದರಂತೆ ಮಕ್ಕಳಿಗೆ ಕೃಷ್ಣನ ವೇಷಭೂಷಣ ಹಾಕಿದ್ದ ತಾಯಂದಿರು, ಯಶೋದಾ ವೇಷತೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಮಕ್ಕಳು, ತಮ್ಮ ತಾಯಿಯರೊಂದಿಗೆ ವೇದಿಕೆ ಏರಿ ‘ಕೃಷ್ಣ ಹಾಗೂ ಯಶೋದಾ’ ಪಾತ್ರದಲ್ಲಿ ಅರ್ಥಪೂರ್ಣ ಸಂಭಾಷಣೆ ಮೂಲಕ ಕಿರುನಾಟಕವನ್ನು ಪ್ರಸ್ತುತಪಡಿಸಿದರು.

ಕೃಷ್ಣ ಬೆಣ್ಣೆ ಕದಿಯುವುದು ಸೇರಿದಂತೆ ವಿವಿಧ ತುಂಟಾಟಗಳನ್ನು ಮಕ್ಕಳು ಸೊಗಸಾಗಿ ನೋಡುಗರ ಎದುರು ತೆರೆದಿಟ್ಟರು. ತಾಯಂದಿರು ಸಹ ಮಕ್ಕಳ ತುಂಟಾಟಗಳನ್ನು ನಿಯಂತ್ರಿಸುವಲ್ಲೇ ಮಗ್ನರಾಗಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದರು.

ಸ್ಪರ್ಧೆ ಕೊನೆಯಲ್ಲಿ ಎಲ್ಲ ಮಕ್ಕಳು ಸಭಾಂಗಣದಲ್ಲಿ ಗುಂಪಾಗಿ ಛಾಯಾಚಿತ್ರ ತೆಗೆಸಿಕೊಂಡರು. ಈ ವೇಳೆಯೂ ಮಕ್ಕಳ ತುಂಟಾಟ ನೆರೆದಿದ್ದವರಲ್ಲಿ ನಗೆ ಉಕ್ಕಿಸಿತು. ಅದಾದ ಬಳಿಕ ಸಭಾಂಗಣದಿಂದ ಇಳಿದ ಮಕ್ಕಳು, ಗುಂಪಾಗಿ ಓಡುತ್ತ ತಾಯಂದಿರನ್ನು ಅಪ್ಪಿಕೊಂಡರು. ತಾಯಂದಿರು ಸಹ ಮಕ್ಕಳನ್ನು ಎತ್ತಿಕೊಂಡು, ‘ಬಾ ನನ್ನ ಮುದ್ದು ಕೃಷ್ಣ’ ಎನ್ನುತ್ತ ಮುದ್ದಾಡಿದರು. 

‘ಪ್ರತಿವರ್ಷವೂ ಈ ಸ್ಪರ್ಧೆ ಆಯೋಜಿಸುತ್ತೇವೆ. ಕಳೆದ ವರ್ಷಕ್ಕಿಂತ ಈ ವರ್ಷ ಮಕ್ಕಳು ಹಾಗೂ ಅವರ ತಾಯಂದಿರು ಹೆಚ್ಚು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಸಂಘಟಕರಾದ ರಾಧಾ ನಾಗರಾಜ್‌ ಹೇಳಿದರು.

‘ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಕಡಿಮೆ. ಅದನ್ನು ತಿಳಿಸುವುದು ನಮ್ಮ ಕರ್ತವ್ಯ. ಹೀಗಾಗಿ ಇಂಥ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ತೋರಿದ ಮಕ್ಕಳು ಹಾಗೂ ಅವರ ತಾಯಂದಿರಿಗೆ ಬಹುಮಾನವನ್ನೂ ನೀಡುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಯುತ್ತದೆ’ ಎಂಬುದು ರಾಧಾ ಅವರ ಮಾತು.

ಸ್ಪರ್ಧೆ ಉದ್ಘಾಟಿಸಿದ ಎಂ.ಕೆ.ಹೇಮಂತ್‌, ‘ಮಕ್ಕಳು ಸುಮ್ಮನಿದ್ದರೂ ಚೆಂದದಿಂದ ಕಾಣಿಸುತ್ತಾರೆ. ಇನ್ನು ಅವರು ಕೃಷ್ಣನ ವೇಷಭೂಷಣ ತೊಟ್ಟು ತುಂಟಾಟ ಪ್ರದರ್ಶಿಸಿದರೆ ನೋಡಲು ಎರಡು ಕಣ್ಣು ಸಾಲದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.